ಅಯೋಧ್ಯೆ: ಅಯೋಧ್ಯೆ ರಾಮ ಮಂದಿರದ (Ayodhya Ram Mandir) ಗರ್ಭಗೃಹದಲ್ಲಿ ಇರಿಸಲಾಗಿರುವ ರಾಮಲಲ್ಲಾ ವಿಗ್ರಹವನ್ನು (Ram Lalla Idol) ಬಹಿರಂಗಗೊಳಿಸಲಾಗಿದೆ. ಸೋಮವಾರ ಈ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆ (Pran Pratishta) ನಡೆಯಲಿದೆ. ವಿಗ್ರಹವು ಭಗವಾನ್ ರಾಮನನ್ನು ಐದು ವರ್ಷದ ಮಗುವಿನಂತೆ ಚಿತ್ರಿಸಲಾಗಿದ್ದು, ಚಿನ್ನದ ಬಿಲ್ಲು ಮತ್ತು ಬಾಣವನ್ನು (Golden Bow And Arrow) ಹಿಡಿದು ನಿಂತಿರುವ ಭಂಗಿಯಲ್ಲಿದೆ. ಮೈಸೂರು ಮೂಲದ ಕಲಾವಿದ ಅರುಣ್ ಯೋಗಿರಾಜ್ ಅವರು ಕೆತ್ತಿರುವ 51 ಇಂಚಿನ ರಾಮಲಲ್ಲಾ ವಿಗ್ರಹವು ಕಪ್ಪು ಕಲ್ಲಿನಲ್ಲಿದೆ.
ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ಸಂಭ್ರಮವನ್ನು ಹೆಚ್ಚಿಸುವುದಕ್ಕಾಗಿ ದೇವಾಲಯದ ಅಧಿಕಾರಿಗಳು ಎರಡು ದಿನಗಳಲ್ಲಿ ಸಂಪೂರ್ಣ ವಿಗ್ರಹವನ್ನು ಅನಾವರಣಗೊಳಿಸಿದರು. ಗುರುವಾರ, ಗರ್ಭಗುಡಿಯೊಳಗೆ ವಿಗ್ರಹವನ್ನು ಇರಿಸುವ ಫೋಟೋಗಳನ್ನು ಬಿಡುಗಡೆ ಮಾಡಲಾಯಿತು, ಆದರೆ ಅದನ್ನು ಬಟ್ಟೆಯಿಂದ ಮುಚ್ಚಲಾಗಿತ್ತು. ಇಂದು ಬೆಳಿಗ್ಗೆ ಮತ್ತೊಂದು ಚಿತ್ರವನ್ನು ಬಿಡುಗಡೆ ಮಾಡಲಾಯಿತು. ಇದರಲ್ಲಿ ವಿಗ್ರಹದ ಕಣ್ಣುಗಳ ಭಾಗಕ್ಕೆ ಬಟ್ಟೆ ಸುತ್ತಲಾಗಿತ್ತು. ಅಂತಿಮವಾಗಿ ಮಧ್ಯಾಹ್ನದ ಹೊತ್ತಿಗೆ ಸಂಪೂರ್ಣ ರಾಮ ಲಲ್ಲಾ ವಿಗ್ರಹದ ಫೋಟೋ ಬಿಡುಗಡೆ ಮಾಡಲಾಯಿತು. ಇದರಲ್ಲಿ ಐದು ವರ್ಷದ ರಾಮ ಲಲ್ಲಾ ಚಿನ್ನದ ಬಿಲ್ಲು ಮತ್ತು ಬಾಣವನ್ನು ಹಿಡಿದಿರುವುದನ್ನು ಕಾಣಬಹುದು.
ಅರುಣ್ ಯೋಗಿರಾಜ್ ಕೆತ್ತಿದ ರಾಮನ ಮೂರ್ತಿಯೇ ಆಯ್ಕೆಯಾಗಿದ್ದು ಯಾಕೆ?
ಮೈಸೂರಿನ ಪ್ರಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ (Arun Yogiraj) ಅವರು ಕೆತ್ತಿರುವ ಬಾಲರಾಮನ (Ram lalla Statue) ವಿಗ್ರಹ ಜನವರಿ 22ರಂದು ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ (Ayodhya Ramajanmabhumi) ಪ್ರತಿಷ್ಠಾಪನೆಗೊಳ್ಳಲಿರುವುದು ಕರುನಾಡಿನ ಪಾಲಿಗೆ ಅತ್ಯಂತ ಸಂಭ್ರಮದ ಸುದ್ದಿಯಾಗಿದೆ. ಹಲವು ಸ್ಪರ್ಧಿಗಳನ್ನು ಮೀರಿಸಿ ತಮ್ಮದೇ ಕೆತ್ತನೆಯನ್ನು ಮಂದಿರದ ಟ್ರಸ್ಟ್ ಆಯ್ಕೆ ಮಾಡಿಕೊಳ್ಳುವಂತೆ ಮಾಡುವುದರ ಹಿಂದೆ ಅವರ ಕೈಚಳಕವಿದೆ. ಅದಕ್ಕಿಂತ ಮಿಗಿಲಾಗಿ ಕನ್ನಡಿಗ ಶಿಲ್ಪಿ ಅರುಣ್ ಅವರಿಗೆ ಇರುವ ರಾಮನ ಮೇಲಿನ . ಭಕ್ತಿ, ಶ್ರದ್ಧೆಯೇ ಕಾರಣ. ಅದೇ ಕಾರಣಕ್ಕೆ ಕೋಟ್ಯಂತರ ರಾಮಭಕ್ತರ ಕನಸಿನ ರಾಮಮಂದಿರದಲ್ಲಿ ಅವರು ಕೆತ್ತಿರುವ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠೆ ಆಗಲಿದೆ. ಆದರೆ, ಈ ವಿಗ್ರಹ ಆಯ್ಕೆಯಾಗುವುದಕ್ಕೆ ಅವಷ್ಟೇ ಕಾರಣವಲ್ಲ. ತೀರ್ಪುಗಾರರು ಅಂತಿಮಗೊಳಿಸುವ ಮೊದಲು ಇನ್ನಷ್ಟು ಸಂಗತಿಗಳನ್ನು ನೋಡಿ ಮೆಚ್ಚಿದ್ದಾರೆ. ಅವುಗಳೇನೆಂಬುದನ್ನು ನೋಡೋಣ.
ರಾಮಲಲ್ಲಾನ ಮೂರ್ತಿ ಕೆತ್ತನೆಗಾಗಿ ಸಹಸ್ರ ಸಂಖ್ಯೆಯ ಶಿಲ್ಪಿಗಳ ನಡುವಿನ ತುರುಸಿನ ಸ್ಪರ್ಧೆ ನಡೆದಿತ್ತು. ಇದು ಒಂದು ವರ್ಷದ ಹಿಂದಿನ ಪ್ರಕ್ರಿಯೆ. ಇಲ್ಲಿ ಆಯ್ಕೆಗೊಂಡ ಅಂತಿಮ ಮೂವರಲ್ಲಿ ಒಬ್ಬರಾಗಿದ್ದಾರೆ ಅರುಣ್. ಆ ಮೂವರಲ್ಲಿಯೂ ಅರುಣ್ ಅವರ ಭಾವಕ್ಕೆ ಹಾಗೂ ಕಲ್ಪನೆಗೆ ಮನ್ನಣೆ ದೊರಕಿದೆ ಎಂಬುದೇ ವಿಶೇಷ. ಬೆಂಗಳೂರಿನ ಜಿ.ಎಲ್.ಭಟ್ ಮತ್ತು ರಾಜಸ್ಥಾನದ ಸತ್ಯನಾರಾಯಣ ಪಾಂಡೆ ಆಯ್ಕೆಯಾಗಿದ್ದ ಇನ್ನಿಬ್ಬರು ಮಹಾನ್ ಶಿಲ್ಪಿಗಳು. ಎಲ್ಲರೂ ಒಬ್ಬರಿಗಿಂತ ಒಬ್ಬರು ಮಹಾನ್ ಶಿಲ್ಪಿಗಳು. ಆದರೆ ಉಳಿದಿಬ್ಬರು ರಚಿಸಿದ ಮೂರ್ತಿಗಿಂತಲೂ ಅರುಣ್ ಅವರ ಕೆತ್ತನೆಗೆ ಪ್ರಾಶಸ್ತ್ಯ ಸಿಕ್ಕಿದೆ.
ಅರುಣ್ ಅವರು ರಚನೆ ಆಯ್ಕೆಯಾಗಲು ಮೊದಲ ಕಾರಣವೇ ವಿಗ್ರಹ ಮುಖದಲ್ಲಿನ ತೇಜಸ್ಸು. ಅದರಲ್ಲಿ ಹೆಚ್ಚು ದೈವಿಕ ಭಾವವಿದೆ ಎಂಬುದನ್ನು ತೀರ್ಪುಗಾರರು ಮನಗಂಡಿದ್ದಾರೆ. ಪ್ರಾಣಪ್ರತಿಷ್ಠೆ ಆಗಲಿರುವ ವಿಗ್ರಹವು ಬಾಲ ರಾಮನಾಗಿದೆ ಎಂಬುದು ಇಲ್ಲಿ ಗಮನಾರ್ಹ. ಅಂತೆಯೇ ಅರುಣ್ ಅವರ ಕೆತ್ತನೆಯ ವಿಗ್ರಹದಲ್ಲಿ ಮುಗ್ಧ ಮಗುವಿನ ಸುಂದರ ನೋಟವಿದೆ. ಬಾಲ ರಾಮದೇವರು ಸಾಕ್ಷಾತ್ ಮಂದೆ ನಿಂತಿರುವಂತೆ ಕಾಣುವ ಮೂರ್ತಿಯನ್ನು ಅವರು ಕೆತ್ತಿದ್ದಾರೆ. ಅಲ್ಲದೆ ಹೆಚ್ಚು ನೈಜತೆಯಿಂದ ಕೂಡಿದೆ.
ಅರುಣ್ ಅವರು ಕೆತ್ತಿರುವ ಐದು ವರ್ಷದ ಬಾಲ ರಾಮನ ಮೂರ್ತಿಯ ಕೈಯಲ್ಲಿ ಧನಸ್ಸು ಹಾಗೂ ಬಾಣವಿದೆ. ರಾಮನ ಮೂರ್ತಿಯು 51 ಇಂಚು ಎತ್ತರವಿದ್ದರೆ ಪ್ರಭಾವಳಿ ಸೇರಿದಂತೆ ಒಟ್ಟು ವಿಗ್ರಹ 8 ಅಡಿ ಎತ್ತರ ಹಾಗೂ ಮೂರುವರೆ ಅಡಿ ಅಗಲವಿದೆ. ಇದು ತೇಜಸ್ಸಿನಿಂದ ಕಂಗೊಳಿಸುತ್ತಿದೆ. ಒಟ್ಟಾರೆಯಾಗಿ ಕೋಟ್ಯಂತರ ರಾಮಭಕ್ತರ ಪೂಜೆಗೆ ಅರ್ಹವಾಗಿದೆ ಎಂದು ತೀರ್ಪುಗಾರರು ಅದನ್ನೇ ಆಯ್ಕೆ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ: Ram Mandir : ರಾಮ ಮಂದಿರ ಉದ್ಘಾಟನೆ ದಿನ ನೆರೆಯ ಮಹಾರಾಷ್ಟ್ರದಲ್ಲಿ ಸರ್ಕಾರಿ ರಜೆ; ಕರ್ನಾಟಕದಲ್ಲಿ?