ಗಂಗಾವತಿ: ತಾಲೂಕಿನ ಆನೆಗೊಂದಿ ಸಮೀಪದ ಗಡ್ಡೆಯಲ್ಲಿನ ವೃಂದಾವನಕ್ಕೆ ಸಂಬಂಧಿಸಿದ ವಿವಾದ ತಾರಕಕ್ಕೇರಿರುವ ಹಿನ್ನೆಲೆಯಲ್ಲಿ ಅಲ್ಲಿ ಯಾವುದೇ ವಿಶೇಷ ಆಚರಣೆ ನಡೆಸದಂತೆ ನಿರ್ಬಂಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಮಂತ್ರಾಲಯದ ಶ್ರೀ ರಾಯರ ಮಠದವರು ಜುಲೈ ೧೬ರಿಂದ ೧೮ರವರೆಗೆ ಜಯತೀರ್ಥರ ಆರಾಧನಾ ಮಹೋತ್ಸ ವವನ್ನು ಮತ್ತು ಉತ್ತರಾಧಿಮಠದವರು ಜುಲೈ ೧೪ರಿಂದ ೨೦ರವರೆಗೆ ರಘುವರ್ಯ ತೀರ್ಥರ ಮಹಿಮೋತ್ಸವ ಕಾರ್ಯಕ್ರಮ ನಡೆಸಲು ನಿರ್ಧರಿಸಿದ್ದರು. ಒಂದೇ ವಾರದಲ್ಲಿ ಈ ಎರಡು ಮಠದವರು ಆರಾಧನೆ ಹಾಗೂ ಉತ್ಸವ ಹಮ್ಮಿಕೊಂಡ ಹಿನ್ನೆಲೆಯಲ್ಲಿ ಭಕ್ತರಲ್ಲಿ ಗೊಂದಲ ಉಂಟಾಗಿತ್ತು.
ಹೀಗಾಗಿ ಜುಲೈ 14 ರಿಂದ ಜುಲೈ 20 ರವರೆಗೆ ಯಾವುದೇ ವಿಶೇಷ ಆಚರಣೆಗಳನ್ನು ನಡೆಸದಂತೆ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಆದೇಶದಲ್ಲಿ ಸೂಚಿಸಿದ್ದಾರೆ.
ತುಂಗಭದ್ರಾ ನಡುಗಡ್ಡೆಯಲ್ಲಿರುವ ನವವೃಂದಾವನ ಮಾಧ್ವಮತ ಅನುಯಾಯಿಗಳ ಪವಿತ್ರ ಧಾರ್ಮಿಕ ತಾಣವಾಗಿದೆ. ಎರಡೂ ಮಠದವರು ಆರಾಧನೆ ಮತ್ತು ಉತ್ಸಹ ನಡೆಸಲು ಅನುಮತಿ ಕೋರಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರು. ಈ ಸಂಬಂಧ ಉಭಯ ಮಠಗಳ ಭಕ್ತರು ಶ್ರೀಗಳ ನೇತೃತ್ವದಲ್ಲಿ ಪರಸ್ಪರ ಚರ್ಚಿಸಿ ಒಮ್ಮತದ ನಿರ್ಧಾರ ಕೈಗೊಂಡು ಶಾಂತಿ, ಸೌಹಾರ್ದಯುತ ಧಾರ್ಮಿಕ ಆಚರಣೆ ಮಾಡುವಂತೆ ಜಿಲ್ಲಾಡಳಿತ ಸಲಹೆ ನೀಡಿತ್ತು. ಎರಡೂ ಮಠಗಳ ನಡುವೆ ಭಿನ್ನಾಭಿಪ್ರಾಯ ಮುಂದುವರಿದಿರುವುದರಿಂದ ಜಿಲ್ಲಾಡಳಿದ ರಾಜಿಸೂತ್ರ ಜಾರಿಯಾಗಿಲ್ಲ.
ರಾಜಿಗೆ ಒಪ್ಪದ ಉತ್ತರಾಧಿಮಠ
ರಾಜಿ ಸಂದರ್ಭದಲ್ಲಿ ಶ್ರೀ ರಾಯರ ಮಠದವರು ಉತ್ತರಾಧಿ ಮಠದವರಿಗೆ ಶ್ರೀ ಜಯತೀರ್ಥರ ಆರಾಧನೆಯನ್ನು ಆಚರಿಸಲು ಸಂಪೂರ್ಣವಾಗಿ ಒಪ್ಪಿಗೆ ಇರುವುದಾಗ ಲಿಖಿತ ಹೇಳಿಕೆ ನೀಡಿದ್ದರು. ಆದರೆ ಶ್ರೀ ಉತ್ತರಾಧಿಮಠದವರು ಅದೇ ದಿನ ಮತ್ತು ಅದೇ ಸ್ಥಳದಲ್ಲಿ ಯಾವುದೇ ಕಾರಣಕ್ಕೂ ಎರಡೂ ಮಠಗಳ ಭಕ್ತರು ಕೂಡಿಕೊಂಡು ಆರಾಧನೆ/ ಮಹೋತ್ಸವ ಆಚರಣೆ ಮಾಡಲು ನಮ್ಮ ಒಪ್ಪಿಗೆ ಇಲ್ಲ ಎಂದು ಲಿಖಿತವಾಗಿ ತಿಳಿಸಿದ್ದರು. ಹೀಗಾಗಿ ಉಭಯ ಕಾರ್ಯಕ್ರಮಗಳನ್ನು ನಡೆಸದಂತೆ ನಿಷೇದಾಜ್ಞೆ ಜಾರಿ ಮಾಡುವುದು ಸೂಕ್ತವಿರುತ್ತದೆ ಎಂದು ಉಪವಿಭಾಗಾಧಿಕಾರಿಗಳು ವರದಿ ಸಲ್ಲಿಸಿದ್ದರಿಂದ ಜಿಲ್ಲಾಧಿಕಾರಿಗಳು ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ನಿರ್ಬಂಧಿಸಿರುವ ಸಮಯದಲ್ಲಿ ಉಭಯ ಮಠದ ತಲಾ ಒಬ್ಬರು ಅರ್ಚಕರು ಮಾತ್ರ ದಿನ ನಿತ್ಯದ ಪೂಜೆಗೆ ಮಾತ್ರ ಅವಕಾಶ ನೀಡಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಅಗತ್ಯ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿಗಳು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಸೂಚನೆಯನ್ನೂ ನೀಡಿದ್ದಾರೆ.
ಏನಿದು ವಿವಾದ?
ಗಂಗಾವತಿ ತಾಲೂಕಿನ ಆನೆಗೊಂದಿ ಬಳಿಯ ನವ ವೃಂದಾವನ ಗಡ್ಡೆಯಲ್ಲಿರುವ ವೃಂದಾವನಕ್ಕೆ ಉತ್ತರಾದಿಮಠದವರು ರಘುವರ್ಯ ತೀರ್ಥರ ವೃಂದಾವನ ಎಂದು ಕರೆದರೆ, ರಾಯರ ಮಠದವರು ಜಯತೀರ್ಥರ ವೃಂದಾವನ ಎಂದು ಕರೆಯುತ್ತಿದ್ದಾರೆ. ಇದರಿಂದಾಗಿ ಉಭಯ ಮಠಗಳ ಭಕ್ತರಲ್ಲಿ ಈ ಬಗ್ಗೆ ಗೊಂದಲಗಳಿವೆ.
ಧಾರ್ಮಿಕ, ಶ್ರದ್ಧಾಕೇಂದ್ರವಾಗಿರುವ ನವವೃಂದಾವನ ಗಡ್ಡೆಯ ಆಸ್ತಿ ವಿಚಾರಕ್ಕೆ ಸಂಬಂಧಪಟ್ಟಂತೆ ಹಲವು ವರ್ಷಗಳಿಂದ ರಾಯರ ಮಠ ಮತ್ತು ಉತ್ತರಾಧಿಮಠದ ನಡುವೆ ಜಗಳ ನಡೆಯುತ್ತಿದ್ದು, ಈ ವಿವಾದ ಇನ್ನೂ ತಾರ್ಕಿಕ ಅಂತ್ಯ ಕಂಡಿಲ್ಲ.
ಇದನ್ನೂ ಓದಿ|ಮತ್ತೆ ಶುರುವಾಯ್ತು ಉತ್ತರಾದಿ ಮಠ ವರ್ಸಸ್ ರಾಯರ ಮಠ