Site icon Vistara News

ಅವನಿ ಶೃಂಗೇರಿ ಶಂಕರಾಚಾರ್ಯ ಮಠದ ನೂತನ ಪೀಠಾಧೀಪತಿಗಳ ಪಟ್ಟಾಭಿಷೇಕ

ಅವನಿ ಶೃಂಗೇರಿ ಮಠ

ಮುಳಬಾಗಿಲು: ತಾಲೂಕಿನ ಶ್ರೀ ಅವನಿ ಶೃಂಗೇರಿ ಜಗದ್ಗುರು ಶಂಕರಾಚಾರ್ಯ ಪೀಠದ 23ನೇ ಪೀಠಾಧಿಪತಿಗಳಾಗಿ ಶ್ರೀ ಶಾಂತಾನಂದ ಭಾರತಿ ಸ್ವಾಮೀಜಿಯವರ ಪಟ್ಟಾಭಿಷೇಕ ಕಾರ್ಯಕ್ರಮ ಗುರುವಾರ ಶ್ರೀ ಮಠದ ಸಂಪ್ರದಾಯದಂತೆ ನಡೆದಿದೆ.

ಶೃಂಗೇರಿ ಶ್ರೀ ಮಠದ ಜಗದ್ಗುರು ಶ್ರೀ ವಿಧುಶೇಖರ ಭಾರತಿ ಮಹಾಸ್ವಾಮೀಜಿಯವರ ಸಮ್ಮುಖದಲ್ಲಿ ಶ್ರೀ ಶಾಂತಾನಂದ ಭಾರತಿ ಸ್ವಾಮೀಜಿಯವರು ಪೀಠಾರೋಹಣ ಮಾಡಿದರು. ಈ ಸಂದರ್ಭದಲ್ಲಿ ಶ್ರೀ ಶೃಂಗೇರಿ ಶಾರದ ಪೀಠದ ಆಡಳಿತಾಧಿಕಾರಿ ಡಾ.ವಿ.ಆರ್‌. ಗೌರಿಶಂಕರ್‌, ಉಚ್ಚ ನ್ಯಾಯಾಲದ ನಿವೃತ್ತ ನ್ಯಾಯಾಧೀಶ ಎನ್‌. ಕುಮಾರ್‌, ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್‌.ಎಸ್‌. ಸಚ್ಚಿದಾನಂದ ಮೂರ್ತಿ ಸೇರಿದಂತೆ ಅನೇಕ ಗಣ್ಯರು, ಅಪಾರ ಭಕ್ತರು ಉಪಸ್ಥಿತರಿದ್ದರು.

ನೂತನ ಶ್ರೀಗಳಿಂದ ಶೃಂಗೇರಿ ಶ್ರೀ ಜಗದ್ಗುರುಗಳಿಗೆ ಗುರುವಂದನೆ

ಕೋಲಾರದಿಂದ ಸುಮಾರು 35 ಕಿ.ಮೀ. ದೂರದಲ್ಲಿರುವ ಶ್ರೀ ಅವನಿ ಶೃಂಗೇರಿ ಪೀಠವನ್ನು ಶೃಂಗೇರಿ ಪೀಠದ 14ನೇ ಗುರುಗಳಾಗಿದ್ದ ಶ್ರೀ ನೃಸಿಂಹ ಭಾರತೀ ಮಹಾಸ್ವಾಮಿಗಳು ಸ್ಥಾಪಿಸಿದ್ದರು. ತಮ್ಮ ಶಿಷ್ಯರಲ್ಲಿ ಒಬ್ಬರನ್ನು ಈ ಪೀಠಾಧಿಪತಿಗಳನ್ನಾಗಿ ನೇಮಿಸಿದ್ದರು. ಅಂದಿನಿಂದ ಈ ಪೀಠಪರಂಪರೆ ನಡೆದುಕೊಂಡು ಬಂದಿದೆ.

ಈ ಪೀಠದ 22 ನೇ ಪೀಠಾಧಿಪತಿಗಳಾದ ಶ್ರೀ ಅಭಿನವ ವಿದ್ಯಾ ಶಂಕರಭಾರತಿ ಮಹಾಸ್ವಾಮಿಗಳು 2020ರಲ್ಲಿ ದೇಹತ್ಯಾಗ ಮಾಡಿದ್ದರಿಂದ ಪೀಠಾಧಿಪತಿಗಳಿರಲಿಲ್ಲ. ಕಳೆದ ಡಿಸೆಂಬರ್‌ನಲ್ಲಿಯೇ ಶೃಂಗೇರಿ ಉಭಯ ಜಗದ್ಗುರುಗಳು ಶ್ರೀ ಶಾಂತಾನಂದ ಭಾರತೀ ಸ್ವಾಮೀಜಿಯವರನ್ನು ಪೀಠಾಧಿಪತಿಗಳನ್ನಾಗಿ ನೇಮಿಸಲು ಅನುಮತಿ ನೀಡಿದ್ದರು.

ಶ್ರೀ ಮಠದ ಸಂಪ್ರದಾಯದ ರೀತಿಯಲ್ಲಿ ಶ್ರೀ ಶಾಂತಾನಂದ ಭಾರತಿ ಸ್ವಾಮೀಜಿಯವರು ಗುರುಗಳಿಂದ ಸನ್ಯಾಸ ದೀಕ್ಷೆಯನ್ನು ಪಡೆದಿದ್ದು, ಬುಧವಾರ ಮತ್ತು ಗುರುವಾರ ಹಲವಾರು ಧಾರ್ಮಿಕ ಕಾರ್ಯಕ್ರಮಗಳ ನಡುವೆ ಅವರ ಪಟ್ಟಾಭಿಷೇಕ ಕಾರ್ಯಕ್ರಮ ನಡೆದಿದೆ. ಪೀಠಾರೋಹಣದ ನಂತರ ನೂತನ ಶ್ರೀಗಳು ಶೃಂಗೇರಿಯ ಜಗದ್ಗುರುಗಳ ಪಾದ ಪೂಜೆ ನೆರವೇರಿಸಿದರು.

ಶ್ರೀ ಶಾಂತಾನಂದ ಭಾರತೀ ಸ್ವಾಮೀಜಿ

ಅವನಿ ಕ್ಷೇತ್ರವನ್ನು ಪರಂಪರೇಯ 21 ಪೀಠಾಧಿಪತಿಗಳಾದ ಶ್ರೀ ಅಭಿನವೊದ್ಡಂಡ ವಿದ್ಯಾ ಭಾರತಿ ಮಹಾಸ್ವಾಮಿಗಳು ಅಭಿವೃದ್ಧಿಪಡಿಸಿದ್ದು, ಬೆಂಗಳೂರಿನಲ್ಲಿಯೂ ಈ ಮಠದ ಶಾಖಾ ಮಠವಿದೆ. ಅವನಿಯ ಮಠದ ಆವರಣದಲ್ಲಿ ಶ್ರೀ ರಾಮಲಿಂಗೇಶ್ವರ ಸ್ವಾಮಿ, ಶ್ರೀ ಶಾರದೆ ಸೇರಿದಂತೆ ಅನೇಕ ದೇಗುಲಗಳಿವೆ. ರಾಮಾಯಣ ಕಾಲದ ಇತಿಹಾಸವನ್ನು ಹೊಂದಿರುವ ಈ ಕ್ಷೇತ್ರ ಪವಿತ್ರ ಯಾತ್ರಾ ಸ್ಥಳವಾಗಿಯೂ ಗುರುತಿಸಿಕೊಂಡಿದೆ.

ಇದನ್ನೂ ಓದಿ| ಜಾಗೊ ಹಿಂದೂ ಕಾರ್ಯಕ್ರಮದಲ್ಲಿ 70ಕ್ಕೂ ಹೆಚ್ಚು ಸಂತರು ಭಾಗಿ; ಧರ್ಮ ಜಾಗೃತಿಯ ಚರ್ಚೆ

Exit mobile version