Site icon Vistara News

Ram Mandir: ರಾಮಮಂದಿರಕ್ಕೆ ವಿಜ್ಞಾನದ ಬಲ; ಸಾವಿರ ವರ್ಷವಾದರೂ ಏನೂ ಆಗಲ್ಲ, ಹೇಗೆ ಅಂತೀರಾ?

Ram Mandir

ಅಯೋಧ್ಯೆ: ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ರಾಮಮಂದಿರದ (Ram Mandir) ಲೋಕಾರ್ಪಣೆಗೆ ಮೂರೇ ದಿನಗಳು ಬಾಕಿ ಉಳಿದಿವೆ. ರಾಮನಗರಿ ಅಯೋಧ್ಯೆಯಲ್ಲಿ ಹಬ್ಬ, ಜಾತ್ರೆಯ ಸಂಭ್ರಮ ಮನೆ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಜನವರಿ 22ರಂದು ರಾಮಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾ ಮೂರ್ತಿಗೆ ಪ್ರಾಣಪ್ರತಿಷ್ಠಾಪನೆ ನೆರವೇರಿಸಲಿದ್ದಾರೆ. ಇನ್ನು ರಾಮಮಂದಿರವನ್ನು ವೈಜ್ಞಾನಿಕವಾಗಿ, ಸದೃಢವಾಗಿ ನಿರ್ಮಿಸಲಾಗಿದ್ದು, ಒಂದು ಸಾವಿರ ವರ್ಷ ಕಳೆದರೂ ಮಂದಿರಕ್ಕೆ ಹಾನಿಯಾಗದಿರುವ ತಂತ್ರಜ್ಞಾನ ಅಳವಡಿಸಿಕೊಳ್ಳಲಾಗಿದೆ.

ಸಾವಿರ ವರ್ಷದವರೆಗೆ ರಿಪೇರಿಯೇ ಬೇಡ

ರಾಮಮಂದಿರವನ್ನು ಕಬ್ಬಿಣ, ಉಕ್ಕು ಸೇರಿ ಯಾವುದೇ ವಸ್ತುಗಳನ್ನು ಬಳಸದೆ, ವಿಶೇಷ ಕಲ್ಲುಗಳಿಂದ ನಿರ್ಮಿಸಲಾಗಿದೆ. ಸುಮಾರು 15 ಅಡಿ ಅಗೆದು, ಮಣ್ಣು ತೆಗೆದು, ಆ ಮಣ್ಣನ್ನು ರಿ-ಎಂಜಿನಿಯರಿಂಗ್‌ ಮಾಡಿ ಮತ್ತೆ ತುಂಬಲಾಗಿದೆ. ದೇಶದ ತಜ್ಞ ಎಂಜಿನಿಯರ್‌ಗಳು, ತಜ್ಞರು ರಾಮಮಂದಿರಕ್ಕಾಗಿ ಶ್ರಮಿಸಿದ್ದಾರೆ. ಹಾಗಾಗಿ, ಒಂದು ಸಾವಿರ ವರ್ಷವಾದರೂ ರಾಮಮಂದಿರವನ್ನು ಕನಿಷ್ಠ ರಿಪೇರಿ ಮಾಡಬೇಕಾಗಿಲ್ಲ ಎಂದು ಹೇಳಲಾಗುತ್ತಿದೆ.

6.5 ತೀವ್ರತೆಯ ಭೂಕಂಪ ಸಂಭವಿಸಿದರೂ ಏನೂ ಆಗಲ್ಲ

ನೇಪಾಳವು ನಮ್ಮ ಗಡಿ ರಾಷ್ಟ್ರವಾದ ಕಾರಣ, ಅಲ್ಲಿ ಭೂಕಂಪ ಸಂಭವಿಸಿದರೆ ಹೆಚ್ಚು ಪರಿಣಾಮ ಬೀರುತ್ತದೆ. ಇದನ್ನು ಮನಗಂಡೇ ರಾಮಮಂದಿರಕ್ಕೆ ವಿಶೇಷ ಬುನಾದಿ ಹಾಕಲಾಗಿದೆ. ಐಐಟಿ ಎಂಜಿನಿಯರ್‌ಗಳು, ತಜ್ಞರು ರಾಮಮಂದಿರ ಬುನಾದಿಗೆ ಶ್ರಮಿಸಿದ್ದಾರೆ. ಹಾಗಾಗಿ, ರಿಕ್ಟರ್‌ ಮಾಪನದಲ್ಲಿ 6.5 ತೀವ್ರತೆಯ ಭೂಕಂಪ ಸಂಭವಿಸಿದರೂ ರಾಮಮಂದಿರಕ್ಕೆ ಏನೂ ಆಗುವುದಿಲ್ಲ.

ರಾಮಮಂದಿರ ನಿರ್ಮಾಣದ ವೈಶಿಷ್ಟ್ಯಗಳು

ಇದನ್ನೂ ಓದಿ: Ayodhya Ram Mandir: ರಾಮಮಂದಿರ ಪ್ರಾಣ ಪ್ರತಿಷ್ಠೆ ದಿನ ಕೇಂದ್ರ ಸರ್ಕಾರಿ ಕಚೇರಿಗಳಿಗೆ ಅರ್ಧ ದಿನ ರಜೆ

55 ದೇಶಗಳ ಗಣ್ಯರಿಗೆ ಆಹ್ವಾನ

ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮಕ್ಕೆ 55 ದೇಶಗಳಿಂದ ಸುಮಾರು 100ಕ್ಕೂ ಅಧಿಕ ಗಣ್ಯರು ಅಯೋಧ್ಯೆಗೆ ಆಗಮಿಸಲಿದ್ದಾರೆ. ಜರ್ಮನಿ, ಫಿಜಿ, ಫಿನ್‌ಲ್ಯಾಂಡ್‌, ಅಮೆರಿಕ, ಬ್ರಿಟನ್‌, ಜರ್ಮನಿ, ಇಂಡೋನೇಷ್ಯಾ, ಐರ್ಲೆಂಡ್‌, ಜಪಾನ್‌, ಕೀನ್ಯಾ, ಕೊರಿಯಾ, ಮಾರಿಷಸ್‌, ನಾರ್ವೆ ಸೇರಿ 55 ದೇಶಗಳ ಗಣ್ಯರು ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಸಿಂಗಾಪುರ, ಸ್ಪೇನ್‌, ಶ್ರೀಲಂಕಾ, ಜಾಂಬಿಯಾ, ವಿಯೇಟ್ನಾಂ, ಉಗಾಂಡ, ವೆಸ್ಟ್‌ ಇಂಡೀಸ್‌ ದೇಶಗಳ ನಾಯಕರು ಕೂಡ ಪಟ್ಟಿಯಲ್ಲಿದ್ದಾರೆ. ವಿದೇಶಗಳಿಂದ ಆಗಮಿಸುವ ಎಲ್ಲ ಗಣ್ಯರು ಜನವರಿ 21ರಂದೇ ಅಯೋಧ್ಯೆಗೆ ತೆರಳಲಿದ್ದಾರೆ. ಅವರಿಗಾಗಿ ಸಕಲ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version