Site icon Vistara News

Weekly Horoscope | ಈ ವಾರ ನಿಮ್ಮ ಭವಿಷ್ಯ ಹೇಗಿರಲಿದೆ? ಯಾವೆಲ್ಲಾ ರಾಶಿಗಳಿಗೆ ಶುಭ-ಅಶುಭ ಫಲಗಳಿವೆ?

horoscope today

ವಾರ ಭವಿಷ್ಯ

ಮೇಷ: ಮಾನಸಿಕ ಕಿರಿಕಿರಿ ಅನಿವಾರ್ಯ

ಶನೈಶ್ವರ ಕೊಡಬೇಕಾದ ಲಾಭದ ದಿನಗಳು ನಿಮಗೆ ಪ್ರಾರಂಭವಾಗಿವೆ. ರಾಹುವೇ ಸಮಸ್ಯೆಯ ಮೂಲನಾಗಿದ್ದಾನೆ. ವರ್ಚಸ್ಸು, ಸಿದ್ಧಿಗಳಿಗೆ ತಾಪತ್ರಯ ತಂದಿಡುವ ಕೆಲಸ ರಾಹುವಿನಿಂದಲೇ ಜಾಸ್ತಿ. ಇದರಿಂದಾಗಿ ಮಾನಸಿಕ ಕಿರಿಕಿರಿಯನ್ನು, ಕೆಲಸದ ಸ್ಥಳದಲ್ಲಿ ಎದುರಿಸುವ ಸವಾಲನ್ನು ನೀವೀಗ ಎದುರಿಸುವುದು ಅನಿವಾರ್ಯವೇ ಸರಿ. ಜತೆಗೆ ಬಾಳ ಸಂಗಾತಿಯ ಜತೆಗಿನ ಹೊಂದಾಣಿಕೆಗೆ ಹೆಚ್ಚಿನ ಮಹತ್ವ ನೀಡಿ, ಮದುವೆಯಾಗಲಿರುವ ಸಂಗಾತಿ ದೂರವಾಗಬಹುದು, ಎಚ್ಚರ ಇರಲಿ.
ಶುಭ ಸಂಖ್ಯೆ: 6 ಶುಭ ದಿಕ್ಕು: ದಕ್ಷಿಣ

ವೃಷಭ: ಕೆಲಸದ ಸ್ಥಳದಲ್ಲಿ ನಿರಾಳವಾಗಿರಿ

ದೋಷಯುಕ್ತವಾದ ಕುಜನು ನಿಮ್ಮ ಮಾತಿನ ಮೊನಚನ್ನು ಕಡಿಮೆ ಮಾಡುತ್ತಾನೆ. ಇದರಿಂದಾಗಿ ಹಣಕಾಸಿನ ವಿಚಾರದಲ್ಲಿ ನಿಮ್ಮ ನಿಯಂತ್ರಣ ತಪ್ಪಿ ನಷ್ಟಕ್ಕೆ ದಾರಿ ಆಗಲು ಸಾಧ್ಯವಿದೆ. ಯಾರಿಗೂ ಸಾಲ ಕೊಡುತ್ತೇನೆಂಬ ಭರವಸೆ ನೀಡಲು ಹೋಗದಿರಿ. ಆದರೆ ಕೆಲಸದ ಸ್ಥಳದಲ್ಲಿ ಉತ್ತಮವಾದ, ನಿರಾಳವಾದ ದಿನಗಳು. ಹೊಸದೇ ಕೆಲಸ ಸಿಗುವ ವಿಚಾರದಲ್ಲಿ ಹಲವು ಅವಕಾಶಗಳು ನಿಮಗೆ ಒದಗಿ ಬರಲು ಸಾಧ್ಯ. ಕೋಪವನ್ನು ನಿಯಂತ್ರಿಸಿ. ಎದುರಾಳಿಯು ನಿಮ್ಮನ್ನು ಅಡಕತ್ತರಿಯಲ್ಲಿ ಸಿಲುಕಿಸಲು ಅವಕಾಶ ನಿರ್ಮಿಸಿಕೊಳ್ಳುವ ಸಂದರ್ಭ ಜಾಸ್ತಿ.
ಶುಭ ಸಂಖ್ಯೆ : 4 ಶುಭ ದಿಕ್ಕು: ನೈಋತ್ಯ

ಮಿಥುನ: ನಿಮಗಿದೋ ಒಳ್ಳೆಯ ಕಾಲ ಬಂದಿದೆ!

ಅಷ್ಟಮ ಶನಿ ಕಾಟದ ಉರುಳಿನಿಂದ ಹೊರ ಬರುತ್ತಿರುವ ಸುಸಂದರ್ಭವಾಗಿದೆ ಇದು. ಲಾಭಕರವಾಗಿರುವ ಗುರು ಮತ್ತು ಉತ್ತಮನಾಗಿ ಪರಿವರ್ತನೆ ಹೊಂದಿರುವ ಶನೈಶ್ವರ ಸ್ವಾಮಿಯಿಂದಾಗಿ ಒಳ್ಳೆಯ ಹೊಸ ಕೆಲಸ ಸಿಗುವ ಸಾಧ್ಯತೆ ಅಧಿಕವಾಗಿದೆ. ಕೆಲಸದ ಸ್ಥಳದಲ್ಲೂ ಪ್ರಮೋಷನ್‌ ಸಿಕ್ಕಿ, ಮನಸ್ಸಿನ ಸಂತೋಷ ವೃದ್ಧಿಗೊಳ್ಳಲು ಅವಕಾಶ ಜಾಸ್ತಿ ಇದೆ. ಈ ಮೂವತ್ತು ತಿಂಗಳುಗಳ ಕಾಳಘಟ್ಟದಲ್ಲಿ ಯಾವುದು ಚಿನ್ನ, ಯಾವುದು ಕಬ್ಬಿಣ ಎಂಬುದನ್ನು ಅರಿತಿದ್ದೀರಿ, ಹೀಗಾಗಿ ಬೌದ್ಧಿಕವಾಗಿ ಬಿಕ್ಕಟ್ಟುಗಳನ್ನು ಗೆಲ್ಲ ಬಲ್ಲಿರಿ.
ಶುಭ ಸಂಖ್ಯೆ : 7 ಶುಭ ದಿಕ್ಕು: ಪೂರ್ವ

ಕಟಕ: ಶಾಂತಿ, ಸಮಾಧನಾವೇ ನಿಮ್ಮ ಅಸ್ತ್ರವಾಗಲಿ

ಅಷ್ಟಮ ಶನಿ ಕಾಟದ ತಾಪತ್ರಯದ ದಿನಗಳು ಪ್ರಾರಂಭವಾಗುತ್ತಿವೆ. ಚಂದ್ರನ ಮೇಲೆ ಶನಿ ಮಹಾರಾಜನ ನೇರ ಆಕ್ರಮಣ ಇರುವ ಕಾರಣದಿಂದ ತಲೆಬಿಸಿ ವೃದ್ಧಿಸಲಿದೆ. ಹತ್ತಿರದವರೇ ನಿಮ್ಮ ವೈರಿಗಳಾಗುವ ಸಾಧ್ಯತೆ ಉಂಟಾಗಬಹುದು. ಒಡ ಹುಟ್ಟಿದವರೇ ಕಿರಕಿರಿಗೆ ಕಾರಣವಾಗಬಹುದು. ಶಾಂತಿ, ಸಮಾಧಾನ ನಿಮ್ಮ ಅಸ್ತ್ರವಾಗಿರಲಿ. ಶಿವನ ಧ್ಯಾನದಿಂದ ಮನಸ್ಸಿನ ಸಮತೋಲನ ಕಾದುಕೊಳ್ಳಬಲ್ಲಿರಿ. ಸಿಟ್ಟಿನ ಆವೇಶಕ್ಕೆ ಅವಕಾಶ ಕೊಡಬೇಡಿ. ಇದರಿಂದಾಗಿ ನಿಮಗೆ ಅಪಾಯಗಳು ದೂರವಾಗುತ್ತವೆ.
ಶುಭ ಸಂಖ್ಯೆ : 2 ಶುಭ ದಿಕ್ಕು: ವಾಯವ್ಯ

ಸಿಂಹ: ಉತ್ಸಾಹವಿದ್ದರೆ ಆದಾಯವೂ ಜಾಸ್ತಿ

ದಾಂಪತ್ಯದ ವಿಚಾರದಲ್ಲಿ ಉತ್ತಮ ಹೊಂದಾಣಿಕೆಗೆ ಅವಕಾಶವಿರುವ ಉತ್ತಮ ಕಾಲ ಘಟ್ಟವಾಗಿದೆ. ಈ ಹೊಂದಾಣಿಕೆಯ ಫಲವಾಗಿ ಶಾಂತಿ, ಸಮಾಧನವು ಜಾಸ್ತಿ ಆಗಿ ವರಮಾನದ ಸ್ಥಿತಿಗತಿ, ಧನದ ಶೇಖರಣೆಗಾಗಿನ ಉತ್ಕೃಷ್ಟ ಯೋಜನೆಗಳನ್ನು ರೂಪಿಸಬಲ್ಲ ಸುಸಂದರ್ಭ ನಿಮಗೆ ಸುಲಭವಾಗಿ ಒದಗಿ ಬರುತ್ತದೆ. ಶೇರು ಮಾರುಕಟ್ಟೆಯಲ್ಲಿ ಉತ್ತಮ ಲಾಭವನ್ನು ತಂದುಕೊಡುವಲ್ಲಿ ಬುಧ ಗ್ರಹವು ಶಕ್ತಿ ಒದಗಿಸಲಿದೆ. ಮಕ್ಕಳೂ ಕೂಡ ನಿಮ್ಮ ಆಜ್ಞೆಗಳಿಗೆ ಎದುರಾಡದೆ ನಿಮ್ಮ ಸಂತೋಷಕ್ಕೆ ಕಾರಣರಾಗುತ್ತಾರೆ. ದುರ್ಗೆಯನ್ನು ಸ್ತುತಿಸಿ.
ಶುಭ ಸಂಖ್ಯೆ :9 ಶುಭ ದಿಕ್ಕು: ಉತ್ತರ

ಕನ್ಯಾ: ಮಾತಿನ ಮೇಲೆ ಹಿಡಿತವಿರಲಿ

ಪಂಚಮ ಶನಿ ಕಾಟದಲ್ಲಿ ನರಳಿ ದಣಿವಾದ ದಿನಗಳು ಮುಗಿದು ಹೊಸ ಕಾಲಘಟ್ಟಕ್ಕೆ ಈಗ ಪ್ರವೇಶಿಸುತ್ತಿದ್ದೀರಿ. ಮಾತಿನ ಬಗೆಗೆ ಮಾತ್ರ ಎಚ್ಚರದಿಂದಿರಿ. ಒಳಿತಿನ ಸಂದರ್ಭ ಬುಧ ಗ್ರಹದ ಕಾರಣದಿಂದ ನಿಮಗೆ ಒಲಿದು ಬರಲಿದೆ. ಬ್ಯುಸಿನೆಸ್‌ ನಡೆಸುವ ಜನರಿಗೆ, ಎಂಜಿನಿಯರ್‌ಗಳಿಗೆ, ಲೆಕ್ಕಪತ್ರ ಪರಿಶೀಲನಾ ವೃತ್ತಿಯಲ್ಲಿರುವವರಿಗೆ, ಬ್ಯಾಂಕ್‌ ಸಿಬ್ಬಂದಿಗಳಿಗೆ ನೆಮ್ಮದಿಯ ದಿನಗಳಾಗಿವೆ ಇವು. ಉನ್ನತ ವಿದ್ಯಾಭ್ಯಾಸದ ಸಂಬಂಧವಾಗಿ ಉತ್ತಮ ಅವಕಾಶಗಳು, ಅನುಕೂಲಕದ ದಾರಿಗಳು ನಿಮಗೆ ಸಿಗಲಿದೆ. ಮಾರುತಿಯನ್ನು ಆರಾಧಿಸಿ.
ಶುಭ ಸಂಖ್ಯೆ : 4 ಶುಭ ದಿಕ್ಕು: ಆಗ್ನೇಯ

ತುಲಾ: ಹಾಸಿಗೆ ಇದ್ದಷ್ಟೇ ಕಾಲು ಚಾಚಿ

ಪಂಚಮ ಶನಿಕಾಟ ಪ್ರಾರಂಭವಾಗುತ್ತಿರುವ ದಿನಗಳಾಗಿವೆ. ಅನಾವಶ್ಯಕವಾದ ಆಪಾದನೆಗಳು ನಿಮ್ಮನ್ನು ತಬ್ಬಿಬ್ಬುಗೊಳಿಸಲು ಸಾಧ್ಯ. ಪ್ರಾಮಾಣಿಕತೆಯಿಂದ ಇದ್ದಾಗಲೂ ಅನುಮಾನ ಪಡುವ ಕಿರಾತಕ ವರ್ಗ ನಿಮ್ಮನ್ನು ಸುತ್ತಿಕೊಳ್ಳುತ್ತದೆ. ಇನ್ನು ಅನ್ಯಾಯದ ಮಾರ್ಗಗಳಂತೂ ಬಿಡದೆ ಬೆಂಬತ್ತಿ ನಿಮ್ಮ ವರ್ಚಸ್ಸಿಗೆ ಧಕ್ಕೆ ತಂದೇ ತೀರುತ್ತವೆ. ಹಾಸಿಗೆ ಇದ್ದಷ್ಟೇ ಕಾಲು ಚಾಚಿ. ಸಾತ್ವಿಕ ಗುರುವನ್ನು ಅಥವಾ ಭದ್ರವಾದ, ಸುಗಮವಾದ ಜೀವನದ ಮಾರ್ಗವನ್ನು ತೋರಿಸುವ ಶ್ರೀ ದಕ್ಷಿಣಾಮೂರ್ತಿಯನ್ನು ಆರಾಧಿಸಿ.
ಶುಭ ಸಂಖ್ಯೆ : 6 ಶುಭ ದಿಕ್ಕು: ಪಶ್ಚಿಮ

ವೃಶ್ಚಿಕ: ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಸಲ್ಲ

ಕೆಲವು ಆರೋಗ್ಯದ ಸಮಸ್ಯೆಗಳ ಬಗ್ಗೆ ನಿರ್ಲಕ್ಷ್ಯ ತೋರಿಸಲೇ ಬಾರದು. ಏನೋ ಚಿಕ್ಕದು ದೋಷ, ಹಾಗೇ ಸೂಕ್ತ ಚಿಕಿತ್ಸೆ ಇರದೆ ಮುಂದುವರಿದರಾಯ್ತು ಎಂಬ ಆಲಸ್ಯ ಬೇಡ. ಸುಖದ ವಿಚಾರದಲ್ಲಿ ಶನೈಶ್ವರ ಸ್ವಾಮಿಯು ತೊಂದರೆ ಕೊಡಲಾರ ಎಂಬುದು ಸತ್ಯವಾದರೂ ನಿಮ್ಮ ದೋಷ “ನೋಡೋಣ, ನಾಳೆ ಮಾಡಿದರಾಯ್ತುʼʼ ಎಂಬ ಚಲ್ತಾ ಹೈ ಧೋರಣೆಯಿಂದ ಬಾಧೆಗೊಳಗಾಗುವಿರಿ. ಹಾರ್ಡ್‌ವೇರ್‌, ಸಾಫ್ಟವೇರ್‌ ಉದ್ಯಮವನ್ನು ಲಕ್ಷ್ಯ ಇರಿಸಿ, ಸ್ಥೈರ್ಯದಿಂದ ನಿರ್ವಹಿಸಿ. ಲಾಭವಿದೆ, ಕುಮಾರ ಸ್ವಾಮಿಯನ್ನು ಸ್ತುತಿಸಿ.
ಶುಭ ಸಂಖ್ಯೆ : 1 ಶುಭ ದಿಕ್ಕು: ಈಶಾನ್ಯ

ಧನಸ್ಸು: ಧನ ಲಾಭದ ಸಮಯ

ಸಾಡೇಸಾತಿ ಕಾಟದಿಂದ ಹೊರ ಬಂದಿದ್ದೀರಿ. ನಿರಾಳತೆಗೆ ಬೇಕಾದ ಉತ್ತಲ ಕಾಲಾವಧಿಯನ್ನು ಇದೀಗ ಬಂದು ತಲುಪಿದ್ದೀರಿ. ಕಾಡುತ್ತಿದ್ದ ಶನೈಶ್ವರನೇ ಧೈರ್ಯ ತುಂಬಿ ಅದ್ಭುತವಾದ ಯಶಸ್ಸಿನತ್ತ ನಿಮ್ಮನ್ನು ತಲುಪಿಸುವ ಕರುಣಾಮಯಿಯಾಗುತ್ತಾನೆ. “ಧೈರ್ಯಂ ಸರ್ವತ್ರ ಸಾಧನಂʼʼ ಎಂಬ ಮಾತು ಯಾಕೆ ಮುಖ್ಯ, ಧೈರ್ಯದಿಂದ, ನೈತಿಕ ಮಾರ್ಗದಿಂದ ಏನೆಲ್ಲ ಅದ್ಭುತ ಸಾಧಿಸಬಹುದೆಂಬುದನ್ನು ಚೆನ್ನಾಗಿ ಅರಿಯುತ್ತೀರಿ. ಧನ ಲಾಭವಿದೆ. ಮಕ್ಕಳ ಬಗೆಗೆ ಎಚ್ಚರಿಕೆ ಇರಲಿ. ವೆಂಕಟೇಶನನ್ನು ಸ್ತುತಿಸಿ.
ಶುಭ ಸಂಖ್ಯೆ: 7 ಶುಭ ದಿಕ್ಕು: ಉತ್ತರ

ಮಕರ: ದುಷ್ಟರಿಂದ ದೂರವಿರಿ

ಸಾಡೇಸಾತಿ ಕಾಟದ ಏಳೂವರೆ ವರ್ಷಗಳ ಪರದಾಟದ ಅವಧಿಯಲ್ಲಿ ಇನ್ನೂ ಎರಡೂವರೆ ವರ್ಷಗಳು ಉಳಿದಿವೆ. ಯಾವ ತಪ್ಪುಗಳನ್ನೂ ಮಾಡದಿರಿ. ದುಷ್ಟರ ಸಂಘದಿಂದ ದೂರವಿರಿ. ಸಾಲ ಕೊಡುವವರಿದ್ದಾರೆ ಎಂಬ ಕಾರಣದಿಂದ ಬಡ್ಡಿಯ ಹೊರೆಯಾಗುವ ಸಾಲಕ್ಕೆ ಕೈ ಹಾಕದಿರಿ. ಅಂತೆಯೇ ಬಡ್ಡಿ ಸಿಗುತ್ತದೆ ಎಂಬ ಕಾರಣಕ್ಕೆ ಯಾರಿಗೂ ಸಾಲ ನೀಡಿ ತೊಂದರೆಗೆ ಸಿಲುಕದಿರಿ. ಶೇರು ಹೂಡಿಕೆ, ಬಿಸನೆಸ್‌, ಯಾವುದೋ ರೀತಿಯ ಆಯಾಚಿತ ಬಡ್ಡಿಯ ಆಸೆಗೆ ಎಲ್ಲೋ ಠೇವಣಿ ಇರಿಸುವ ಆತುರ ಬೇಡ. ಗುರು ರಾಘವೇಂದ್ರರನ್ನು ಆರಾಧಿಸಿ, ಗೆಲ್ಲಿರಿ.
ಶುಭ ಸಂಖ್ಯೆ : 5 ಶುಭ ದಿಕ್ಕು: ಆಗ್ನೇಯ

ಕುಂಭ: ಶನಿಯಿಂದಲೇ ಒಳಿತಿದೆ…

ಬಾಕಿ ಉಳಿದ ಐದು ವರ್ಷಗಳು ನಿಮಗೆ ಚಂದ್ರನ ಕಾರಣದಿಂದ (ಸಾಡೇಸಾತಿ ಕಾಟದ ದಿನಗಳು ನಡೆಯುತ್ತಿವೆ ನಿಮಗೆ ಎಂಬುದು ನೆನಪಿಡಿ) ಮನೋ ಮಂಡಲದಲ್ಲಿ ಕಿರಿಕಿರಿಯ ನಿರಂತರವಾದ ಅಲೆಯನ್ನು ಎಬ್ಬಿಸುತ್ತದಲೇ ಇರುತ್ತದೆ. ಕರುಣಾಳುವಾದ ಶನೈಶ್ವರನು ಚಂದ್ರನ ಜತೆಗಿನ ಸಂಘರ್ಷ ಎದುರಿಸುತ್ತಿದ್ದರೂ ಕೆಲವು ಒಳಿತುಗಳಿಗೆ ಕಾರಣ ಮಾಡಿಕೊಡುತ್ತಾನೆ. ಆದರೆ ಪ್ರೇಮ ಪ್ರಕರಣ, ಅತಿಯಾದ ಮಾತು, ಆಫೀಸಿನ ಬಾಸು, ಸಹೋದ್ಯೋಗಿಗಳನ್ನು ಸಾಮಾನ್ಯವಾಗಿ ತಲೆ ತಿನ್ನುತ್ತಾರೆ. ಮಾರುತಿಯನ್ನು ಆರಾಧಿಸಿ.
ಶುಭ ಸಂಖ್ಯೆ : 3 ಶುಭ ದಿಕ್ಕು: ದಕ್ಷಿಣ

ಮೀನ: ಹಗ್ಗವೇ ಹಾವಾಗಬಹುದು!

ಏಳೂವರೆ ವರ್ಷಗಳ ಸಾಡೇಸಾತಿ ಕಾಟ ತಲೆಯನ್ನು, ದೇಹವನ್ನು ಸುತ್ತುತ್ತಿದೆ. ಸರ್ರನೆ ತೆಗೆದುಕೊಳ್ಳುವ ನಿರ್ಣಯ ಮುಳುವಾಗಬಹುದು. ಕಾರಣವಿರದೆ, ನಡೆಸುವ ವಿಳಂಬ ಧೋರಣೆಯಿಂದಲೂ ನಿಮಗೆ ತೊಂದರೆ ತಲೆದೋರಬಹುದು. ಆದಾರವಾಗಿದ್ದ ಹಗ್ಗವೇ ಹಾವಾಗಬಹುದು. ಸೊಗಸಾದ ಹೂವನ್ನು ಕೀಳಲು ಹೋಗಿ ಜತೆಗಿರುವ ಮುಳ್ಳು ಕೈಯನ್ನು ಚುಚ್ಚಬಹುದು. ಲಕ್ಷಗಟ್ಟಲೆ ಸಂಬಳವಿದ್ದರೂ ಹಣ ಕೈಯಲ್ಲಿ ನಿಲ್ಲದಿರಬಹುದು. “ಸಕಲ ಗ್ರಹ ಬಲ ನೀನೇ ಸರಸಿಜಾಕ್ಷʼʼ ಎಂಬುದನ್ನು ನೆನಪಿಡಿ. ಶ್ರೀರಾಮನನ್ನು ಸ್ತುತಿಸಿ.
ಶುಭ ಸಂಖ್ಯೆ : 8 ಶುಭ ದಿಕ್ಕು: ಪಶ್ಚಿಮ

ಎಂ.ಎಂ.ಕೆ. ಶರ್ಮ, ಬೆಂಗಳೂರು
ಮೊಬೈಲ್‌ ನಂ.: 9632980996

ಇದನ್ನೂ ಓದಿ | Astrology: ನಿಮ್ಮ ರಾಶಿಗೆ ಸಾಡೇಸಾತಿ ಮತ್ತು ಶನಿ ದೆಸೆ ಯಾವಾಗ ಇದೆ ಗೊತ್ತೆ?

Exit mobile version