Site icon Vistara News

Shani Jayanti 2022 : ನಿಮಗೆ ಕರ್ಮಫಲ ನೀಡುವ ಶನಿ ದೇವರ ಬಗ್ಗೆ ಎಷ್ಟು ಗೊತ್ತು?

shani jayanti 2023 importance-and-Significance of shani devaru in kannada

lord shani dev effects on zodiac signs

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ

ಶನಿಯು ಸೂರ್ಯದೇವ, ಛಾಯಾ ದೇವಿಗೆ ಮಗನಾಗಿ ಹುಟ್ಟಿ ಲೋಕದಲ್ಲಿ ಖ್ಯಾತಿ ಸಂಪಾದಿಸಿ ದೈವತ್ವವನ್ನು ಪಡೆದ ಮಹಾನುಭವ. ಶನಿಯನ್ನು ಕರ್ಮಫಲದಾತ ಎಂದು ಕರೆಯುತ್ತಾರೆ. ಪ್ರತಿಯೊಬ್ಬರಿಗೂ ಅವರ ಕರ್ಮಗಳಿಗೆ ಅನುಸಾರವಾಗಿ ಫಲ ನೀಡುತ್ತಾನೆ. ಒಳ್ಳೆಯ ಕೆಲಸ ಮಾಡಿದರೆ, ಶನಿದೇವರು ಆ ಮನುಷ್ಯನಿಗೆ ಸುಖ ಸಂತೋಷ ದಯಪಾಲಿಸುತ್ತಾನೆ. ಅದೇ ರೀತಿ ಕೆಟ್ಟ ಕೆಲಸ ಮಾಡುವ ವ್ಯಕ್ತಿ ಶನಿದೇವರ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಹೀಗಾಗಿಯೇ ಈತನಿಗೆ ದಾರ್ಶನಿಕ ಹಾಗೂ ಆಧ್ಯಾತ್ಮಿಕ ಪ್ರವೃತ್ತಿಯನ್ನು ದಯಪಾಲಿಸುವ ದೇವರು ಎನ್ನುತ್ತಾರೆ. ಇಂದು ಶನಿ ಜಯಂತಿ (Shani Jayanti 2022). ಹೀಗಾಗಿ ಶನಿಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳೋಣ.

ಪೌರಾಣಿಕ ಕತೆಗಳಲ್ಲಿ ಶನಿ ಮಹಾತ್ಮೆಯನ್ನು ವಿಧವಿಧವಾಗಿ ಬಣ್ಣಿಸಲಾಗಿದೆ. ಶನಿ ದೇವನು ದೇವತೆಗಳಿಗೆ ನೆರವಾದವನು. ಹಿಂದೆ ಪಾರ್ವತಿಯ ಶಾಪದಿಂದ ದೇವತೆಗಳೆಲ್ಲರೂ ವೃಕ್ಷಗಳಾದರು, ವಿಷ್ಣು ಸಹ ಅಶ್ವತ್ಥವೃಕ್ಷವಾದ. ಅಶ್ವಥಮರದಲ್ಲಿ ಅಶ್ವತ್ಥನೆಂಬ ರಾಕ್ಷಸನು ವಾಸವಾಗಿದ್ದನು. ಅಲ್ಲಿ ಯಾರು ಬಂದರೂ ಅವರನ್ನು ಹಿಂಸಿಸಿ ಕೊಲ್ಲುತ್ತಿದ್ದ. ಅವನಿಗೊಬ್ಬ ತಮ್ಮನಿದ್ದನು ಅವನ ಹೆಸರು ಹಿಪ್ಪಲ. ಇಬ್ಬರು ವೃಕ್ಷ ರೂಪವನ್ನು ಧರಿಸಿ ಅದರ ನೆರಳಿಗೆ ಬಂದವರನ್ನೆಲ್ಲ ನುಂಗುತ್ತಿದ್ದರು.

ಆಗ ಋಷಿ ಮಹರ್ಷಿಗಳು ನಾರದರ ಸಹಾಯದಿಂದ ಪರಮೇಶ್ವರನಲ್ಲಿಗೆ ಬಂದು ಸಹಾಯವನ್ನು ಕೇಳಿದರು. ಪರಮೇಶ್ವರನು ಸೂರ್ಯಪುತ್ರ ಶನಿಯನ್ನು ಸ್ತುತಿಸಿದನು. ಬ್ರಾಹ್ಮಣರು, ಋಷಿಮುನಿಗಳು ಶನಿಯನ್ನು ಆರಾಧಿ ಸಿದರು. ಆಗ ಶನಿ ಆ ರಾಕ್ಷಸರಿಬ್ಬರನ್ನು ಸಂಹರಿಸಿದ. ಹೀಗೆ ದೇವತೆಗಳಿಗೆ ಸಹಾಯ ಮಾಡಿ ಪರಮೇಶ್ವರನ ಕೃಪೆಗೆ ಪಾತ್ರನಾಗಿ ತಾಯಿ ಪಾರ್ವತಿ ದೇವಿಯ ಅನುಗ್ರಹ ಸಂಪಾದಿಸಿದನು ಈ ಶನಿ. ಶನಿಯನ್ನು ‘ಶನೈಚ್ಚರ’ ಎಂದೂ ಕರೆಯಲಾಗುತ್ತದೆ ‘ಚರ’ ಎಂದರೆ ಮಂದ ಗತಿಯಲ್ಲಿ ಸಾಗುವವನು ಎಂದು ಅರ್ಥ.

ನ್ಯಾಯವಂತರು ಶನಿಗೆ ಹೆದರಬೇಕಾಗಿಲ್ಲ !

ತ್ರಿಶೂಲ, ಬಿಲ್ಲು, ಬಾಣ ಮತ್ತು ಕೊಡಲಿ ಶನಿಯ ಆಯುಧಗಳು. ಶನಿ ನ್ಯಾಯದೇವತೆ. ಶಿಕ್ಷಿಸುವ ಅಧಿಕಾರ ಹೊಂದಿರುವ ದೇವರು. ನಾವು ಮಾಡಿದ್ದ ತಪ್ಪುಗಳಿಗೆಲ್ಲಾ ಯೋಗ್ಯತಾನುಸಾರ ಶಿಕ್ಷೆ ವಿಧಿಸುತ್ತಾನೆ. ದೇವತೆಗಳನ್ನೂ ಬಿಡದೆ ಪ್ರತಿಯೊಬ್ಬರೂ ತಮ್ಮ ಕರ್ಮಲ ಅನುಭವಿಸುವಂತೆ ನೋಡಿಕೊಳ್ಳುವ ಹೊಣೆಯನ್ನು ಹೊತ್ತಿದ್ದಾನೆ. ಆದ್ದರಿಂದಲೇ ಶನಿ ಎಂದರೆ ಜನರು ಭಯಪಡುತ್ತಾರೆ. ಶನಿ ಎಂದರೆ ಪೀಡಕ ಎಂಬ ಅಭಿಪ್ರಾಯಕ್ಕೆ ಬಂದಿರುತ್ತಾರೆ. ನ್ಯಾಯವಂತರು ಶನಿಗೆ ಹೆದರಬೇಕಾಗಿಯೇ ಇಲ್ಲ.

 ಭಕ್ತರಿಂದ ‘ಶನಿ ಮಹಾರಾಜ’ ಎಂದು ಕರೆಸಿಕೊಳ್ಳುವ ಶನಿಯು ನೀಡುವ ಕಷ್ಟಗಳಿಗಿಂತ, ನೀಡುವ ಒಳ್ಳೆಯ ವರಗಳಿಗೆ ಹೆಚ್ಚು ಹೆಸರುವಾಸಿಯಾಗಿದ್ದಾನೆ. ಆಶೀರ್ವಾದದ ದೃಷ್ಟಿಯಿಂದ ಶನಿ ಮಹಾರಾಜನಷ್ಟು ಬೇರೆ ಯಾವ ಗ್ರಹಗಳೂ ಹೋಲಿಕೆಗೆ ಸಿಗಲು ಸಾಧ್ಯವಿಲ್ಲ. ಆತನು ತನ್ನ ದೆಶೆಯ ಕೊನೆಯಲ್ಲಿ ವರವನ್ನು ನೀಡುತ್ತಾನೆ ಎನ್ನುವುದನ್ನು ‘ಶನಿ ಮಹಾತ್ಮೆ’ ಬಹಳ ಸೊಗಸಾಗಿ ವರ್ಣಿಸಲಾಗಿದೆ.

ಶನಿಯ ವಾಹನ ಯಾವುದು ಗೊತ್ತೇ?

ಶನಿದೇವರ ತಾಯಿ ಛಾಯಾದೇವಿಯು ಶನಿಯ ಮುಂದಿನ ಭವಿಷ್ಯವನ್ನು ತಿಳಿದು, ಈತನ ನಡೆ-ನುಡಿ, ಮಂದಗತಿ ಇವೆಲ್ಲವನ್ನೂ ಗಮನಿಸಿ, ಇದಕ್ಕೆ ತಕ್ಕಂತೆ ‘ಗೃಧ್ರ’ ಪಕ್ಷಿಯನ್ನು ವಾಹನವಾಗಿ ಅನುಗ್ರಹಿಸುತ್ತಾಳೆ. ಇದು ಒಂದು ತರಹದ ಕಾಗೆ ಜಾತಿಯ ಪಕ್ಷಿ. ಇದರ ಮೇಲೆ ಶನಿಯು ಕೂತು ತನ್ನ ಸ್ಥಾನವನ್ನು ಸೇರಿಕೊಳ್ಳುತ್ತಾನೆ.

ಮುಂದೆ ಶನಿಯು ತಾಯಿಯನ್ನು ಭೇಟಿಯಾದಾಗ ಕುತೂಹಲದಿಂದ ‘ಅಮ್ಮ ಈ ಗೃಧ್ರ ಪಕ್ಷಿಯನ್ನು ನನಗೆ ವಾಹನವಾಗಿ ಕಾಣಿಕೆ ನೀಡಿದೆ. ಇದರ ವಿಶೇಷತೆ ಏನು?’ ಎಂದು ಕೇಳುತ್ತಾನೆ. ಆಗ ಛಾಯಾದೇವಿಯು, ‘ಈ ಪಕ್ಷಿಯು ಹಿಂದೆ ‘ಪಾಪಭುಶಂಡಿ’ ಎಂಬ ಹೆಸರನ್ನು ಪಡೆದು ಮಾನಸ ಸರೋವರದ ಹತ್ತಿರ ಈ ಕಾಗೆಯು ಗರುಡನಿಗೆ ರಾಮಾಯಣದ ಕಥೆಯನ್ನು ಹೇಳಿದೆ. ಇದಕ್ಕೆ ಭೂತ-ವರ್ತಮಾನ-ಭವಿಷ್ಯತ್ ತಿಳಿಯುವ ಶಕ್ತಿ ಇದೆ ಎಂದು ವಿವರಿಸುತ್ತಾಳೆ.

ಈ ಪಕ್ಷಿಯು ಪೂರ್ವದಲ್ಲಿ ಕಾಕಾಸುರನ ರೂಪತಾಳಿ ಅರಣ್ಯದಲ್ಲಿ ರಾಮ ಸೀತೆಯರನ್ನು ಕಾಡುತ್ತಿತ್ತು. ಆಗ ರಾಮನು ದರ್ಬೆಯನ್ನು ಗಾಯತ್ರಿ ಮಂತ್ರದಿಂದ ಮಂತ್ರಿಸಿ ಎಸೆದನು. ಆಗ ಕಾಕಾಸುರ ಎಲ್ಲಿ ಹೋದರೂ ಯಾರೂ ರಕ್ಷಿಸಲಿಲ್ಲ. ವಿಧಿಯಿಲ್ಲದೆ ಅದು ಕೊನೆಗೆ ರಾಮನ ಮೊರೆಹೋಯಿತು. ಆಗ ದರ್ಬೆಯು ಅಸರೂಪವನ್ನು ತಾಳಿ ಕಾಗೆಯ ಬಲಗಣ್ಣನ್ನು ಕಿತ್ತುಕೊಂಡಿತು. ಇದರಿಂದ ಕಣ್ಣನ್ನು ಕಳೆದುಕೊಂಡ ಈ ಪಕ್ಷಿಯು ಮುಂದೆ ರಾಮನ ಅನುಗ್ರಹಕ್ಕೆ ಪಾತ್ರವಾಯಿತು’ ಎಂದು ಆಕೆ ವಿವರಿಸುತ್ತಾಳೆ.

ಇನ್ನೊಂದು ಕತೆಯ ಪ್ರಕಾರ, ದೇವಲೋಕದಲ್ಲಿ ಕಾಕಾಸುರನೆಂಬ ರಾಕ್ಷಸ ಎಲ್ಲರನ್ನೂ ಬೆದರಿಸುತ್ತ, ತೊಂದರೆ ಕೊಡುತ್ತಿರುತ್ತಾನೆ. ಒಮ್ಮೆ ಜಗನ್ಮಾತೆಯಾದ ಲಕ್ಷ್ಮೀಯು ಸ್ನಾನ ಮಾಡುತ್ತಿರುವಾಗ ಈ ಕಾಕಾಸುರ ಕದ್ದು ನೋಡುತ್ತಾನೆ. ಲಕ್ಷ್ಮೀ ಚೀರಿಕೊಳ್ಳುತ್ತಾಳೆ. ಲೋಕ ಪರ್ಯಟನೆಗೆ ಹೋಗಿದ್ದ ನಾರಾಯಣ ಏನಾಯಿತು ಎಂದು ಓಡಿ ಬರುತ್ತಾನೆ. ಆಗ ಲಕ್ಷ್ಮೀಯು ನಡೆದ ವಿಷಯ ಹೇಳುತ್ತಾಳೆ. ನಾರಾಯಣ ಕಾಕಾಸುರನನ್ನು ಬೆನ್ನಟ್ಟಿ ಹೋಗುತ್ತಾನೆ. ಕಾಕಾಸುರನು ಈಶ್ವರನ ಮೊರೆ ಹೋಗುತ್ತಾನೆ. ಆಗ ಈಶ್ವರನು ನನ್ನಿಂದ ಸಾಧ್ಯವಿಲ್ಲ, ನಾರಾಯಣ ಸಾಮಾನ್ಯದವನಲ್ಲ ನಿನ್ನನ್ನು ಅವನು ಬಿಡುವುದಿಲ್ಲ, ನಿನ್ನ ರಕ್ಷಣೆ ಶನಿಯಿಂದ ಮಾತ್ರ ಸಾಧ್ಯ. ನೀನು ಕೂಡಲೇ ಶನಿಯ ಪಾದಕ್ಕೆ ಶರಣಾಗು ಎನ್ನುತ್ತಾನೆ.

Shani Jayanti 2022

ಆಗ ಕಾಕಾಸುರನು ಶನಿಯ ಪಾದಕ್ಕೆ ಬೀಳುತ್ತಾನೆ; ‘ನನ್ನನ್ನು ಕಾಪಾಡು ದೇವ, ನನ್ನಿಂದ ತಪ್ಪಾಗಿದೆ’ ಎಂದಾಗ ನಾರಾಯಣನು ಅಲ್ಲಿಗೆ ಬರುತ್ತಾನೆ. ಶನಿ ಅವನನ್ನು ಕಳಿಸಿಕೊಡು ಎನ್ನುತ್ತಾನೆ. ಆಗ ಶನಿಯು ‘ನಾರಾಯಣ ಶಾಂತನಾಗು. ನೀನೇ ಈ ರೀತಿ ಕೋಪ ಮಾಡಿಕೊಂಡರೆ ಜಗತ್ತು ಉಳಿಯುವುದಿಲ್ಲ’ ಎನ್ನುತ್ತಾ, ಕಾಕಾಸುರನಿಗೆ ನಿನ್ನ ಒಂದು ಕಣ್ಣನ್ನು ಕಿತ್ತು ನಾರಾಯಣನ ಪಾದಕ್ಕಿಡು ಎಂದಾಗ ಕಾಕಾಸುರ ತನ್ನ ಒಂದು ಕಣ್ಣು ಕಿತ್ತು ನಾರಾಯಣನ ಪಾದಕ್ಕಿಡುತ್ತಾನೆ.

ಹೀಗಾಗಿ ಈಗಲೂ ಕಾಗೆಗೆ ಒಂದೇ ಕಣ್ಣು. ಆಗ ನಾರಾಯಣನು ‘ನಿನ್ನನ್ನು ಬಿಡುವುದಿಲ್ಲ ಸಮಯ ನೋಡಿ ನಿನ್ನನ್ನು ಕೊಂದೇ ಕೊಲ್ಲುತ್ತೇನೆ’ ಎಂದು ಹೇಳಿ ಹೋಗುತ್ತಾನೆ. ಕಾಕಾಸುರ ಶನಿಗೆ ‘ನಿನ್ನನ್ನು ಬಿಟ್ಟು ಹೋಗುವುದಿಲ್ಲ. ನಿನ್ನ ವಾಹನ ವಾಗಿರುತ್ತೇನೆ ನಿನ್ನ ವಾಹನದ ವಾಗಿ ನನ್ನನ್ನು ಸ್ವೀಕರಿಸು’ ಎಂದಾಗ ಶನಿಯು ಆಗಲಿ ಎಂದು ಹೇಳುತ್ತಾನೆ. ಹೀಗಾಗಿ ಕಾಗೆಯು ಶನಿಯ ವಾಹನವಾಗುತ್ತದೆ.

ಜ್ಯೋತಿಷದಲ್ಲಿ ಪ್ರಮುಖ ಪಾತ್ರ

‘ಶನಿಯೇ ಕ್ರಮತಿ ಸಃ’ ಅಂದರೆ, ಯಾರು ನಿಧಾನವಾಗಿ ಚಲಿಸುತ್ತಾರೋ ಅವರೇ ಶನಿ ಎಂದು. ಶನಿಗ್ರಹವು ಸೂರ್ಯನನ್ನು ಒಂದು ಸುತ್ತು ಪ್ರದಕ್ಷಿಣೆ ಹಾಕಲು ತೆಗೆದುಕೊಳ್ಳುವ ಸಮಯ 30 ವರ್ಷ. ಅಂದರೆ ಶನಿಗೆ ಎಲ್ಲಾ 12 ರಾಶಿಗಳನ್ನೂ ದಾಟಲು 30 ವರ್ಷದ ಅವಧಿ ಬೇಕಾಗುತ್ತದೆ. (ಏಕೆಂದರೆ ಆತನ ಸಂಚಾರಪಥವೇ ಬಹಳ ದೊಡ್ಡದು. ಆದ್ದರಿಂದ ಚಂದ್ರನು ಎರಡೂವರೆ ದಿನಗಳಲ್ಲಿ ಒಂದು ರಾಶಿಯನ್ನು ದಾಟಿದರೆ ಶನಿಯು ಅದನ್ನು ದಾಟಲು ಎರಡೂವರೆ ವರ್ಷ ಬೇಕಾಗುತ್ತದೆ)

ಪ್ರತಿಯೊಂದು ರಾಶಿಯಲ್ಲಿ ಶನಿಯು ಎರಡೂವರೆ ವರ್ಷ ಕಾಲವನ್ನು ಕಳೆಯುತ್ತಾನೆ. ಈ ಮುಖಾಂತರದ ಚಲನೆಯ ಶನಿಯ ಅವಧಿಯು ಮುಖ್ಯವಾದುದಾಗಿದೆ ಹಾಗೂ ಜಾತಕದ ತಿಳುವಳಿಕೆಗೆ ಇದರ ಅಗತ್ಯವಿರುತ್ತದೆ. ಒಬ್ಬ ವ್ಯಕ್ತಿಯ ಜನ್ಮರಾಶಿಯ ಹಿಂದಿನ ಮನೆಯ ರಾಶಿಯ ಪ್ರವೇಶವಾದಾಗ, ಶನಿಯ ಪ್ರಭಾವವು ಪ್ರಾರಂಭವಾಗಿ ಜನ್ಮರಾಶಿಯ ಮುಂದಿನ ಮನೆ ಪ್ರವೇಶದೊಂದಿಗೆ ಶನಿಯ ಪ್ರಭಾವವು ನಿಲ್ಲುತ್ತದೆ. ಒಟ್ಟು ಅವಧಿಯ ಏಳೂವರೆ ವರ್ಷ (2.5ವರ್ಷ ಸ 3) ವನ್ನು ಸಾಡೇ ಸಾತಿ ಅಥವಾ ಏಳರಾಟ ಶನಿ ಎಂದು ಕರೆಯಲಾಗುತ್ತದೆ. ಈ ಅವಧಿಯು ಅತ್ಯಂತ ತ್ರಾಸದಾಯಕವಾದುದಾಗಿದೆ.

 ಶನಿ ಮಹಾದೆಶೆಯು ಮನುಷ್ಯನಲ್ಲಿ ನಡೆಯುವಾಗ ಆತನ ಪ್ರಭಾವವು ಉನ್ನತ ಮಟ್ಟದಲ್ಲಿ ನಿಶ್ಚಿತವಾಗುತ್ತದೆ. ನವಗ್ರಹಗಳಲ್ಲಿ ಶನಿಯು ಒಂಬತ್ತನೇ ಗ್ರಹವಾಗಿದ್ದು, ಅತ್ಯಂತ ಪ್ರಭಾವಶಾಲಿ. ಶನಿಯು ಗುಂಪುಗಳನ್ನು ಆಳುವವನಾಗಿದ್ದಾನೆ. ಒಬ್ಬರ ಜಾತಕದಲ್ಲಿ ಗ್ರಹಗಳ ಆಶೀರ್ವಾದವಿಲ್ಲದೆ, ಗುಂಪುಗಳನ್ನು ಪರಿಗಣಿಸುವುದು ಕಷ್ಟದಾಯಕ. ಶನಿ ಗ್ರಹವು ಉಚ್ಚಸ್ಥಾನ (ಅಥವಾ ಲಗ್ನ ) ದಲ್ಲಿದ್ದಾಗ ಜ್ಯೋತಿಷ್ಯದ ಜಾತಕ ಫಲದನ್ವಯ ನಾಯಕತ್ವದ ಗುಣ ಅವನದಾಗಿದ್ದು, ಹೆಸರು ಮತ್ತು ಅಧಿಕಾರವನ್ನು ಹೊಂದಿದವನಾಗುತ್ತಾನೆ. ಜೊತೆಗೆ ಅಂತಹ ಜನರು ಹೆಚ್ಚಿನ ಶ್ರದ್ಧೆಯುಳ್ಳವರಾಗಿದ್ದು, ಕೈಯಲ್ಲಿ ಹಿಡಿದ ಕೆಲಸವನ್ನು ಬಿಡದೆ ಮಾಡುವವರಾಗಿರುತ್ತಾರೆ.

ಇದನ್ನೂ ಓದಿ | Astrology: ನಿಮ್ಮ ರಾಶಿಗೆ ಸಾಡೇಸಾತಿ ಮತ್ತು ಶನಿ ದೆಸೆ ಯಾವಾಗ ಇದೆ ಗೊತ್ತೆ?

ಮತ್ತೊಂದು ಭಾಗದಲ್ಲಿ, ಅದೇ ಶನಿ ಗ್ರಹವು ನೀಚ ಸ್ಥಾನದಲ್ಲಿದ್ದಾಗ, ಒಬ್ಬ ವ್ಯಕ್ತಿಯ ‘ಕರ್ಮ’ದನ್ವಯ ದುರ್ಬಲನಾಗಿದ್ದು, ಕೆಲಸಗಳಲ್ಲಿ ಆಸಕ್ತಿಯಿಲ್ಲದೆ, ಕರ್ಮವನ್ನು ಹಳಿಯುತ್ತಾ, ನಿರಾಶಾದಾಯಕವಾಗಿ ಸೋಲನ್ನು ಅನುಭವಿಸುತ್ತಾನೆ. ಒಬ್ಬನ ಜಾತಕದಲ್ಲಿ ಶನೀಶ್ವರನ ಪ್ರಭಾವವಿಲ್ಲದಿದ್ದರೆ, ಆತನಿಗೆ ‘ಮೋಕ್ಷ’ ದುರ್ಲಭವಾಗುತ್ತಾ ಹೋಗುತ್ತದೆ. ಹೀಗೆ ಜ್ಯೋತಿಷದಲ್ಲಿ ಶನಿಯದ್ದೇ ಪ್ರಾಬಲ್ಯ.

ಲೇಖಕರು ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು
M: 9481854580 | pnaveenshastri@gmail.com

Exit mobile version