ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ನಾಮ ಜಪ ಆರಂಭವಾಗಿದೆ. ಜನವರಿ 22ರಂದು ಭವ್ಯ ರಾಮ ಮಂದಿರದ ಉದ್ಘಾಟನೆಯಾಗಲಿದೆ (Ayodhya Ram Mandir). ಪ್ರಾಣ ಪ್ರತಿಷ್ಠಾ (Pran pratishtha) ಸಮಾರಂಭದ ಹಿನ್ನೆಲೆಯಲ್ಲಿ ರಾಮ ಜನ್ಮ ಭೂಮಿಯಲ್ಲಿ ವ್ಯಾಪಕ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಜನವರಿ 16ರಿಂದಲೇ ಧಾರ್ಮಿಕ ವಿಧಿ ವಿಧಾನ ಆರಂಭವಾಗಲಿದೆ.
10,000 ಸಿಸಿ ಟಿವಿ ಕ್ಯಾಮರಾ ಅಳವಡಿಕೆ
ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಹಿತ ಹಲವು ಉನ್ನತ ಮಟ್ಟದ ನಾಯಕರು ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಪೊಲೀಸರು ಅಯೋಧ್ಯೆಯಲ್ಲಿ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡುತ್ತಿದ್ದಾರೆ. ಈಗಾಗಲೇ ನಗರದಲ್ಲಿ 10,000 ಸಿಸಿ ಟಿವಿ ಕ್ಯಾಮರಾ ಅಳವಡಿಸಲಾಗಿದೆ. ಮಾತ್ರವಲ್ಲ ಸಮಾರಂಭದ ದಿನ ಡ್ರೋನ್ ಮೂಲಕ ಕಣ್ಗಾವಲು ಇಡಲಾಗುತ್ತದೆ. ಜತೆಗೆ ಈ ಪ್ರದೇಶದಲ್ಲಿ ಯಾವುದೇ ಅನಧಿಕೃತ ಡ್ರೋನ್ ಹಾರಾಡುತ್ತಿಲ್ಲ ಎನ್ನುವುದನ್ನು ಖಚಿತ ಪಡಿಸಿಕೊಳ್ಳಲು ಆ್ಯಂಟಿ ಡ್ರೋನ್ ಸಿಸ್ಟಮ್ (Anti-drone system) ಜಾರಿಗೊಳಿಸಲಾಗುವುದು ಎಂದು ಭದ್ರತಾ ಎಸ್‌ಪಿ ಗೌರವ್ ವನ್ಸ್‌ವಾಲ್ ತಿಳಿಸಿದ್ದಾರೆ.
20 ಟನ್ ತರಕಾರಿ ರವಾನೆ
ಛತ್ತೀಸ್‌ಗಢದ ಬಿಜೆಪಿ ಸರ್ಕಾರ ಅಯೋಧ್ಯೆ ರಾಮ ಮಂದಿರಕ್ಕೆ ಸುಮಾರು 20 ಟನ್ ತರಕಾರಿಗಳನ್ನು 2 ಟ್ರಕ್‌ಗಳಲ್ಲಿ ಕಳಹಿಸಿಕೊಟ್ಟಿದೆ. ಮುಖ್ಯಮಂತ್ರಿ ವಿಷ್ಣುದೇವ ಸಾಯಿ (Vishnu Deo Sai) ಜನವರಿ 12ರಂದು ಈ ಟ್ರಕ್‌ಗಳಿಗೆ ಚಾಲನೆ ನೀಡಿದರು. ಕಳೆದ ತಿಂಗಳು ಸುಮಾರು 300 ಟನ್ ಅಕ್ಕಿಯನ್ನು ಛತ್ತೀಸ್‌ಗಢ ಅಯೋಧ್ಯೆಗೆ ಕಳುಹಿಸಿತ್ತು.
ಪವಿತ್ರ ಗಂಗಾ ಜಲದೊಂದಿಗೆ ಹೊರಟ ನಾಗಸಾಧುಗಳು
ಉತ್ತರಾಖಂಡದ ನಾಗಸಾಧುಗಳು ಪವಿತ್ರ ಜಲದೊಂದಿಗೆ ಶುಕ್ರವಾರ (ಜನವರಿ 12) ಅಯೋಧ್ಯೆಯತ್ತ ಹೊರಟಿದ್ದಾರೆ. ಪವಿತ್ರ ಕಲಶವು ಗಂಗಾ (ಗಂಗೋತ್ರಿ), ಯಮುನಾ (ಯಮುನೋತ್ರಿ), ಮಂದಾಕಿನಿ, ಸರಯೂ, ಭಾಗೀರಥಿ, ರಾಮ್ ಗಂಗಾ, ಕಾಳಿ ಗಂಗಾ, ಧೌಲಿ ಗಂಗಾ ಮತ್ತು ತ್ರಿಜುಗಿ ನಾರಾಯಣ್ ನದಿಗಳ ಪವಿತ್ರ ನೀರಿನಿಂದ ತುಂಬಿದೆ.
ಗಣ್ಯರಿಗೆ ರಾಮಜನ್ಮಭೂಮಿಯ ಪವಿತ್ರ ಮಣ್ಣು
ರಾಮ ಮಂದಿರಕ್ಕಾಗಿ ಅಡಿಪಾಯವನ್ನು ಅಗೆಯುವ ಸಮಯದಲ್ಲಿ ತೆಗೆದ ರಾಮ ಜನ್ಮಭೂಮಿಯ ಮಣ್ಣನ್ನು ಪ್ರತಿಷ್ಠಾಪನಾ ಸಮಾರಂಭದಲ್ಲಿ ಭಾಗವಹಿಸುವ ಗಣ್ಯರಿಗೆ ಉಡುಗೊರೆಯಾಗಿ ನೀಡಲು ತಯಾರಿ ನಡೆಸಲಾಗಿದೆ. ಮಣ್ಣನ್ನು ಪೆಟ್ಟಿಗೆಗಳಲ್ಲಿ ಪ್ಯಾಕ್ ಮಾಡಿ ಅತಿಥಿಗಳಿಗೆ ನೀಡಲಾಗುವುದು ಎಂದು ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಿಳಿಸಿದೆ. ಪ್ರಧಾನಿ ಮೋದಿ ಅವರಿಗೆ ಅಯೋಧ್ಯೆಯ ರಾಮ ಮಂದಿರದ 15 ಮೀಟರ್ ಎತ್ತರದ ಚಿತ್ರವನ್ನು ಉಡುಗೊರೆಯಾಗಿ ನೀಡಲಾಗುವುದು. ಚಿತ್ರವನ್ನು ಸೆಣಬಿನ ಚೀಲದಲ್ಲಿ ಪ್ಯಾಕ್ ಮಾಡಲಾಗುವುದು. ಇದರಲ್ಲಿ ದೇವಾಲಯದ ಛಾಯಾಚಿತ್ರವೂ ಇರಲಿದೆ.
ಅತಿಥಿಗಳಿಗೆ ಉಡುಗೊರೆ
ಸಮಾರಂಭಕ್ಕೆ ಆಗಮಿಸುವ 11,000ಕ್ಕೂ ಹೆಚ್ಚು ಅತಿಥಿಗಳು ಮತ್ತು ಆಹ್ವಾನಿತರಿಗೆ ಸ್ಮರಣೀಯ ಉಡುಗೊರೆಗಳನ್ನು ನೀಡಲಾಗುವುದು. ಪವಿತ್ರ ಮಣ್ಣಿನ ಹೊರತಾಗಿ ದೇಸಿ ತುಪ್ಪದಿಂದ ತಯಾರಿಸಿದ 100 ಗ್ರಾಂ ಮೋತಿಚೂರ್ ಲಡ್ಡುಗಳನ್ನು ಪ್ರಸಾದವಾಗಿ ನೀಡಲಾಗುತ್ತದೆ. ಅತಿಥಿಗಳಿಗೆ ನೀಡುವ ಎರಡು ಉಡುಗೊರೆ ಬಾಕ್ಸ್ ಪೈಕಿ ಒಂದರಲ್ಲಿ ಮೋತಿಚೂರ್ ಲಡ್ಡು ಪ್ರಸಾದ ಮತ್ತು ಪವಿತ್ರ ತುಳಸಿ ಎಲೆ ಇರಲಿದೆ. ಇನ್ನೊಂದರಲ್ಲಿ ರಾಮ ಜನ್ಮಭೂಮಿ ಮಣ್ಣು ಮತ್ತು ಸರಯೂ ನದಿಯ ನೀರಿನ ಬಾಟಲಿ ಜತೆಗೆ ಗೋರಖ್‌ಪುರದ ಗೀತಾ ಪ್ರೆಸ್ ಒದಗಿಸಿದ ಧಾರ್ಮಿಕ ಪುಸ್ತಕಗಳು ಇರಲಿವೆ.
ಅಖಿಲೇಶ್ ಯಾದವ್, ಮಾಯಾವತಿಗೂ ಆಹ್ವಾನ
ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೆ ಹಾಜರಾರುವಂತೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಬಹುಜನ ಸಮಾಜ ಪಕ್ಷದ (BSP) ಮುಖ್ಯಸ್ಥೆ ಮಾಯಾವತಿ ಅವರನ್ನೂ ಆಹ್ವಾನಿಸಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಸ್ಪಷ್ಟಪಡಿಸಿದೆ. ಇಬ್ಬರೂ ನಾಯಕರಿಗೆ ಆಹ್ವಾನ ಪತ್ರಿಕೆಯನ್ನು ಕೊರಿಯರ್ ಮೂಲಕ ಕಳುಹಿಸಲಾಗಿದೆ ಎಂದು ವಿಎಚ್‌ಪಿ ತಿಳಿಸಿದೆ. ಎರಡು ದಿನಗಳ ಹಿಂದೆ ವಿಎಚ್‌ಪಿ ಮುಖ್ಯಸ್ಥ ಅಲೋಕ್ ಕುಮಾರ್ ಮತ್ತು ಎಸ್‌ಪಿ ಮುಖಂಡರ ನಡುವೆ ಈ ಬಗ್ಗೆ ವಾಕ್ಸಮರ ನಡೆದಿತ್ತು. ವಿಎಚ್‌ಪಿ ಕಾರ್ಯಕರ್ತರು ಅಖಿಲೇಶ್ ಯಾದವ್ ಅವರನ್ನು ಆಹ್ವಾನಿಸಿದ್ದಾರೆ ಎಂದು ಅಲೋಕ್ ಕುಮಾರ್ ಹೇಳಿದ್ದರು. ಅದಕ್ಕೆ ಅಖಿಲೇಶ್ ಯಾದವ್, ʼʼಅಪರಿಚಿತರಿಂದ ಆಹ್ವಾನವನ್ನು ಸ್ವೀಕರಿಸುವುದಿಲ್ಲʼʼ ಎಂದು ತಿಳಿಸಿದ್ದರು.
ಆಹ್ವಾನಿಸಿಲ್ಲ
ಪ್ರಾಣ ಪ್ರತಿಷ್ಠಾ ಸಮಾರಂಭದ ಬಗ್ಗೆ ಧ್ವನಿ ಎತ್ತಿರುವ ಜ್ಯೋತಿರ್ಪೀಠದ ಶಂಕರಾಚಾರ್ಯ, ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರನ್ನು ಇನ್ನೂ ಸಮಾರಂಭಕ್ಕೆ ಆಹ್ವಾನಿಸಿಲ್ಲ. ಜ್ಯೋತಿರ್ಪೀಠ ಶಂಕರಾಚಾರ್ಯರ ಆಯ್ಕೆ ವಿವಾದವೇ ಇದಕ್ಕೆ ಕಾರಣ ಎನ್ನಲಾಗಿದೆ.
ಇದನ್ನೂ ಓದಿ: Ayodhya Ram Mandir: ಅಮೆರಿಕದಲ್ಲಿ ರಾಮ ಮಂದಿರ ಪ್ರತಿಷ್ಠಾಪನೆಯ 40 ಬಿಲ್‌ಬೋರ್ಡ್
Took part in a Puja at Ramkund in Nashik. pic.twitter.com/Tuka5YJhZD
— Narendra Modi (@narendramodi) January 12, 2024
ಅನುಷ್ಠಾನ ಸ್ವೀಕರಿಸಿದ ಮೋದಿ
ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ 11 ದಿನಗಳ ಕಾಲ ವಿಶೇಷ ಧಾರ್ಮಿಕ ಅನುಷ್ಠಾನ ಸ್ವೀಕರಿಸಿರುವುದಾಗಿ ಪ್ರಧಾನಿ ಮೋದಿ ಹೇಳಿದ್ದಾರೆ. ಇದೊಂದು ಅಪರೂಪದ ಕ್ಷಣ ಹಾಗೂ ಜೀವನದ ಸಾರ್ಥಕ್ಯ ಸಂದರ್ಭವೆಂದು ಬಣ್ಣಿಸಿದ್ದಾರೆ. ನಾಸಿಕ್‌ನ ಪಂಚವಟಿ ಪ್ರದೇಶದ ಗೋದಾವರಿ ತಟದಲ್ಲಿರುವ ಶ್ರೀ ಕಾಲ ರಾಮ್ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ಮೋದಿ ಶುಕ್ರವಾರ ತಮ್ಮ ಅನುಷ್ಠಾನ ಪ್ರಾರಂಭಿಸಿದರು. ಬಳಿಕ ಅವರು ರಾಮನ ಭಜನೆಗಳಲ್ಲಿ ಪಾಲ್ಗೊಂಡಿದ್ದಾರೆ. ರಾಮಾಯಣದ ‘ಯುದ್ಧಕಾಂಡ’ ಆಲಿಸಿದ್ದಾರೆ. ಅನುಷ್ಠಾನದ ಭಾಗವಾಗಿ ಅವರು ದೇವಾಲಯದಲ್ಲಿ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಮೆಂಟ್ ಮೂಲಕ ತಿಳಿಸಿ