ಬೆಂಗಳೂರು: ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಪ್ರತಿಷ್ಠಾಪನೆ ಆಗಲಿರುವ 108ಅಡಿ ಎತ್ತರದ ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರ ಕಂಚಿನ ಪ್ರತಿಮೆಯ ಕಾಮಗಾರಿಯು ಅಂತಿಮ ಹಂತ ತಲುಪಿದೆ.
ಈಗಾಗಲೇ ಪ್ರತಿಮೆಯ ದೇಹ ಭಾಗ ಸಿದ್ಧವಾಗಿದ್ದು, ತಲೆಭಾಗವನ್ನು ಕೂರಿಸುವ ಕಾರ್ಯ ನಡೆಯುತ್ತಿದೆ. ಕಾಮಗಾರಿಯನ್ನು ಗುರುವಾರ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ಪರಿಶೀಲಿಸಿ, ಸಲಹೆ-ಸೂಚನೆ ನೀಡಿದ್ದಾರೆ. ಈ ಪ್ರತಿಮೆಯನ್ನು ಸ್ಥಾಪಿಸುತ್ತಿರುವ ಕೆಂಪೇಗೌಡ ಅಭಿವೃದ್ಧೀ ಪ್ರಾಧಿಕಾರದ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
4 ಸಾವಿರ ಕೆಜಿ ತೂಕದ ಖಡ್ಗ
ಕಂಚಿನ ಪ್ರತಿಮೆಯು ಆಕರ್ಷಕವಾಗಿ ನಿರ್ಮಾಣಗೊಳ್ಳುತ್ತಿದ್ದು, ಪ್ರತಿಮೆಯಲ್ಲಿ ಖಡ್ಗವೇ 4000 ಕೆಜಿ ತೂಕವಿರಲಿದೆ. ಇದನ್ನು ದೆಯಲಿಯಲ್ಲಿ ಸಿದ್ಧಪಡಿಸಲಾಗಿದ್ದು, ಇತ್ತೀಚೆಗೆ ಬೆಂಗಳೂರಿಗೆ ತರಲಾಗಿದೆ. ಇದನ್ನು ಅಳವಡಿಸುವ ಕೆಲಸ ಇನ್ನೂ ನಡೆಯಬೇಕಿದೆ.
ಖ್ಯಾತ ಶಿಲ್ಪಿ, ಪದ್ಮಭೂಷಣ ಪುರಸ್ಕೃತ ರಾಮ್ ವಿ ಸುತಾರ್ ಈ ಪುತ್ಥಳಿಯನ್ನು ವಿನ್ಯಾಸ ಮಾಡಿದ್ದಾರೆ. ಗುಜರಾತ್‌ನಲ್ಲಿ ಇತ್ತೀಚೆಗೆ ಸ್ಥಾಪಿಸಲಾಗಿರುವ ಏಕತಾ ಪ್ರತಿಮೆಯನ್ನು ಹಾಗೂ ನಮ್ಮ ವಿಧಾನಸೌಧದ ಆವರಣದಲ್ಲಿರುವ 27 ಅಡಿ ಎತ್ತರದ ಮಹಾತ್ಮಗಾಂಧಿ ಪ್ರತಿಮೆಯನ್ನು ನಿರ್ಮಿಸಿದ್ದು ಕೂಡ ಇವರೇ. ಹೀಗಾಗಿ ಪ್ರತಿಮೆಯ ನಿರ್ಮಾಣದಲ್ಲಿ ಅನುಭವ ಹೊಂದಿರುವ ಇವರು ಆಕರ್ಷಕವಾಗಿ ಪುತ್ಥಳಿ ನಿರ್ಮಿಸಿದ್ದಾರೆ ಎಂದು ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನೋಯ್ಡಾದಲ್ಲಿರುವ ಸುತಾರ್ ಅವರ ಸ್ಟುಡಿಯೋದಲ್ಲಿ ಬಿಡಿ ಬಿಡಿ ಭಾಗವಾಗಿ ಈ ಪ್ರತಿಮೆ ನಿರ್ಮಿಸಿದ್ದು, ಅವುಗಳನ್ನು ತಂದು ಇಲ್ಲಿ ಜೋಡಿಸಲಾಗುತ್ತಿದೆ. ವಿಮಾನ ನಿಲ್ದಾಣದ ಸುಮಾರು 23 ಎಕರೆ ಪ್ರದೇಶವನ್ನು ಇದಕ್ಕಾಗಿ ಮೀಸಲಿಡಲಾಗಿದೆ. ಈ ಜಾಗವನ್ನು ವಿಶೇಷವಾಗಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಮನರಂಜನಾ ತಾಣವಾಗಿ ರೂಪಿಸಲಾಗುತ್ತಿದೆ. ರಾಜ್ಯ ಸರ್ಕಾರ 85 ಕೋಟಿಗಳನ್ನು ಈ ಪ್ರತಿಮೆ ನಿರ್ಮಾಣಕ್ಕಾಗಿ ಖರ್ಚು ಮಾಡುತ್ತಿದೆ.
ಲೋಕಾರ್ಪಣೆ ಯಾವಾಗ?
ಪ್ರತಿಮೆ ನಿರ್ಮಾಣ ಕಾರ್ಯ ಪೂರ್ಣಗೊಂಡಿಲ್ಲ. ಆಗಲೇ ಲೋಕಾರ್ಪಣೆ ಎಂದು ಎಂಬ ಕುರಿತು ಚರ್ಚೆ ನಡೆಯುತ್ತಿದೆ. ಜೂನ್ 27 ರಂದು ಕೆಂಪೇಗೌಡ ಜಯಂತಿ ಸಂದರ್ಭದಲ್ಲಿ ಇದನ್ನು ಲೋಕಾರ್ಪಣೆ ಮಾಡುವ ಸಾಧ್ಯತೆ ಇದೆ. ಎಲ್ಲ ಕೆಲಸವನ್ನು ಪೂರ್ಣಗೊಳಿಸಿ ಪ್ರತಿಮೆಯನ್ನು ಲೋಕಾರ್ಪಣೆ ಮಾಡುವುದು ಒಳ್ಳೆಯದು ಎಂಬ ಅಭಿಪ್ರಾಯವೂ ಇದೆ. ಮುಂದಿನ ವರ್ಷದ ಚುನಾವಣೆಯ ಒಳಗೆ ಪ್ರತಿಮೆ ಲೋಕಾರ್ಪಣೆಗೊಳ್ಳುವುದಂತೂ ಖಚಿತವಾಗಿದೆ.
ಇದನ್ನೂ ಓದಿ | ಇಂಡಿಯಾಗೇಟ್‌ನಲ್ಲಿ ಸ್ಥಾಪಿಸಲಾಗುವ ಸುಭಾಶ್ಚಂದ್ರ ಬೋಸ್ ಪ್ರತಿಮೆ ಕೆತ್ತನೆಗೆ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್