Site icon Vistara News

ಆಕ್ರಮಣಕ್ಕೆ ಒಳಗಾದ ಎಲ್ಲ ದೇಗುಲಗಳ ಮರುನಿರ್ಮಾಣ ಬೇಕಿಲ್ಲ ಎಂದ ಸದ್ಗುರು

ನವದೆಹಲಿ: ಚರಿತ್ರೆಯನ್ನು ತಿದ್ದಿ ಬರೆಯೋದು ಯಾರಿಂದಲೂ ಸಾಧ್ಯವಿಲ್ಲ. ಹೀಗಾಗಿ ಹಿಂದೆ ಆಕ್ರಮಣಕಾರರಿಂದ ಧ್ವಂಸವಾದ ಸಾವಿರಾರು ದೇಗುಲಗಳ ಬಗ್ಗೆ ಈಗ ಮಾತನಾಡುವುದರಲ್ಲಿ ಅರ್ಥವಿಲ್ಲ. ಆಕ್ರಮಣಕ್ಕೆ ಒಳಗಾದ ಎಲ್ಲ ದೇಗುಲಗಳ ಮರು ನಿರ್ಮಾಣ ಬೇಕಿಲ್ಲ ಎಂದಿದ್ದಾರೆ ಧಾರ್ಮಿಕ ಗುರು, ಸದ್ಗುರು ಜಗ್ಗಿ ವಾಸುದೇವ್‌.

ಮಾಧ್ಯಮವೊಂದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು, ಆಕ್ರಮಣದ ಸಂದರ್ಭದಲ್ಲಿ ದೇಶದ ನೂರಾರು ದೇಗುಲಗಳು ಧ್ವಂಸಗೊಂಡಿವೆ. ಆಗ ನಮಗೆ ಅವುಗಳನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಈಗ ಅವುಗಳ ಬಗ್ಗೆ ಮಾತನಾಡುವುದಕ್ಕೆ ಯಾವುದೇ ಅರ್ಥವಿಲ್ಲ. ಯಾಕೆಂದರೆ, ನಾವು ಇತಿಹಾಸವನ್ನು ತಿದ್ದಿ ಬರೆಯಲು ಸಾಧ್ಯವಿಲ್ಲ ಎಂದಿದ್ದಾರೆ.

ಇದನ್ನೂ ಓದಿ | Explainer: ಜ್ಞಾನವಾಪಿ ಮಸೀದಿ ವಿವಾದ: ಹಿಂದೂಗಳಿಗೆ ಅಡ್ಡಿಯಾಗುತ್ತಾ ಪೂಜಾ ಸ್ಥಳಗಳ ಕಾಯಿದೆ ?

ಎರಡೂ ಸಮುದಾಯಗಳು (ಹಿಂದೂ ಮತ್ತು ಮುಸ್ಲಿಂ) ಜತೆಯಾಗಿ ಕುಳಿತು ಚಾರಿತ್ರಿಕ ಮಹತ್ವವಿರುವ ಎರಡು ಮೂರು ಸ್ಥಳಗಳ ಬಗ್ಗೆ ಒಂದು ಕಾರ್ಯಸಾಧು ಕಾರ್ಯತಂತ್ರವನ್ನು ರೂಪಿಸಬೇಕು. ಒಂದು ಬಾರಿಗೆ ಒಂದೇ ಸ್ಥಳದ ಬಗ್ಗೆ ಚರ್ಚಿಸಿ, ವಿವಾದವನ್ನು ದೀರ್ಘ ಕಾಲ ಜೀವಂತವಾಗಿ ಇಡುವುದರಿಂದ ಯಾವುದೇ ಲಾಭವಿಲ್ಲ. ಇದರಿಂದ ಎರಡು ಸಮುದಾಯಗಳ ನಡುವೆ ದ್ವೇಷವನ್ನಷ್ಟೇ ಮುಂದುವರಿಸಬಹುದೇ ಹೊರತು ಬೇರೇನೂ ಲಾಭ ಆಗುವುದಿಲ್ಲ. ಎಲ್ಲ ವಿಚಾರದಲ್ಲೂ ಒಂದು ಕೊಡು-ಕೊಳ್ಳುವಿಕೆ ಇರಬೇಕಾಗುತ್ತದೆ. ಇದೇ ದೇಶವನ್ನು ಮುಂದೆ ತೆಗೆದುಕೊಂಡು ಹೋಗುವ ರೀತಿ. ನಾವು ಹಿಂದೂ ಸಮುದಾಯ-ಮುಸ್ಲಿಂ ಸಮುದಾಯ ಅಂತ ಯೋಚಿಸದೆ ದೇಶ ಎಂದು ಯೋಚಿಸಬೇಕು- ಎಂದು ಸದ್ಗುರು ಹೇಳಿದ್ದಾರೆ. ಆದರೆ ವಾರಾಣಸಿಯ ಜ್ಞಾನವಾಪಿ ಮಸೀದಿಯ ಬಗ್ಗೆ ಯಾವುದೇ ಅಭಿಪ್ರಾಯ ಹೇಳಲು ನಿರಾಕರಿಸಿದರು.

ಭಾರತ ಈಗ ಒಂದು ಸಂಕೀರ್ಣ ಕಾಲಘಟ್ಟದಲ್ಲಿದೆ ಎಂದಿರುವ ಸದ್ಗುರು, ಈ ಹಂತದಲ್ಲಿ ನಾವು ಸರಿಯಾದ ನಿರ್ಧಾರಗಳನ್ನು ತೆಗೆದುಕೊಂಡರೆ ಭಾರತ ಜಗತ್ತಿನಲ್ಲಿ ಒಂದು ಬಲಿಷ್ಠ ಶಕ್ತಿ ಆಗಬಹುದು. ನಾವು ಪ್ರತಿಯೊಂದು ವಿಷಯವನ್ನು ವಿವಾದದ ರೂಪಕ್ಕೆ ಪರಿವರ್ತಿಸಬಾರದು. ಮಾಧ್ಯಮಗಳಾದರೂ ಮಂದಿರ -ಮಸೀದಿ ವಿಚಾರಗಳನ್ನು ವಿವಾದವಾದಿ ಪರಿವರ್ತಿಸದೆ ಪರಿಹಾರದ ಬಗ್ಗೆ ನಡೆಯಬೇಕು ಎಂದು ಹೇಳಿದರು.

ಇದನ್ನೂ ಓದಿ | ಜ್ಞಾನವಾಪಿ ಮಸೀದಿ ವಿಚಾರಣೆ ವಾರಾಣಸಿ ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾಯಿಸಿದ ಸುಪ್ರೀಂಕೋರ್ಟ್‌

ʻʻಇತ್ಯರ್ಥ ಮಾಡಲಾಗದ ಸಮಸ್ಯೆಗಳು ಯಾವುದೂ ಇಲ್ಲ. ಜನರ ಹೃದಯದಲ್ಲಿ ನೋವು ಇದೆ. ಹಾಗಾಗಿ, ಸುಖಾಸುಮ್ಮನೆ ಕೊನೆಯೇ ಇಲ್ಲದ ವಾದವಿವಾದಗಳಲ್ಲಿ ಮುಳುಗುವುದಕ್ಕಿಂತ ಕುಳಿತು ಮಾತುಕತೆ ನಡೆಸಬೇಕು. ಯಾರೂ ಕೂಡಾ ಇದರಿಂದ ರಾಜಕೀಯ ಮೈಲೇಜ್‌ ತೆಗೆದುಕೊಳ್ಳುವಂತಾಗಬಾರದು. ಹಾಗಾಗಿ, ರಾಜಕಾರಣಿಗಳು ಮತ್ತು ರಾಜಕೀಯವನ್ನು ಬಿಟ್ಟು ಈ ವಿಚಾರದ ಚರ್ಚೆ ನಡೆಯಬೇಕು ಎಂದು ಹೇಳಿದ್ದಾರೆ ಜಗ್ಗಿ ವಾಸುದೇವ್‌.

Exit mobile version