ಆಚಾರ್ಯ ಶ್ರೀ ವಿಠ್ಠಲ ಭಟ್ಟ ಕೆಕ್ಕಾರು
ಹೊಸ ವರ್ಷ 2023 ಬರುತ್ತಿದೆ. ಈ ನೂತನ ವರ್ಷದಲ್ಲಿ ಮುಖ್ಯವಾಗಿ ಯಾವೆಲ್ಲಾ ಗ್ರಹಗಳ ಸಂಚಾರ ಇರಲಿದೆ. ಇದರ ಪರಿಣಾಮಗಳೇನು (Yearly Horoscope 2023) ಎಂಬುದನ್ನು ನೋಡೋಣ.
ಜ್ಯೋತಿಷ ರೀತಿಯಾಗಿ ಎರಡೂವರೆ ವರ್ಷಕ್ಕೆ ಒಮ್ಮೆ (ಸಾಮಾನ್ಯ ಪರಿಕ್ರಮದಲ್ಲಿ, ಅಂದರೆ ವಕ್ರೀ ಹಾಗೂ ಮುಂದಿನ ಮನೆಗಳಿಗೆ ವೇಗವಾಗಿ ಚಲಿಸುವ ಅವಧಿ ಹೊರತು ಪಡಿಸಿ) ಶನಿ ಗ್ರಹ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚರಿಸುತ್ತದೆ. ಅಂದರೆ ಒಂದೇ ರಾಶಿಯಲ್ಲಿ ಎರಡೂವರೆ ವರ್ಷ ಇರುತ್ತದೆ. ಇನ್ನು ಗುರು ಗ್ರಹ ಸಾಧಾರಣವಾಗಿ ಒಂದು ರಾಶಿಯಲ್ಲಿ ಒಂದು ವರ್ಷ ಇರುತ್ತದೆ.
ಛಾಯಾ ಗ್ರಹಗಳು ಎನಿಸಿಕೊಂಡ ರಾಹು- ಕೇತುಗಳ ಸಂಚಾರ ಅವಧಿ ಹದಿನೆಂಟು ತಿಂಗಳು. ಇವುಗಳನ್ನು ಸಮಸಪ್ತಕ ಎನ್ನಲಾಗುತ್ತದೆ, ಅಪ್ರದಕ್ಷಿಣೆಯಾಗಿ ಏಳು ಸ್ಥಾನಗಳ ಅಂತರದಲ್ಲಿ ಒಂದು ರಾಶಿಯಲ್ಲಿ ಒಂದೂವರೆ ವರ್ಷದಂತೆ ಸಂಚರಿಸುತ್ತವೆ.
ಶನಿ ಗ್ರಹವು ಜನವರಿ 1, 2023ರಿಂದ ಜನವರಿ 17, 2023ರ ತನಕ ಮಕರ, ಜನವರಿ 17, 2023ರಿಂದ ಡಿಸೆಂಬರ್ 31, 2023ರ ತನಕ ಕುಂಭ ರಾಶಿಯಲ್ಲಿ ಸಂಚಾರ ನಡೆಸಲಿದೆ. ಗುರು ಗ್ರಹವು ಜನವರಿ 1, 2023ರಿಂದ ಏಪ್ರಿಲ್ 22, 2023ರ ತನಕ ಮೀನ, ಏಪ್ರಿಲ್ 22, 2023ರಿಂದ ಡಿಸೆಂಬರ್ 31, 2023ರ ತನಕ ಮೇಷ ರಾಶಿಯಲ್ಲಿ ಸಂಚಾರ ನಡೆಸಲಿದೆ. ಇನ್ನು ರಾಹು-ಕೇತುಗಳು ಜನವರಿ 1, 2023ರಿಂದ ಅಕ್ಟೋಬರ್ 30, 2023ರ ತನಕ ಮೇಷ, ಅಕ್ಟೋಬರ್ 30, 2023ರಿಂದ ಡಿಸೆಂಬರ್ 31, 2023ರ ತನಕ ಮೀನ ರಾಶಿಯಲ್ಲಿ ಸಂಚಾರ ನಡೆಸಲಿದೆ.
ಈ ಗ್ರಹಗಳ ಸಂಚಾರದ ಫಲವೇನು?
ಮೇಷ : ಜನವರಿಯಲ್ಲಿ ಹನ್ನೊಂದನೇ ಮನೆಯ ಶನಿ ಸಂಚಾರದ ವೇಳೆ ಲಾಭ ಕಾಣುತ್ತೀರಿ. ಆಸ್ತಿ ಲಾಭ, ವಾಹನ ಲಾಭ, ಸಾಮಾಜಿಕವಾಗಿ ಪ್ರಭಾವಿಗಳ ಜತೆಗೆ ಸಂಪರ್ಕ ಹಾಗೂ ಆ ಮೂಲಕವಾಗಿ ಸಾಮಾಜಿಕವಾಗಿ, ವೈಯಕ್ತಿಕವಾಗಿ ಲಾಭ, ವರ್ತಕರು- ಉದ್ಯಮಿಗಳಿಗೆ ವ್ಯವಹಾರದಲ್ಲಿ ಅನುಕೂಲ ಇತ್ಯಾದಿ ಉತ್ತಮ ಫಲಗಳಿವೆ. ಗುರು ಸಂಚಾರ ಇರುವಾಗ ಆರೋಗ್ಯ ಕಡೆಗೆ ಹಾಗೂ ನಿಮ್ಮ ವೆಚ್ಚದ ಬಗ್ಗೆ ಲಕ್ಷ್ಯ ನೀಡಿ. ಜನ್ಮ ರಾಶಿಯಲ್ಲೇ ರಾಹು ಹಾಗೂ ಏಳನೇ ಮನೆಯಲ್ಲಿ ಕೇತು ಸಂಚರಿಸುವಾಗ ದುರ್ಜನರ ಸಹವಾಸ, ಅಹಂಭಾವ ಇರುತ್ತದೆ.
ವೃಷಭ: ಶನಿಯು ಕುಂಭ ರಾಶಿಯಲ್ಲಿ ಸಂಚರಿಸುವಾಗ ವೃತ್ತಿಪರರು- ಉದ್ಯೋಗಿಗಳಾದವರಿಗೆ ಅಷ್ಟೇನೂ ಸಮಾಧಾನದ ಸಮಯ ಅಲ್ಲ. ನಿಮ್ಮ ಪಾಲಿಗೆ ಬರಬೇಕಾದ ಮೆಚ್ಚುಗೆ, ಪ್ರಮೋಷನ್, ಸಂಬಳದಲ್ಲಿನ ಹೆಚ್ಚಳವು ಇನ್ನ್ಯಾರದೋ ಪಾಲಾಗುತ್ತದೆ. ಏಪ್ರಿಲ್ ತಿಂಗಳ ತನಕ ಹನ್ನೊಂದರಲ್ಲಿ ಗುರು ಸಂಚಾರ ವೇಳೆ ನಾನಾ ಲಾಭ ಆಗುತ್ತದೆ. ಹನ್ನೆರಡರಲ್ಲಿ ಸಂಚರಿಸುವ ರಾಹು ಹಾಗೂ ಆರನೇ ಮನೆಯಲ್ಲಿ ಇರುವ ಕೇತು ಆದಾಯ- ವ್ಯಯದ ಬಗ್ಗೆ ಅಂದಾಜು ಸಿಗದಂಥ ಸ್ಥಿತಿಗೆ ದೂಡುತ್ತವೆ.
ಮಿಥುನ : ಶನಿಯಿಂದ ಈ ಹಿಂದಿನಂತಹ ಕಷ್ಟಗಳು ಸದ್ಯಕ್ಕೆ ಬರುವುದಿಲ್ಲ. ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತದೆ. ಅವಮಾನ ಎದುರಿಸುವ ಸನ್ನಿವೇಶಗಳು ಕಡಿಮೆ ಆಗುತ್ತವೆ. ಗುರು ಹತ್ತು- ಹನ್ನೊಂದನೇ ಮನೆಯಲ್ಲಿ ಸಂಚರಿಸುವುದರಿಂದ ವೃತ್ತಿ ಬದುಕು ಉತ್ತಮಗೊಳ್ಳುತ್ತದೆ, ಜತೆಗೆ ಈ ಹಿಂದಿನ ಹೂಡಿಕೆಗಳು ಅತ್ಯುತ್ತಮ ಲಾಭ ನೀಡುತ್ತವೆ. ಅಂದುಕೊಳ್ಳದ ರೀತಿಯಲ್ಲಿ ಬಡ್ತಿ, ವೇತನ ಹೆಚ್ಚಳ ಕಾಣುತ್ತದೆ. ರಾಹು ಹನ್ನೊಂದನೇ ಮನೆ ಹಾಗೂ ಕೇತು ಐದನೇ ಮನೆಯಲ್ಲಿ ಬಹುತೇಕ ಸಂಚರಿಸಲಿದೆ. ಜಾಗ ಖರೀದಿ, ಸಟ್ಟಾ ವ್ಯವಹಾರದಲ್ಲಿ ಲಾಭ, ವಿದೇಶ ವ್ಯವಹಾರಗಳಿಂದ ಲಾಭ ಮೊದಲಾದವು ಇವೆ.
ಕಟಕ: ಕುಂಭ ರಾಶಿಗೆ ಶನಿಯ ಪ್ರವೇಶ ಆಗುವುದರೊಂದಿಗೆ ಎಂಟನೇ ಮನೆಗೆ ಶನೈಶ್ಚರ ಬಂದಂತಾಗುತ್ತದೆ. ಶನಿ ಶಾಂತಿ ಮಾಡಿಸಿಕೊಳ್ಳುವುದು ಅಗತ್ಯ. ಇನ್ನು ಕೆಲ ಸಮಯ ನಿಮ್ಮ ಪಾಲಿಗೆ ತುಂಬ ಕ್ಲಿಷ್ಟಕರವಾಗಿರುತ್ತದೆ. ಗುರು ಗ್ರಹ ನಿಮ್ಮ ರಾಶಿಯಿಂದ ಒಂಬತ್ತು ಹಾಗೂ ಹತ್ತನೇ ಮನೆಯಲ್ಲಿ ಸಂಚರಿಸಲಿದ್ದು, ನಿಮ್ಮ ತಂದೆ ಮನೆ ಕಡೆಯಿಂದ ಬರಬೇಕಾದ ಆಸ್ತಿ ಬರುತ್ತದೆ. ರಾಹು ಹತ್ತನೇ ಮನೆಯಲ್ಲಿ, ಕೇತು ನಾಲ್ಕನೇ ಮನೆಯಲ್ಲಿ ಸಂಚರಿಸುವಾಗ ಉದ್ಯೋಗ ಸ್ಥಳದಲ್ಲಿ ನಿಮ್ಮ ಬೆನ್ನ ಹಿಂದೆ ನಡೆಯುವಂತಹ ಹಲವು ಸಂಗತಿಗಳು ಗಮನಕ್ಕೆ ಬಾರದಿರಬಹುದು. ಅವು ನಿಮಗೆ ಅನುಕೂಲವಾಗಿರುವುದಿಲ್ಲ.
ಸಿಂಹ: ಆರನೇ ಮನೆಯಲ್ಲಿ ಸಂಚರಿಸುವ ಶನಿ ಕೊನೆ ಹಂತದಲ್ಲಿ ಮೊದಲ ತಿಂಗಳು ಕೆಲವು ಅನುಕೂಲ ಮಾಡಬಹುದು. ಕೆಲಸ ಬದಲಾವಣೆ ಮಾಡಿಕೊಳ್ಳುವ ಹಾಗಿದ್ದಲ್ಲಿ ಮೊದಲ ಇಪ್ಪತ್ತು ದಿನದೊಳಗೆ ಮುಗಿಸಿಕೊಂಡು ಬಿಡಿ. ನಿಮ್ಮ ರಾಶಿಯಿಂದ ಏಳನೇ ಮನೆಯಲ್ಲಿ ಶನಿ ಸಂಚರಿಸುವಾಗ ಪಾಲುದಾರಿಕೆ ವ್ಯವಹಾರಗಳಲ್ಲಿ ಏನೋ ಸರಿಹೋಗುತ್ತಿಲ್ಲ ಎಂಬ ಭಾವನೆ ಮೂಡುತ್ತದೆ. ಗುರು ನಿಮಗೆ ಎಂಟನೇ ಮನೆಯಲ್ಲಿ, ಅಂದರೆ ಏಪ್ರಿಲ್ ತನಕ ಅದೇ ಮನೆಯಲ್ಲಿ ಇರುವುದರಿಂದ ಕಾನೂನು ವಿಚಾರಗಳಲ್ಲಿ ಸಮಸ್ಯೆಗೆ ಸಿಲುಕುವಂಥ ಸಾಧ್ಯತೆ ಇರುತ್ತದೆ. ಒಂಬತ್ತನೇ ಮನೆಯಲ್ಲಿ ಸಂಚರಿಸುವ ರಾಹು ತಂದೆ ಅಥವಾ ತಂದೆ ಸಮಾನರಾದವರ ಜತೆಗೆ ವೈಮನಸ್ಯ, ಭಿನ್ನಾಭಿಪ್ರಾಯ ಆಗಬಹುದು. ಮೂರನೇ ಮನೆಯಲ್ಲಿ ಸಂಚರಿಸುವ ಕೇತು ಸಹೋದರ- ಸಹೋದರಿಯರ ಮೂಲಕ ಲಾಭ ತರುತ್ತದೆ.
ಕನ್ಯಾ: ಜನವರಿಯಲ್ಲಿ ಆರನೇ ಮನೆಯಲ್ಲಿ ಶನಿ ಸಂಚಾರ ಆರಂಭಿಸುವುದರೊಂದಿಗೆ ಆದಾಯ ಮೂಲಗಳು, ಆದಾಯ ಪ್ರಮಾಣ ಜಾಸ್ತಿ ಆಗುತ್ತವೆ. ನಿಮ್ಮ ಆರ್ಥಿಕ ಸವಾಲುಗಳನ್ನು ನಿರ್ವಹಿಸಲು ಬಲ ದೊರೆಯುತ್ತದೆ. ಏಳನೇ ಮನೆಯಲ್ಲಿ ಗುರು ಸಂಚರಿಸುವಾಗ ಪಾಲುದಾರಿಕೆ ವ್ಯವಹಾರಗಳು ಉತ್ತಮಗೊಳ್ಳುತ್ತವೆ. ಸಾಂಸಾರಿಕವಾಗಿ ನೆಮ್ಮದಿಯನ್ನು ಕಾಣುತ್ತೀರಿ. ದೂರ ಪ್ರದೇಶ ಹಾಗೂ ವಿದೇಶಗಳಿಂದ ಶುಭ ಸುದ್ದಿ ಕೇಳಿಬರುತ್ತದೆ. ಎಂಟನೇ ಮನೆಯ ರಾಹು ಹಾಗೂ ಎರಡನೇ ಮನೆಯ ಕೇತು ಈ ವರ್ಷದ ಅಕ್ಟೋಬರ್ ತನಕ ಒಳ್ಳೆ ಫಲಗಳನ್ನು ನೀಡುವುದಿಲ್ಲ.
ತುಲಾ: ಈ ಜನವರಿಯಿಂದ ಡಿಸೆಂಬರ್ ಅವಧಿಯಲ್ಲಿ ನಿಮ್ಮ ರಾಶಿಯಿಂದ ನಾಲ್ಕು ಮತ್ತು ಐದನೇ ಮನೆಯಲ್ಲಿ ಶನಿ ಸಂಚರಿಸುತ್ತದೆ. ಜನವರಿಯ ಒಂದು ತಿಂಗಳು ಮಕರದಲ್ಲಿ ಶನಿ ಸಂಚರಿಸುವ ತನಕ ಮಾತನಾಡುವಾಗ ತುಂಬ ಎಚ್ಚರಿಕೆಯಿಂದ ಇರಬೇಕು. ಶನಿಯು ಜನವರಿ ಹದಿನೇಳನೇ ತಾರೀಕಿನ ನಂತರ ಐದನೇ ಮನೆಯಲ್ಲಿ ಸಂಚರಿಸುವಾಗ ನೀವೆಷ್ಟು ಧರ್ಮಿಷ್ಠರು, ಸತ್ಯವಂತರಾರುತ್ತೀರೋ ಅಷ್ಟು ನೆಮ್ಮದಿಯಾಗಿ ಇರುವುದಕ್ಕೆ ಸಾಧ್ಯವಾಗುತ್ತದೆ. ಜನ್ಮ ರಾಶಿಯಲ್ಲೇ ಕೇತು ಹಾಗೂ ಸಪ್ತಮದಲ್ಲಿ ರಾಹು ಈ ವರ್ಷದ ಹತ್ತು ತಿಂಗಳು ಇರುತ್ತದೆ. ಆ ವೇಳೆಯಲ್ಲಿ ನಿಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಪಾಪ ಕರ್ಮಾಸಕ್ತಿ ಹೆಚ್ಚು ಮಾಡುತ್ತವೆ.
ವೃಶ್ಚಿಕ : ಜನವರಿ ತಿಂಗಳ ಮೊದಲ ಹದಿನೇಳು ದಿವಸ ಮಾತ್ರ ನಿಮ್ಮ ರಾಶಿಗೆ ಮೂರನೇ ಮನೆಯಲ್ಲಿ ಶನಿ ಸಂಚಾರ ಆಗುತ್ತದೆ. ಹಾಗೂ ಆ ನಂತರದಲ್ಲಿ ನಾಲ್ಕರಲ್ಲಿ ಶನಿ ಸಂಚಾರ ಇರುತ್ತದೆ. ಆದ್ದರಿಂದ ಜನವರಿಯಲ್ಲಿ ಮಾತ್ರ ಹಣಕಾಸಿನ ಹರಿವು ಚೆನ್ನಾಗಿ ಇರುತ್ತದೆ. ನಿಮ್ಮಲ್ಲಿ ಕೆಲವರಿಗೆ ಅದು ಸ್ವಲ್ಪ ಮಟ್ಟಿಗಾದರೂ ಇಳಿಕೆ ಕಾಣುತ್ತಾ ಬರುತ್ತಿರುವುದು ಗಮನಕ್ಕೆ ಬರಲಿದೆ. ಮುಂದಿನ ವರ್ಷದ ಏಪ್ರಿಲ್ ತನಕ ಪಂಚಮದಲ್ಲಿ ಗುರು ಸಂಚಾರ ಇರುತ್ತದೆ. ಈ ವೇಳೆ ಸಂತಾನ ಅಪೇಕ್ಷಿತರನ್ನು ಹೊರತುಪಡಿಸಿದಂತೆ ಉಳಿದವರಿಗೆ ಒಳ್ಳೆ ಸಮಯ. ಉತ್ತಮ ಫಲಗಳು ಸಿಗುತ್ತವೆ. ಹನ್ನೆರಡನೇ ಮನೆ ಕೇತು ಖರ್ಚನ್ನು ಹೆಚ್ಚು ಮಾಡಿದರೂ ದೇವತಾ ಆರಾಧನೆ ಕಡೆಗೆ ಮನಸ್ಸು ನೀಡುತ್ತದೆ. ಆರನೇ ಮನೆ ರಾಹು ಭೂಮಿ, ಷೇರು, ಮ್ಯೂಚುವಲ್ ಫಂಡ್‌ಗಳ ಮೂಲಕ ಆದಾಯ ತರುತ್ತದೆ.
ಧನುಸ್ಸು : ಇಷ್ಟು ವರ್ಷದ ಸಾಡೇಸಾತ್ ಶನಿಯ ಪ್ರಭಾವ ಸಂಪೂರ್ಣವಾಗಿ ದೂರ ಆಗುವ ಕಾಲ ಇದು. ಜನವರಿ ಹದಿನೇಳನೇ ತಾರೀಕಿನಂದು ಮೂರನೇ ಮನೆಗೆ ಶನಿ ಗ್ರಹದ ಪ್ರವೇಶ ಆಗುತ್ತದೆ. ನಂತರ ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ದೃಢವಾದ ಬದಲಾವಣೆ ಗಮನಿಸಬಹುದು. ನಾಲ್ಕನೆ ಮನೆಯಲ್ಲಿ, ಏಪ್ರಿಲ್ ತನಕ ಗುರು ಮೀನದಲ್ಲಿ ಸಂಚಾರ ಮಾಡುವಾಗ ಮನೆ- ಸೈಟು ಖರೀದಿ, ಮನೆ ಕಟ್ಟಿಸುವ ಯೋಗವಿದೆ. ಏಪ್ರಿಲ್‌ನಲ್ಲಿ ಗುರುವು ಐದನೇ ಮನೆಯಲ್ಲಿ ಸಂಚಾರ ಮಾಡುವಾಗ ದೂರದ ಪ್ರದೇಶಗಳಿಗೆ ತೆರಳುವ ಯೋಗವಿದೆ. ಹನ್ನೊಂದನೇ ಮನೆಯಲ್ಲಿ ಕೇತು ಸಂಚರಿಸುವಾಗ ಅದೃಷ್ಟ ಬಲದಿಂದ ವ್ಯಾಜ್ಯ, ತಂಟೆ- ತಕರಾರು ಇದ್ದಲ್ಲಿ ನಿವಾರಣೆ ಆಗುತ್ತವೆ. ಐದನೇ ಮನೆಯಲ್ಲಿ ರಾಹು ಸಂಚರಿಸುವುದರಿಂದ ಮಕ್ಕಳ ಆರೋಗ್ಯದ ಕುರಿತು ಜಾಗ್ರತೆಯಿಂದ ಇರಬೇಕು.
ಮಕರ : ನಿಮಗೆ ಸಾಡೇಸಾತ್ ಶನಿಯ ಪ್ರಭಾವ 2025ರ ಮಾರ್ಚ್ ತನಕ ಇದೆ. ಜನವರಿಯಲ್ಲಿ ಕುಂಭಕ್ಕೆ ಶನಿ ಪ್ರವೇಶಿಸುವುದರೊಂದಿಗೆ ಎರಡನೇ ಮನೆಯಲ್ಲಿ ಸಂಚಾರ ಇರುತ್ತದೆ. ಜನವರಿಯಿಂದ ಆಚೆಗೆ ಎರಡನೇ ಮನೆಯಲ್ಲಿ ಶನಿ ಸಂಚರಿಸುವಾಗ ಸ್ವಲ್ಪ ಆತಂಕ ಇರುತ್ತದೆ. ಗುರು ನಾಲ್ಕನೇ ಮನೆಯಲ್ಲಿ ಸಂಚರಿಸುವಾಗ ಆಕಸ್ಮಿಕವಾಗಿ ಭೂಮಿ ಲಾಭ ಆಗುವುದೋ ಅಥವಾ ಯಾವುದಾದರೂ ಬಗೆಯಲ್ಲಿ ನಿಮ್ಮ ಹೆಸರಿಗೆ ಮನೆಯೊಂದು ಬರುವುದೋ ಅಥವಾ ದೊಡ್ಡ ಮೊತ್ತವೊಂದು ಕೈ ಸೇರುವುದೋ ಆಗುತ್ತದೆ. . ಈ ವರ್ಷದ ಹತ್ತು ತಿಂಗಳು ನಾಲ್ಕರಲ್ಲಿ ರಾಹು ಇದ್ದು ನಿಮ್ಮದೇ ಸುಖ- ಸವಲತ್ತಿಗೆ ಇರುವಂಥ ಅನುಕೂಲಗಳು ನಿಮಗೇ ಇಲ್ಲದಂತೆ, ದೊರೆಯದಂತಾಗುತ್ತದೆ. ಹತ್ತರಲ್ಲಿ ಕೇತು ಇರುವುದರಿಂದ ಉದ್ಯೋಗ, ವೃತ್ತಿಯಲ್ಲಿ ಸವಾಲುಗಳು ಜಾಸ್ತಿ ಆಗುತ್ತವೆ.
ಕುಂಭ : ನಿಮಗೆ ಈಗ ಏಳರಾಟ ಶನಿಯ ಒಂದು ಹಂತ, ಅಂದರೆ ಎರಡೂವರೆ ವರ್ಷ ಮುಗಿಸಿದ್ದೀರಿ. ಜನವರಿ ತಿಂಗಳಿನಿಂದ ನಿಮ್ಮದೇ ಜನ್ಮ ರಾಶಿಯಲ್ಲಿ ಸಂಚರಿಸುವಾಗ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಏಪ್ರಿಲ್‌ನಿಂದ ಮೂರನೇ ಮನೆಯಲ್ಲಿ ಗುರು ಸಂಚರಿಸುವಾಗ ನಿಮ್ಮಲ್ಲಿ ಆತ್ಮವಿಶ್ವಾಸ ಇರುತ್ತದೆ. ಯಾವುದೇ ಕೆಲಸವನ್ನು ಮಾಡಿ ಮುಗಿಸಬಲ್ಲ ಚಾಕಚಕ್ಯತೆ ಬರುತ್ತದೆ. ಸಹೋದರ- ಸಹೋದರಿಯರ ಬೆಂಬಲ ನಿಮ್ಮ ಪಾಲಿಗೆ ಒದಗಿ ಬರಲಿದೆ. ನಿಮ್ಮ ರಾಶಿಯಿಂದ ಮೂರನೇ ಮನೆಯಲ್ಲಿ ರಾಹು ಸಂಚರಿಸುವುದರಿಂದ ರಿಯಲ್ ಎಸ್ಟೇಟ್ ಏಜೆಂಟ್‌ಗಳು, ಷೇರು ದಲ್ಲಾಳಿಗಳಿಗೆ ಹಣದ ಹರಿವು ಉತ್ತಮವಾಗಿರುತ್ತದೆ. ಒಂಬತ್ತರಲ್ಲಿ ಕೇತು ಸಂಚಾರ ಇರುವುದರಿಂದ ತಂದೆಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
ಮೀನ : ಜನವರಿಯ ಮೊದಲ ಹದಿನೇಳು ದಿನಗಳು ಮೀನ ರಾಶಿಗೆ ಹನ್ನೊಂದನೇ ಮನೆಯಲ್ಲಿ ಶನಿ ಸಂಚಾರ ಇರುತ್ತದೆ. ಆ ನಂತರದಲ್ಲಿ ವ್ಯಯ ಸ್ಥಾನಕ್ಕೆ ಬರಲಿದೆ. ಸಾಡೇಸಾತ್ ಶನಿಯ ಆರಂಭದ ಘಟ್ಟ ಇದು. ಏಪ್ರಿಲ್ ತನಕ ಜನ್ಮ ರಾಶಿಯಲ್ಲೇ ಇರುವ ಗುರುವಿನಿಂದ ನಾನಾ ಬಗೆಯ ದುಃಖಗಳನ್ನು ಅನುಭವಿಸಬೇಕಾಗುತ್ತದೆ. ಜನ್ಮ ಗುರು ಮನುಷ್ಯರಿಗೆ ದುಃಖವನ್ನು ನೀಡುತ್ತಾನೆ. ಅಕ್ಟೋಬರ್ ತನಕ ರಾಹು ದ್ವಿತೀಯದಲ್ಲಿ ಇದ್ದು ನಿಮ್ಮನ್ನು ಭ್ರಮಾಧೀನರನ್ನಾಗಿ ಮಾಡಲಿದ್ದು, ಹಗಲುಗನಸು ಕಾಣದಿರಿ. ಎಂಟನೇ ಮನೆಯಲ್ಲಿನ ಕೇತು ಗುಪ್ತ ರೋಗಗಳು, ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆ ಉಂಟುಮಾಡಬಹುದು.
ಇದನ್ನೂ ಓದಿ | Venus Transit 2022 | ಇಂದು ಮಕರ ರಾಶಿ ಪ್ರವೇಶಿಸಲಿರುವ ಶುಕ್ರ; ಈ ನಾಲ್ಕು ರಾಶಿಯವರಿಗೆ ಧನ ಲಾಭ