Site icon Vistara News

Adhik Maasa 2023 | ಹೊಸ ವರ್ಷ 2023ರಲ್ಲಿ ಬರಲಿದೆ ಅಧಿಕ ಮಾಸ; ಏನಿದರ ವಿಶೇಷ?

Adhik Maasa 2023

ಕ್ಯಾಲೆಂಡರ್ ಹೊಸ ವರ್ಷಕ್ಕೆ ದಿನಗಣನೆ ಆರಂಭವಾಗಿದೆ. ಆದರೆ ಹಿಂದೂ ಪಂಚಾಂಗದ ಪ್ರಕಾರ ಹೊಸ ವರ್ಷ ಎಂದರೆ ಹೊಸ ಸಂವತ್ಸರ ಆರಂಭವಾಗುವುದು ಯುಗಾದಿಯಿಂದ. ಹಿಂದೂ ಪಂಚಾಂಗದ ಗಣನೆಯ ಪ್ರಕಾರ 2023ರಲ್ಲಿ ಆರಂಭವಾಗುವ ಶೋಭಾಕೃತ್ ಸಂವತ್ಸರದಲ್ಲಿ ಹದಿಮೂರು ಮಾಸಗಳನ್ನು ಹೊಂದಿರಲಿದೆ. ಹೀಗಾಗಿ ಮುಂದಿನ ವರ್ಷ ಅಧಿಕ ಮಾಸವಿರುವ (Adhik Maasa 2023) ವರ್ಷವಾಗಿರಲಿದೆ.

ಶಾಸ್ತ್ರಗಳ ಪ್ರಕಾರ ಯಾವಚಾಂದ್ರ ಮಾಸದಲ್ಲಿ ಸಂಕ್ರಮಣವೇ ಬರುವುದಿಲ್ಲವೋ ಅಥವಾ ಎರಡು ಸಂಕ್ರಾಂತಿಗಳು ಬರುತ್ತವೆಯೋ ಅಂತಹ ಚಾಂದ್ರಮಾಸಕ್ಕೆ ಅಧಿಕಮಾಸ ಎಂದು ಹೆಸರು. ಸಾಧರಣವಾಗಿ ಒಂದು ವರ್ಷಕ್ಕೆ ಹನ್ನೆರಡು ತಿಂಗಳುಗಳೇ ಇದ್ದರೂ ಅಧಿಕಮಾಸ ಬಂದಾಗ ವರ್ಷಕ್ಕೆ ಹದಿಮೂರು ತಿಂಗಳಾಗುತ್ತವೆ ಅಧಿಕಮಾಸವು ಹದಿಮೂರನೆಯ ತಿಂಗಳು ಆಗುತ್ತದೆ. ಅಧಿಕ ಮಾಸವನ್ನು ಮಲ ಮಾಸ ಅಥವಾ ಪುರುಷೋತ್ತಮ ಮಾಸ ಎಂದೂ ಕರೆಯಲಾಗುತ್ತದೆ.

ಯಸ್ಮಿನ್ ಮಾಸೇ ನ ಸಂಕ್ರಾಂತಿಃ ಸಂಕ್ರಾಂತಿ ದ್ವಯಮೇವ ವಾ |
ಮಲಮಾಸಕ್ಷಯೌ ಜ್ಞೇಯೌ ಸರ್ವಧರ್ಮ ವಿವರ್ಜಿತೌ ||

ಯಾವ ತಿಂಗಳಿನಲ್ಲಿ ರವಿಸಂಕ್ರಾಂತಿ ಇರುವುದಿಲ್ಲವೋ ಅದು ಅಧಿಕಮಾಸ; ಎರಡು ರವಿ ಸಂಕ್ರಮಣಗಳು ಬಂದರೆ ಅದು ಕ್ಷಯಮಾಸ ಎಂದು ಭವಿಷ್ಯೋತ್ತರ ಪುರಾಣದಲ್ಲಿ ಹೇಳಲಾಗಿದೆ.

ಪವಿತ್ರವಾದ ಮಾಸ
ಅಧಿಕ ಮಾಸವು ಪವಿತ್ರವಾದ ಮಾಸವಾಗಿದ್ದು, ದೇವರ ಕಾರ್ಯಗಳಿಗೆ ಅತ್ಯಂತ ಪ್ರಶಸ್ತವಾದ ಸಮಯವಾಗಿದೆ. ಅಧಿಕ ಮಾಸದ ವಿಶೇಷತೆಯನ್ನು ತಿಳಿಯುವುದರ ಜೊತೆಗೆ, ಈ ಮಾಸದಲ್ಲಿ ಕೆಲವು ಕಾರ್ಯಗಳನ್ನು ಮಾಡುವುದು ನಿಷಿದ್ಧವಾಗಿದೆ.

ಹಿಂದೂ ಪಂಚಾಂಗದ ಪ್ರಕಾರ ಬರುವ ಮುಂದಿನ ವರ್ಷದಲ್ಲಿ ಒಟ್ಟು ಹದಿಮೂರು ತಿಂಗಳು ಇರಲಿದೆ. ಅಂದರೆ ಶಿವನ ಆರಾಧನೆಗೆ ಪ್ರಶಸ್ತವಾದ ಶ್ರಾವಣ ಮಾಸವು ಈ ಬಾರಿ ಎರಡು ತಿಂಗಳುಗಳ ಕಾಲ ಇರಲಿದೆ. ಬರೋಬ್ಬರಿ 19 ವರ್ಷಗಳ ನಂತರ ಈ ರೀತಿಯ ಅಧಿಕ ಮಾಸ ಬಂದಿರುವುದಾಗಿ ಜ್ಯೋತಿಷ್ಯ ತಜ್ಞರು ಹೇಳಿದ್ದಾರೆ.

ಹಿಂದೂ ಪಂಚಾಂಗದ ಪ್ರಕಾರ ಅಧಿಕ ಮಾಸವು ಮೂರು ವರ್ಷಗಳಿಗೊಮ್ಮೆ ಬರುತ್ತದೆ. ಸೌರ ವರ್ಷದಲ್ಲಿ 365 ದಿನ ಮತ್ತು 6 ಗಂಟೆಗಳಿರುತ್ತವೆ. ಅದೇ ಚಂದ್ರ ವರ್ಷದಲ್ಲಿ 354 ದಿನಗಳಿರುತ್ತದೆ. ಎರಡು ವರ್ಷಗಳ ನಡುವೆ ಹನ್ನೊಂದು ದಿನಗಳ ವ್ಯತ್ಯಾಸ ಬರಲಿದೆ. ಹಾಗಾಗಿ ಈ ಅಂತರವನ್ನು ಸರಿದೂಗಿಸುವ ಸಲುವಾಗಿ ಪ್ರತಿ ಮೂರು ವರ್ಷಗಳಿಗೊಮ್ಮೆ ಅಧಿಕ ಮಾಸ ಬರುತ್ತದೆ ಎಂದು ಜ್ಯೋತಿಷಿಗಳು ಹೇಳುತ್ತಾರೆ.

ಅಧಿಕ ಮಾಸ ಯಾವಾಗ?
2023ರ ಜುಲೈ 18ರಂದು ಅಧಿಕ ಮಾಸ ಆರಂಭವಾಗಲಿದ್ದು, ಆಗಸ್ಟ್ 16ಕ್ಕೆ ಮುಕ್ತಾಯಗೊಳ್ಳಲಿದೆ. ಅಧಿಕ ಮಾಸವು ವಿಷ್ಣುವಿನ ಆರಾಧನೆಗೆ ಅತ್ಯಂತ ಶ್ರೇಷ್ಠ ಮಾಸವಾಗಿದೆ.

ಅಧಿಕ ಮಾಸವು ದೇವರ ಪೂಜೆ, ಭಜನೆ, ಕೀರ್ತನೆ, ಪಾರಾಯಣಗಳಿಗೆ ಪ್ರಶಸ್ತವಾದ ಮಾಸವಾಗಿದೆ. ಧಾರ್ಮಿಕ ಕಾರ್ಯಗಳಿಗೆ ಈ ಮಾಸದಲ್ಲಿ ಹೆಚ್ಚಿನ ಒತ್ತನ್ನು ನೀಡಲಾಗುತ್ತದೆ. ಅಧಿಕ ಮಾಸದಲ್ಲಿ ಮಾಡಿದ ದೇವರ ಕಾರ್ಯಗಳು ಮೋಕ್ಷ ಪಡೆಯಲು ಉತ್ತಮ ಮಾರ್ಗವಾಗಿರುತ್ತದೆ. ಹಾಗಾಗಿ ಈ ಮಾಸದಲ್ಲಿ ಹೆಚ್ಚಿನ ದೈವೋಪಾಸನೆ ಮಾಡುವುದು ಒಳಿತು.

ಶುಭ ಕಾರ್ಯಗಳನ್ನು ಮಾಡುವಂತಿಲ್ಲ
ಅಧಿಕ ಮಾಸದಲ್ಲಿ ಅರಿವಿದ್ದೋ, ಅರಿವಿಲ್ಲದೆಯೋ ಮಾಡುವ ಕೆಲವು ಕೆಲಸಗಳಿಂದ ಗಳಿಸಿದ ಪುಣ್ಯ ನಾಶವಾಗುತ್ತದೆ ಎಂಬುದನ್ನು ಶಾಸ್ತ್ರದಲ್ಲಿ ಉಲ್ಲೇಖಿಸಿದ್ದಾರೆ. ಅಧಿಕ ಮಾಸದಲ್ಲಿ ದೈನಂದಿನ ಕಾರ್ಯಗಳ ಜೊತೆಗೆ ದೇವರ ಆರಾಧನೆ ಹಾಗೂ ಧಾರ್ಮಿಕ ಕಾರ್ಯಗಳನ್ನು ಮಾಡಬೇಕೆಂದು ಶಾಸ್ತ್ರ ಹೇಳುತ್ತದೆ. ಮಂಗಳ ಕಾರ್ಯಗಳನ್ನು ಈ ಮಾಸದಲ್ಲಿ ಮಾಡುವುದು ನಿಷಿದ್ಧವಾಗಿದೆ.

ಪ್ರತಿ ಮಾಸದಲ್ಲೂ ಸೂರ್ಯನ ಸಂಕ್ರಮಣ ಪ್ರತ್ಯೇಕ ರಾಶಿಯಲ್ಲಿ ಆಗುತ್ತದೆ, ಅಧಿಕ ಮಾಸದಲ್ಲಿ ಸೂರ್ಯ ಸಂಕ್ರಮಣವಿರುವುದಿಲ್ಲ. ಹಾಗಾದಾಗ ಸೂರ್ಯ ಮತ್ತು ಚಂದ್ರನ ವೇಗದಲ್ಲಿ ವ್ಯತ್ಯಾಸ ಉಂಟಾಗುತ್ತದೆ. ವಾತಾವರಣ ದಲ್ಲಿ ಏರುಪೇರಾಗುತ್ತದೆ. ಅತಿವೃಷ್ಟಿ, ಅನಾವೃಷ್ಟಿ, ರೋಗ-ರುಜಿನಗಳ ಬಾಧೆ ಹೆಚ್ಚಾಗುತ್ತದೆ. ಇದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಎದುರಾಗುವ ಸಂಭವ ಅಧಿಕವಾಗಿರುತ್ತದೆ. ಹಾಗಾಗಿ ಪುಣ್ಯ ಕಾರ್ಯಗಳನ್ನು ಮಾತ್ರ ಮಾಡಬೇಕೆಂದು ಶಾಸ್ತ್ರ ಹೇಳುತ್ತದೆ. ಹಾಗಾಗಿ ಶುಭ ಕಾರ್ಯಗಳಾದ ಮದುವೆ, ಮುಂಜಿ ಮತ್ತು ಚೌಲ ಕಾರ್ಯಗಳನ್ನು ಈ ಮಾಸದಲ್ಲಿ ಮಾಡುವುದು ನಿಷಿದ್ಧವಾಗಿದೆ.

ಹೊಸ ವ್ಯಾಪಾರ ಆರಂಭಿಸಬೇಡಿ
ಅಧಿಕ ಮಾಸದಲ್ಲಿ ಹೊಸತಾಗಿ ವ್ಯಾಪಾರ, ಉದ್ಯೋಗ ಮುಂತಾದವುಗಳನ್ನು ಆರಂಭಿಸಿದರೆ ಉತ್ತಮವಲ್ಲ, ಜೊತೆಗೆ ಅಂದುಕೊಂಡ ಯಶಸ್ಸು ದೊರಕುವುದಿಲ್ಲ ಎಂಬ ನಂಬಿಕೆ ಇದೆ. ಹಾಗಾಗಿ ಈ ಮಾಸದಲ್ಲಿ ಯಾವುದೇ ಅಂಗಡಿ, ಮಳಿಗೆ, ವ್ಯಾಪಾರ -ವ್ಯವಹಾರಕ್ಕೆ ಸಂಬಂಧಿಸಿದ ಕಾರ್ಯಗಳನ್ನು ಆರಂಭಿಸುವುದಿಲ್ಲ.

ನಿವೇಶನ ಖರೀದಿಗೆ ಉತ್ತಮವಲ್ಲ
ಅಧಿಕ ಮಾಸದಲ್ಲಿ ಹೊಸ ಯೋಜನೆಗಳನ್ನು, ದೊಡ್ಡ ಮಟ್ಟದ ಹೂಡಿಕೆಗಳನ್ನು ಮಾಡುವುದು ಉತ್ತಮವಲ್ಲ. ಜೊತೆಗೆ ನಿವೇಶನಗಳ ಖರೀದಿಗೆ ಮತ್ತು ಹೊಸ ಮನೆಯ ನಿರ್ಮಾಣ ಕಾರ್ಯವನ್ನು ಅಧಿಕ ಮಾಸದಲ್ಲಿ ಆರಂಭಿಸುವುದು ಒಳಿತಲ್ಲವೆಂದು ಶಾಸ್ತ್ರ ಹೇಳುತ್ತದೆ.

ಅಧಿಕಮಾಸವು ಬಂದಾಗ ತೀರ್ಥಯಾತ್ರೆ ಪಿತೃಕಾರ್ಯ, ತೀರ್ಥಶ್ರಾದ್ಧ, ಕ್ಷೌರ, ಉಪನಯನ, ವಿವಾಹ ಕಾಮ್ಯವ್ರತ, ಕಾಮ್ಯ ಉಪವಾಸ ಮೊದಲದುವುಗಳನ್ನು ಮಾಡಬಾರದು ಎಂದು ಬೃಹನ್ನಾರದೀಯ ಪುರಾಣದಲ್ಲಿ ಹೇಳಲಾಗಿದೆ.

ಇದನ್ನೂ ಓದಿ | Prerane | ಸಂಪೂರ್ಣವಾದ ತೊಡಗುವಿಕೆಯೇ ಆನಂದದ ಮೂಲ

Exit mobile version