Site icon Vistara News

Vastu Tips For Health: ಆರೋಗ್ಯಪೂರ್ಣ ಆಗಿರಬೇಕೆ? ಈ ವಾಸ್ತು ಟಿಪ್ಸ್ ಪಾಲಿಸಿ

Vastu Tips For Health

ಆರೋಗ್ಯವೇ ಭಾಗ್ಯ (Vastu Tips For Health) ಎಂದು ಪರಿಗಣಿಸಲಾಗುತ್ತದೆ. ಆರೋಗ್ಯ ಒಂದಿದ್ದರೆ ಜೀವನದಲ್ಲಿ ಏನನ್ನೂ ಬೇಕಾದರೂ ಸಾಧಿಸಬಹುದು. ಇದಕ್ಕಾಗಿ ನಮ್ಮ ಹಿರಿಯರು ಆರೋಗ್ಯವಂತ ಜೀವನಕ್ಕೆ ಬಹಳ ಪ್ರಾಮುಖ್ಯತೆ ನೀಡಿದ್ದರು. ವಾಸ್ತು ಮಾನವನ ಆರೋಗ್ಯ ಮತ್ತು ಸಂಪತ್ತಿನ ಮೇಲೆ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಮನೆಯ ರಚನೆ ಮತ್ತು ಪೀಠೋಪಕರಣಗಳು ಅಲ್ಲಿ ವಾಸಿಸುತ್ತಿರುವವರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳುತ್ತಾರೆ. ಆರೋಗ್ಯಕಾರಿ ಜೀವನಕ್ಕೆ ನೀವು ಪಾಲಿಸಬೇಕಾದ ಕೆಲವೊಂದು ವಾಸ್ತು ಸಲಹೆಗಳನ್ನು ನಾವಿಲ್ಲಿ ನೀಡುತ್ತೇವೆ.

ಮಲಗುವ ದಿಕ್ಕು

ಉತ್ತಮ ಆರೋಗ್ಯಕ್ಕೆ ಉತ್ತಮ ನಿದ್ದೆ ಬಹಳ ಮುಖ್ಯ. ಅದೇ ರೀತಿ ನೆಮ್ಮದಿಯ ನಿದ್ದೆ ಬರಲು ನಾವು ಯಾವ ದಿಕ್ಕಿಗೆ ತಲೆಹಾಕಿ ಮಲಗುತ್ತೇವೆ ಎನ್ನುವುದೂ ಪ್ರಧಾನ ಅಂಶ. ನಮ್ಮ ಹಿರಿಯರು ಸಲಹೆ ನೀಡುವಂತೆ ದಕ್ಷಿಣ ಭಾಗಕ್ಕೆ ತಲೆ ಹಾಕಿ ಮಲಗುವುದನ್ನು ರೂಢಿ ಮಾಡಿಕೊಳ್ಳಿ. ಯಾವುದೇ ಕಾರಣಕ್ಕೂ ಉತ್ತರ ಭಾಗಕ್ಕೆ ತಲೆ ಹಾಕಿ ಮಲಗಬೇಡಿ. ಗೋಡೆಯಿಂದ ನಿಮ್ಮ ಹಾಸಿಗೆ ಕನಿಷ್ಠ ಮೂರರಿಂದ ನಾಲ್ಕು ಇಂಚು ದೂರದಲ್ಲಿರಲಿ. ಮರದ ಮಂಚವೇ ನಿಮ್ಮ ಆದ್ಯತೆಯ ಆಯ್ಕೆಯಾಗಿರಲಿ.

ಶೌಚಗೃಹ

ಬಾತ್ ರೂಮ್ ಮತ್ತು ಟಾಯ್ಲೆಟ್ ಅನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ. ಇಲ್ಲಿ ನೀರ ಪಸೆ ಇರುವುದರಿಂದ ಬ್ಯಾಕ್ಟೀರಿಯಾದಂತಹ ಸೂಕ್ಷ್ಮಾಣು ಜೀವಿಗಳು ಹುಟ್ಟಿಕೊಳ್ಳುವ ಸಾಧ್ಯತೆ ಇದೆ. ಆದ್ದರಿಂದ ನೈರ್ಮಲ್ಯಕ್ಕೆ ಪ್ರಾಧಾನ್ಯತೆ ಕೊಡಿ. ಬಾತ್ ರೂಮ್ ಒಳಗೆ ನೀರು ಕಟ್ಟಿ ನಿಲ್ಲದಂತೆ ನೋಡಿಕೊಳ್ಳಿ. ಅದೇ ರೀತಿ ನಳ್ಳಿಯಿಂದ ನೀರು ತೊಟ್ಟಿಕ್ಕುವುದು ಅನಾರೋಗ್ಯಕ್ಕೆ ಆಹ್ವಾನ ನೀಡಿದಂತೆ. ಆದ್ದರಿಂದ ಮನೆಯಲ್ಲಿ ಎಲ್ಲೂ ನೀರು ಸೋರಿಕೆಯಾಗುತ್ತಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.

ಗೋಡೆಗೆ ಬಣ್ಣ

ಮನೆಯಲ್ಲಿ ಯಾರಿಗಾದರೂ ನಿರಂತರ ಆರೋಗ್ಯ ಸಮಸ್ಯೆ ಕಾಡುತ್ತಿದ್ದರೆ ಅವರ ಸುತ್ತಲಿನ ಗೋಡೆಗೆ ಬಣ್ಣ ಹಚ್ಚಿ. ಇದಕ್ಕಾಗಿ ಕೆಂಪು ಅಥವಾ ಹಸುರು ಪೈಂಟ್ ಬಳಸಿ. ಕೆಂಪು ಬಣ್ಣ ಪಾಸಿಟಿವ್ ಎನರ್ಜಿಯನ್ನು ಆಕರ್ಷಿಸಿದರೆ ಹಸುರು ಬಣ್ಣ ಶಾಂತತೆಯ ಸಂಕೇತ. ಗೋಡೆಗಳಲ್ಲಿ ಬಿರುಕು, ಕೊಳೆ ಇದ್ದರೆ ಅದನ್ನು ಶುಚಿಗೊಳಿಸಿ ಬಳಿಕ ಪೈಂಟ್ ಮಾಡಿ.

ಪೀಠೋಪಕರಣಗಳ ಸ್ಥಾನ

ಮನೆಗಳಲ್ಲಿ ಯಾವ ರೀತಿಯಲ್ಲಿ ನಾವು ಪೀಠೋಪಕರಣಗಳನ್ನು ಸೆಟ್ ಮಾಡಿ ಇಡುತ್ತೇವೆ ಎನ್ನುವುದು ಕೂಡ ಮುಖ್ಯವಾಗುತ್ತದೆ. ಪ್ರತಿಫಲನ ಗುಣವುಳ್ಳ ಕನ್ನಡಿ ಅಥವಾ ಟಿವಿಯಂತಹ ವಸ್ತುಗಳನ್ನು ಬೆಡ್ ಅಥವಾ ಬೆಡ್ ರೂಮ್ ಎದುರು ಇಡಬೇಡಿ. ಬಾತ್ ರೂಮ್ ಮತ್ತು ಮೆಟ್ಟಿಲಿನ ಸಮೀಪ ಕತ್ತಲೆ ಇರದಂತೆ ನೋಡಿಕೊಳ್ಳಿ. ಅಭ್ಯಾಸ ಕೋಣೆಯಲ್ಲಿ ಮರ ಅಥವಾ ಮಾರ್ಬಲ್ ಪೀಠೋಪಕರಣಗಳನ್ನು ಇಡುವುದರಿಂದ ಸ್ಮರಣೆ ಶಕ್ತಿ ಮತ್ತು ಶ್ರದ್ಧೆ ಹೆಚ್ಚುತ್ತದೆ.

ಹೀಗಿರಲಿ ಅಡುಗೆ ಕೋಣೆ

ಆರೋಗ್ಯ ಮತ್ತು ಅಡುಗೆ ಕೋಣೆ ಪರಸ್ಪರ ಸಂಬಂಧ ಇರುವಂತಹದ್ದು. ಅಡುಗೆ ಕೋಣೆಯ ಮುಖ ಆಗ್ನೇಯ ದಿಕ್ಕಿಗೆ ಇರಬೇಕು. ಅಲ್ಲದೆ ಸ್ಟವ್ ಅಥವಾ ಒಲೆ ಪೂರ್ವ ದಿಕ್ಕಿನಲ್ಲಿ ಇರಿಸಿ. ಯಾವುದೇ ಕಾರಣಕ್ಕೂ ಈಶಾನ್ಯ ಭಾಗಕ್ಕೆ ಮುಖ ಮಾಡಿ ಅಡುಗೆ ಕೋಣೆ ಮತ್ತು ಸ್ಟವ್ ನಿಲ್ಲದಂತರೆ ನೋಡಿಕೊಳ್ಳಿ.

ಒಡೆದ ಕನ್ನಡಿ, ಕಿಟಕಿ ಇರಲೇ ಬಾರದು

ಒಡೆದ ಕನ್ನಡಿ ಮನೆಯೊಳಗೆ ಇರುವುದು ಅಪಶಕುನದ ಸಂಕೇತ ಎನ್ನಲಾಗುತ್ತದೆ. ಆದ್ದರಿಂದ ಕನ್ನಡಿ ಒಡೆದಿದ್ದರೆ ಕೂಡಲೆ ಅದನ್ನು ತೆಗೆದುಬಿಡಿ. ಕಿಟಕಿ, ಪೀಠೋಪಕರಣ ಒಡೆದಿದ್ದರೆ ಕೂಡಲೇ ಸರಿಪಡಿಸಿ. ಒಡೆದ ವಸ್ತುಗಳು ಮನಸ್ಸಿನ ಮೇಲೆ ಒತ್ತಡ ಹೇರಬಲ್ಲವು.

ದೇವರ ಕೋಣೆ ಹೀಗಿದ್ದರೆ ಚೆನ್ನ

ದೇವರ ಕೋಣೆ ಅಥವಾ ಧ್ಯಾನ ಮಾಡುವ ಸ್ಥಳ ಅತ್ಯಂತ ಶಾಂತ ವಾತಾವರಣವನ್ನು ಹೊಂದಿರುತ್ತವೆ. ವಿಗ್ರಹಗಳು ಸರಿಯಾದ ದಿಕ್ಕಿನಲ್ಲಿವೆ ಮತ್ತು ಯಾವುದೇ ಉಪಕರಣ ಒಡೆದಿಲ್ಲ ಎನ್ನುವುದನ್ನು ಪರೀಕ್ಷಿಸಿಕೊಳ್ಳಿ. ವಿಗ್ರಹಗಳನ್ನು ದಕ್ಷಿಣಕ್ಕೆ ಮುಖ ಮಾಡಿ ಇಡಬೇಡಿ. ಸಂಜೆ ಬೆಳಗುವ ಅಗರ್ಬತ್ತಿ, ದೀಪ ವಾತಾವರಣವನ್ನು ಶುಭ್ರವಾಗಿಸುತ್ತದೆ. ನಿಮ್ಮ ಗಾರ್ಡನ್‌ನ್ನಲ್ಲಿ ತುಳಸಿ ಮತ್ತು ಕಹಿ ಬೇವಿನ ಗಿಡ ಬೆಳೆಸಿ. ಇದರಿಂದ ಆರೋಗ್ಯ ವೃದ್ಧಿಯಾಗುತ್ತದೆ.

ಇದನ್ನೂ ಓದಿ: Vastu Tips For Success: ಜೀವನದಲ್ಲಿ ಯಶಸ್ಸು ಸಿಗಬೇಕೆ? ಈ ವಾಸ್ತು ನಿಯಮ ಪಾಲಿಸಿ

Exit mobile version