ಹೊಸದಿಲ್ಲಿ: ಅಮರನಾಥ ಯಾತ್ರೆ (Amarnath yatra)ಗೆ ಹೋಗುವವರ ವಸತಿ, ಸುರಕ್ಷತೆ ಮತ್ತು ಸಂಭಾವ್ಯ ತುರ್ತು ಸ್ಥಿತಿಗಳನ್ನು ಎದುರಿಸಲು ಕೇಂದ್ರ ಹಾಗೂ ಜಮ್ಮು-ಕಾಶ್ಮೀರ ಸರಕಾರವು ವಿಶೇಷ ವ್ಯವಸ್ಥೆಗಳನ್ನು ಏರ್ಪಡಿಸುತ್ತಿವೆ. ಎಲ್ಲಾ ಅಮರನಾಥ ಯಾತ್ರಾರ್ಥಿಗಳನ್ನು ಗುರುತಿಸಲು ವಿಶಿಷ್ಟವಾದ ರೇಡಿಯೊ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ (ಆರ್‌ಎಫ್‌ಐಡಿ) ಟ್ಯಾಗ್‌ಗಳನ್ನು ನೀಡುವ ಮೂಲಕ ಸತತ ಸಂಪರ್ಕದಲ್ಲಿರಲು ಅನುಕೂಲ ಮಾಡಿಕೊಡಲಿದೆ.
ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲಿ, ತಾ ಯಾತ್ರಿಕರು ಎಲ್ಲಿದ್ದಾರೆ, ಯಾವ ಪರಿಸ್ಥಿತಿಯಲ್ಲಿದ್ದಾರೆ ಎನ್ನುವುದರ ಮೇಲೆ 24×7 ನಿಗಾ ವಹಿಸಲು ಆರ್‌ಎಫ್ಐಡಿ ಟ್ಯಾಗ್ ನೆರವಾಗಲಿದೆ.
ಜೂನ್ 30ರಂದು ಪವಿತ್ರ ಅಮರನಾಥ ಯಾತ್ರೆ (Amarnath yatra) ಪ್ರಾರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಯಾತ್ರೆಯ ಸಿದ್ಧತೆಗಳು ಮತ್ತು ಪೂರಕ ಬೆಂಬಲ ವ್ಯವಸ್ಥೆ (ಲಾಜಿಸ್ಟಿಕ್ಸ್) ಯನ್ನು ಪರಿಶೀಲಿಸಲು ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಮಂಗಳವಾರ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿದರು.
ಭಕ್ತರು ಸುಲಭವಾಗಿ ಮತ್ತು ಯಾವುದೇ ತೊಂದರೆಗಳಿಲ್ಲದೆ ಪವಿತ್ರ ಗುಹಾದೇವಾಲಯದ ದರ್ಶನವನ್ನು ಮಾಡಲು ಅನುವು ಮಾಡಿಕೊಡುವುದು ಸರ್ಕಾರದ ಆದ್ಯತೆಯಾಗಿದೆ ಎಂದು ಅವರು ಹೇಳಿದರು. ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಕೇಂದ್ರ ಮತ್ತು ಜಮ್ಮು-ಕಾಶ್ಮೀರದ ಭದ್ರತಾ ಮುಖ್ಯಸ್ಥರು ಸಭೆಯಲ್ಲಿ ಉಪಸ್ಥಿತರಿದ್ದರು.
ಮಾರ್ಚ್‌ನಲ್ಲಿ ಕಾಶ್ಮೀರ ಕಣಿವೆಗೆ 1.8 ಲಕ್ಷ ಪ್ರವಾಸಿಗರ ಲಗ್ಗೆ: ದಶಕದ ದಾಖಲೆ
ಬೆದರಿಕೆಗಳ ಕುರಿತು ಚರ್ಚೆ
ಯಾತ್ರೆಗೆ ಸಂಭವನೀಯ ಬೆದರಿಕೆಗಳ ಕುರಿತು ಗುಪ್ತಚರ ಸಂಸ್ಥೆಗಳು ಮತ್ತು ಜಮ್ಮು-ಕಾಶ್ಮೀರ ಪೊಲೀಸರು ನೀಡಿರುವ ಮಾಹಿತಿಗಳು ಹಾಗೂ ಈ ಮಾಹಿತಿಗಳ ಮೌಲ್ಯಮಾಪನ ಆಧರಿಸಿ ಕೈಗೊಂಡ ನಿರ್ಣಯಗಳನ್ನು ಈ ಸಭೆಯಲ್ಲಿ ಹಂಚಿಕೊಳ್ಳಲಾಯಿತು. ರಾಜ್ಯದ ಭದ್ರತಾ ಪರಿಸ್ಥಿತಿಯನ್ನು ಪರಿಶೀಲಿಸಲು ವಿಸ್ತೃತ ಸಭೆಯನ್ನು ಸಹ ನಡೆಸಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂದೂ ಅಲ್ಪಸಂಖ್ಯಾತರ ಮೇಲೆ ಭಯೋತ್ಪಾದಕರ ಸಂಭಾವ್ಯ ದಾಳಿಯ ಹಿನ್ನೆಲೆಯಲ್ಲಿ ಯಾತ್ರೆಯ ಅಪಾಯಗಳನ್ನು ಇದೇ ಸಂದರ್ಭದಲ್ಲಿ ವಿಮರ್ಶಿಸಲಾಯಿತು.
ಎಲ್ಲಾ ಯಾತ್ರಾರ್ಥಿಗಳು ಮತ್ತು ಕುದುರೆಗಳು ಸೇರಿದಂತೆ ಇತರ ಭಾಗವಹಿಸುವವರಿಗೆ ಆರ್‌ಎಫ್‌ಐಡಿ ಟ್ಯಾಗ್‌ಗಳು ಮತ್ತು ಮಾರ್ಗದುದ್ದಕ್ಕೂ ಸಿಆರ್‌ಪಿಎಫ್ ಸಿಬ್ಬಂದಿಯ ನಿಯೋಜನೆ ಮಾಡಲಾಗುತ್ತಿದೆ. ಅಷ್ಟೇ ಅಲ್ಲದೆ, ಬೆದರಿಕೆಗಳನ್ನು ಪತ್ತೆಹಚ್ಚಲು ಡ್ರೋನ್‌ಗಳ ಬಳಕೆ ಕೂಡ ಭದ್ರತಾ ಯೋಜನೆಯುಲ್ಲಿ ಸೇರಿದೆ.
ಸಭೆಯ ಬಳಿಕ ಟ್ವೀಟ್ ಮಾಡಿದ ಸಚಿವ ಅಮಿತ್ ಶಾ, ಎಲ್ಲಾ ಯಾತ್ರಿಗಳಿಗೆ ತಲಾ 5 ಲಕ್ಷ ರೂಪಾಯಿಗಳ ವಿಮಾ ರಕ್ಷಣೆಯನ್ನೂ ಒದಗಿಸಲಾಗುವುದು ಎಂದು ತಿಳಿಸಿದ್ದಾರೆ. ಯಾತ್ರಿಕರು ಸುಲಭವಾಗಿ ಹಣ ಪಾವತಿಸಲು ಮತ್ತು ವಸತಿ ತಾಣದಲ್ಲಿ ತಂಗಲು ಸಾಧ್ಯವಾಗುವಂತೆ ದಾರಿಯುದ್ದಕ್ಕೂ ಎಂಟು ಟೆಂಟ್‌ಗಳನ್ನು ಕುಂಭಮೇಳದ ಮಾದರಿಯಲ್ಲಿ ಸಜ್ಜುಗೊಳಿಸಲಾಗುತ್ತಿದೆ.
ಉಚಿತ ಮತ್ತು ಪಾವತಿ ಆಧರಿತ ವ್ಯವಸ್ಥೆ
ಯಾತ್ರಿಕರ ತಡೆರಹಿತ ಸಂಚಾರ, ವಸತಿ, ವಿದ್ಯುತ್, ನೀರಿನ ವ್ಯವಸ್ಥೆ, ಸಂವಹನ ವ್ಯವಸ್ಥೆ ಮತ್ತು ಆರೋಗ್ಯ ವ್ಯವಸ್ಥೆ ಮಾಡಲು ಸೂಚನೆಗಳನ್ನು ನೀಡಲಾಯಿತು. ಸರಕಾರದ ಉಚಿತ ವಸತಿ ವ್ಯವಸ್ಥೆಯ ಜತೆ ಜತೆಗೇ ಪಾವತಿ ಆಧರಿತ ವಸತಿ ವ್ಯವಸ್ಥೆಯೂ ಹೆಚ್ಚುವರಿಯಾಗಿ ಲಭ್ಯವಿರುತ್ತದೆ.
ಬಾಲ್ತಾಲ್ ಮತ್ತು ಚಂದನ್ವಾರಿಯಲ್ಲಿ 6,000 ಅಡಿ ಎತ್ತರದಲ್ಲಿ ಕನಿಷ್ಠ 30 ಹಾಸಿಗೆಗಳನ್ನು ಹೊಂದಿರುವ ತಾತ್ಕಾಲಿಕ ಆಸ್ಪತ್ರೆಗಳನ್ನು ಸಜ್ಜುಗೊಳಿಸಲಾಗುತ್ತಿದೆ. ಶ್ರೀನಗರದಲ್ಲಿ 100 ಹಾಸಿಗೆಗಳ ತಾತ್ಕಾಲಿಕ ಆಸ್ಪತ್ರೆಯನ್ನು ನಿರ್ಮಿಸಲಾಗುತ್ತಿದೆ. ಜಮ್ಮುವಿನಲ್ಲಿರುವ ಡಿಆರ್‌ಡಿಓ ಆಸ್ಪತ್ರೆಯು ಜಮ್ಮು ಕಡೆಯಿಂದ ಪ್ರಯಾಣಿಸುವ ಯಾತ್ರಿಗಳ ಅಗತ್ಯಗಳನ್ನು ಪೂರೈಸುತ್ತದೆ.
ಅನಂತನಾಗ್‌ನಿಂದ ಅಮರನಾಥ ಗುಹೆಯವರೆಗೆ ಓಎಫ್‌ಸಿ ನೆಟ್‌ವರ್ಕ್ ಅನ್ನು ಹಾಕುವುದು ಮತ್ತು ಉತ್ತಮ ಸಂಪರ್ಕಕ್ಕಾಗಿ ಮಾರ್ಗದಲ್ಲಿ ಸುಮಾರು 42 ಹೊಸ ಗೋಪುರಗಳನ್ನು ನಿರ್ಮಿಸುವುದು ಸೌಲಭ್ಯಗಳ ಮೇಲ್ದರ್ಜೆ ಕಾರ್ಯದಲ್ಲಿ ಸೇರಿವೆ. ಹೆಲಿಕಾಪ್ಟರ್ ಸೇವೆಗಳ ಆವರ್ತನವನ್ನು ಸಹ ಹೆಚ್ಚಿಸಲಾಗುವುದು. 15 ಸ್ವಯಂಚಾಲಿತ ಹವಾಮಾನ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದ್ದು, ಇವುಗಳು ಪ್ರತಿ ಆರು ಗಂಟೆಗಳ ಅವಧಿಗೆ ಹವಾಮಾನ ಬುಲೆಟಿನ್‌ಗಳನ್ನು ಒದಗಿಸುತ್ತವೆ. ಭೂಕುಸಿತದ ಸಂದರ್ಭದಲ್ಲಿ ಮಣ್ಣು ತೆರವು ಮಾಡಿ ಮಾರ್ಗವನ್ನು ತೆರೆಯಲು ಸಾಕಷ್ಟು ಅರ್ತ್ ಮೂವರ್‌ಗಳನ್ನು ನಿಯೋಜಿಸಲು ನಿರ್ದೇಶನಗಳನ್ನು ನೀಡಲಾಗಿದೆ.
ಜಮ್ಮು ಕಾಶ್ಮೀರಕ್ಕೆ ₹20,000 ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳು: ಪ್ರಧಾನಿ ಮೋದಿ ಚಾಲನೆ