ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ರಾಮಮಂದಿರ (Ram Mandir) ಲೋಕಾರ್ಪಣೆಗೆ ಕೆಲವೇ ಗಂಟೆಗಳು ಬಾಕಿ ಇವೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಜನವರಿ 22ರಂದು ರಾಮಲಲ್ಲಾನಿಗೆ ಪ್ರಾಣಪ್ರತಿಷ್ಠಾಪನೆ ನೆರವೇರಿಸಲಿದ್ದಾರೆ. ಇದಕ್ಕಾಗಿ ಕೋಟ್ಯಂತರ ಹಿಂದುಗಳು ಕಾತುರದಿಂದ ಕಾಯುತ್ತಿದ್ದಾರೆ. ಹಿಂದುಗಳು ಮಾತ್ರವಲ್ಲ, ಮುಸ್ಲಿಮರು ಕೂಡ ರಾಮನಾಮ ಜಪಿಸುತ್ತಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ ಅಯೋಧ್ಯೆ ರಾಮನಿಗಾಗಿ ಮುಸ್ಲಿಂ ಕುಶಲಕರ್ಮಿಗಳು 21.5 ಅಡಿಯ ವಿಶೇಷ ಕೊಳಲನ್ನು ತಯಾರಿಸಿದ್ದಾರೆ.
ಹೌದು, ಉತ್ತರ ಪ್ರದೇಶದ ಕಲಾವಿದರಾದ ಹೀನಾ ಪರ್ವೀನ್ (52), ಶಮ್ಶದ್ ಅಹ್ಮದ್ (60) ಹಾಗೂ ಅರ್ಮಾನ್ ನಬಿ (30) ಎಂಬ ಕುಶಲಕರ್ಮಿಗಳು ರಾಮನಿಗಾಗಿ ವಿಶೇಷ ಕೊಳಲು ತಯಾರಿಸಿದ್ದಾರೆ. ಸುಮಾರು 10 ದಿನ ಶ್ರಮವಹಿಸಿ ಇವರು ಕೊಳಲು ತಯಾರಿಸಿದ್ದಾರೆ. ಇದು 21.5 ಅಡಿ ಇದ್ದು, ಇದು ವಿಶ್ವದಾಖಲೆಗೂ ಭಾಜನವಾಗಿದೆ. ವಿಶ್ವದಲ್ಲೇ ನುಡಿಸಬಹುದಾದ ಅತಿ ದೊಡ್ಡ ಕೊಳಲು ಎಂಬ ಖ್ಯಾತಿ ಈ ಕೊಳಲಿನದ್ದಾಗಿದೆ. ಶೀಘ್ರದಲ್ಲೇ ಈ ಕೊಳಲು ಅಯೋಧ್ಯೆಯಲ್ಲಿರುವ ವಸ್ತು ಸಂಗ್ರಹಾಲಯದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಇರಿಸಲಾಗುತ್ತದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಪಾದಯಾತ್ರೆ ಹೊರಟ ಮುಸ್ಲಿಂ ಯುವತಿ
ರಾಮನ ಮೇಲಿನ ಭಕ್ತಿಯಿಂದಾಗಿ ಮುಸ್ಲಿಂ ಯುವತಿಯೊಬ್ಬರು ಮುಂಬೈನಿಂದ ರಾಮಮಂದಿರಕ್ಕೆ ಪಾದಯಾತ್ರೆ ಹೊರಟಿದ್ದಾರೆ. ಅಪ್ಪಟ ರಾಮನ ಭಕ್ತೆಯಾಗಿರುವ, ತನ್ನನ್ನು ತಾನು ಸನಾತನಿ ಎಂದು ಕರೆದುಕೊಳ್ಳುವ ಶಬನಮ್ ಶೇಖ್ ಅವರು ಮುಂಬೈನಿಂದ ಅಯೋಧ್ಯೆಗೆ ಪಾದಯಾತ್ರೆ ಹೊರಟಿದ್ದಾರೆ. ಶ್ರೀರಾಮನ ಧ್ವಜ ಹಿಡಿದುಕೊಂಡು ಸಾಗುತ್ತಿರುವ ಯುವತಿಯು ಈಗಾಗಲೇ ಸಾವಿರಕ್ಕೂ ಅಧಿಕ ಕಿಲೋಮೀಟರ್ ಮಾರ್ಗವನ್ನು ನಡೆದುಕೊಂಡೇ ಕ್ರಮಿಸಿದ್ದಾರೆ. ಮಾರ್ಗದ ಮಧ್ಯೆ ಶ್ರೀರಾಮನ ಭಕ್ತರನ್ನು ಭೇಟಿಯಾಗುತ್ತ, ಜೈ ಶ್ರೀರಾಮ್ ಎಂದು ಘೋಷಣೆ ಕೂಗುತ್ತ ಸಾಗುತ್ತಿರುವ ಇವರ ವಿಡಿಯೊಗಳು ಭಾರಿ ವೈರಲ್ ಆಗಿವೆ. ನಿತ್ಯವೂ ಪಾದಯಾತ್ರೆಯ ವಿಡಿಯೊಗಳನ್ನು ಶಬನಮ್ ಅವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿದ್ದು, ಜನರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ರಾಮಮಂದಿರ ಉದ್ಘಾಟನೆ ದಿನ ಇವರು ಅಯೋಧ್ಯೆ ತಲುಪಲಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Ayodhya Rama Mandir: ರಾಮಮಂದಿರಕ್ಕೆ 50 ಕೋಟಿ ರೂ. ದೇಣಿಗೆ ನೀಡಿದ್ರಾ ಪ್ರಭಾಸ್?
ರಾಮಮಂದಿರವನ್ನು ಕಬ್ಬಿಣ, ಉಕ್ಕು ಸೇರಿ ಯಾವುದೇ ವಸ್ತುಗಳನ್ನು ಬಳಸದೆ, ವಿಶೇಷ ಕಲ್ಲುಗಳಿಂದ ನಿರ್ಮಿಸಲಾಗಿದೆ. ಸುಮಾರು 15 ಅಡಿ ಅಗೆದು, ಮಣ್ಣು ತೆಗೆದು, ಆ ಮಣ್ಣನ್ನು ರಿ-ಎಂಜಿನಿಯರಿಂಗ್ ಮಾಡಿ ಮತ್ತೆ ತುಂಬಲಾಗಿದೆ. ದೇಶದ ತಜ್ಞ ಎಂಜಿನಿಯರ್‌ಗಳು, ತಜ್ಞರು ರಾಮಮಂದಿರಕ್ಕಾಗಿ ಶ್ರಮಿಸಿದ್ದಾರೆ. ಹಾಗಾಗಿ, ಒಂದು ಸಾವಿರ ವರ್ಷವಾದರೂ ರಾಮಮಂದಿರವನ್ನು ಕನಿಷ್ಠ ರಿಪೇರಿ ಮಾಡಬೇಕಾಗಿಲ್ಲ ಎಂದು ಹೇಳಲಾಗುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ