Site icon Vistara News

Ram Mandir: 84 ಸೆಕೆಂಡ್‌ಗಳಲ್ಲೇ ಮುಗಿಯಲಿದೆ ಪ್ರಾಣಪ್ರತಿಷ್ಠೆ; ಏನಿದು ಶುಭ ಮುಹೂರ್ತ?

Ram Mandir

Ayodhya Ram Mandir Pran Pratishtha: Muhurta will last only 84 seconds

ಅಯೋಧ್ಯೆ: ರಾಮನಗರಿ ಅಯೋಧ್ಯೆಯಲ್ಲಿ ಭಗವಾನ್‌ ಶ್ರೀರಾಮನ ಜಪ ಜೋರಾಗಿದೆ. ರಾಮಮಂದಿರದ (Ram Mandir) ಗರ್ಭಗುಡಿಯಲ್ಲಿ ರಾಮಲಲ್ಲಾನಿಗೆ (Ram Lalla) ಪ್ರಾಣಪ್ರತಿಷ್ಠೆ (Pran Pratishtha) ಮಾಡಲು ಕೆಲವೇ ಗಂಟೆಗಳು ಬಾಕಿ ಇವೆ. ಈಗಾಗಲೇ ಮಂದಿರದಲ್ಲಿ ಪೂಜಾ ಕೈಂಕರ್ಯಗಳಿಗೆ ಚಾಲನೆ ನೀಡಲಾಗಿದೆ. ಇನ್ನು ಮಧ್ಯಾಹ್ನ 12.20ರಿಂದ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಆರಂಭವಾದರೂ ಕೇವಲ 84 ಸೆಕೆಂಡ್‌ಗಳಲ್ಲಿ ಪ್ರಾಣ ಪ್ರತಿಷ್ಠೆ ಮುಗಿಯಲಿದೆ.

ಹೌದು, ಅಭಿಜಿತ್‌ ಲಗ್ನದ ಶುಭ ಮುಹೂರ್ತದಲ್ಲಿ ಪ್ರಾಣ ಪ್ರತಿಷ್ಠೆ ನಡೆಯಲಿದೆ. ಮುಹೂರ್ತವು ಕೇವಲ 84 ಸೆಕೆಂಡ್‌ಗಳಲ್ಲಿ ಮುಗಿಯುವ ಕಾರಣ ಇಷ್ಟು ಅವಧಿಯಲ್ಲಿಯೇ ರಾಮಲಲ್ಲಾನಿಗೆ ಪ್ರಾಣ ಪ್ರತಿಷ್ಠೆ ನೆರವೇರಲಿದೆ. ಮಧ್ಯಾಹ್ನ 12 ಗಂಟೆ 29 ನಿಮಿಷ ಹಾಗೂ 8 ಸೆಕೆಂಡ್‌ಗಳಿಂದ 12 ಗಂಟೆ 30 ನಿಮಿಷ ಹಾಗೂ 32 ಸೆಕೆಂಡ್‌ಗಳ ಶುಭ ಮುಹೂರ್ತದಲ್ಲಿ ಪ್ರಾಣ ಪ್ರತಿಷ್ಠೆ ನೆರವೇರಿಸಲಾಗುತ್ತಿದೆ.

ಪ್ರಾಣ ಪ್ರತಿಷ್ಠೆ ಎಂದರೇನು?

ಪ್ರಾಣ ಪ್ರತಿಷ್ಠಾ ಎನ್ನುವುದು ಹಿಂದೂ ಮತ್ತು ಜೈನ ಧರ್ಮದಲ್ಲಿನ ಜನಪ್ರಿಯ ಆಚರಣೆಯಾಗಿದ್ದು, ದೇವರ ವಿಗ್ರಹವನ್ನು ಪವಿತ್ರಗೊಳಿಸಿದ ನಂತರ ದೇವಾಲಯದ ಗರ್ಭಗುಡಿಯಲ್ಲಿ ಸ್ಥಾಪಿಸಲಾಗುತ್ತದೆ. ವಿಗ್ರಹಗಳನ್ನು ಹೀಗೆ ಪ್ರತಿಷ್ಠಾಪಿಸುವ ಸಮಯದಲ್ಲಿ ಪುರೋಹಿತರು ವೈದಿಕ ಸ್ತೋತ್ರಗಳ ಪಠಣ ನಡೆಸುವುದು ವಾಡಿಕೆ. ಪ್ರಾಣ್ ಎಂಬ ಪದದ ಅರ್ಥ ಜೀವಶಕ್ತಿ ಮತ್ತು ಪ್ರತಿಷ್ಠಾ ಎಂದರೆ ಸ್ಥಾಪನೆ. ಪ್ರಾಣ ಪ್ರತಿಷ್ಠಾ ಅಥವಾ ಪ್ರತಿಷ್ಠಾಪನಾ ಸಮಾರಂಭ ಎಂದರೆ ವಿಗ್ರಹಕ್ಕೆ ಜೀವಶಕ್ತಿಯನ್ನು ತುಂಬುವ ಆಚರಣೆ ಎಂದು ಹಿರಿಯರು ಹೇಳುತ್ತಾರೆ.

ಪ್ರಾಣ ಪ್ರತಿಷ್ಠಾ ಪ್ರಕ್ರಿಯೆಯ ಮೊದಲು ವಿಗ್ರಹಕ್ಕೆ ಯಾವುದೇ ವಿಶೇಷ ಶಕ್ತಿ ಇರುವುದಿಲ್ಲ ಎನ್ನಲಾಗಿದೆ. ಪ್ರಾಣ ಪ್ರತಿಷ್ಠಾನದ ಮೂಲಕ ವಿಗ್ರಹಕ್ಕೆ ವಿಶೇಷ ಶಕ್ತಿಗಳನ್ನು ತುಂಬಲಾಗುತ್ತದೆ. ಬಳಿಕವೇ ವಿಗ್ರಹ ದೈವಿಕ ಶಕ್ತಿಯಾಗಿ ರೂಪಾಂತರಗೊಳ್ಳುತ್ತದೆ. ಈ ಪ್ರಕ್ರಿಯೆಯ ನಂತರ ಭಕ್ತರು ಈ ವಿಗ್ರಹಗಳನ್ನು ಪೂಜಿಸಬಹುದು ಎಂದು ನಂಬಲಾಗಿದೆ.

ಇದನ್ನೂ ಓದಿ: Ram Mandir: ರಾಮಮಂದಿರ ಲೋಕಾರ್ಪಣೆಗೆ ಕೈ ಮುಗಿದು ಶುಭ ಕೋರಿದ ದಕ್ಷಿಣ ಆಫ್ರಿಕಾ ಕ್ರಿಕೆಟಿಗ

ಇನ್ನು 7 ಗಂಟೆಯಿಂದಲೇ ರಾಮನ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗಿದೆ. ರಾಮಮಂದಿರ ಟ್ರಸ್ಟ್‌ ನೀಡಿರುವ ಪಾಸ್‌ಗಳ ಕ್ಯೂ ಆರ್‌ ಕೋಡ್‌ ಸ್ಕ್ಯಾನ್‌ ಮಾಡುವ ಮೂಲಕ ಭಕ್ತರು ದೇವಾಲಯ ಪ್ರವೇಶಿಸಿ ಬೆಳಗ್ಗೆ 7 ಗಂಟೆಯಿಂದ 11.30ರವರೆಗೆ ರಾಮನ ದರ್ಶನ ಪಡೆಯಬಹುದಾಗಿದೆ. ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಆರತಿ ನಡೆಯಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version