Site icon Vistara News

Akshaya Tritiya 2024: ಅಕ್ಷಯ ತೃತೀಯದಂದು ಚಿನ್ನ ಖರೀದಿಗೆ ಶುಭ ಮುಹೂರ್ತ ಯಾವುದು?

Akshaya Tritiya 2024

ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯದಂದು ಆಚರಿಸಲ್ಪಡುವ ಹಬ್ಬ ಅಕ್ಷಯ ತೃತೀಯ (Akshaya Tritiya 2024) ಅಥವಾ ಅಕ್ಷಯ ತದಿಗೆ. ಈ ದಿನ ಕೃತ ಯುಗದ ಆರಂಭದ ದಿನ. ವಿಷ್ಣುವಿನ (vishnu) ದಶಾವತಾರಗಳಲ್ಲಿ ಆರನೇ ಅವತಾರವಾದ ಪರಶುರಾಮನ (parasuram) ಹಾಗೂ ಕಲ್ಯಾಣಕ್ರಾಂತಿಯ ರೂವಾರಿ ಬಸವೇಶ್ವರರ (basaweshwara) ಜನ್ಮ ದಿನ. ಭಗೀರಥನ (bhagiratha) ಪ್ರಯತ್ನದಿಂದ ಗಂಗೆ (ganga) ಭೂಮಿಗೆ ಬಂದ ದಿನವೂ ಹೌದು. ಸೂರ್ಯದೇವನು ಯುಧಿಷ್ಠಿರನಿಗೆ ಅಕ್ಷಯ ಪಾತ್ರೆ ನೀಡಿದ ದಿನವೆಂದು ನಂಬಲಾಗುತ್ತದೆ.

ಧಾರ್ಮಿಕ-ಸಾಮಾಜಿಕವಾಗಿ ಮಹತ್ವ ಪಡೆದ ಅಕ್ಷಯ ತೃತೀಯ ವರ್ಷದ ಮೂರೂವರೆ ಶುಭದಿನಗಳಾದ ವಿಜಯದಶಮಿ (vijayadashami), ದೀಪಾವಳಿ (deepavali) ಹಾಗೂ ಬಲಿಪಾಡ್ಯದ ಅರ್ಧದಿನಗಳಲ್ಲಿ ಒಂದಾಗಿದೆ. ಹೀಗಾಗಿ ಈ ದಿನ ಯಾವುದೇ ಶುಭ ಕಾರ್ಯಗಳನ್ನು ನಡೆಸಬಹುದಾಗಿದೆ. ಅಲ್ಲದೆ ಅಕ್ಷಯ ತೃತೀಯವು ಚಿನ್ನ ಖರೀದಿಗೆ ಒಳ್ಳೆಯ ದಿನ ಎಂದೇ ನಂಬಲಾಗುತ್ತದೆ. ಈ ದಿನ ಯಾವುದೇ ವಸ್ತು ಖರೀದಿ ಮಾಡಿದರೂ ಅದು ಅಕ್ಷಯವಾಗುತ್ತದೆ ಎನ್ನುವ ನಂಬಿಕೆ ಇದೆ. ಹೀಗಾಗಿ ಹೆಚ್ಚಿನವರು ಈ ದಿನ ಚಿನ್ನವನ್ನು ಖರೀದಿ ಮಾಡಲು ಆಸಕ್ತಿ ತೋರುತ್ತಾರೆ.

ಯಾವುದೇ ಸಂದರ್ಭ ಇರಲಿ. ದಿನದಲ್ಲಿ ಶುಭ ಸಮಯ ನೋಡಿಕೊಂಡು ಖರೀದಿ ಮಾಡುವುದು ಉತ್ತಮ ಎನ್ನಲಾಗುತ್ತದೆ. ಈ ಬಾರಿ ಅಕ್ಷಯ ತೃತೀಯದಂದು ಚಿನ್ನವನ್ನು ಖರೀದಿಸಲು ಶುಭ ಸಮಯಗಳು ಹೇಗಿದೆ ಎನ್ನುವ ಮಾಹಿತಿ ಇಲ್ಲಿದೆ.


ಶುಭ ಮುಹೂರ್ತ ಯಾವಾಗ?

ಅಖ ತೀಜ್ ಎಂದೂ ಕರೆಯಲ್ಪಡುವ ಅಕ್ಷಯ ತೃತೀಯದ ಹಬ್ಬವನ್ನು ಮೇ 10ರಂದು ಆಚರಿಸಲಾಗುತ್ತದೆ. ವೈಶಾಖ ಮಾಸದ ಶುಕ್ಲ ಪಕ್ಷ ತೃತೀಯದಲ್ಲಿ ಮಂಗಳಕರ ದಿನವನ್ನು ಆಚರಿಸಲಾಗುತ್ತದೆ ಮತ್ತು ಮಹತ್ವದ ಧಾರ್ಮಿಕ ಆಚರಣೆಗಳು ಮತ್ತು ಚಟುವಟಿಕೆಗಳಿಂದ ಗುರುತಿಸಲ್ಪಡುತ್ತದೆ. ಈ ದಿನ ಚಿನ್ನದ ಖರೀದಿಯು ಸಮೃದ್ಧಿ ಮತ್ತು ಯಶಸ್ಸನ್ನು ತರುತ್ತದೆ ಎಂದು ನಂಬಲಾಗಿದೆ. ಅಕ್ಷಯ ತೃತೀಯ 2024ರ ಪೂಜೆ ಮುಹೂರ್ತವು ಮೇ 10ರಂದು ಬೆಳಗ್ಗೆ 5.33ರಿಂದ ಮಧ್ಯಾಹ್ನ 12.18ರವರೆಗೆ ಇರುತ್ತದೆ. ತೃತೀಯ ತಿಥಿಯು ಮೇ 10ರಂದು ಬೆಳಗ್ಗೆ 4.17ಕ್ಕೆ ಪ್ರಾರಂಭವಾಗುತ್ತದೆ ಮತ್ತು ಮರುದಿನ 2.50ಕ್ಕೆ ಮುಕ್ತಾಯಗೊಳ್ಳುತ್ತದೆ.

ಚಿನ್ನ ಖರೀದಿಗೆ ಶುಭ ಸಮಯ

ಚಿನ್ನವನ್ನು ಖರೀದಿಸಲು ಮೇ 9ರಂದು ಬೆಳಗ್ಗೆ 4.17ಕ್ಕೆ ಪ್ರಾರಂಭವಾಗಿ ಮೇ 11ರಂದು ತೃತೀಯ ತಿಥಿ ಮುಗಿಯುವವರೆಗೆ ಇರುತ್ತದೆ. ನವದೆಹಲಿ, ಮುಂಬಯಿ ಮತ್ತು ಬೆಂಗಳೂರಿನಲ್ಲಿ ಅಕ್ಷಯ ತೃತೀಯ 2024ರಂದು ಚಿನ್ನವನ್ನು ಖರೀದಿಸಲು ನಿರ್ದಿಷ್ಟ ಸಮಯದಲ್ಲಿ ಸ್ವಲ್ಪ ಬದಲಾಗುತ್ತದೆ.

ಇದನ್ನೂ ಓದಿ: Akshaya Tritiya 2024: ಅಕ್ಷಯ ತೃತೀಯದಂದು ಏನು ಮಾಡಬೇಕು, ಏನು ಮಾಡಬಾರದು?

ಹೊಸ ದೆಹಲಿಯಲ್ಲಿ ಬೆಳಗ್ಗೆ 5.33ರಿಂದ ಮಧ್ಯಾಹ್ನ 12.18ರವರೆಗೆ, ಮುಂಬಯಿಯಲ್ಲಿ ಬೆಳಗ್ಗೆ 6.6ರಿಂದ ಮಧ್ಯಾಹ್ನ 12.35ರವರೆಗೆ ಮತ್ತು ಬೆಂಗಳೂರಿನಲ್ಲಿ ಬೆಳಗ್ಗೆ 5.56ರಿಂದ ಮಧ್ಯಾಹ್ನ 12.16ರವರೆಗೆ ಚಿನ್ನ ಖರೀದಿ ಮಾಡಲು ಶುಭ ಸಮಯವಾಗಿದೆ.

Exit mobile version