ಮೈಸೂರು: ಇಲ್ಲಿಯ ಚಾಮುಂಡಿ ಬೆಟ್ಟದಲ್ಲಿ ಆಷಾಢ ಮಾಸದ ಮೊದಲ ಶುಕ್ರವಾರವಾದ ಇಂದು ಸಾವಿರಾರು ಭಕ್ತರು ಭಕ್ತಿ ಶ್ರದ್ಧೆಯಿಂದ ನಾಡದೇವತೆ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದರು.
ಮುಂಜಾನೆಯಿಂದಲೇ ಮೆಟ್ಟಿಲುಗಳಿಗೆ ಅರಿಶಿನ-ಕುಂಕುಮ ಹಚ್ಚುತ್ತಾ, ಬೆಟ್ಟವೇರಿ ಬಂದ ಭಕ್ತರು ಚಾಮುಂಡಿ ದೇವಿಯ ದರ್ಶನ ಪಡೆದರು. ವಿವಿಧ ಹೂಗಳಿಂದ ದೇವಿ ಚಾಮುಂಡೇಶ್ವರಿಯನ್ನು ಅತ್ಯಂತ ಸುಂದರವಾಗಿ ಅಲಂಕಾರ ಮಾಡಲಾಗಿತ್ತು. ದೇಗುಲದ ಆವರಣವನ್ನೂ ಹೂಗಳಿಂದ ಶೃಂಗರಿಸಲಾಗಿತ್ತು.
ಆಷಾಢ ಮಾಸದ ಮೊದಲ ಶುಕ್ರವಾರದಂದೇ ನಿರೀಕ್ಷೆಗೂ ಮೀರಿ ಭಕ್ತರು ಬೆಟ್ಟಕ್ಕೆ ಆಗಮಿಸಿದ್ದರು. ಕೋವಿಡ್-೧೯ ಕಾರಣದಿಂದ ಕಳೆದ ಎರಡು ವರ್ಷದಿಂದ ಆಷಾಢದಲ್ಲಿ ದೇವಿಯ ದರ್ಶನಕ್ಕೆ ನಿರ್ಬಂಧಗಳಿದ್ದುದ್ದರಿಂದ ಈ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದಾರೆ ಎಂದೇ ನಿರೀಕ್ಷಿಸಲಾಗುತ್ತಿತ್ತು. ಬೆಟ್ಟಕ್ಕೆ ಖಾಸಗಿ ವಾಹನಗಳ ಪ್ರವೇಶ ನಿರ್ಬಂಧಿಸಿದ್ದು, ಲಲಿತಾ ಮಹಲ್ ಹೆಲಿಪ್ಯಾಡ್‌ನಿಂದ ಸಾರಿಗೆ ಬಸ್ ವ್ಯವಸ್ಥೆ ಮಾಡಲಾಗಿತ್ತು.
ದೇವಿ ದರ್ಶನಕ್ಕೆ ಕೋವಿಡ್ ನೆಗೆಟಿವ್ ರಿಪೋರ್ಟ್ ಬೇಕು!
ದೇಶದಲ್ಲಿ ಮತ್ತೆ ಕೋವಿಡ್-೧೯ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೇವಿ ಚಾಮುಂಡಿ ದರ್ಶನಕ್ಕೆ ಬರುವ ಭಕ್ತರು ಎರಡು ಡೋಸ್ ಕೊರೊನಾ ಲಸಿಕೆ ಪಡೆದಿರುವುದನ್ನು ಕಡ್ಡಾಯ ಗೊಳಿಸಲಾಗಿದೆ. ಲಸಿಕೆ ಪಡೆಯದೇ ಇದ್ದರೆ 72 ಗಂಟೆ ಮುಂಚಿತವಾದ ಕೋವಿಡ್ ನೆಗೆಟಿವ್ ರೀಪೋರ್ಟ್ ಹೊಂದಿರಬೇಕೆಂದು ಸೂಚಿಸಲಾಗಿದೆ. ಬೆಳಗ್ಗೆ 6.30 ರಿಂದ ರಾತ್ರಿ 9.30 ರವರೆಗೆ ದೇವಿ ದರ್ಶನಕ್ಕೆ ಅವಕಾಶವಿರುತ್ತದೆ.
ಉಚಿತ ದರ್ಶನ, ೫೦ ರೂ. ಟಿಕೆಟ್ ಹಾಗೂ ೩೦೦ರೂ. ಟಿಕೆಟ್ ಹೀಗೆ ಮೂರು ವಿಧವಾದ ಸರತಿ ಸಾಲು ಮಾಡಲು ವ್ಯವಸ್ಥೆ ಮಾಡಲಾಗಿತ್ತು. ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕವಾದ ಸರತಿ ಸಾಲಿತ್ತು. ದೇವಿಯ ದರ್ಶನ ಮಾಡಿದ ಪ್ರತಿಯೊಬ್ಬರಿಗೂ ಕುಂಕುಮ ಹಾಗೂ ಪ್ರಸಾದ ನೀಡಲು ಕ್ರಮ ತೆಗೆದುಕೊಳ್ಳಲಾಗಿತ್ತು.
ದೇವಾಲಯಕ್ಕೆ ಆಗಮಿಸುವ ಭಕ್ತರಿಗೆ ಅನ್ನದಾನ ವ್ಯವಸ್ಥೆ ಮಾಡಲಾಗಿತ್ತು. ಒಂದೇ ಬಾರಿಗೆ ಸಾವಿರ ಜನರಿಗೆ ಊಟ ಮಾಡಲು ಅವಕಾಶ ಮಾಡಿಕೊಡಲಾಗಿದ್ದು, ಬೆಳಗ್ಗೆ ತಿಂಡಿ ಮತ್ತು ಮಧ್ಯಾಹ್ನದ ಅನ್ನ ಪ್ರಸಾದವನ್ನು ಸಾವಿರಾರು ಭಕ್ತರು ಪಡೆದುಕೊಂಡರು. ಬೆಟ್ಟದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಅಗತ್ಯವಿರುವ ಕಡೆ ಹೊಸದಾಗಿ ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಸಲಾಗುತ್ತಿದೆ.
ಇದನ್ನೂ ಓದಿ | Modi in Karnataka | ತಾಯಿ ಚಾಮುಂಡೇಶ್ವರಿ ಆಶೀರ್ವಾದದಿಂದ ಮೈಸೂರಿಗೆ ಬಂದಿದ್ದೇನೆ : ಪ್ರಧಾನಿ ಮೋದಿ