Site icon Vistara News

Akshaya Tritiya 2024: ದೇಹ ಮತ್ತು ಮನಸ್ಸು ಪರಿಪೂರ್ಣತೆಯನ್ನು ಪಡೆಯುವ ದಿನ ಅಕ್ಷಯ ತೃತೀಯ

Akshaya Tritiya 2024

ಪ್ರೊ. ವಿದ್ವಾನ್ ನವೀನಶಾಸ್ತ್ರಿ ರಾ. ಪುರಾಣಿಕ
(ಲೇಖಕರು, ಸಂಸ್ಕೃತ ಉಪನ್ಯಾಸಕರು, ಸಂಸ್ಕೃತಿ ಚಿಂತಕರು ಹಾಗೂ ಜ್ಯೋತಿಷಿಗಳು)
ಭವ್ಯ ಭಾರತದ ಸಾಂಸ್ಕೃತಿಕ ಪರಂಪರೆಯ (Akshaya Tritiya 2024) ಶ್ರೇಷ್ಠತೆಯನ್ನು ಸಾರುವ ಮೂಲಕ ಈ ಹಬ್ಬ ಹರಿದಿನಗಳು ಮನುಷ್ಯರ ಮನಸ್ಸನ್ನೂ ಸದಾ ನೆಮ್ಮದಿ ಮತ್ತು ಸಂತೋಷವಾಗಿ ಇರಲೆಂದು, ಕಾಲಕಾಲಕ್ಕೆ ಬದಲಾಗುವ ಋತು ನಿಯಮಗಳಿಗೆ ಅನುಗುಣವಾಗಿ ನಮ್ಮ ಹಿರಿಯರು ಭಗವಂತನ ಪ್ರತಿರೂಪವನ್ನು ಸೃಷ್ಟಿಯಲ್ಲಿ ದೃಷ್ಟಿಯಿಟ್ಟು ಮಾನವ ಜನಾಂಗದ ಏಳಿಗೆಗೆ ಶ್ರಮಿಸಿದ್ದಾರೆ. ಪಂಚಭೂತಗಳಲ್ಲಿ ದೇವರನ್ನು ಹುಡುಕಿದ್ದಾರೆ.ಹಿಗಾಗಿ ಭಾರತ ಪ್ರತ್ಯಕ್ಷ ಸಂಸ್ಕೃತಿಯ ಜೀವಂತ ಸ್ವರ್ಗದ ಪ್ರತಿ ರೂಪ. ಭಾರತೀಯರು ಆಚರಿಸುವ ಯಾವುದೇ ಹಬ್ಬ-ಹರಿದಿನಗಳು, ಸಮಾರಂಭ, ಜಯಂತಿ, ಉತ್ಸವಗಳು, ಆರಾಧನೆ ಇತ್ಯಾದಿ ಸಾಮಾನ್ಯವಾಗಿ ಅಮರವಾಗಿ ಉಳಿದಿರುವ ಯಾವುದೋ ಗತ ವ್ಯಕ್ತಿಯ, ಶಕ್ತಿಯ ಅಥವಾ ಪ್ರಾಚೀನತೆಯ ಪ್ರತೀಕಗಳಾಗಿರುತ್ತವೆ. ನಮ್ಮ ಈ ಪುಣ್ಯ ಭೂಮಿ ಭಾರತದಲ್ಲಿ ಎಲ್ಲಾ ಜನರು ಅತ್ಯಂತ ಪ್ರೀತಿಯಿಂದ, ಸಂತೋಷದಿಂದ ಬೆಸೆದುಕೊಂಡು ಇರಲು ಮುಖ್ಯ ಕಾರಣವೇನೆಂದರೆ, ನಮ್ಮ ಪೂರ್ವಜರು ಹಾಕಿಕೊಟ್ಟಂತಹ ಸಂಸ್ಕೃತಿ, ಪರಂಪರೆ ಹಾಗೂ ಕಾಲಕಾಲಕ್ಕೆ ಆಚರಿಸುವ ಹಬ್ಬ – ಹರಿದಿನಗಳು.
ಭಾರತ ಸಂಪ್ರದಾಯವನ್ನು ಪಾಲಿಸುವ ಮತ್ತು ಧರ್ಮವನ್ನು ಗೌರವಿಸುವ ದೇಶ. ಇದು ಈ ನೆಲದ ಸಂಸ್ಕಾರ. ಇಲ್ಲಿಯ ಪ್ರತಿ ಹಬ್ಬಕ್ಕೂ ಒಂದೊಂದು ಬಗೆಯ ಮಹತ್ವವನ್ನು ಹಾಗೂ ಹಿರಿಯರು ಹಾಕಿಕೊಟ್ಟ ನಿಯಮಗಳನ್ನು ಇನ್ನೂ ಪಾಲಿಸುತ್ತಾ ಬರುತ್ತಿದ್ದೇವೆ ಎಂಬುದೇ ಸಂಪ್ರದಾಯ. ಹಬ್ಬಗಳೇ ನಮ್ಮ ಭಾರತದ ಉಸಿರು ಎಂದರೂ ತಪ್ಪಾಗಲಿಕ್ಕಿಲ್ಲ.
ಸನಾತನ ವೈದಿಕ ಹಿಂದೂ ಧರ್ಮದಲ್ಲಿ ಸಾಕಷ್ಟು ಹಬ್ಬ-ಹರಿದಿನಗಳು ಉತ್ಸವಗಳು ಆಚರಣೆಯಲ್ಲಿವೆ.
ವೈಶಾಖ ಮಾಸದ – ಶುಕ್ಲ ಪಕ್ಷದ – ಮೂರನೇ ದಿನವೇ ‘ಅಕ್ಷಯ ತೃತೀಯ’. ಹಿಂದುಗಳ ಪವಿತ್ರ ದಿನಗಳಲ್ಲಿ ಅತ್ಯಂತ ಪವಿತ್ರವಾದ ನಾಲ್ಕು “ಪೂರ್ಣ ಮುಹೂರ್ತ” ಗಳಲ್ಲಿ (ಯುಗಾದಿ, ಅಕ್ಷಯ ತೃತೀಯ, ವಿಜಯ ದಶಮಿ ಮತ್ತು ಬಲಿಪಾಡ್ಯಮಿ ಹಬ್ಬದ ದಿನಗಳು) ಇದು ಒಂದು. ಈ ದಿನಗಳಲ್ಲಿ ಒಳ್ಳೆಯ ಕೆಲಸ ಮಾಡಲು ಪಂಚಾಂಗ ನೋಡುವ ಅವಶ್ಯಕತೆ ಇರುವುದಿಲ್ಲ ಎಂದು ನಮ್ಮ ಹಿರಿಯರು ಹೇಳಿದ್ದಾರೆ. ಈ ದಿವಸ ಸಾಮಾನ್ಯವಾಗಿ ಯಾವುದೇ ಒಳ್ಳೆ ಕೆಲಸವನ್ನು ಮಾಡಿದರೆ, ಅಕ್ಷಯವಾಗಿ ಪರಿಣಮಿಸುವುದು. ಈ ದಿವಸ ಜೀವನದ ಹೊಸ ಉದ್ಯೋಗಗಳನ್ನು ಪ್ರಾರಂಭಿಸುವುದು ಶುಭಕರ. ಈ ತೃತೀಯ ತಿಥಿಯ ಜೊತೆ ರೋಹಿಣಿ ನಕ್ಷತ್ರವಿದ್ದರೆ, ಮಹಾ ಪುಣ್ಯಕರವೆಂದು ಪುರಾಣಗಳಲ್ಲಿ ಉಲ್ಲೇಖವಿದೆ.

ಶುಭ ಕಾರ್ಯಗಳಿಗೆ ಅತ್ಯಂತ ಪ್ರಶಸ್ತ

ಪಂಚಾಂಗದಲ್ಲಿ ಅಕ್ಷಯ ತೃತೀಯದಂದು ಸೂರ್ಯ ಮತ್ತು ಚಂದ್ರರು ಏಕಕಾಲದಲ್ಲಿ ತಮ್ಮ ತಮ್ಮ ಶಕ್ತಿಯುತಸ್ಥಾನ – ಉಚ್ಚರಾಶಿಯಲ್ಲಿ (ಸೂರ್ಯ-ಮೇಷರಾಶಿಯಲ್ಲಿ ಮತ್ತು ಚಂದ್ರ – ವೃಷಭರಾಶಿಯಲ್ಲಿ) ಇರುವದರಿಂದ ಎಲ್ಲಾ ಶುಭ ಕಾರ್ಯಗಳಿಗೆ ಅತ್ಯಂತ ಪ್ರಶಸ್ತವಾಗಿರುತ್ತದೆ. ಸೂರ್ಯನು ಆತ್ಮ ಮತ್ತು ದೇಹ ಪ್ರತಿಬಿಂಬಿಸಿದರೆ, ಚಂದ್ರನು ಮನಸ್ಸು ಮತ್ತು ಬುದ್ದಿ ಮೇಲೆ ಪ್ರಭಾವ ಬೀರುತ್ತಾನೆ. ಈ ರೀತಿಯಾಗಿ ದೇಹ ಮತ್ತು ಮನಸ್ಸು ಪರಿಪೂರ್ಣತೆಯನ್ನು ಪಡೆಯುವ ದಿನ ಎಂದು ಹೇಳುವರು. ಅಕ್ಷಯ ತೃತೀಯವು ಇಡೀ ವರ್ಷದಲ್ಲಿ ಬರುವ ಒಂದು ಅತ್ಯಂತ ಶುಭದಿನವಾಗಿದೆ.ಹಾಗಾಗಿ‌ ಮನೆಯಲ್ಲಿ ಪೂಜೆ ಹೋಮ ಹವನಾದಿಗಳನ್ನು ಮಾಡುವುದಾದರೆ ಅಥವಾ ಚಿನ್ನ ಖರೀದಿ ಮಾಡುವುದಾದರೆ ಇದು ಸೂಕ್ತವಾದ ದಿನ.ಇದರಿಂದ ಮತ್ತಷ್ಟು ನಮ್ಮಲ್ಲಿ ಸುಖ ಸಮೃದ್ದಿ ಸಂಪತ್ತು ಹೇರಳವಾಗುತ್ತದೆ.ಅಲ್ಲದೇ ಈ ದಿನದಂದು ವಿಷ್ಣು, ಲಕ್ಷ್ಮಿ ಹಾಗೂ ಕುಬೇರನನ್ನು ಜನರು ಭಕ್ತಿಯಿಂದ ಪೂಜಿಸುತ್ತಾರೆ. ಅಲ್ಲದೇ ಹಿಂದೂ ಪುರಾಣದ ಪ್ರಕಾರ ತ್ರೇತಾಯುಗವು ಆರಂಭವಾದದ್ದು ಈ ಅಕ್ಷಯ ತೃತೀಯದ ಶುಭದಿನದಂದೇ ಎನ್ನುವ ಉಲ್ಲೇಖವಿದೆ.

ಅಕ್ಷಯ ತೃತೀಯಕ್ಕೆ ಪುರಾಣದ ನಂಟು

ವೈಶಾಖ ಮಾಸಕ್ಕೆ ಸೂರ್ಯ ಅಭಿಮಾನಿ ದೇವತೆ. ಸೂರ್ಯನು ಬೆಳಕು ಮತ್ತು ಶಕ್ತಿಯ ಉಗಮ ಸ್ಥಾನ. ಸೂರ್ಯ ಜಗದ ಕಣ್ಣು. ಸೂರ್ಯ ಜಗವನ್ನು ಬೆಳಗುವವನು ಹೌದು. ಅವನ ಆಂತರ್ಯದಲ್ಲಿರುವುದೇ ಪ್ರಬಲವಾದ ಅಗ್ನಿ. ಅಗ್ನಿಯ ಮೊದಲ ಮಗನೇ ಹಿರಣ್ಯ (ಬಂಗಾರ). ಸೂರ್ಯ-ಅಗ್ನಿ-ಬಂಗಾರದ ಸಂಬಂಧ ಹೀಗಿದೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣನೇ ವೈಶ್ವಾನರಾಗ್ನಿಯ ರೂಪದಲ್ಲಿ ನಾನು ಎಲ್ಲರ ಹೃದಯದಲ್ಲಿರುತ್ತೇನೆ ಎಂದು. ವಿಸ್ತರಿಸಿ ಅರ್ಥೈಸುವುದಾದರೆ ನಾವು ಬಂಗಾರವನ್ನು ಧರಿಸಿಕೊಂಡಾಗ ನಮ್ಮ ಹೃದಯವಾಸಿಯಾದ ಅಗ್ನಿಯನ್ನು ಅವನ ಮಗ ಹಿರಣ್ಯ (ಬಂಗಾರ)ನಿಂದಲೇ ಅಲಂಕರಿಸದಂತಾಗುವುದು.
ಅಕ್ಷಯವೆಂದರೆ ಕ್ಷಯವಿಲ್ಲದ್ದು, ಕಡಿಮೆ ಇಲ್ಲದ್ದು, ಕ್ಷೀಣವಾಗದ್ದು, ಕೊನೆಯಿಲ್ಲದ್ದು, ನ್ಯೂನವಿಲ್ಲದ್ದು. ಇದು ಸಮದ್ಧಿಯ ಸಂಕೇತ, ಶುಭಾರಂಭದ ದ್ಯೋತಕ, ನಿರಂತತೆಯ ಪ್ರತೀಕ.ಧರ್ಮವು ಕರ್ತವ್ಯವನ್ನು, ಆಧ್ಯಾತ್ಮಿಕತೆಯನ್ನು ಅರ್ಥವು ಸಂಪತ್ತನ್ನು, ಕಾಮವು ಭೌತಿಕ ಸಂತೋಷವನ್ನು ಸೂಚಿಸುವ ಆಕಾಂಕ್ಷೆಗಳನ್ನು ಸಂಕೇತಿಸಿದರೆ, ಮೋಕ್ಷ ಈ ಭವಬಂಧನದಿಂದ ಮುಕ್ತವಾಗಿ ಏಕತ್ವದಲ್ಲಿ ಲೀನವಾಗುವುದರ ಸಂಕೇತವಾಗಿದೆ. ಈ ನಾಲ್ಕು ಪುರುಷಾರ್ಥಗಳ ಪೈಕಿ ಯಾವುದಾದರೊಂದರ ಆರಂಭ ಮಾಡುವುದಿದ್ದರೂ ಅದಕ್ಕೆ ಎಲ್ಲ ರೀತಿಯಿಂದಲೂ ಅನುಕೂಲಕರವಾದ ಶುಭ ದಿನವೇ ಈ ಅಕ್ಷಯ ತೃತೀಯ.

ಅಕ್ಷಯ ತೃತೀಯ ಮಹತ್ವ ಏನು?

ವಿಷ್ಣು ಅಲಂಕಾರ ಪ್ರಿಯ. ಆತನಿಗೆ ಪ್ರಿಯವಾದ ಹೇಮ (ಚಿನ್ನ) ರಜತಾದಿ ಒಡವೆಗಳನ್ನು ಖರೀದಿಸಿ ಅರ್ಪಿಸಿ ಕೃತಾರ್ಥರಾಗುವರು ಭಾರತೀಯ ಆಸ್ತಿಕರು. ವಿಷ್ಣು ಸಹಸ್ರನಾಮದಲ್ಲಿ ಹೇಳಿದಂತೆ ವಿಷ್ಣು ಸುವರ್ಣ ವರ್ಣದವನು. ಮಾತ್ರವಲ್ಲ, ಅಷ್ಟಶ್ವರ್ಯಗಳ ಅಧಿಪತಿ ಕುಬೇರ. ಈ ಒಂದು ದಿನ ಸ್ವತಃ ಐಶ್ವರ್ಯ ದೇವತೆ ಲಕ್ಷ್ಮಿಯನ್ನು ಪೂಜಿಸುತ್ತಾನೆ ಎಂದು ಲಕ್ಷ್ಮೀತಂತ್ರದಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ದೈವಭಕ್ತರಿಗೆ ಇದೊಂದೇ ದಿನ ಕುಬೇರ ಲಕ್ಷ್ಮೀ ಪೂಜೆ ಮಾಡಲು ಅವಕಾಶ. ವಿಶೇಷವಾಗಿ ತುಪ್ಪದ ದೀಪ ಹಚ್ಚಿ ಪೂಜಿಸಲಾಗುತ್ತದೆ.

ಪುರಾಣ ಪುಣ್ಯ ಕಥೆಗಳಲ್ಲಿ ಅಕ್ಷಯ ತೃತೀಯದ ವಿಶೇಷತೆ

ಈ ದಿನ ಹಲವು ಮಹತ್ಕಾರ್ಯಗಳು ಶುರುವಾದ ದಿನ ಕೃತಯುಗ (ಸತ್ಯ ಯುಗ) ಶುರುವಾದ ದಿನ ಎಂದು ಹೇಳಲಾಗುತ್ತದೆ. ವೇದವ್ಯಾಸರು ಗಣಪತಿ ಆಶೀರ್ವಾದ ಪಡೆದು ಮಹಾಭಾರತ ಬರೆಯಲು ಪ್ರಾರಂಭಿಸಿದ ದಿನ. ಗಂಗಾ ಮಾತೆ ಕೈಲಾಸದಿಂದ ಭೂಮಿಗೆ ಇಳಿದ ದಿನ ಎಂದು ಹೇಳಲಾಗುತ್ತದೆ. ಈ ದಿನ ಹಲವು ಮಹಾತ್ಮರು ಹುಟ್ಟಿದ ದಿನ ಜಗಜ್ಯೋತಿ ಬಸವಣ್ಣ ಹುಟ್ಟಿದ ದಿನ. ಬಲರಾಮ ಜಯಂತಿ ಅನ್ನೂ ಇಂದು ಆಚರಿಸಲಾಗುತ್ತದೆ. ವಿಷ್ಣು ಪರಶುರಾಮನಾಗಿ ಅವತಾರವೆತ್ತಿದ ದಿನ. ಇನ್ನೂ ಹಲವು ಮಹತ್ ಘಟನೆಗಳು ಈ ದಿನ ನಡೆದಿವೆ ಎಂದು ಪುರಾಣಗಳು ಹೇಳುತ್ತವೆ. ಚಾಮುಂಡೇಶ್ವರಿ ರಾಕ್ಷಸರನ್ನು ಸಂಹರಿಸಿದ ದಿನ. ಪಾಂಡವರು ವನವಾಸದಲ್ಲಿದ್ದಾಗ ಕೃಷ್ಣನ ಆದೇಶದಂತೆ ಸೂರ್ಯನನ್ನು ಪ್ರಾರ್ಥಿಸಿ, ದ್ರೌಪದಿ ಅಕ್ಷಯ ಪಾತ್ರೆಯನ್ನು ಪಡೆದಿದ್ದು ಈ ಅಕ್ಷಯ ತೃತೀಯದ ದಿನವೇ. ಪಾಂಡವರು ತಮ್ಮ ವನವಾಸ, ಅಜ್ಞಾತವಾಸದ ನಂತರ ಶಸ್ತ್ರಾಸ್ತ್ರಗಳನ್ನು ಪುನಃ ಪಡೆದ ದಿನ.
ಈ ದಿನ ವಿಷ್ಣು ಮತ್ತು ಲಕ್ಷ್ಮಿ ಗಂಗಾಸ್ನಾನ ಮಾಡಿ, ಗಂಗೆಯನ್ನು ಪುಜಿಸಿದ್ದರೆಂದು. ಅಂದಿನಿಂದ ಗಂಗಾ ಸ್ನಾನ ಮಾಡಿದರೆ ಸಕಲ ದೋಷ ಪರಿಹಾರವಾಗುತ್ತದೆ ಎಂಬ ರೂಢಿ ಬಂದಿತು ಎಂದು ಹೇಳಲಾಗುತ್ತದೆ. ಕೃಷ್ಣನು ಕುಚೇಲನನ್ನು ಸತ್ಕರಿಸಿದ ಪುಣ್ಯ ದಿನ. ಈ ಎಲ್ಲ ವಿಶೇಷತೆಗಳು ನಡೆದದ್ದು ಈ ಅಕ್ಷಯ ತೃತೀಯ ದಿನದಂದೇ ಎಂದು ಪುರಾಣಗಳ ಕಥೆಗಳು ಹೇಳುತ್ತವೆ.

ಇದನ್ನೂ ಓದಿ: Akshaya Tritiya 2024: ಅಕ್ಷಯ ತೃತೀಯದಂದು ಏನು ಮಾಡಬೇಕು, ಏನು ಮಾಡಬಾರದು?

ಜ್ಯೋತಿಷ ಶಾಸ್ತ್ರದ ಮೂಲಕ ಅಕ್ಷಯ ತೃತೀಯ

ಅಕ್ಷಯ ತೃತೀಯ ಯಾವ ನಕ್ಷತ್ರದಲ್ಲಿ ಬಂದರೆ ಹೆಚ್ಚು ಶ್ರೇಷ್ಠ?
ಈ ಹಬ್ಬ ‘ತೃತೀಯ ತಿಥಿ’ (ತದಿಗೆಯ ದಿನ) ಯಲ್ಲಿ ಮತ್ತು ‘ವೃಷಭ ರಾಶಿ’ಯ ದಿನ ಆಚರಣೆ ಮಾಡುತ್ತಾರೆ. ಆದರೆ ಈ ವೃಷಭ ರಾಶಿ ಮತ್ತು ತೃತೀಯ ತಿಥಿ ಎರಡೂ ಜೊತೆಯಲ್ಲಿ ಬರುವಾಗ ಅಂದು ಮೂರು ನಕ್ಷತ್ರಗಳಲ್ಲಿ (ಕೃತಿಕಾ, ರೋಹಿಣಿ, ಮೃಗಶಿರ) ಯಾವುದಾದರೊಂದು ಬರುವ ಸಾಧ್ಯತೆ ಇದೆ. ಅಕ್ಷಯ ತೃತೀಯ, ಶುಕ್ಲ ಪಕ್ಷದ ಮೂರನೇ ದಿನ / ತೃತೀಯ ತಿಥಿ ಯಲ್ಲಿ ಬರುತ್ತದೆ.

7 ಗ್ರಹಗಳು 360 ಡಿಗ್ರಿ ವೃತ್ತದ ಯಾವ ಯಾವ ಡಿಗ್ರಿ ಯಲ್ಲಿ ಉಚ್ಚರಾಗಿರುತ್ತಾರೆ.
ಸೂರ್ಯ: ಮೇಷದ 19ನೇ ಡಿಗ್ರಿ (ಅಂದರೆ 18°00′ – 18°59′); (ಪೂರ್ಣ ವೃತ್ತದ 19ನೆ ಡಿಗ್ರಿ)
ಚಂದ್ರ: ವೃಷಭರಾಶಿಯ 3ನೇ ಡಿಗ್ರಿ; (ಪೂರ್ಣ ವೃತ್ತದ 33ನೆ ಡಿಗ್ರಿ);
ಗುರು: ಕಟಕ ರಾಶಿಯ 15ನೆ ಡಿಗ್ರಿ; (ಪೂರ್ಣ ವೃತ್ತದ 105ನೆ ಡಿಗ್ರಿ);
ಬುಧ: ಕನ್ಯಾ ರಾಶಿಯ 15ನೆ ಡಿಗ್ರಿ; (ಪೂರ್ಣ ವೃತ್ತದ 165ನೆ ಡಿಗ್ರಿ);
ಶನಿ: ತುಲಾ ರಾಶಿಯ 21ನೆ ಡಿಗ್ರಿ; (ಪೂರ್ಣ ವೃತ್ತದ 201ನೆ ಡಿಗ್ರಿ);
ಮಂಗಳ: ಮಕರ ರಾಶಿಯ 28ನೆ ಡಿಗ್ರಿ; (ಪೂರ್ಣ ವೃತ್ತದ 298ನೆ ಡಿಗ್ರಿ);
ಶುಕ್ರ: ಕುಂಭ ರಾಶಿಯ 27ನೆ ಡಿಗ್ರಿ; (ಪೂರ್ಣ ವೃತ್ತದ 327ನೆ ಡಿಗ್ರಿ);

ಡಿಗ್ರಿ ಲೆಕ್ಕಾಚಾರ

ಒಂದು ಪೂರ್ಣ ವೃತ್ತ = 360 ಡಿಗ್ರಿ. ಈ 360 ಡಿಗ್ರಿ ವೃತ್ತವನ್ನ 12 (ರಾಶಿಗಳು) ಭಾಗಗಳಾಗಿ ಮಾಡಿದಾಗ ಒಂದೊಂದು ರಾಶಿಗೆ 30 ಡಿಗ್ರಿ ಆಗುತ್ತದೆ. ಈ 360 ಡಿಗ್ರಿ ವೃತ್ತವನ್ನ 27 ನಕ್ಷತ್ರಗಳಿಗೆ ಹಂಚಿದರೆ ಒಂದೊಂದು ನಕ್ಷತ್ರಕ್ಕೆ 13° 20′ ಬರುತ್ತದೆ. 27 ನಕ್ಷತ್ರಗಳನ್ನ 12 ರಾಶಿಗಳಿಗೆ ಹಂಚಿದರೆ ಒಂದೊಂದು ರಾಶಿಗೆ ಎರಡೂವರೆ ನಕ್ಷತ್ರಗಳು ಬರುತ್ತವೆ. ಒಂದು ನಕ್ಷತ್ರದಲ್ಲಿ ನಾಲ್ಕು ಪಾದಗಳಿರುತ್ತವೆ ಹಾಗಾಗಿ ಒಂದೊಂದು ಪಾದ 3° 20′ ಜಾಗವನ್ನಾಕ್ರಮಿಸುತ್ತದೆ.
ಒಂದು ರಾಶಿಗೆ ಎರಡೂವರೆ ನಕ್ಷತ್ರಗಳಾದ್ದರಿಂದ ಮತ್ತು ಒಂದು ನಕ್ಷತ್ರಕ್ಕೆ 4 ಪಾದಗಳಾದ್ದರಿಂದ ಒಂದು ರಾಶಿಗೆ 9 ಪಾದಗಳು. ಇದು 13° 20′ ಆಗುತ್ತದೆ. ಉದಾಹರಣೆ: ಮೇಷರಾಶಿಯಲ್ಲಿನ 10 ಪಾದ (ಎರಡೂವರೆ ನಕ್ಷತ್ರ) ಗಳು = 4 ಅಶ್ವಿನಿ + 4 ಭರಣಿ + 2 ಕೃತ್ತಿಕಾ = 4×3° 20′ + 4×3° 20’+ 1×3° 20′ = 30ಡಿಗ್ರಿ

ಉದಾಹರಣೆಯಲ್ಲಿ ಹೇಳಿದಂತೆ

ಇದನ್ನೂ ಓದಿ: Akshaya Tritiya 2024: ಅಕ್ಷಯ ತೃತೀಯದಂದು ಚಿನ್ನ ಖರೀದಿಗೆ ಶುಭ ಮುಹೂರ್ತ ಯಾವುದು?

ಮಾಡುವ ಕೆಲಸಕ್ಕೆ ಶುಭ ಫಲ

ಅಕ್ಷಯ ತೃತೀಯ ದಿನದಂದು ಈ ಶುಭ ಮುಹೂರ್ತದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಿದರೆ ಅದರಿಂದ ನೀವು ಶುಭ ಫಲವನ್ನು ಪಡೆದುಕೊಳ್ಳುವಿರಿ. ಅಕ್ಷಯ ತೃತೀಯದಂದು ರೂಪುಗೊಳ್ಳುವ ಈ ಶುಭ ಸಂಯೋಗವು ನಿಮ್ಮ ಜೀವನದಲ್ಲಿ ಶುಭವನ್ನೇ ತರುತ್ತದೆ. ಅಕ್ಷಯ ತೃತೀಯದಂದು ಶುಭಕಾರ್ಯಗಳನ್ನು ಮಾಡಿದರೆ ಹಾಗೂ ದಾನ ಮಾಡಿದರೆ ಹೆಚ್ಚಿನ ಪ್ರತಿಫಲ ಉಂಟಾಗುವುದೆಂಬ ಪ್ರತೀತಿಯಿದೆ. ನಮ್ಮ ಹೆಣ್ಣುಮಕ್ಕಳು ಒಡವೆಯನ್ನು ಖರೀದಿಸಲು ತುಂಬಾ ಇಷ್ಟ ಪಡುತ್ತಾರೆ. ಏಕೆಂದರೆ ಅದು ಕೂಡ ಅಪತ್ಕಾಲಕ್ಕೆ ನೆರವಾಗುವ ಆಸ್ತಿಯಲ್ಲವೇ.!? ಹಾಗೇ ಹೆಣ್ಣಿನ ಸೌಂದರ್ಯದ ಮತ್ತು ಹೆಮ್ಮೆಯ ಪ್ರತೀಕ ಈ ಒಡವೆ. ಅಲ್ಲದೇ ಈ ನಂಬಿಕೆ ತಲಾಂತರಗಳಿಂದ ಇಷ್ಟು ಗಟ್ಟಿಯಾಗಿ ಜನರು ನಂಬಿಕೊಂಡು ಬಂದಿದ್ದಾರೆಂದರೆ ಏನು ಅರ್ಥ? ಆ ದಿನದ ಮಹಿಮೆಯಿಂದ ನಂಬಿದವರ ಜೀವನದಲ್ಲಿ ಒಳ್ಳೆಯದು ಆಗಿದೆ ಎಂದೇ ಅರ್ಥ, ಅಲ್ಲವೇ? ನಮ್ಮ ಭಾರತೀಯ ಪಂಚಾಂಗ ಸುಮ್ಮನೆ ಬಂದಿಲ್ಲ ಅದು ಒಂದು ವಿಜ್ಞಾನ ಎನ್ನುವುದಕ್ಕೆ ಇದು ಕೂಡ ಒಂದು ಸಾಕ್ಷಿ. ಈ ರೀತಿಯಾದ ವೈಜ್ಞಾನಿಕ ಸಂತ್ಯಾಂಶವುಳ್ಳ ಅಕ್ಷಯ ತೃತೀಯ ನಾಡಿನ ಜನತೆಗೆ ಮಾತ್ರವಲ್ಲದೆ ಇಡೀ ವಿಶ್ವಕ್ಕೆ ಉಜ್ವಲತೆಯನ್ನು, ಎಲ್ಲ ಜೀವಿಗಳಿಗೂ ಹಚ್ಚ ಹಸುರಾದ ಸುಖ ಶಾಂತಿಯನ್ನು ನೀಡುವಂತಹ ಪುಣ್ಯಮಯವಾದ ಮಹಾನ್ ಪರ್ವವಾಗಲಿ ಎಂದು ಪ್ರಾರ್ಥಿಸುತ್ತಾ ಈ ರೀತಿಯಾಗಿ ನಾವೇಲ್ಲರೂ
ಅಕ್ಷಯ ತೃತೀಯ ದಿನದ ನಿಜ ಅರ್ಥವನ್ನು ತಿಳಿದು ಆಚರಿಸೋಣ ಸಂಭ್ರಮಿಸೋಣ.
ಲೋಕಾಃ ಸಮಸ್ತಾಃ ಸುಖಿನೋ ಭವಂತು.

Exit mobile version