Site icon Vistara News

Ayodhya Ram Mandir: ಅಯೋಧ್ಯೆಗೆ ಬಂತು ವಿಶೇಷ ಡೋಲು; ಏನಿದರ ವಿಶೇಷ?

pran prathishta

pran prathishta

ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ರಾಮಮಂದಿರ (Ayodhya Aam Aandir) ಲೋಕಾರ್ಪಣೆ, ಗರ್ಭಗುಡಿಯಲ್ಲಿ ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಗೆ (Pran Pratishtha) ದಿನ ಗಣನೆ ಆರಂಭವಾಗಿದೆ. ಜನವರಿ 22ರಂದು ಈ ಐತಿಹಾಸಿಕ ಸಮಾರಂಭ ನಡೆಯಲಿದ್ದು, ಭರದ ಸಿದ್ದತೆ ನಡೆಯುತ್ತಿದೆ. ಇಗೀಗ ಸುಮಾರು 500 ಕೆ.ಜಿ. ಭಾರದ ‘ನಗಾಢ’ (Nagada-ಡೋಲು)ವನ್ನು ಗುಜರಾತ್‌ನಿಂದ ವಿಶೇಷ ರಥದ ಮೂಲಕ ಅಯೋಧ್ಯೆಗೆ ತರಲಾಗಿದೆ.

ಡೋಲಿನ ವೈಶಿಷ್ಟ್ಯ

ಈ ವಿಶೇಷ ಡೋಲನ್ನು ಗುಜರಾತ್‌ನ ಕರ್ಣಾವತಿಯ ದರಿಯಾಪುರ್‌ನಲ್ಲಿರುವ ದಬ್ಗರ್ ಸಮುದಾಯದವರು ಸಿದ್ಧಪಡಿಸಿದ್ದಾರೆ ಎಂದು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಿಳಿಸಿದೆ. ರಾಮ ಮಂದಿರದ ಆವರಣದಲ್ಲಿ ಇದನ್ನು ಅಳವಡಿಸಲಾಗುವುದು ಎಂದು ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ತಿಳಿಸಿದ್ದಾರೆ. ಮಳೆ ಮತ್ತು ಬಿಸಿಲಿನಿಂದ ಹಾನಿಗೊಳಗಾಗದಂತೆ ಈ ಡೋಲನ್ನು ತಯಾರಿಸಲಾಗಿದೆ. ಇದಕ್ಕೆ ಚಿನ್ನ ಮತ್ತು ಬೆಳ್ಳಿಯ ಕೋಟಿಂಗ್‌ ನೀಡಲಾಗಿದೆ. ಕಬ್ಬಿಣ ಮತ್ತು ತಾಮ್ರವನ್ನು ಬಳಿಸಿ ಮಾಡಲಾದ ಈ ಡೋಲಿನ ಶಬ್ದ ಮೈಲುಗಟ್ಟಲೆ ದೂರಕ್ಕೆ ಕೇಳಿಸಲಿದೆ. ಈ ಹಿಂದೆ ಗುಜರಾತ್‌ ವಿಶ್ವ ಹಿಂದೂ ಪರಿಷತ್‌ನ ನಾಯಕರು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಪತ್ರ ಬರೆದು ಈ ಡೋಲನ್ನು ಸ್ವೀಕರಿಸುವಂತೆ ಮನವಿ ಸಲ್ಲಿಸಿದ್ದರು.

ಗುಜರಾತ್‌ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್‌ ಜನವರಿ 5ರಂದು ಈ 56 ಇಂಚಿನ ಬೃಹತ್‌ ಡೋಲು ಹೊತ್ತು ಸಾಗುವ ವಿಶೇಷ ರಥಕ್ಕೆ ಚಾಲನೆ ನೀಡಿದ್ದರು. ಈ ವಿಶೇಷ ‘ನಗಾಢ’ ಜತೆಗೆ ಗುಜರಾತ್‌ನ ಅಹಮದಾಬಾದ್‌ನಿಂದ 4,600 ಕೆ.ಜಿ. ತೂಕದ ಧ್ವಜ ದಂಡ್ (ಧ್ವಜ ಸ್ತಂಭ) ಸಹ ಜನವರಿ 8ರಂದು ಅಯೋಧ್ಯೆಗೆ ತಲುಪಿದೆ. ಈ ಹಿತ್ತಾಳೆ ಕಂಬವು 44 ಅಡಿ ಉದ್ದವಿದ್ದು, ಇದನ್ನು ದೇವಾಲಯದ ಮುಖ್ಯ ಗೋಪುರದಲ್ಲಿ ಸ್ಥಾಪಿಸಲಾಗುವುದು. ಇದಲ್ಲದೆ ಅಷ್ಟಧಾತು(ಎಂಟು ಲೋಹಗಳು)ವಿನಿಂದ ಮಾಡಿದ ವಿಶಿಷ್ಟ ದೇವಾಲಯದ ಗಂಟೆ ಉತ್ತರ ಪ್ರದೇಶದ ಇಟಾ ಜಿಲ್ಲೆಯಿಂದ ಅಯೋಧ್ಯೆಗೆ ಆಗಮಿಸಿದೆ. ಈ ಗಂಟೆ ಸುಮಾರು 2,400 ಕೆ.ಜಿ ತೂಕವಿದೆ. ಸುಮಾರು 30 ಕಾರ್ಮಿಕರ ತಂಡವು ಇದನ್ನು ತಯಾರಿಸಿದೆ.

108 ಅಡಿ ಉದ್ದದ ಅಗರಬತ್ತಿ

ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ದೈವಿಕ ಪರಿಮಳವನ್ನು ತುಂಬಲು ಗುಜರಾತ್‌ನ ವಡೋದರಾದಲ್ಲಿ ತಯಾರಿಸಲಾದ ಬರೋಬ್ಬರಿ 108 ಅಡಿ ಉದ್ದದ ಅಗರಬತ್ತಿ ಈಗಾಗಲೇ ಉತ್ತರಪ್ರದೇಶ ತಲುಪಿದೆ. ಇದು 3,610 ಕಿಲೋಗ್ರಾಂ ತೂಕವಿದೆ. ವಡೋದರಾದ ತರ್ಸಾಲಿ ಪ್ರದೇಶದ ನಿವಾಸಿ ವಿಹಾಭಾಯ್ ಭರ್ವಾಡ್ (Vihabhai Bharwad) ಏಕಾಂಗಿಯಾಗಿ ಆರು ತಿಂಗಳಿನಿಂದ ತಮ್ಮ ಮನೆಯ ಹೊರಗೆ ಈ ಅಗರಬತ್ತಿಯನ್ನು ತಯಾರಿಸಿದ್ದಾರೆ. ಸಾವಯವ ವಸ್ತುಗಳನ್ನು ಬಳಸಿ ಈ 108 ಅಡಿ ಉದ್ದದ ಅಗರಬತ್ತಿ ತಯಾರಿಸಿರುವುದು ವಿಶೇಷ. ಇದಕ್ಕಾಗಿ 3,000 ಕೆಜಿ ಗಿರ್ ಹಸುವಿನ ಸೆಗಣಿ, 91 ಕೆಜಿ ಗಿರ್ ಹಸುವಿನ ತುಪ್ಪ, 280 ಕೆಜಿ ದೇವದಾರ್ ಮರದ ಭಾಗ, 370 ಕೆಜಿ ಕೊಬ್ಬರಿ ಪುಡಿ ಮತ್ತಿತರ ವಸ್ತುಗಳನ್ನು ಬಳಸಲಾಗಿದೆ. ಒಮ್ಮೆ ಈ ಅಗರಬತ್ತಿಯನ್ನು ಬೆಳಗಿದರೆ ಅದು ನಿರಂತರ 45 ದಿನಗಳವರೆಗೆ ಉರಿಯುತ್ತಲೇ ಇರಲಿದೆ.

ತಯಾರಾಗಲಿದೆ 45 ಟನ್‌ ಲಡ್ಡು

ಇದಲ್ಲದೆ ಪ್ರಾಣ ಪ್ರತಿಷ್ಠೆ ದಿನದಂದು ಗಣ್ಯರು ಮತ್ತು ಭಕ್ತರಿಗೆ ಪ್ರಸಾದ ಹಂಚಲೂ ಸಿದ್ಧತೆ ನಡೆಲಾಗಿದೆ. ಪ್ರಸಾದ ತಯಾರಿಸಲು ವಾರಾಣಸಿ ಮತ್ತು ಗುಜರಾತ್‌ನ ಬಾಣಸಿಗರ ಗುಂಪು ಅಯೋಧ್ಯೆಗೆ ಆಗಮಿಸಿದೆ. ಇವರು ಶುದ್ಧ ದೇಸಿ ತುಪ್ಪದಿಂದ 45 ಟನ್ ಲಡ್ಡುಗಳನ್ನು ತಯಾರಿಸಲಿದ್ದಾರೆ. ಇದನ್ನು ಸಮಾರಂಭದಲ್ಲಿ ಭಗವಾನ್ ರಾಮನಿಗೆ ಅರ್ಪಿಸಿ ಬಳಿಕ ಪ್ರಸಾದದ ರೂಪದಲ್ಲಿ ಹಂಚಲಾಗುತ್ತದೆ. ಒಂದು ಹನಿಯೂ ನೀರು ಉಪಯೋಗಿಸದೆ ಈ ಲಾಡು ತಯಾರಿಸಲಾಗುತ್ತಿದ್ದು, ಇದು ಸುಮಾರು 6 ತಿಂಗಳು ಕೆಡುವುದಿಲ್ಲ ಎನ್ನಲಾಗಿದೆ. ಈಗ ಪ್ರತಿ ದಿನ ಸುಮಾರು 1,200 ಕೆ.ಜಿ. ಲಾಡು ತಯಾರಿಸಲು ಆರಂಭಿಸಲಾಗಿದೆ.

ನ್ಯೂಯಾರ್ಕ್‌ನಲ್ಲಿ ಲೈವ್‌ ಟೆಲಿಕಾಸ್ಟ್‌

ರಾಮಮಂದಿರದ ಉದ್ಘಾಟನೆಯ ಕಾರ್ಯಕ್ರಮವನ್ನು ದೇಶಾದ್ಯಂತ ಬೂತ್‌ ಮಟ್ಟದಲ್ಲೂ ಲೈವ್‌ ಟೆಲಿಕಾಸ್ಟ್‌ಗೆ ವ್ಯವಸ್ಥೆ ಮಾಡಲಾಗುತ್ತಿದೆ. ಇದರ ಬೆನ್ನಲ್ಲೇ ಅಮೆರಿಕದಲ್ಲೂ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದ ಲೈವ್‌ ಟೆಲಿಕಾಸ್ಟ್‌ ಇರಲಿದೆ ಎಂದು ತಿಳಿದುಬಂದಿದೆ. ಅಮೆರಿಕದ ನ್ಯೂಯಾರ್ಕ್‌ನಲ್ಲಿರುವ ಪ್ರತಿಷ್ಠಿತ ಟೈಮ್ಸ್‌ ಸ್ಕ್ವೇರ್‌ನಲ್ಲಿ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದ ಲೈವ್‌ ಟೆಲಿಕಾಸ್ಟ್‌ ಆಗಲಿದೆ. ಬೃಹತ್‌ ಪರದೆಯ ಮೇಲೆ ರಾಮಮಂದಿರ ಉದ್ಘಾಟನೆಯ ಕಾರ್ಯಕ್ರಮವನ್ನು ಅಮೆರಿಕದಲ್ಲಿ ನೆಲೆಸಿರುವ ರಾಮನ ಭಕ್ತರು ಕಣ್ತುಂಬಿಕೊಳ್ಳಲಿದ್ದಾರೆ. ಪ್ರಾಣ ಪ್ರತಿಷ್ಠಾಪನೆ ಬಳಿಕ ನರೇಂದ್ರ ಮೋದಿ ಮಾತನಾಡಲಿದ್ದು, ಇದರ ನೇರ ಪ್ರಸಾರಕ್ಕೂ ವ್ಯವಸ್ಥೆ ಮಾಡಲಾಗಿದೆ. 

ಇದನ್ನೂ ಓದಿ: Ayodhya Ram Mandir: ನಮ್ಮ ಮತ್ತು ಶಂಕರಾಚಾರ್ಯರ ನಡುವೆ ಭಿನ್ನಮತವಿಲ್ಲ ಎಂದ ವಿಹಿಂಪ

ಕಾಂಗ್ರೆಸ್‌ ವಿರುದ್ಧ ಬಿಜೆಪಿ ಟೀಕೆ

ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಕಾಂಗ್ರೆಸ್‌ ತಿಳಿಸಿದ್ದು, ಬಿಜೆಪಿ ಈ ನಡೆಯನ್ನು ತೀವ್ರವಾಗಿ ಟೀಕಿಸಿದೆ. ಬಿಜೆಪಿ ರಾಮ ಮಂದಿರವನ್ನು ರಾಜಕೀಯವಾಗಿ ಬಳಸುತ್ತಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ. ಇತ್ತ ಕಮಲ ಪಡೆ ವಾಗ್ದಾಳಿ ನಡೆಸಿ, ಕಾಂಗ್ರೆಸ್‌ನ ಹಿಂದೂ ವಿರೋಧಿ ನಿಲುವು ಈ ಮೂಲಕ ಮತ್ತೊಮ್ಮೆ ಪ್ರಕಟಕೊಂಡಿದೆ ಎಂದು ಹೇಳಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ

Exit mobile version