ನಿತ್ಯದ ಒತ್ತಡದ ವೃತ್ತಿ ಜೀವನದಿಂದಾಗಿ ಮನೆಯ ಯಾವ ಕೆಲಸಕ್ಕೂ ಸರಿಯಾದ ಸಮಯ ಸಿಗುವುದಿಲ್ಲ ಎಂದು ನಾವು ಗೊಣಗುತ್ತಲೇ ಇರುತ್ತೇವೆ. ಮನೆಯ ಕೆಲಸಗಳನ್ನು ಸರಿಯಾಗಿ ಮಾಡದೇ ಇದ್ದಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಇದರ ಜತೆಗೆ ನಮ್ಮ ಕೆಲವು ಅಭ್ಯಾಸಗಳು ನಮ್ಮ ದಾರಿದ್ರ್ಯಕ್ಕೆ ದಾರಿ ಮಾಡಿ ಕೊಡುತ್ತಿರುತ್ತವೆ. ಈ ಅಭ್ಯಾಸಗಳು ಯಾವವು ಎಂಬುದನ್ನು ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.
ನಮ್ಮ ಪೂರ್ವಜರು ಬೆಳಗಿನಿಂದ ರಾತ್ರಿ ಮಲಗುವವರೆಗೂ ಅನೇಕ ಉತ್ತಮ ಆಚರಣೆಗಳನ್ನು ಪಾಲಿಸುತ್ತಿದ್ದರು. ಅವುಗಳಲ್ಲಿ ಕೆಲವು ಮಾತ್ರ ಇಂದಿಗೂ ಆಚರಣೆಯಲ್ಲಿವೆ. ಇಂದಿನ ಜನತೆ ರೂಢಿಸಿಕೊಂಡಿರುವ ಕೆಲವು ಅಭ್ಯಾಸಗಳು ಮನೆಯ ನೆಮ್ಮದಿಯನ್ನು ಹಾಳು ಮಾಡುವುದಲ್ಲದೇ, ನಕಾರಾತ್ಮಕತೆಯನ್ನು ಹೆಚ್ಚಿಸುತ್ತವೆ. ಆ ಅಭ್ಯಾಸಗಳು ಯಾವವು ಎಂಬುದನ್ನು ತಿಳಿಯೋಣ.
ಅಡುಗೆ ಮನೆ ಅಚ್ಚುಕಟ್ಟಾಗಿರಲಿ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅಚ್ಚುಕಟ್ಟಾಗಿ ಇಟ್ಟುಕೊಳ್ಳದ ಅಡುಗೆ ಮನೆಯು ದಾರಿದ್ಯವನ್ನು ತರುತ್ತದೆ. ಅಡುಗೆ ಮಾಡಿ ಮುಗಿಸಿದ ನಂತರ ಅಡುಗೆ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಅಷ್ಟು ಮಾತ್ರವಲ್ಲದೇ ಪಾತ್ರೆಗಳನ್ನು ಆಗಾಗ ತೊಳೆಯುವುದು ಸಹ ಉತ್ತಮ ಅಭ್ಯಾಸವಾಗಿದೆ. ಪಾತ್ರೆಗಳನ್ನು ತೊಳೆಯದೇ ಹಾಗೇ ಇಟ್ಟುಕೊಳ್ಳುವುದರಿಂದ ಲಕ್ಷ್ಮೀ ದೇವಿಯ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಇದರಿಂದ ಆರ್ಥಿಕ ಸಂಕಷ್ಟ ಸಹ ಉಂಟಾಗುತ್ತದೆ.
ಇನ್ನು ಊಟವನ್ನು ಅರ್ಧಕ್ಕೆ ಬಿಟ್ಟು ಎದ್ದೇಳುವುದು ಸರಿಯಲ್ಲ. ಜೊತೆಗೆ ತಟ್ಟೆಯಲ್ಲಿ ಆಹಾರಗಳನ್ನು ವ್ಯರ್ಥ ಮಾಡುವುದು ಅನ್ನಪೂರ್ಣೇಶ್ವರಿಗೆ ಅವಮಾನ ಮಾಡಿದಂತೆ. ಹಾಗಾಗಿ ಅನ್ನವನ್ನು ಚೆಲ್ಲುವುದು, ಆಹಾರವನ್ನು ಹಾಗೆಯೇ ಚೆಲ್ಲುವುದರಿಂದ ದಾರಿದ್ರ್ಯ ಬರುತ್ತದೆ. ಈ ಅಭ್ಯಾಸವನ್ನು ಬಿಟ್ಟರೆ, ಮನೆಯಲ್ಲಿ ಧನ ಧಾನ್ಯ ವೃದ್ಧಿಯಾಗುತ್ತದೆ.
ಎಲ್ಲೆಂದರಲ್ಲಿ ಉಗಿಯುವುದು
ಕಂಡ ಕಂಡಲ್ಲಿ ಎಂಜಲು ಉಗಿಯುವುದರಿಂದ ಜಾತಕ ದೋಷ ಉಂಟಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ಎಲ್ಲೆಂದರಲ್ಲಿ ಉಗಿಯುವುದರಿಂದ ಜಾತಕದಲ್ಲಿ ಚಂದ್ರ ಗ್ರಹದ ಸ್ಥಿತಿ ನೀಚವಾಗುತ್ತದೆ. ಇದರಿಂದ ಮನೆಯಲ್ಲಿ ಸೌಭಾಗ್ಯ ದೂರವಾಗುತ್ತದೆ. ಅಷ್ಟೇ ಅಲ್ಲದೇ ವ್ಯಕ್ತಿಯ ವೈವಾಹಿಕ ಜೀವನದ ಮೇಲೆ ನಕಾರಾತ್ಮಕ ಪರಿಣಾಮಗಳು ಉಂಟಾಗುತ್ತವೆ ಮತ್ತು ಪರಸ್ಪರ ಭಿನ್ನಾಭಿಪ್ರಾಯ ಉಂಟಾಗುತ್ತದೆ ಎಂದು ಶಾಸ್ತ್ರ ಹೇಳುತ್ತದೆ.
ಕತ್ತಲಾದ ಮೇಲೆ ಕಸ ಗುಡಿಸಬೇಡಿ
ನಮ್ಮ ಶಾಸ್ತ್ರದಲ್ಲಿ ಸಂಧ್ಯಾಕಾಲಕ್ಕೆ ಹೆಚ್ಚಿನ ಮಹತ್ವವಿದೆ. ಈ ಸಮಯದಲ್ಲಿ ಮಾಡುವ ದೇವರ ಧ್ಯಾನ ಮತ್ತು ಅನುಷ್ಟಾನಗಳಿಂದ ವಿಶೇಷ ಕೃಪೆ ಲಭಿಸುತ್ತದೆ. ಹಾಗಾಗಿ ಸಂಧ್ಯಾಕಾಲದಲ್ಲಿ ದೇವರ ಸ್ತೋತ್ರಗಳನ್ನು ಹೇಳುವ ಮೂಲಕ ದೀಪ ಹಚ್ಚಿಡಬೇಕು. ಸೂರ್ಯ ಮುಳುಗಿದ ನಂತರ ಕಸ ಗುಡಿಸುವುದು ಶಾಸ್ತ್ರ ಸಮ್ಮತವಲ್ಲ. ಶಾಸ್ತ್ರದ ಪ್ರಕಾರ ಸಂಧ್ಯಾ ಸಮಯದಲ್ಲಿ ಲಕ್ಷ್ಮೀ ಮನೆಗೆ ಬರುತ್ತಾಳೆ. ಆ ಸಮಯದಲ್ಲಿ ಕಸ ಗುಡಿಸುವುದರಿಂದ ಮನೆಯ ಸಿರಿ ಸಂಪತ್ತನ್ನು ಮನೆಯಿಂದ ಹೊರ ಹಾಕಿದಂತಾಗುತ್ತದೆ. ಹಾಗಾಗಿ ಸಂಧ್ಯಾ ಸಮಯವನ್ನು ದೇವರ ಆರಾಧನೆ ಮಾಡುವ ಮೂಲಕ ಲಕ್ಷ್ಮೀಯನ್ನು ಬರ ಮಾಡಿಕೊಳ್ಳಬೇಕು. ಇದರಿಂದ ಮನೆಯಲ್ಲಿ ಸೌಭಾಗ್ಯ ವೃದ್ಧಿಯಾಗುತ್ತದೆ.
ಮನೆಯೇ ಮಂತ್ರಾಲಯವಾಗಲಿ
ಮನೆಯ ಸದಸ್ಯರು ಯಾವಾಗಲೂ ಜಗಳವಾಡುತ್ತಾ ಇರಬಾರದು. ಮನೆಯ ವಾತಾವರಣ ಸಕಾರಾತ್ಮಕವಾಗಿರಬೇಕು. ಮನೆಯ ಸದಸ್ಯರ ನಡುವೆ ಭಿನ್ನಾಭಿಪ್ರಾಯಗಳು, ಜಗಳಗಳು ಸದಾ ನಡೆಯುತ್ತಿದ್ದರೆ, ಅಂತಹ ಮನೆಯಲ್ಲಿ ದೇವತೆಗಳ ವಾಸ ಇರುವುದಿಲ್ಲ. ಹಾಗಾಗಿ ಮನೆಯಲ್ಲಿ ಸದಾ ಖುಷಿಯಿಂದ ಇರಬೇಕು. ಇದರಿಂದ ಸಕಾರಾತ್ಮಕತೆ ಹೆಚ್ಚುತ್ತದೆ.
ಅತಿಥಿ ದೇವೋ ಭವ ಎನ್ನಿ
ಮನೆಗೆ ಬಂದ ಅತಿಥಿಗಳನ್ನು ಗೌರವದಿಂದ ನಡೆಸಿಕೊಳ್ಳುವುದರಿಂದ ಲಕ್ಷ್ಮೀ ಕೃಪೆ ಪ್ರಾಪ್ತವಾಗುತ್ತದೆ ಎಂದು ಶಾಸ್ತ್ರ ಹೇಳುತ್ತದೆ. ಮನೆಗೆ ಬಂದ ಅತಿಥಿಗಳಿಗೆ ಆಹಾರ ಮತ್ತು ಪಾನೀಯಗಳನ್ನು ಕೊಟ್ಟು ಆದರಿಸುವುದರಿಂದ ಮನೆಯಲ್ಲಿ ಸಂಪತ್ತು ಸಮೃದ್ಧಿ ನೆಲೆಸುತ್ತದೆ.
ಇದನ್ನೂ ಓದಿ | Astrology Remedies : ನಿಮಗೆ ಸಿಟ್ಟು ಜಾಸ್ತಿಯೇ? ಕಡಿಮೆ ಮಾಡಿಕೊಳ್ಳಲು ಜ್ಯೋತಿಷ್ಯದ ಈ ಸಲಹೆಗಳನ್ನು ಪಾಲಿಸಿ