ಆನೇಕಲ್: ಮೂಕಜೀವಿಗಳ ನಡೆಯು ಒಮ್ಮೊಮ್ಮೆ ಜನರಲ್ಲಿ ಅಚ್ಚರಿಯನ್ನು (Miracle)ಮೂಡಿಸುತ್ತದೆ. ಬೆಂಗಳೂರು ಹೊರವಲಯದ ಆನೇಕಲ್ (Anekal News) ತಾಲೂಕಿನ ಸರ್ಜಾಪುರದ ರಾಮನಾಯಕನಹಳ್ಳಿಯಲ್ಲಿರುವ ದೇವಸ್ಥಾನದ ಬಾಗಿಲಿನಲ್ಲಿ ಕೈ ಮುಗಿದು ಕೋತಿಯೊಂದು ಪ್ರಾಣ ಬಿಟ್ಟಿದೆ. ರಾಮನಾಯಕನಹಳ್ಳಿಯಲ್ಲಿರುವ ವೀರಾಂಜನೇಯ ಸ್ವಾಮಿ ದೇವಾಲಯದ (Veeranjaneya Swamy Temple) ಮುಖ್ಯ ದ್ವಾರದ ಬಳಿಯೇ ಕೋತಿ ಮೃತಪಟ್ಟಿದ್ದಕ್ಕೆ, ಜನರೆಲ್ಲರೂ ಇದೊಂದು ಪವಾಡ ಎನ್ನುತ್ತಿದ್ದಾರೆ.
ದಿನನಿತ್ಯ ದೇವಾಲಯದ ಬಳಿ ಕೋತಿ ಓಡಾಡಿಕೊಂಡಿತ್ತು. ನಿನ್ನೆ ಸೋಮವಾರ ಭೀಮನ ಅಮಾವಾಸ್ಯೆ ಹಿನ್ನೆಲೆ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿತ್ತು. ಅರ್ಚಕರು ಸಂಜೆ ಪೂಜೆ ಮುಗಿಸಿ ದೇವಾಲಯ ಬಾಗಿಲು ಹಾಕಿಕೊಂಡು ಹೋಗಿದ್ದರು. ಇಂದು ಬೆಳಗ್ಗೆ ಅರ್ಚಕರು ದೇಗುಲದ ಬಾಗಿಲು ತೆರೆಯಲು ಬಂದಾಗ ಕೋತಿ ಬಾಗಿಲಿನ ಹೊಸ್ತಿಲಿನಲ್ಲಿ ತಲೆ ಇಟ್ಟು ಕೊನೆಯುಸಿರೆಳೆದಿರುವುದು ಕಂಡು ಬಂದಿದೆ.
ಇದನ್ನೂ ಓದಿ: Video Viral : ರಾಯಚೂರು YTPS ಬಳಿ ಕಂಡ ಅನಕೊಂಡ ಮಾದರಿಯ ಹೆಬ್ಬಾವು!
ನೂರು ವರ್ಷಗಳ ಇತಿಹಾಸ
ವೀರಾಂಜನೇಯ ಸ್ವಾಮಿ ದೇವಾಲಯಕ್ಕೆ ನೂರು ವರ್ಷಗಳ ಇತಿಹಾಸವಿದೆ. ಕೊತ್ತೊಳ್ಳು ಮುನಯ್ಯ ಎಂಬುವವರ ಜಮೀನಿನಲ್ಲಿ ದೇವಾಲಯ ಇದ್ದ ಕಾರಣಕ್ಕೆ ಅವರು, ದಾನವಾಗಿ ಜಾಗವನ್ನು ನೀಡಿದರು. ಬಳಿಕ ಕೊತ್ತೊಳ್ಳು ಮುನಯ್ಯ ದಂಪತಿ ಕಾಶಿಗೆ ಹೊರಟು ಹೋದರು. ಊರಿನ ಅರ್ಚಕರಾದ ರಾಮಕೃಷ್ಣಯ್ಯ ಅವರು ಪೂಜೆ ಮಾಡಿಕೊಂಡು ಬಂದಿದ್ದರು. ಸದ್ಯ ರಾಮಕೃಷ್ಣಯ್ಯ ಅವರ ಕುಟುಂಬದ ಅರ್ಚಕ ಸುದರ್ಶನ್ ಪೂಜೆ ಸಲ್ಲಿಸುತ್ತಾ ಬಂದಿದ್ದಾರೆ.
ಅರ್ಚಕ ಸುದರ್ಶನ್ ಮಂಗಳವಾರ ಎಂದಿನಂತೆ ಬೆಳಗ್ಗೆ ದೇವಸ್ಥಾನಕ್ಕೆ ಬಂದಾಗ, ಕೋತಿ ದೇಗುಲದ ಹೊಸ್ತಿಲಿನಲ್ಲಿ ಮಲಗಿದ್ದು ಕಂಡಿದ್ದಾರೆ. ಅಚ್ಚರಿಗೊಂಡು ಹತ್ತಿರ ಬಂದು ನೋಡಿದಾಗ ಹನುಮನಿಗೆ ಕೈ ಮುಗಿದ ರೀತಿಯಲ್ಲಿ ಕೋತಿ ಪ್ರಾಣ ಬಿಟ್ಟಿದೆ. ಮುಖ್ಯ ದ್ವಾರದ ಬಳಿ ಕೋತಿ ಐಕ್ಯವಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಜಮಾಯಿಸಿದ್ದಾರೆ. ಹೊಸ್ತಿಲಿನಲ್ಲೇ ಕೋತಿಗೆ ಹೂವಿನ ಹಾರವನ್ನು ಹಾಕಿ ಪೂಜೆ ಸಲ್ಲಿಸಿದ್ದಾರೆ. ದೇವಾಲಯದ ಬಲ ಭಾಗದಲ್ಲಿ ಅಂತಿಮ ಸಂಸ್ಕಾರಕ್ಕೆ ಗ್ರಾಮಸ್ಥರು ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ