Site icon Vistara News

Weekly Horoscope | ಈ ವಾರ ನಿಮ್ಮ ಭವಿಷ್ಯ ಹೇಗಿರಲಿದೆ? ಯಾವೆಲ್ಲಾ ರಾಶಿಗಳಿಗೆ ಶುಭ-ಅಶುಭ ಫಲಗಳಿವೆ?

horoscope today

ವಾರ ಭವಿಷ್ಯ

ಮೇಷ: ಜನರ ಮೆಚ್ಚುಗೆಗೆ ಪಾತ್ರರಾಗುವ ಸಮಯ

ರಾಹುವಿನ ತೊಂದರೆ ಇದೆ. ಹೀಗಾಗಿ ಆರೋಗ್ಯದ ಬಗೆಗೆ ಕಾಳಜಿ ಇರಲಿ. ಆರ್ಥಿಕ ವಿಚಾರಗಳ ಬಗೆಗೆ ನಿಮ್ಮ ಅದೃಷ್ಟ ಖುಲಾಯಿಸಲು ಗ್ರಹಗಳ ಚಲನೆ ಚೆನ್ನಾಗಿದೆ. ಕೆಲಸದ ಸ್ಥಳದಲ್ಲಿನ ವಿಷಯಗಳು ಸಮಸ್ಯೆ ತರಬಲ್ಲವು. ಪ್ರಣಯ ವ್ಯವಹಾರದಿಂದ ಹೆಸರು ಕೆಡಬಹುದು ಎಚ್ಚರ. ವಿಶೇಷವಾಗಿ ಆಫೀಸಿನಲ್ಲಿಯೇ ಅಪಾಯದ ಅವಕಾಶ ಜಾಸ್ತಿ. ಬುದ್ಧಿ ಬಲವು ನಿಮ್ಮ ಶಕ್ತಿಯಾಗಿದೆ. ನಿಮ್ಮ ಸಹಕಾರ, ಬೆಂಬಗಳಿಂದ ಜನರ ಮೆಚ್ಚುಗೆ ಸಿಗಲು ಸಾಧ್ಯವಿದೆ. ಸಿದ್ಧಿದಾಯಕ ವಿನಾಯಕನಿಗೆ ಗರಿಕೆಯನ್ನು ಅರ್ಪಿಸಿ, ಒಳಿತಾಗಲಿದೆ.
ಶುಭ ಸಂಖ್ಯೆ: 4 ಶುಭ ದಿಕ್ಕು: ವಾಯವ್ಯ

ವೃಷಭ: ನಿಮಗೆ ದೃಷ್ಟಿಯಾದೀತು ಎಚ್ಚರ!

ಸಿಟ್ಟು ನಿಮ್ಮನ್ನು ಜನರ ನಡುವೆ ಅಪ್ರಿಯ ವ್ಯಕ್ತಿಯನ್ನಾಗಿಸಬಹುದು. ಚುನಾವಣೆಯ ದಿನಗಳಲ್ಲಿ ರಾಜಕಾರಣಿಗಳು ಈ ವಿಷಯದಲ್ಲಿ ಎಚ್ಚರ ಹೊಂದಿರಿ. ವಿವಾಹದ ಬಗೆಗೆ ಒಳಿತಿನ ದಿನಗಳಿವು. ಹೆಣ್ಣು ಗಂಡಿನ ಜನ್ಮ ಕುಂಡಲಿಗಳ ಹೊಂದಾಣಿಕೆಯಾದರೆ ಕ್ಷೇಮ. ಕುಜ ಗ್ರಹವು ಬಾಧಕನಾಗಿ ನಿಮ್ಮ ರಾಶಿಯಲ್ಲೇ ಇದ್ದಿರುವುದರಿಂದ ಕುಂಡಲಿ ಹೊಂದಾಣಿಕೆಯನ್ನು ಮಾಡಿಸಿಕೊಂಡೇ ವಿವಾಹ ನಿರ್ಣಯ ಮಾಡಿಕೊಳ್ಳಿ. ನಿಮ್ಮ ಕೆಲಸದಲ್ಲಿ ಕೆಲವರ ದೃಷ್ಟಿ ದೋಷ ತಾಗಿ ಹಿನ್ನಡೆ ಆದೀತು. ಮಹಾಲಕ್ಷ್ಮಿಗೆ ಕುಂಕುಮಾರ್ಚನೆ ಮಾಡಿಸಿ, ಒಳಿತಾಗಲಿದೆ.
ಶುಭ ಸಂಖ್ಯೆ : 8 ಶುಭ ದಿಕ್ಕು: ಪೂರ್ವ

ಮಿಥುನ: ಶಾಂತಿಯೇ ನಿಮ್ಮ ಗೆಲುವಿನ ಮಂತ್ರ

ಜನರು ವಿನಾಕಾರಣ ನಿಮ್ಮನ್ನು ದ್ವೇಷಿಸಬಹುದು. ಆದರೆ ನೀವು ಎಲ್ಲವನ್ನೂ ಮೌನವಾಗಿಯೇ ನಿರ್ಲಕ್ಷಿಸಿ. ದ್ವೇಷಕ್ಕೆ ದ್ವೇಷ ಎಂಬ ಮಾತು ಬೇಡ. ಕೆಲವು ತೊಂದರೆ ಎದುರಿಸಲು ನಿಮ್ಮಿಂದ ಸಾಧ್ಯ. ಹೀಗಾಗಿ ಶಾಂತವಾಗಿರಿ. ಅನಿರೀಕ್ಷಿತವಾಗಿ ಲಾಭಕ್ಕೆ ದಾರಿ ಇದೆ. ಮೀನುಗಾರಿಕೆಯಿಂದ ಮೀನುಗಳ ವಹಿವಾಟು, ಐಸ್‌ಕ್ರೀಮ್‌ ಮಾರಾಟ, ಪಾರ್ಲರ್‌ ಹೊಂದಿರುವವರಿಗೆ ಲಾಭದ ದಾರಿ ಉತ್ತಮ. ಎಂಜಿನಿಯರುಗಳು ತುಸು ಎಚ್ಚರದಿಂದ ಖರ್ಚು ವೆಚ್ಚ ಮಾಡಿ. ತುಂಬಾ ಖರ್ಚು ದುಃಖಕ್ಕೆ ದಾರಿ. ಶಿವನನ್ನು ತ್ರಿದಳಗಳಿಂದ ಆರಾಧಿಸಿ.
ಶುಭ ಸಂಖ್ಯೆ : 2 ಶುಭ ದಿಕ್ಕು: ದಕ್ಷಿಣ

ಕಟಕ: ಚಿಂತೆಗೆ ಕಾರಣವಾಗಲಿರುವ ಚಂದ್ರ

ಆಹಾರದ ವಿಷಯದಲ್ಲಿ ಎಚ್ಚರ ಬೇಕು. ಚಂದ್ರನ ಓಡಾಟಗಳು ನಿಮ್ಮ ಜಾತಕದ ಕುಂಡಲಿಯಲ್ಲಿ ಅನುಕೂಲಕರವಾಗಿ ಇಲ್ಲದಿರಬಹುದು. ಲೇವಾದೇವಿ ವ್ಯವಹಾರ ಮಾಡುವವರು ಎಚ್ಚರದಿಂದಿರಿ. ಸರಿಯಾದ ಕಾಗದ ಪತ್ರಗಳಿರದೆ ವ್ಯವಹಾರ ಮಾಡದಿರಿ. ಹೂವಿನ ವ್ಯಾಪಾರ, ತರಕಾರಿ ವ್ಯಾಪಾರ ಅನುಕೂಲಕರ. ವೈದ್ಯರ ಪಾಲಿಗೂ ಲಾಭದ ಪ್ರಮಾಣ ಚೆನ್ನಾಗಿಯೇ ಇರಲು ಸಾಧ್ಯ. ಪ್ರಾವಿಷನ್‌ ಸ್ಟೋರ್ಸ್‌ ಹೊಂದಿರುವವರು ಫುಡ್‌ ಡೀಲಿಂಗ್‌ನಲ್ಲಿ ವಹಿವಾಟು ಮಾಡುವ ಜನರಿಗೆ ಬಿಕ್ಕಟ್ಟು ಸಾಧ್ಯ. ವೆಂಕಟೇಶ್ವರನ ನಾಮ ಸ್ತುತಿ ಕ್ಷೇಮಕರ.
ಶುಭ ಸಂಖ್ಯೆ : 6 ಶುಭ ದಿಕ್ಕು: ಆಗ್ನೇಯ

ಸಿಂಹ: ಗಣಪತಿಯ ಶ್ರೀರಕ್ಷೆಯಿಂದ ನೆಮ್ಮದಿ

ನಿಮ್ಮ ಮಕ್ಕಳಿಂದ ಒಳ್ಳೆಯ ವಾರ್ತೆ ಕೇಳಲಿದ್ದೀರಿ. ಮಹಾಗಣಪತಿಯ ರಕ್ಷಾ ಕವಚ ನಿಮ್ಮ ಪಾಲಿಗಿದೆ. ಧೈರ್ಯದಿಂದ ಮುನ್ನುಗ್ಗುವ ಶಕ್ತಿ ಪಡೆಯುತ್ತೀರಿ. ಬುದ್ಧಿವಂತರೂ ಆಗಿದ್ದೀರಿ. ಆದರೂ ಅವಸರದ ನಿರ್ಣಯ ಬೇಡ. ಇದರಿಂದ ಹೆಚ್ಚಿನ ಮಾನಸಿಕ ಒತ್ತಡ ಎದುರಿಸುವ ಕಿರಿಕಿರಿ ಉಂಟಾಗಿ ತೊಂದರೆ ಆಗಬಹುದು. ಕೆಲಸದ ಸ್ಥಳದಲ್ಲಿ ಪ್ರಮೋಷನ್‌ ಸಾಧ್ಯ. ಆದರೂ ರಾಹು ಗ್ರಹದ ಕಿರಿಕ್‌ನಿಂದಾಗಿ ಸಂಬಳದ ವಿಚಾರ ನಿಗದಿಯಾಗಲು ತುಸು ವಿಳಂಬವಾಗಬಹುದು. ನಿರೀಕ್ಷೆಯ ರೀತ್ಯ ಸಂಬಳ ಏರಿಕೆ ಕಷ್ಟ. ಶ್ರೀ ಗುರು ದತ್ತಾತ್ರೇಯನನ್ನು ಆರಾಧಿಸಿ.
ಶುಭ ಸಂಖ್ಯೆ : 9 ಶುಭ ದಿಕ್ಕು: ಪಶ್ಚಿಮ

ಕನ್ಯಾ: ವ್ಯಕ್ತಿತ್ವದ ವರ್ಚಸ್ಸು ವೃದ್ಧಿಸುವ ಸಮಯ

ನಿಮ್ಮ ವಿಚಾರದಲ್ಲಿ ಶನೈಶ್ವರನೇ ಬಾಧೆಕಾರಕನಾದರೂ, ಕಷ್ಟ ಪಟ್ಟರೆ ನಿಮ್ಮ ವ್ಯಕ್ತಿತ್ವವನ್ನು, ವರ್ಚಸ್ಸನ್ನು ಸಂವರ್ಧಿಸಿಕೊಳ್ಳಲು ರಾಜಕಾರಣಿಗಳಿಗೆ, ಟೆಕ್ಕಿಗಳಿಗೆ, ಚಾರ್ಟರ್ಡ್‌ ಅಕೌಂಟೆಂಟ್‌ಗಳಿಗೆ, ಬ್ಯಾಕ್‌ನ ಕ್ಲರ್ಕ್‌ ಅಥವಾ ಕಿರಿಯ ದರ್ಜೆ ಆಫೀಸರ್‌ಗಳಿಗೆ ಇದು ಒಳ್ಳೆಯ ಕಾಲ ಘಟ್ಟವಾಗಿದೆ. ಸಿನಿಮಾ ನಿರ್ಮಾಪಕರ, ನಿರ್ದೇಶಕರು ಎಚ್ಚರಿಕೆಯ ಹೆಜ್ಜೆ ಇರಿಸಿದರೆ ಒಳ್ಳೆಯ ಚಿತ್ರ ನಿರ್ಮಾಣಕ್ಕೆ ಶುಕ್ರ ಗ್ರಹ ಬೆಂಬಲವಾಗಿ ನಿಲ್ಲಲಿದೆ. ನೀರಿನ ಬಳಕೆಯ ಬಗ್ಗೆ ಎಚ್ಚರ ಇರಲಿ. ಅಶುದ್ಧ ನೀರಿನಿಂದ ತೊಂದರೆಯಾಗಬಹುದು.
ಶ್ರೀ ರಾಮನನ್ನು ಆರಾಧಿಸಿ.
ಶುಭ ಸಂಖ್ಯೆ : 1 ಶುಭ ದಿಕ್ಕು: ಉತ್ತರ

ತುಲಾ: ಪ್ರಣಯದತ್ತ ಒಲವು, ಕೆಲಸದಲ್ಲಿ ಗೆಲುವು

ಪ್ರತಿಯೊಂದನ್ನೂ ತೂಗಿ ನೋಡುವ ಸ್ವಭಾವ ನಿಮ್ಮದು. ಆದರೆ ನಿಮ್ಮನ್ನೂ ತೂಗಿ ನೋಡುವ ಜನರು ನಿಮ್ಮ ಬಳಿ ಸುಳಿಯುತ್ತಿರುತ್ತಾರೆ. ಹೀಗಾಗಿ ಒಂದು ರೀತಿಯಲ್ಲಿ ಪ್ರತಿ ಕೆಲಸವೂ ಒಂದೊಂದು ಹಂತದಲ್ಲಿ ನಿಂತು ಹೋಗುವ ಭಯ ಎದುರಾಗಬಹುದು. ಹಿರಿಯರ ಆಸ್ತಿ ಸಂಬಂಧವಾದ, ಸಹೋದ್ಯೋಗಿಗಳ ಜತೆಗಿನ ಮನಸ್ತಾಪದ ವಿಷಯಗಳು ಶಾಂತಿ ಕದಡಬಹುದು. ತಲೆ ಗಟ್ಟಿ ಇದೆ ಎಂದು ಕಲ್ಲಿಗೆ ಬಡಿದುಕೊಳ್ಳಲು ಹೋಗಬೇಡಿ. ಪ್ರಣಯ ಸಂದರ್ಭದಲ್ಲಿ ಗೆಲುವಿದೆ. ಶುಭಕರವಾದ ಮಾರುತಿಯನ್ನು ಆರಾಧಿಸಿ, ಒಳ್ಳೆಯದಾಗುತ್ತದೆ.
ಶುಭ ಸಂಖ್ಯೆ : 5 ಶುಭ ದಿಕ್ಕು: ವಾಯವ್ಯ

ವೃಶ್ಚಿಕ: ಹಿತಶತ್ರುಗಳ ಬಗ್ಗೆ ಎಚ್ಚರವಿರಲಿ

ಮನಸ್ಸು ಶಾಂತಿ ಸಮಾಧಾನದ ಗೂಡಾಗಿ ಇರಬೇಕೆಂದಷ್ಟೂ ನಿಮ್ಮನ್ನು ಉದ್ರೇಕಿಸುವ ಜನ ಸುತ್ತವರಿದಿರುತ್ತಾರೆ. ಆದರೆ ನೀವು ಕಿಲಾಡಿಗಳಾಗಿ ವರ್ತಮಾನವನ್ನು ತಡೆಯ ಲಾರದ ಕಾವಿನ ಕಾವಲಿಯನ್ನಾಗಿಸಬೇಡಿ. ಮಾತು ಬೆಳ್ಳಿ, ಮೌನ ಬಂಗಾರವೆಂಬುದನ್ನು ಅರಿತಿರಿ. ಸಹೋದರರ ನಡುವೆ ಕಲಹ ತರುವ ಹಿತ ಶತ್ರುಗಳ ಬಗೆಗೆ ಎಚ್ಚರ ಇರಲಿ. ಯಾವುದೇ ಸಂದರ್ಭದಲ್ಲೂ ಖಿನ್ನತೆ ಆವರಿಸಿದರೆ ಇರುವೆ ಬರುವ ಜಾಗೆಯಲ್ಲಿ ತುಸು ಸಕ್ಕರೆ ಚೆಲ್ಲಿ, ಮನಸ್ಸು ಸಡಿಲವಾಗಿ ಆರಾಮವಾಗಿರುತ್ತೀರಿ. ಕರುಣಾ ಮೂರ್ತಿಯಾದ ಶ್ರೀ ರಾಘವೇಂದ್ರರನ್ನು ಆರಾಧಿಸಿ.
ಶುಭ ಸಂಖ್ಯೆ : 7 ಶುಭ ದಿಕ್ಕು: ಪಶ್ಚಿಮ

ಧನಸ್ಸು: ಸಂಯಮವೇ ಗೆಲುವಿನ ಗುಟ್ಟು

ಉರಿದೆದ್ದ ವರ್ತಮಾನದಲ್ಲಿ ಸೂರ್ಯನ ಉರಿ ಇದೆ. ಮನಸ್ಸು ಮತ್ತು ದೇಹದ ಹೊಂದಾಣಿಕೆಗೆ ತುಸು ಆತಂಕದ ವಿಷಯವಾಗಿ ವರ್ತಮಾನ ನಿಮಗೆ ಬೆವರಿಳಿಸಬಹುದು. ಬುದ್ಧಿವಂತರಂತೂ ಹೌದು ನೀವು. ಆದರೆ ಆತ್ಮಘಾತಕತನ ತೋರುವ ದುಷ್ಟರು ನಿಮ್ಮ ಬುದ್ಧಿವಂತಿಕೆಗೆ ಕೂಡ ದೊಡ್ಡ ಸವಾಲು ಹಾಕಬಲ್ಲರು. ಎಚ್ಚರ ಇರಲಿ. ಆರ್ಥಿಕತೆಯ ವಿಚಾರದಲ್ಲಿ ದುಡಿತ ಮಾಡಿದಷ್ಟು ಫಲಕಾರಿಯಾದ ರೀತಿಯಲ್ಲಿ ಸಂಪಾದನೆ ಬರುವುದು ಕಷ್ಟಕರವೇ ಆಗುತ್ತದೆ. ಆದರೂ ಸಂಯಮದಿಂದ ಗೆಲ್ಲಬಲ್ಲಿರಿ. ಸನ್ಮಂಗಳಕಾರಕಿಯಾದ ಶ್ರೀ ದುರ್ಗೆಯನ್ನು ಆರಾಧಿಸಿ.
ಶುಭ ಸಂಖ್ಯೆ: 1 ಶುಭ ದಿಕ್ಕು: ಆಗ್ನೇಯ

ಮಕರ: ಕಾರ್ಯಕ್ಕೆ ಹುಳಿ ಹಿಂಡುವವರ ದೂರವಿಡಿ

ಸ್ವಾಮಿ ನಿಮ್ಮ ರಾಶಿಯ ಯಜಮಾನನಾದರೂ ಚಂದ್ರನ ಜತೆಗಿನ ಯುದ್ಧದಲ್ಲಿ ಬಸವಳಿದಿದ್ದಾನೆ. ಹೀಗಾಗಿ ಬಾವಿಯಿಂದ ಎತ್ತಿ ಇದೀಗ ಮೇಲೆ ತೆಗೆದ ನೀರನ್ನೂ ಆರಿಸಿ ಕುಡಿಯುವ ಕಾರ್ಯಕ್ಕೆ ಮುಂದಾಗಿ. ವರ್ತಮಾನದ ರಗಳೆಗಳು ಸಾಡೇಸಾತಿ ಕಾಟದ ಕಾರಣದಿಂದ ಬಿಸಿ ಎಣ್ಣೆ ಕೊತಕೊತ ಕುದಿವಂತೆ ಕುದಿದೀತು. ದಾಂಪತ್ಯದಲ್ಲಿನ ಬಿರುಕು ದೊಡ್ಡದಾಗದಂತೆ ನೋಡಿಕೊಳ್ಳಿ. ನೀವು ಶಾಂತವಾಗಿದ್ದರೂ ಕಾರ್ಯಕ್ಕೆ ಹುಳಿ ಹಿಂಡುವ ಜನ ಪಕ್ಕದಲ್ಲೇ ಇದ್ದು ದುಷ್ಟತನವನ್ನು ತೋರುತ್ತಾರೆ, ಎಚ್ಚರ ಇರಲಿ. ಶುಭದಾಯಕನಾದ ಶ್ರೀ ಕೃಷ್ಣನನ್ನು ಸ್ತುತಿಸಿ, ಕ್ಷೇಮವಿದೆ.
ಶುಭ ಸಂಖ್ಯೆ : 3 ಶುಭ ದಿಕ್ಕು: ಉತ್ತರ

ಕುಂಭ: ಶ್ರೀ ರಾಮನ ಭಜನೆಯಿಂದ ಒಳಿತು

ತೀವ್ರತರವಾದ ಸಾಡೇಸಾತಿ ಉತ್ಸಾಹವನ್ನು ಬತ್ತಿಸಿದೆ. ಕಾರ್ಯಗಳಲ್ಲಿ ಯಶಸ್ಸು ಸಿಗದೆ ನಿತ್ಯವೂ ಒಂದು ರೀತಿಯ ಆತಂಕವನ್ನೇ ಸೃಷ್ಟಿಸುತ್ತಿದೆ. ಕಾಲದ ಓಟದಲ್ಲಿ ಹಿಂದೆ ಬಿದ್ದಿದ್ದೇನೆ ಎಂಬ ನೋವು ಸಹಜವೇ ಆಗಿದೆ. ಯೋಚಿಸಬೇಡಿ. ಬುದ್ಧಿ ಶಕ್ತಿಯನ್ನು ಬಂಡವಾಳವಾಗಿಸಿಕೊಂಡು ಮುನ್ನುಗ್ಗಲು ಮುಂದಾಗಿ. ಹಣವನ್ನು ತೊಡಗಿಸಲು ಇದು ಸಕಾಲವಲ್ಲ. ಲಾಭಕರವಾದುದು ಬುದ್ಧಿ ಶಕ್ತಿಯಿಂದಲೇ ಸಿಗಬೇಕು. ಕನ್ಸಲ್ಟೆಂಟ್‌ ಆಗಿ ನಿಮ್ಮ ಅನುಭವವನ್ನು ದುಡಿಸಿಕೊಳ್ಳಿ. ಧನ ಪ್ರಾಪ್ತಿ ಇದೆ. ಶ್ರೀ ರಾಮನ ಸ್ತುತಿ ಮಾಡಿ, ಒಳಿತಿದೆ.
ಶುಭ ಸಂಖ್ಯೆ : 9 ಶುಭ ದಿಕ್ಕು: ಈಶಾನ್ಯ

ಮೀನ: ಯಶಸ್ಸಿಗೆ ಉಂಟು ನೂರಾರು ದಾರಿ

ಹಲವು ಬಳಲಿಕೆಗಳನ್ನು ಶನೈಶ್ವರ ಒದಗಿಸುವ ಇಕ್ಕಟ್ಟಿನಲ್ಲಿ, ಬಿಕ್ಕಟ್ಟಿನಲ್ಲಿ ಇದ್ದೀರಿ. ಆದರೆ ಮಹತ್ತರವಾದ ಬಲದೊಂದಿಗೆ ಆರೂಢನಾದ ಕುಜನಿಂದ ನಿಮ್ಮ ಯೋಜನೆಗಳಿಗೆ ಗೆಲುವು ಮತ್ತು ಹಲವು ಯೋಗಗಳು ಇದ್ದಿರುವುದರಿಂದ ಯಶಸ್ಸಿಗೆ ದಾರಿ ಆಗಾಗ ಲಭ್ಯವಿದೆ. ಹಣಕಾಸಿನ ವಿಚಾರದಲ್ಲಿ ಮಾತಿನ ಧಾಟಿಯಲ್ಲಿ ಎಚ್ಚರವಿರಲಿ. ಶತ್ರುಗಳಾದರೂ ನಿಮಗೆ ಕೆಲವು ಒಳಿತುಗಳನ್ನು ತರುವ ಸಾಧ್ಯತೆಗಳು ಜಾಸ್ತಿಯೇ ಇದ್ದಿವೆ. ಆದರೆ ಶತ್ರುಗಳನ್ನು ನಂಬಿ ಸರ್ರನೆ ಕೆಡಬೇಡಿ. ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿಯನ್ನು ಆರಾಧಿಸಿ.
ಶುಭ ಸಂಖ್ಯೆ : 2 ಶುಭ ದಿಕ್ಕು: ಪೂರ್ವ

ಎಂ.ಎಂ.ಕೆ. ಶರ್ಮ, ಬೆಂಗಳೂರು
ಮೊಬೈಲ್‌ ನಂ.: 9632980996

ಇದನ್ನೂ ಓದಿ | Astrology: ನಿಮ್ಮ ರಾಶಿಗೆ ಸಾಡೇಸಾತಿ ಮತ್ತು ಶನಿ ದೆಸೆ ಯಾವಾಗ ಇದೆ ಗೊತ್ತೆ?

Exit mobile version