Site icon Vistara News

Akshaya Tritiya 2023 : ಅಕ್ಷಯ ತೃತೀಯಕ್ಕೆ ಉಂಟು ಪುರಾಣದ ನಂಟು

Know Significance, History, And Puja Vidhi Of Akshaya Tritiya

#image_title

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಹಿಂದೂ ಧರ್ಮದಲ್ಲಿ ಸಾಕಷ್ಟು ಹಬ್ಬ-ಹರಿದಿನಗಳು ಉತ್ಸವಗಳು ಆಚರಣೆಯಲ್ಲಿವೆ. ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೇ ದಿನವೇ ‘ಅಕ್ಷಯ ತೃತೀಯ’ (Akshaya Tritiya 2023). ಹಿಂದೂಗಳ ಅತ್ಯಂತ ಪವಿತ್ರವಾದ ನಾಲ್ಕು “ಪೂರ್ಣ ಮುಹೂರ್ತ” ಗಳಲ್ಲಿ ಈ ದಿನವೂ ಒಂದು. ಉಳಿದ ಮುಹೂರ್ತಗಳೆಂದರೆ ಯುಗಾದಿ, ವಿಜಯ ದಶಮಿ ಮತ್ತು ಬಲಿಪಾಡ್ಯಮಿ.

ಈ ದಿನಗಳಲ್ಲಿ ಒಳ್ಳೆಯ ಕೆಲಸ ಮಾಡಲು ಪಂಚಾಂಗ ನೋಡುವ ಅವಶ್ಯಕತೆ ಇರುವುದಿಲ್ಲ ಎಂದು ನಮ್ಮ ಹಿರಿಯರು ಹೇಳಿದ್ದಾರೆ. ಅಕ್ಷಯ ತೃತೀಯ ದಿವಸ ಸಾಮಾನ್ಯವಾಗಿ ಯಾವುದೇ ಒಳ್ಳೆ ಕೆಲಸವನ್ನು ಮಾಡಿದರೆ, ಅಕ್ಷಯವಾಗಿ ಪರಿಣಮಿಸುವುದು. ಅಕ್ಷಯವೆಂದರೆ ಕ್ಷಯವಿಲ್ಲದ್ದು, ಕಡಿಮೆ ಇಲ್ಲದ್ದು, ಕ್ಷೀಣವಾಗದ್ದು, ಕೊನೆಯಿಲ್ಲದ್ದು, ನ್ಯೂನವಿಲ್ಲದ್ದು ಎಂದರ್ಥ. ಈ ದಿವಸ ಜೀವನದ ಹೊಸ ಉದ್ಯೋಗಗಳನ್ನು ಪ್ರಾರಂಭಿಸುವುದು ಶುಭಕರ. ಈ ತೃತೀಯ ತಿಥಿಯ ಜೊತೆ ರೋಹಿಣಿ ನಕ್ಷತ್ರವಿದ್ದರೆ, ಮಹಾ ಪುಣ್ಯಕರವೆಂದು ಪುರಾಣಗಳಲ್ಲಿ ಉಲ್ಲೇಖವಿದೆ.

ಪಂಚಾಂಗದಲ್ಲಿ ಅಕ್ಷಯ ತೃತೀಯದಂದು ಸೂರ್ಯ ಮತ್ತು ಚಂದ್ರರು ಏಕಕಾಲದಲ್ಲಿ ತಮ್ಮ ತಮ್ಮ ಶಕ್ತಿಯುತಸ್ಥಾನ – ಉಚ್ಚರಾಶಿಯಲ್ಲಿ (ಸೂರ್ಯ -ಮೇಷರಾಶಿಯಲ್ಲಿ ಮತ್ತು ಚಂದ್ರ-ವೃಷಭರಾಶಿಯಲ್ಲಿ) ಇರುವದರಿಂದ ಎಲ್ಲಾ ಶುಭ ಕಾರ್ಯಗಳಿಗೆ ಅತ್ಯಂತ ಪ್ರಶಸ್ತವಾಗಿರುತ್ತದೆ. ಸೂರ್ಯನು ಆತ್ಮ ಮತ್ತು ದೇಹ ಪ್ರತಿಬಿಂಬಿಸಿದರೆ, ಚಂದ್ರನು ಮನಸ್ಸು ಮತ್ತು ಬುದ್ಧಿ ಮೇಲೆ ಪ್ರಭಾವ ಬೀರುತ್ತಾನೆ. ಈ ರೀತಿಯಾಗಿ ದೇಹ ಮತ್ತು ಮನಸ್ಸು ಪರಿಪೂರ್ಣತೆಯನ್ನು ಪಡೆಯುವ ದಿನ ಎಂದು ಹೇಳಲಾಗಿದೆ. ಹಿಂದೂ ಪುರಾಣದ ಪ್ರಕಾರ ತ್ರೇತಾಯುಗವು ಆರಂಭವಾದದ್ದು ಈ ಅಕ್ಷಯ ತೃತೀಯದ ಶುಭದಿನದಂದೇ.

ವೇದವ್ಯಾಸರು ಗಣಪತಿ ಆಶೀರ್ವಾದ ಪಡೆದು ಮಹಾಭಾರತ ಬರೆಯಲು ಪ್ರಾರಂಭಿಸಿದ ದಿನ. ಗಂಗಾ ಮಾತೆ ಕೈಲಾಸದಿಂದ ಭೂಮಿಗೆ ಇಳಿದ ದಿನ ಎಂದು ಹೇಳಲಾಗುತ್ತದೆ. ಈ ದಿನ ಹಲವು ಮಹಾತ್ಮರು ಕೂಡ ಹುಟ್ಟಿದ ದಿನ. ಜಗಜ್ಯೋತಿ ಬಸವಣ್ಣರ ಜಯಂತಿ ಕೂಡ ಹೌದು. ಬಲರಾಮ ಜಯಂತಿ ಅನ್ನೂ ಇಂದು ಆಚರಿಸಲಾಗುತ್ತದೆ. ಚಾಮುಂಡೇಶ್ವರಿ ರಾಕ್ಷಸರನ್ನು ಸಂಹರಿಸಿದದಿನ. ಪಾಂಡವರು ವನವಾಸದಲ್ಲಿದ್ದಾಗ ಕೃಷ್ಣನ ಆದೇಶದಂತೆ ಸೂರ್ಯನನ್ನು ಪ್ರಾರ್ಥಿಸಿ, ದ್ರೌಪದಿ ಅಕ್ಷಯ ಪಾತ್ರೆಯನ್ನು ಪಡೆದಿದ್ದು ಈ ಅಕ್ಷಯ ತೃತೀಯದ ದಿನವೇ.

ಪಾಂಡವರು ತಮ್ಮ ವನವಾಸ, ಅಜ್ಞಾತವಾಸದ ನಂತರ ಶಸ್ತ್ರಾಸ್ತ್ರಗಳನ್ನು ಪುನಃ ಪಡೆದ ದಿನ. ಪರಮ ಪವಿತ್ರಳಾದ ಸೀತಾದೇವಿಯ ಅಗ್ನಿ ಪರೀಕ್ಷೆಯಿಂದ ಬಾಹ್ಯವಾಗಿಯೂ ತಾನು ಪರಿಶುದ್ಧಳು ಎಂಬುದನ್ನು ಜವತ್ತಿಗೆ ಪ್ರಕಟಿಸಿದ್ದೂ ಅಕ್ಷಯತದಿಗೆಯ ದಿನ. ಈ ದಿನ ವಿಷ್ಣು ಮತ್ತು ಲಕ್ಷ್ಮೀ ಗಂಗಾಸ್ನಾನ ಮಾಡಿ, ಗಂಗೆಯನ್ನು ಪುಜಿಸಿದ್ದರೆಂದು. ಅಂದಿನಿಂದ ಗಂಗಾ ಸ್ನಾನ ಮಾಡಿದರೆ ಸಕಲ ದೋಷ ಪರಿಹಾರವಾಗುತ್ತದೆ ಎಂದೂ ಹೇಳಲಾಗಿದೆ. ಕೃಷ್ಣನು ಕುಚೇಲನನ್ನು ಸತ್ಕರಿಸಿದ ಪುಣ್ಯ ದಿನ. ಈ ಎಲ್ಲ ವಿಶೇಷತೆಗಳು ನಡೆದದ್ದು ಈ ಅಕ್ಷಯ ತೃತೀಯ ದಿನದಂದೇ ಎಂದು ಪುರಾಣಗಳ ಕಥೆಗಳು ಹೇಳುತ್ತವೆ.

ಮನೆಯಲ್ಲಿ ಪೂಜೆ ಹೋಮ ಹವನಾದಿಗಳನ್ನು ಮಾಡುವುದಾದರೆ ಅಥವಾ ಚಿನ್ನ ಖರೀದಿ ಮಾಡುವುದಾದರೆ ಅಕ್ಷಯ ತೃತೀಯದ ಸೂಕ್ತವಾದ ದಿನ. ಇದರಿಂದ ಸುಖ ಸಮೃದ್ಧಿ ಸಂಪತ್ತು ಹೇರಳವಾಗುತ್ತದೆ. ಈ ದಿನದಂದು ವಿಷ್ಣು, ಲಕ್ಷ್ಮೀ ಹಾಗೂ ಕುಬೇರನನ್ನು ಜನರು ಭಕ್ತಿಯಿಂದ ಪೂಜಿಸುತ್ತಾರೆ. ಮಹಾಲಕ್ಷ್ಮಿಯನ್ನು ಆರಾಧಿಸಿ ಕುಬೇರನು ಅಕ್ಷಯ ತೃತೀಯ ದಿನವೇ ಅಷ್ಟೈಶ್ವರ್ಯವ ಪಡೆದನಂತೆ.

ಆಚರಣೆ ಹೇಗೆ? ಏನೇನು ದಾನ ಮಾಡಬಹುದು?
ಅಕ್ಷಯ ತೃತೀಯದ ದಿನ ಕೇವಲ ಚಿನ್ನವನ್ನು ಖರೀದಿಸಿ ತಂದು ಪೂಜೆ ಮಾಡುವುದಲ್ಲ. ಸಾಲವಿಲ್ಲದೆ ಚಿನ್ನವನ್ನು ಖರೀದಿಸಲು ಸಾಧ್ಯವಿದ್ದವರು ಇದನ್ನು ಮಾಡಬಹುದು. ಇದಲ್ಲದೆ, ದೇವರಿಗೆ ವಿಶೇಷ ಪೂಜೆ ಸಲ್ಲಿಸುವುದು, ದೇಗುಲಕ್ಕೆ ಹೋಗುವುದು ಮಾಡಬಹುದು. ಎಲ್ಲದಕ್ಕಿಂತ ಹೆಚ್ಚಾಗಿ ತಮ್ಮಲ್ಲಿರುವುದನ್ನು ದಾನ ಮಾಡಬಹುದು. ಅಕ್ಷಯ ತೃತೀಯ ದಿನದಂದು ಮಣ್ಣಿನ ಮಡಕೆಯಲ್ಲಿ ಉದಕ ದಾನ, ಮಾಡಿದರೆ ಮೃತ್ಯು ಭಯದಿಂದ ದೂರ, ವಸ್ತ್ರ ದಾನ ಮಾಡಿದರೆ ರೋಗ ರುಜಿನಗಳು ದೂರ, ಹಣ್ಣು ಹಂಪಲುಗಳನ್ನು ದಾನ ಮಾಡಿದರೆ, ನಮ್ಮ ಕಾರ್ಯಕ್ಷೇತ್ರದಲ್ಲಿ ಉನ್ನತ ಮಟ್ಟಕ್ಕೆ ಏರುತ್ತೇವೆ ಎನ್ನುವ ನಂಬಿಕೆ. ಅಕ್ಕಿ, ಬೇಳೆ, ಗೋದಿ, ಬೆಲ್ಲ ದಾನ ಮಾಡಿದರೆ ಅಕಾಲ ಮೃತ್ಯುವಿನ ಭಯದಿಂದ ಪಾರಾಗಬಹುದು.ಕೊನೆ ಪಕ್ಷ ಮಜ್ಜಿಗೆ ಮೊಸರು ದಾನ ಮಾಡಿದರೆ ಮಾಡಿದ ಪಾಪ ಕರ್ಮ ಗಳಿಂದ ಮುಕ್ತಿ ಹೊಂದಬಹುದು ಎಂಬ ನಂಬಿಕೆ. ಬೆಳಿಗ್ಗೆ ಗೋವುಗಳಿಗೆ ಪೂಜೆ ಪುನಸ್ಕಾರಗಳನ್ನು ಮಾಡಿದರೆ, ಗೋಧಿ ಬೆಲ್ಲ ಬಾಳೆಹಣ್ಣು ತಿನ್ನಿಸುವುದ ರಿಂದ ಮಹಾಲಕ್ಷ್ಮೀ ಕೃಪಾಕಟಾಕ್ಷ ಪಾತ್ರವಾಗುತ್ತೇವೆ.

ತೃತೀಯ ತಿಥಿಯಂದು (ತದಿಗೆಯ ದಿನ) ‘ವೃಷಭ ರಾಶಿ’ಯ ದಿನ ಅಕ್ಷಯ ತೃತೀಯವನ್ನು ಆಚರಣೆ ಮಾಡಲಾಗುತ್ತದೆ. ಈ ವೃಷಭ ರಾಶಿ ಮತ್ತು ತೃತೀಯ ತಿಥಿ ಎರಡೂ ಜೊತೆಯಲ್ಲಿ ಬರುವಾಗ ಮೂರು ನಕ್ಷತ್ರಗಳಲ್ಲಿ ಅಂದರೆ ಕೃತಿಕಾ, ರೋಹಿಣಿ, ಮೃಗಶಿರ ಯಾವುದಾದರೂ ಒಂದು ನಕ್ಷತ್ರ ಬರುವ ಸಾಧ್ಯತೆ ಇದೆ. ಆದರೆ ರೋಹಿಣಿ ನಕ್ಷತ್ರದಲ್ಲಿ ಬಂದರೆ ಈ ದಿನ ಮಹಾ ಪುಣ್ಯಕರವೆಂದು ಹೇಳಲಾಗಿದೆ.

ಚಂದ್ರನಿಗೆ 27 ಜನ ( ಇವೇ 27 ನಕ್ಷತ್ರಗಳು) ಹೆಂಡತಿಯರು ಅನ್ನುತ್ತಾರೆ. ಚಂದ್ರ ತನ್ನ ಪ್ರತಿ ಹೆಂಡತಿಯ ಜೊತೆ ಒಂದೊಂದು ದಿನ ಇರುತ್ತಾನೆ ಎನ್ನುವ ಕತೆ ಪುರಾಣಗಲ್ಲಿ ಇದೆ. ಈ 27 ಹೆಂಡತಿಯರಲ್ಲಿ ರೋಹಿಣಿ ಚಂದ್ರನಿಗೆ ಪ್ರಿಯವಾದ ಹೆಂಡತಿ ಅಂತೆ. ಹೀಗಾಗಿಯೇ ರೋಹಿಣಿ ನಕ್ಷತ್ರದ ದಿನ ಅಕ್ಷಯ ತೃತೀಯ ಬಂದರೆ (ಅಂದರೆ ಚಂದ್ರ ರೋಹಿಣಿ ನಕ್ಷತ್ರದಲ್ಲಿದ್ದಾಗ) ಅಕ್ಷಯ ತೃತೀಯ ಹೆಚ್ಚು ಶ್ರೇಷ್ಠ ಎನ್ನಲಾಗುತ್ತಿದೆ.

ಧಾರ್ಮಿಕ ಮತ್ತು ಆಧ್ಯಾತ್ಮಿಕ ಲೇಖನ, ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ.

ಇಂದು ಲಕ್ಷ್ಮೀಯನ್ನು ವಿಶೇಷವಾಗಿ ಪೂಜೀಸುವ ಪದ್ಧತಿ ಇದೆ. ಅಕ್ಷಯ ತೃತೀಯ ದಿನದ ನಿಜ ಅರ್ಥವನ್ನು ತಿಳಿದು ಆಚರಿಸೋಣ, ಸಂಭ್ರಮಿಸೋಣ. ಲೋಕಾಃ ಸಮಸ್ತಾಃ ಸುಖಿನೋ ಭವಂತು.

ಲೇಖಕರು ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

ಇದನ್ನೂ ಓದಿ : Akshaya Trutiya Jewel Trend: ಅಕ್ಷಯ ತೃತೀಯ ಸೀಸನ್‌ನಲ್ಲಿ ಎಂಟ್ರಿ ಕೊಟ್ಟ ಎಕ್ಸ್‌ಕ್ಲೂಸೀವ್‌ ವೆಡ್ಡಿಂಗ್‌ ಜ್ಯುವೆಲರಿಗಳು

Exit mobile version