Site icon Vistara News

Ardha Mandalotsava : ಭಾರತದ ಅರಿವು ಶಾಲಾ ಹಂತದಿಂದಲೇ ಆಗಬೇಕು; ಹರಿಪ್ರಕಾಶ್‌ ಕೋಣೆಮನೆ ಅಭಿಮತ

Hariprakash Konemane mysore1

ಮೈಸೂರು: ಭಾರತದ ಶಿಕ್ಷಣವನ್ನು ಜ್ಞಾನದ ಆಧಾರಿತವಾಗಿ ರೂಪಿಸಬೇಕು. ನೌಕರಿ ಗಳಿಸುವಂಥ, ಸರ್ಟಿಫಿಕೇಟ್‌ ಆಧಾರಿತವಾಗಿ ಅಲ್ಲ ಎಂದು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (NCERT) ಪರಿಣಿತರ ತಂಡ ಸಲಹೆ ನೀಡಿದೆ. ಅದರ ಜತೆ ಅದು ನಮ್ಮ ಪಠ್ಯ ಪುಸ್ತಕಗಳಲ್ಲಿ ಭಾರತವನ್ನು ಭಾರತ ಎಂದೇ ನಮೂದಿಸಬೇಕು ಎಂದು ಹೇಳಿದೆ. ಭಾರತದ ಅರಿವು ಶಾಲಾ ಹಂತದಿಂದಲೇ ಶೈಕ್ಷಣಿಕ ಹಂತದಿಂದಲೇ ದೊರೆಯುವಂತಾಗಬೇಕು ಎಂಬ ಈ ಅಭಿಪ್ರಾಯ ಸರಿಯಾಗಿದೆ ಎಂದು ವಿಸ್ತಾರ ನ್ಯೂಸ್‌ನ (Vistara News) ಪ್ರಧಾನ ಸಂಪಾದಕರು ಮತ್ತು ಸಿಇಒ ಆಗಿರುವ ಹರಿಪ್ರಕಾಶ್‌ ಕೋಣೆಮನೆ (Hariprakash Konemane) ಅವರು ಹೇಳಿದರು.

ಮೈಸೂರಿನ ಭಾರತೀ ಯೋಗಧಾಮಕ್ಕೆ (Bharati Yogadhama Mysore) 24 ಸಂವತ್ಸರಗಳು ಸಂದ ಹಿನ್ನೆಲೆಯಲ್ಲಿ ಅಕ್ಟೋಬರ್‌ 29 (ಭಾನುವಾರ) ಆಯೋಜಿಸಲಾದ ಅರ್ಧ ಮಂಡಲೋತ್ಸವ (Ardha Mandalotsava) ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ಸಶಕ್ತ ಭಾರತೀಯರನ್ನು ರೂಪಿಸುವ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎನ್ನುವುದು ಪರಿಣಿತರ ತಂಡದ ಸಲಹೆಗಳ ಮೂಲ ಉದ್ದೇಶ. ಸಮಿತಿ ನೀಡಿರುವ ಏಳು ಸಲಹೆಗಳಲ್ಲಿ ಮೊದಲನೆಯದು ಅತ್ಯಂತ ಪ್ರಾಮುಖ್ಯವಾದುದು. ನಮ್ಮ ಪಠ್ಯ ಪುಸ್ತಕಗಳಲ್ಲಿ ಭಾರತವನ್ನು ಭಾರತ ಎಂದೇ ನಮೂದಿಸಬೇಕು ಮತ್ತು ಮಕ್ಕಳಿಗೆ ನಾವು ಕಲಿಸಿಕೊಡಬೇಕು ಎನ್ನುವುದು. ಅಲ್ಲಿಂದಲೇ ಭಾರತದ ಅರಿವು ಮೂಡಬೇಕು. ಭಾರತ ಶಕ್ತಿಯನ್ನು ನಮ್ಮ ತಲೆಮಾರಿಗೆ ನೆನಪಿಸದೆ ಹೋದರೆ, ಕಲಿಸದೆ ಹೋದರೆ ನಮ್ಮ ಶಿಕ್ಷಣ ವ್ಯವಸ್ಥೆ ಬರಡಾಗಲಿದೆ ಎಂದು ಹರಿಪ್ರಕಾಶ್‌ ಕೋಣೆಮನೆ ಹೇಳಿದರು.

ಯೋಗಧಾಮದ ಅರ್ಧ ಮಂಡಲೋತ್ಸವದಲ್ಲಿ ವಿಸ್ತಾರ ನ್ಯೂಸ್ ಪ್ರಧಾನ ಸಂಪಾದಕರು ಭಾಗಿ | Honor to Hariprakash Konemane

ಹರಿಪ್ರಕಾಶ್‌ ಕೋಣೆಮನೆ ಅವರನ್ನು ಸ್ವಾಮೀಜಿ ಗೌರವಿಸಿದರು.

ಈ ಸಲಹೆಯನ್ನು ಭಾರತ ಸರ್ಕಾರ ಸ್ವೀಕಾರ ಮಾಡಬಹುದು, ಜಾರಿಗೆ ತರಬಹುದು ಎಂಬ ಭರವಸೆ ಇದೆ. ಜಿ-20 ಶೃಂಗದಲ್ಲಿ ʻಭಾರತʼವನ್ನು ಪರಿಚಯಿಸುವ ಮೊದಲ ಹೆಜ್ಜೆ ಇಡಲಾಗಿದೆ. ಇದು ಅನುದ್ದೇಶಿತ ಅಲ್ಲ. ಇದಕ್ಕೆ ಪೂರಕವಾಗಿಯೇ ಎನ್‌ಸಿಇಆರ್‌ಟಿ ಕೂಡಾ ಸಲಹೆ ನೀಡಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಚರ್ಚೆಗಳು ನಡೆದು ಇದು ಜಾರಿಗೆ ಬರುವ ಭರವಸೆ ಇದೆ ಎಂದು ಕೋಣೆಮನೆ ಹೇಳಿದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಐಐಟಿ ಮದ್ರಾಸ್‌ನ ನಿವೃತ್ತ ಪೀಠಪ್ರಾಧ್ಯಾಪಕ ಪ್ರೊ. ಕೆ. ಎಸ್. ಕಣ್ಣನ್, ಅಮೆರಿಕದ ಸದ್ವಿದ್ಯಾ ಫೌಂಡೇಶನ್ ಅಧ್ಯಕ್ಷ ಜೊನಾಥನ್ ಮಾರ್ಕ್ ಫಿಶರ್ ಉಪಸ್ಥಿತರಿದ್ದರು.

ಭಾರತೀ ಯೋಗಧಾಮದ ಸಂಸ್ಥಾಪಕ ಡಾ. ಕೆ. ಎಲ್. ಶಂಕರನಾರಾಯಣ ಜೋಯ್ಸ್‌ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಸಂಸ್ಥಾನ ಗೋಕರ್ಣ, ಶ್ರೀ ರಾಮಚಂದ್ರಾಪುರಮಠದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿ ಅವರು ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಇದೇ ಸಂದರ್ಭದಲ್ಲಿ ತ್ರಯೀಯೋಗ ಶಿಕ್ಷಣ ವಿಭಾಗದ ಲೋಕಾರ್ಪಣೆಯೂ ನಡೆಯಿತು.

ವರ್ಷಪೂರ್ತಿ ನಡೆಯುವ ಕಾರ್ಯಕ್ರಮಕ್ಕೆ ಚಾಲನೆ

ಅರ್ಧಮಂಡಲೋತ್ಸವ ಕಾರ್ಯಕ್ರಮದ ಅಂಗವಾಗಿ ವರ್ಷಪೂರ್ತಿ ಕಾರ್ಯಕ್ರಮಗಳು ನಡೆಯಲಿದ್ದು, ಅವುಗಳ ಆರಂಭಕ್ಕೆ ಚಾಲನೆ ನೀಡಲಾಯಿತು. ಮೈಸೂರಿನ ಅಷ್ಟಾಂಗಯೋಗ ವಿಜ್ಞಾನ ಮಂದಿರಮ್ ಅಧ್ಯಕ್ಷ ಡಾ. ಟಿ. ಶ್ರೀನಿವಾಸ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಖ್ಯಾತ ಸಂಸ್ಕೃತಿ ಚಿಂತಕರಾದ ಡಾ. ವಿ. ಬಿ. ಆರತಿ ಉಪಸ್ಥಿತರಿದ್ದರು.

ಭಾರತೀಯ ಸ್ವಾಸ್ಥ್ಯ ಚಿಂತನೆ ಸಂವಾದ

ಉದ್ಘಾಟನಾ ಕಾರ್ಯಕ್ರಮದ ಬಳಿಕ ‘ಸ್ವಾಸ್ಥ್ಯ’ – ಒಂದು ಬಹುಶಾಸ್ತ್ರೀಯ ಚಿಂತನ ಸಂವಾದ ನಡೆಯಿತು. ಜ್ಯೋತಿಷ, ಆಯುರ್ವೇದ, ಧರ್ಮಶಾಸ್ತ್ರ, ಯೋಗವಿದ್ಯೆಗಳ ಹಿನ್ನೆಲೆಯಲ್ಲಿ ಸ್ವಾಸ್ಥ್ಯ ಎಂಬ ವಿಷಯದಲ್ಲಿ ನಡೆದ ಸಂವಾದದಲ್ಲಿ ವಿ.ಅನಂತ ಬಿ.ಜಿ ಅವರು ಧರ್ಮಶಾಸ್ತ್ರ, ಡಾ.ಪ್ರಸನ್ನ ವೆಂಕಟೇಶ್‌ ಅವರು ಆಯುರ್ವೇದ, ವಿ. ಗಣಪತಿ ಭಟ್ಟರು ಜ್ಯೋತಿಷ, ಮಧುಕೇಶ್ವರ ಹೆಗ್ಗಡೆ ಅವರು ಯೋಗಶಾಸ್ತ್ರದ ಮಾಹಿತಿ ನೀಡಿ ಸಂವಾದ ನಡೆಸಿದರು.

ಮಧ್ಯಾಹ್ನ 2.30ಕ್ಕೆ ಖ್ಯಾತ ಯುವಗಾಯಕಿ ಕು. ಸಾಧ್ವಿನಿ ಕೊಪ್ಪ ಮತ್ತು ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಸಂಜೆ ಯೋಗಧಾಮ ಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಹಿತ್ಯ ಸಂಗೀತದೊಂದಿಗೆ ಸಮ್ಮಿಲಿತವಾದ ವಿಶಿಷ್ಟ ಯೋಗಾಸನ ಪ್ರದರ್ಶನ ನಡೆಯತು.

ವರ್ಷಪೂರ್ತಿ ನಡೆಯುವ ಕಾರ್ಯಕ್ರಮಗಳಿವು

1.ಸಂಸ್ಕೃತಿ ದರ್ಶನ: ಪೂಜ್ಯ ಆಚಾರ್ಯರಿಂದ ಆರ್ಷಸಂಸ್ಕೃತಿ ಕುರಿತಾದ ಪರಿಚಯಾತ್ಮಕ ಸರಣಿ ಪ್ರವಚನ
2.ಸಂಸ್ಕೃತಿ ಸಂದೇಶ: ಸಂಸ್ಥೆಯ ವಿದ್ವಾಂಸರಿಂದ ಸಂಸ್ಕೃತಿಯ ಮೌಲಿಕ ಅಂಶಗಳ ಕುರಿತಾಗಿ ಪ್ರವಚನ ಸರಣಿ
3.ಆಚಾರ್ಯರ ಪ್ರವಚನ ಗುಚ್ಛದ ಲೋಕಾರ್ಪಣೆ: ಪೂಜ್ಯ ಆಚಾರ್ಯರ ಆಯ್ದ ಅಪರೂಪದ ಪ್ರವಚನಗಳ ಪ್ರಸಾರ
4. ಪೂರ್ವಾವಲೋಕನ: ಸಾಕ್ಷ್ಯಚಿತ್ರ, ಛಾಯಾಚಿತ್ರ ಮತ್ತು ಬರಹಗಳ ಮೂಲಕ ಸಂಸ್ಥೆ ನಡೆದು ಬಂದ ದಾರಿಯ ಅವಲೋಕನ
5.ನಾನು ಮತ್ತು ಭಾರತೀ ಯೋಗಧಾಮ: ಸಂಸ್ಥೆಯ ಕಾರ್ಯಗಳ ಭಾಗಿಗಳು ಮತ್ತು ಹಿತೈಷಿಗಳ ಭಾವಲೇಖ ಸಂಪುಟ

Exit mobile version