ನವರಾತ್ರಿಯ (Navaratri) ಕಂಪು ಎಲ್ಲೆಡೆ ಹರಡಿದೆ. ದುಷ್ಟರನ್ನು ಸಂಹರಿಸಿ, ಶಿಷ್ಟರನ್ನು ರಕ್ಷಿಸುವ ಉದ್ದೇಶದಿಂದ ಮಹಾಮಾಯೆಯು ಹಲವು ರೂಪಗಳನ್ನು ತಾಳಿ, ನಂಬಿದವರನ್ನು ಕಾಪಾಡಿದ ಕಥೆಗಳು ನವರಾತ್ರಿಯ ಆಚರಣೆಗಳ ಹಿಂದಿವೆ. ಅಸುರರು ಸ್ವರ್ಗವನ್ನು ಅತಿಕ್ರಮಿಸಿಕೊಳ್ಳುವುದು, ಅವರಿಂದ ಕಾಪಾಡುವಂತೆ ಅನಿಮಿಷರೆಲ್ಲ ತ್ರಿಮೂರ್ತಿಗಳಲ್ಲಿ ಮೊರೆಯಿಡುವುದು, ಅದಕ್ಕಾಗಿ ತ್ರಿಮೂರ್ತಿಗಳು ಅವತಾರ ಎತ್ತುವ ಕಥೆಗಳನ್ನು ಕೇಳಿದ್ದೇವೆ. ಇಲ್ಲಿ, ತ್ರಿಮೂರ್ತಿಗಳೆಲ್ಲರ ಸಂಕಲ್ಪಶಕ್ತಿಯ ಜೊತೆಗೆ ದೇವಾಧಿವೇದತೆಗಳ ಸಂಕಲ್ಪವೂ ಸೇರಿ ಉದ್ಭವವಾದ ಮಹಾಶಕ್ತಿಯೇ ಮಹಿಷಮರ್ದಿನಿ ಮತ್ತವಳ ಹಲವು ಅವತಾರಗಳು. ನವದುರ್ಗೆಯ ಬಗೆಗಿನ ಮಾಹಿತಿಯಿದು.
ಶೈಲಪುತ್ರಿ
ಒಂಬತ್ತು ದಿನ ಉಪಾಸನೆಗೊಳ್ಳುವ ಒಂಬತ್ತು ದೇವಿಯರದ್ದು ಭಿನ್ನ ಪ್ರವೃತ್ತಿ ಮತ್ತು ಅನುಪಮ ಶಕ್ತಿ. ಮೊದಲ ದಿನ ಶೈಲಪುತ್ರಿ ಎನಿಸಿಕೊಳ್ಳುವ ಈಕೆಯ ಹಿಂದೆ ಅಗ್ನಿಯಲ್ಲಿ ದಹಿಸಿ ಹೋಗುವ ದಾಕ್ಷಾಯಿಣಿಯ ಕಥೆಯಿದೆ. ಸ್ವಾಭಿಮಾನಕ್ಕೆ ಧಕ್ಕೆಯಾಗಿದ್ದನ್ನ ಸಹಿಸದ ದಾಕ್ಷಾಯಿಣಿ, ತಂದೆಯ ವಿರುದ್ಧವೇ ಸಿಡಿದೇಳುವ ಕಥೆಯಿದು. ʻದಕ್ಷನ ಮಗಳು ದಾಕ್ಷಾಯಿಣಿʼ ಎನಿಸಿಕೊಳ್ಳುವುದನ್ನೇ ವಿರೋಧಿಸಿ, ಯೋಗಾಗ್ನಿಯಲ್ಲಿ ದಹಿಸಿಕೊಂಡು, ಶೈಲಪುತ್ರಿಯಾಗಿ ಅಂದರೆ ಪರ್ವತರಾಜನ ಮಗಳಾಗಿ ಮತ್ತೆ ಹುಟ್ಟಿಬಂದು ಶಿವನನ್ನು ಸೇರಿದಳೆನ್ನುತ್ತವೆ ಪುರಾಣಗಳು.
ಬ್ರಹ್ಮಚಾರಿಣಿ
ಎರಡನೇ ದಿನ ಆಕೆ ಬ್ರಹ್ಮಚಾರಿಣಿ. ಪಾರ್ವತಿಯಾಗಿ ಹುಟ್ಟಿದ ಮರುಜನ್ಮದಲ್ಲಿ ಶಿವನನ್ನೇ ಸೇರಬೇಕೆಂಬ ಏಕೋದ್ದೇಶದಿಂದ ಕಠಿಣ ತಪಸ್ಸನ್ನಾಚರಿಸಿ, ಗುರಿ ಸಾಧಿಸಿದ ಛಲದ ಸಂಕೇತವಾಗಿ ಆಕೆ ಅಂದು ಪೂಜಿಸಲ್ಪಡುತ್ತಾಳೆ. ತಾರಕಾಸುರ ಕಾಟ ಹೆಚ್ಚಿದಾಗ, ಶಿವ-ಪಾರ್ವತಿಯರ ಸಂತಾನದಿಂದಲೇ ಆತನ ನಾಶ ಎಂಬುದು ವಿಧಿತವಾಗಿರುತ್ತದೆ. ಹಾಗಾಗಿ ಪರ್ವತರಾಜ ಮಗಳು ಪಾರ್ವತಿಯಲ್ಲಿ ಬಂದು, ಶಿವನನ್ನು ಒಲಿಸಿಕೊಳ್ಳಲು ತಪಸ್ಸು ಮಾಡುವಂತೆ ನಾರದರು ಸೂಚಿಸುತ್ತಾರೆ. ಕಠಿಣವಾದ ತಪಸ್ಸು ಮಾಡಿದ ತಪಸ್ವಿನಿಯ ಸಂಕೇತ ಬ್ರಹ್ಮಚಾರಿಣಿ.
ಚಂದ್ರಘಂಟಾ
ಮೂರನೇ ದಿನ ಚಂದ್ರಘಂಟಾ ಎನಿಸಿಕೊಳ್ಳುವ ಆಕೆ, ಶಿವನಲ್ಲಿದ್ದ ಘೋರ ಸ್ವರೂಪವನ್ನು ಶಮನ ಮಾಡಿ, ಸಾತ್ವಿಕ ಸ್ವರೂಪವನ್ನು ಉದ್ದೀಪಿಸಿದ ಕಾರಣಕ್ಕೆ ಮಹತ್ವ ಪಡೆಯುತ್ತಾಳೆ. ದಾಕ್ಷಾಯಿಣಿಯನ್ನು ಕಳೆದುಕೊಂಡ ಮೇಲೆ ಶಿವ ತಪಸ್ಸಿನಲ್ಲೇ ನಿರತನಾಗಿ, ಕಾಣುವುದಕ್ಕೂ ಘೋರರೂಪದಲ್ಲೇ ಇರುತ್ತಾನೆ. ಪಾರ್ವತಿಯನ್ನು ವಿವಾಹವಾಗುವುದಕ್ಕೆ ಬಂದ ಮದುಮಗನನ್ನು ನೋಡಿ ಎಲ್ಲರೂ ಭೀತರಾಗುತ್ತಾರೆ. ಆಗ ಚಂದ್ರಘಂಟಾ ಎನ್ನುವ ಘೋರ ಸ್ವರೂಪವನ್ನು ತಾಳುವ ಪಾರ್ವತಿ, ಸಾತ್ವಿಕ, ಸುಂದರ ರೂಪವನ್ನು ತಾಳುವಂತೆ ಶಿವನಲ್ಲಿ ವಿನಂತಿಸುತ್ತಾಳೆ. ಹೀಗೆ ಘೋರರೂಪದ ಶಿವ ಬದಲಾಗಿ, ಪಾರ್ವತೀವಲ್ಲಭನಾಗುತ್ತಾನೆ.
ಕೂಷ್ಮಾಂಡ
ನಾಲ್ಕನೇ ದಿನ ಕೂಷ್ಮಾಂಡಿನಿ ಎನಿಸಿಕೊಳ್ಳುವ ಆಕೆಯಿಂದ, ಉಮೆ, ರಮೆ, ವಾಣಿಯರ ಉದ್ಭವ ಎನ್ನಲಾಗುತ್ತದೆ. ಶಕ್ತಿ ಸ್ವರೂಪಗಳ ಉಗಮ-ಸಂಗಮಗಳು ಹೀಗೆ ಒಂದೇ ಎನಿಸಿಕೊಂಡ ಕಾರಣದಿಂದಲೇ ಶಕ್ತಿಯ ಆರಾಧಕರಲ್ಲಿ ಭಿನ್ನತೆ ಇಲ್ಲದೆ ಇರಬಹುದು. ಅಷ್ಟಭುಜಗಳಿರುವ ಈ ದೇವಿಯನ್ನು ಭೂಮಿಯ ಸೃಷ್ಟಿಕರ್ತೆ ಎಂದು ಹೇಳಲಾಗುತ್ತದೆ.
ಸ್ಕಂದಮಾತಾ
ಐದನೇ ದಿನ ಸ್ಕಂದಮಾತಾ ಎಂಬ ಹೆಸರಿನಿಂದ ಮಾತೃಸ್ವರೂಪಿಣಿಯಾಗಿ ಪೂಜೆಗೊಳ್ಳುತ್ತಾಳೆ. ಸ್ಕಂದ ಅಥವಾ ಕಾರ್ತಿಕೇಯನ (ಷಣ್ಮುಗ, ಮುರುಗ, ಸುಬ್ರಹ್ಮಣ್ಯ ಮುಂತಾದ ಹಲವು ಹೆಸರುಗಳಿವೆ ಆತನಿಗೆ) ಮಾತೆಯಾಗಿ ಆಕೆ ಗುರುತಿಸಿಕೊಳ್ಳುತ್ತಾಳೆ. ಸ್ಕಂದನನ್ನು ತೊಡೆಯ ಮೇಲೆ ಕೂರಿಸಿಕೊಂಡಿರುವ ರೂಪದಲ್ಲಿ ಆಕೆಯನ್ನು ಚಿತ್ರಿಸಲಾಗುತ್ತದೆ.
ಕಾತ್ಯಾಯಿನಿ
ಆರನೇ ದಿನ ಆಕೆ ಕಾತ್ಯಾಯನಿ. ಋಷಿ ಕಾತ್ಯಾಯನನ ಸಂತಾನದ ರೂಪದಲ್ಲಿ ದೈವೀಶಕ್ತಿಯು ಭೂಮಿಗೆ ಅವತರಿಸುವ ಹಿನ್ನೆಲೆ ಈ ಕಥೆಗಿದೆ. ಆಸುರೀ ಮಾಯೆಗಳ ನಿರ್ಮೂಲನೆಗೆ ದೈವೀಶಕ್ತಿಗೆ ಇರಬಹುದಾದ ಮಾನುಷ ಪ್ರವೃತ್ತಿಯನ್ನು ಇದು ಪ್ರತಿನಿಧಿಸುತ್ತದೆನ್ನಬಹುದು. ಹತ್ತು ಕೈಗಳನ್ನುಳ್ಳ ದುಷ್ಟನಾಶಕ ಶಕ್ತಿಯೆಂದು ಈಕೆಯನ್ನು ಪೂಜಿಸಲಾಗುತ್ತದೆ.
ಕಾಳರಾತ್ರಿ
ಏಳನೇ ದಿನಕ್ಕೆ ಕಾಳರಾತ್ರಿಯ ಅವತಾರಿಣಿ. ಚಂಡ-ಮುಂಡರನ್ನು ವಧಿಸಿ ಈಗಾಗಲೇ ಚಾಮುಂಡಿ ಎನಿಸಿಕೊಂಡಿದ್ದಾಳೆ ಈಕೆ. ದೇವಿಯ ಅವತಾರಗಳಲ್ಲೇ ಕಾಳರಾತ್ರಿಯನ್ನು ಘೋರ ಎನ್ನಬಹುದು. ಈಕೆ ರಕ್ತಬೀಜನ ಸಂಹಾರಿಣಿ. ರಕ್ತಬೀಜನೆಂಬ ಅಸುರನ ಒಂದು ಬಿಂದು ರಕ್ತವೂ ಭೂಮಿಯ ಮೇಲೆ ಬೀಳದಂತೆ, ತನ್ನ ನಾಲಗೆಯಲ್ಲಿ ವಿಶಾಲವಾಗಿ ಚಾಚಿ, ರಕ್ಕಸನನ್ನು ಸಂಹರಿಸುತ್ತಾಳಾದ್ದರಿಂದ ಆಕೆಗೆ ಕಡುಕಪ್ಪು ರಾತ್ರಿಯ ಅವತಾರವೆಂಬಂತೆ ಕಾಳರಾತ್ರಿ ಎಂಬ ಹೆಸರು ಬಂದಿದೆ. ಅದೇ ಸಪ್ತಮಿಯ ದಿನವೇ ವಿದ್ಯಾಧಿದೇವತೆ ಸರಸ್ವತಿಯ ಪೂಜೆಯೂ ನಡೆಯುತ್ತದೆ.
ಮಹಾಗೌರಿ
ಕಾಳರಾತ್ರಿಯ ಅವತಾರವನ್ನು ತೊರೆದು ತನ್ನ ಮೊದಲಿನ ಸ್ವರೂಪಕ್ಕೆ ಮರಳುವ ಆಕೆ ಕರೆಸಿಕೊಳ್ಳುವುದು ಮಹಾಗೌರಿ ಎಂದು- ಇದು ಎಂಟನೇ ದಿನದಂದು. ಇದೇ ದಿನ ನಿಶುಂಭನ ಸಂಹಾರವೂ ನಡೆಯುತ್ತದೆ. ಶುಂಭ-ನಿಶುಂಭರ ಸಂಹಾರಕ್ಕಾಗಿ ಆಕೆ ಅತ್ಯಂತ ತೇಜಸ್ವಿಯೂ ಸ್ಫುರದ್ರೂಪಿಯೂ ಗೌರವರ್ಣದವಳೂ ಆದ ಕೌಶಿಕೆಯ ರೂಪದಲ್ಲಿ ಅವತರಿಸುವುದಾಗಿ ಕಥೆಗಳು ಹೇಳುತ್ತವೆ.
ಸಿದ್ಧಿಧಾತ್ರಿ
ಮಹಾನವಮಿಯಂದು ಶುಂಭನ ವಧೆ. ಒಂಬತ್ತನೇ ದಿನ ಸಿದ್ಧಿಧಾತ್ರಿಯೆಂದು ಕರೆಸಿಕೊಳ್ಳುವ ಆಕೆ ಸಿದ್ಧಿಪ್ರದಾಯಿನಿ ಎಂದೇ ಪೂಜಿತಳಾಗುತ್ತಾಳೆ. ತ್ರಿಮೂರ್ತಿಗಳ ಸಹಿತ ಲೋಕದ ಎಲ್ಲರಿಗೂ ಪೂರ್ಣಸಿದ್ಧಿಯನ್ನು ಕರುಣಿಸುವಂಥ ಮಹಾಶಕ್ತಿಯೆಂದೇ ಆಕೆಯನ್ನು ಕರೆಯಲಾಗುತ್ತದೆ.
ವಿಜಯದಶಮಿಯಂದು ಮಹಿಷಾಸುರ ಮರ್ದಿನಿಯ ಉಪಾಸನೆ. ಹೀಗೆ ಸ್ವಾಭಿಮಾನ, ಛಲ, ಸಹನೆ, ಸಾತ್ವಿಕತೆ, ಶಕ್ತಿ, ಮಮತೆ, ಕ್ರೋಧ, ವಿದ್ಯೆ, ಸಿದ್ಧಿಯಂಥ ಹಲವು ಗುಣಗಳ ಅಪೂರ್ವ ಎರಕದಂತೆ ಕಾಣುತ್ತಾಳೆ ಚಾಮುಂಡೇಶ್ವರಿ. ಲೋಕದಲ್ಲಿ ತಾಮಸೀ, ಆಸುರೀ ಪ್ರವೃತ್ತಿಗಳೆಲ್ಲ ಹೆಚ್ಚಾದಂತೆ ಅವುಗಳ ನಿರ್ಮೂಲನೆಗೆ ದೇವಿ ಆವಿರ್ಭವಿಸುತ್ತಾಳೆನ್ನುತ್ತವೆ ಪುರಾಣಗಳು.
ಇದನ್ನೂ ಓದಿ: Navaratri: ವಿದ್ಯಾದೇವತೆ ಸರಸ್ವತಿ ಪೂಜೆ; ಏನಿದರ ಮಹತ್ವ?