ಚಿಕ್ಕಮಗಳೂರು: ಶಂಕರಾಚಾರ್ಯರಿಗೂ ಅಯೋಧ್ಯೆಯ ಶ್ರೀರಾಮ ಮಂದಿರಕ್ಕೂ (Ayodhya Ram Mandir) ಯಾವುದೇ ಭಿನ್ನಾಭಿಪ್ರಾಯ ಇರಲು ಸಾಧ್ಯವಿಲ್ಲ ಎಂದು ಕೊಪ್ಪ ತಾಲೂಕಿನ ಹರಿಹರಪುರ ಮಠದ ಸಚ್ಚಿದಾನಂದ ಸರಸ್ವತಿ ಶ್ರೀಗಳು (Hariharapura Sachidananda Saraswathi Mahaswamiji) ಹೇಳಿದ್ದಾರೆ. ಅಯೋಧ್ಯೆಯ ರಾಮ ಮಂದಿರದ (Ayodhya Ram Temple) ಉದ್ಘಾಟನೆಯಲ್ಲಿ ಹಿಂದೂ ಧರ್ಮದ ಸುಪ್ರೀಂ ಗುರುಗಳಾದ ಜ್ಯೋತಿರ್ಪೀಠಗಳ ಪೀಠಾಧೀಶರು ಭಾಗವಹಿಸುತ್ತಿಲ್ಲ ಎಂಬ ಸುದ್ದಿಗಳ ಹಿನ್ನೆಲೆಯಲ್ಲಿ ಅವರು ಈ ಸ್ಪಷ್ಟನೆ ನೀಡಿದ್ದಾರೆ.
ಅಯೋಧ್ಯೆಯ ರಾಮ ಮಂದಿರ ಎಲ್ಲ ಹಿಂದೂಗಳಿಗೆ ಸೇರಿದ್ದು. ಅದಕ್ಕಾಗಿ ಇಡೀ ದೇಶವೇ ಹೋರಾಟ ನಡೆಸಿದೆ. ಆದರೂ, ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆಯಲ್ಲಿ ಶಂಕರ ಗುರು ಪರಂಪರೆಗೆ ಸೇರಿದ ಮಠಗಳು ಭಾಗವಹಿಸುತ್ತಿಲ್ಲ ಎಂಬುದು ನಿಜವಲ್ಲ. ಹೀಗೆ ಮಾತನಾಡುವ ಮುನ್ನ ಶಂಕರ ಪರಂಪರೆ ಹಾಗೂ ಶ್ರೀರಾಮನಿಗೂ ಏನು ಸಂಬಂಧ ಅಂತ ತಿಳಿದುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.
ಶಂಕರ ಗುರು ಪರಂಪರೆಯ ಮೂಲ ಪುರುಷರು ಆದಿ ಶಂಕರಾಚಾರ್ಯರು. ಆದಿ ಶಂಕರರು ಅದ್ವೈತ ಸಿದ್ಧಾಂತದ ಮೂಲಕ ಪರಮಾತ್ಮನನ್ನು ತತ್ವಸ್ವರೂಪದಲ್ಲಿ ಗ್ರಹಿಸಿ ಆತನನ್ನು ಆರಾಧಿಸುವ ವಿಧಾನಗಳನ್ನು ಜಗತ್ತಿಗೆ ತಿಳಿಸಿ, ಕಲಿಸಿಕೊಟ್ಟಿದ್ದಾರೆ. ಹರಿ ಮತ್ತು ಹರರಿಬ್ಬರೂ ಪರಬ್ರಹ್ಮದ ಅತ್ಯಂತ ಸಮಾನವಾದ ರೂಪಗಳು ಎಂದಿದ್ದಾರೆ. ಶಂಕರ ಪರಂಪರೆಯು ಹರಿ- ಹರರಿಬ್ಬರನ್ನೂ ಶ್ರದ್ಧಾ ಭಕ್ತಿಯಿಂದ ಆರಾಧಿಸುತ್ತದೆ ಎಂದಿದ್ದಾರೆ.
ಹರಿ ಎಂದರೆ ಮಹಾವಿಷ್ಣು, ವಿಷ್ಣುವಿನ 7ನೇ ಅವತಾರವೇ ಶ್ರೀರಾಮ. ಶಂಕರರು ಶ್ರೀ ರಾಮನ ಪರಮ ಭಕ್ತರಾಗಿದ್ದರು. ಶಂಕರರು ರಾಮನ ಬಗ್ಗೆ ಸ್ತೋತ್ರಗಳನ್ನು ರಚಿಸಿ ಶ್ರೀರಾಮನಿಗೆ ಸಮರ್ಪಣೆ ಮಾಡಿದ್ದಾರೆ. ಶಂಕರರು ಸ್ಥಾಪಿಸಿದ ಪೀಠಗಳಲ್ಲಿ ಶ್ರೀರಾಮನನ್ನು ನಿರಂತರವಾಗಿ ಆರಾಧಿಸುವಂತೆ ಆದೇಶಿಸಿದ್ದಾರೆ. ಶಂಕರ ಪರಂಪರೆಯ ಎಲ್ಲಾ ಮಠಗಳು ಶ್ರೀರಾಮನನ್ನು ಆರಾಧಿಸಿಕೊಂಡು ಬರುತ್ತಿದ್ದಾರೆ. ಶ್ರೀರಾಮ ಮಂದಿರ ಎಂಬುದು ಎಲ್ಲಾ ಮಠಗಳಲ್ಲೂ ಇದೆ. ಶ್ರೀರಾಮ ಭಾರತೀಯ ಸಂಸ್ಕೃತಿಗೆ ಸೇರಿದ ದೇವರು. ನಮ್ಮ ದೇಶದ ಹೆಗ್ಗುರುತು ಭಗವಾನ್ ಶ್ರೀ ರಾಮ, ಈ ಪವಿತ್ರ ದೇಶದ ಅಸ್ಮಿತೆ ಎಂದಿದ್ದಾರೆ.
ಹೀಗಾಗಿ ಅಯೋಧ್ಯೆಯ ಶ್ರೀರಾಮ ಮಂದಿರದ ಬಗ್ಗೆ ಶಂಕರಾಚಾರ್ಯ ಪರಂಪರೆಗೆ ಯಾವ ಅಸಮಾಧಾನವೂ ಇರಲು ಸಾಧ್ಯವಿಲ್ಲ. ಪ್ರಾಣ ಪ್ರತಿಷ್ಠಾಪನೆಯ ದಿನ ಎಲ್ಲ ಶಂಕರ ಮಠಗಳಲ್ಲೂ ರಾಮನ ಪೂಜೆ ನಡೆಯಲಿದೆ ಎಂದು ಹರಿಹರಪುರ ಮಠದ ಸಚ್ಚಿದಾನಂದ ಶ್ರೀಗಳು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ರಾಮಮಂದಿರ ಉದ್ಘಾಟನೆ; 11 ದಿನಗಳ ವ್ರತ ಆರಂಭಿಸಿದ ಮೋದಿ, ಆಡಿಯೊ ಸಂದೇಶ ರವಾನೆ