Site icon Vistara News

ರಾಯರ ಆರಾಧನೆ | ಮಹಾರಥೋತ್ಸವದ ಆಕರ್ಷಣೆ ಹೆಚ್ಚಿಸಿದ ಕರ್ನಾಟಕದ ಕಲಾತಂಡಗಳು

Uttararadhana

ಮಂತ್ರಾಲಯ: ಕಲಿಯುಗದ ಕಲ್ಪತರು ಶ್ರೀ ರಾಘವೇಂದ್ರಸ್ವಾಮಿಗಳ ಉತ್ತರಾರಾಧನೆಯ ಅಂಗವಾಗಿ ಭಾನುವಾರ ಮಹಾರಥೋತ್ಸವವು ವಿಜೃಂಭಣೆಯಿಂದ ನಡೆಯಿತು. ಶ್ರೀ ಸುಬುಧೇಂದ್ರ ತೀರ್ಥರು ಮಹಾರಥೋತ್ಸವಕ್ಕೆ ಚಾಲನೆ ನೀಡಿದರು. ಕರ್ನಾಟಕದ ವಿವಿಧ ಭಾಗಗಳಿಂದ ಆಗಮಿಸಿದ್ದ ಕಲಾತಂಡಗಳು ಪ್ರದರ್ಶನ ನೀಡಿದ್ದು, ವಿಶೇಷ ಆಕರ್ಷಣೆಯಾಗಿತ್ತು.

ಡಾ. ಶ್ರೀ ಸುಬುಧೇಂದ್ರ ತೀರ್ಥರಿಂದ ವಿಶೇಷ ಪೂಜೆ

ರಾಯರು ವೃಂದಾವನಸ್ಥರಾದ ಮರುದಿನವನ್ನ ಉತ್ತರರಾಧಾನೆಯಾಗಿ ಆಚರಿಸಲಾಗುತ್ತದೆ. ಇಂದು ರಾಯರು ಬಹಿರ್ಮುಖರಾಗಿ ರಾಜಬೀದಿಗಳಲ್ಲಿ ಸಂಚರಿಸುತ್ತಾರೆ ಅನ್ನುವ ನಂಬಿಕೆಯಿದೆ. ಹೀಗಾಗಿ ರಥೋತ್ಸವಕ್ಕೆ ಸಾವಿರಾರು ಭಕ್ತರು ಆಗಮಿಸಿದ್ದರು. ಮೊದಲಿಗೆ ನಿರ್ಮಾಲ್ಯ ವಿಸರ್ಜನೆ, ಪಂಚಾಮೃತ ಅಭಿಷೇಕ, ಮೂಲರಾಮದೇವರಿಗೆ ವಿಶೇಷ ಪೂಜೆ ನಡೆಯಿತು. ಶ್ರೀಗಳಿಂದ ರಾಯರಿಗೆ ಬಣ್ಣಗಳ ಸಮರ್ಪಣೆ ನಡೆಯಿತು. ವಿವಿಧ ಬಣ್ಣಗಳನ್ನ ಗುರುರಾಯರಿಗೆ ಸಮರ್ಪಿಸಿ ಶ್ರೀಗಳು ಹಾಗೂ ಮಠದ ಸಿಬ್ಬಂದಿ ವಸಂತೋತ್ಸವ ಆಚರಿಸಿದರು.

ಶ್ರೀಗಳು ಹಾಗೂ ಮಠದ ಸಿಬ್ಬಂದಿಯಿಂದ ವಸಂತೋತ್ಸವ ಆಚರಣೆ

ಉತ್ತರಾರಾಧನೆ ನಿಮಿತ್ತ ಉತ್ಸವ ಮೂರ್ತಿ ಪ್ರಹ್ಲಾದರಾಜರ ಮೆರವಣಿಗೆಯು ಗುರುಕುಲದಿಂದ ಶ್ರೀ ಮಠಕ್ಕೆ ಆಗಮಿಸಿತು. ಮಠದ ಪೀಠಾಧಿಪತಿ ಡಾ. ಶ್ರೀ ಸುಬುಧೇಂದ್ರ ತೀರ್ಥರು ಮಹಾರಥೋತ್ಸವಕ್ಕೆ ಚಾಲನೆ ನೀಡಿದರು. ಬಳಿಕ ಶ್ರೀಗಳು ಪ್ರತಿ ವರ್ಷದಂತೆ ಈ ವರ್ಷವೂ ಹೆಲಿಕಾಪ್ಟರ್ ಮೂಲಕ ರಥಕ್ಕೆ ಪುಷ್ಪ ನಮನ ಸಲ್ಲಿಸಿದರು.

ಮಹಾ ರಥೋತ್ಸವದ ವೇಳೆ ಶ್ರೀ ಸುಭುದೇಂದ್ರ ತೀರ್ಥರು ಆಶೀರ್ವಚನ ನೀಡಿ, ಭಕ್ತರು ಬೇಡಿದ ವರವನ್ನು ರಾಯರ ಕರುಣಿಸಲಿ ಎಂದು ಹಾರೈಸಿದರು. ಕೊರೊನಾ ಕಡಿಮೆಯಾದ ಹಿನ್ನೆಲೆಯಲ್ಲಿ ಇಂತಹ ಉತ್ಸವ ನಡೆಸಲು ಸಾಧ್ಯವಾಗಿದೆ ಎಂದು ಶ್ರೀಗಳು ಕಳೆದ ಎರಡು ವರ್ಷ ಸರಿಯಾಗಿ ಆರಾಧನೆ ನಡೆಸಲಾಗದಿದ್ದುದ್ದನ್ನು ಸ್ಮರಿಸಿದರು. ಇಡೀ‌ ಜಗತ್ತಿನಲ್ಲಿ ಶಾಂತಿ ಸುವ್ಯವಸ್ಥೆ ನೆಲೆಸಲಿ ಎಂದು ಹಾರೈಸಿದರು.

ರಥೋತ್ಸವದಲ್ಲಿ ಭಾಗಿಯಾಗಿದ್ದ ಕಲಾತಂಡಗಳು

ರಾಯರ ದರ್ಶನ ಪಡೆದ ಸಾಲುಮರದ ತಿಮ್ಮಕ್ಕ
ಆರಾಧನೆ ನಿಮಿತ್ತ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸಾಲು ಮರದ ತಿಮ್ಮಕ್ಕ ಮಂತ್ರಾಲಯಕ್ಕೆ ಆಗಮಿಸಿ, ಗುರು ರಾಯರ ದರ್ಶನ ಪಡೆದರು. ಸಾಕು ಪುತ್ರ ಉಮೇಶ್ ಜೊತೆ ಮಂತ್ರಾಲಯಕ್ಕೆ ಆಗಮಿಸಿದ 111ವರ್ಷದ ಸಾಲು ಮರದ ತಿಮ್ಮಕ್ಕ ವೀಲ್ ಚೇರ್ನಲ್ಲೇ ರಾಯರ ಮಠ ಪ್ರದಕ್ಷಿಣೆ ಹಾಕಿದರು. ಮೊದಲು ಮಂಚಾಲೆಮ್ಮ ದೇವಿಗೆ ಪೂಜೆ ಸಲ್ಲಿಸಿದ ಅವರು, ಬಳಿಕ ರಾಯರ ದರ್ಶನ ಪಡೆದು ಧನ್ಯರಾದರು. ಸಾಲು ಮರದ ತಿಮ್ಮಕ್ಕರನ್ನು ಗಮಿಸಿದ ಭಕ್ತರು ಅವರೊಂದಿಗೆ ಫೋಟೊ ತೆಗೆಸಿಕೊಳ್ಳಲು ಮುಗಿಬಿದ್ದ ಘಟನೆಯೂ ನಡೆಯಿತು.

ಯಾವುದೇ ಧರ್ಮ ಶ್ರೇಷ್ಠವೆಂದು ಹೇಳಬಾರದು. ಎಲ್ಲ ಧರ್ಮಗಳೂ ಒಂದೇ ಎಂದು ವಿವರಿಸಿದ ಶ್ರೀಗಳು ಎಲ್ಲರೂ ಸಮಾನರು ಎಂದು ಭಾವಿಸಬೇಕಾಗಿದೆ ಎಂದರು. ಹಿಂದೂ ಧರ್ಮದಂತ ಧರ್ಮ ಮತ್ತೊಂದಿಲ್ಲ. ಇದರ ಆಶಯ ಎಲ್ಲರೂ ಸಮಾನರು ಎಂದು ಸಾರುವುದೇ ಆಗಿದೆ. ಇತರೆ ಧರ್ಮದವರನ್ನ ಯಾರು ಕೀಳಾಗಿ ಕಾಣಬಾರದು ಎಂದು ಶ್ರೀಗಳು ಕರೆ ನೀಡಿದರು.

ಇದನ್ನೂ ಓದಿ| ರಾಯರ ಆರಾಧನೆ | ಸಾವಿರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ನಡೆದ ಸ್ವರ್ಣ ರಥೋತ್ಸವ

Exit mobile version