Site icon Vistara News

Ayodhya Rama Mandir : ಮಂದಿರ ಲೋಕಾರ್ಪಣೆ ಹಿನ್ನೆಲೆ; ಕೇಸರಿ ಧ್ವಜ, ಪುಸ್ತಕಗಳಿಗೆ ಭಾರಿ ಬೇಡಿಕೆ

Rama picture in Shopping Mall in Bangalore

ಬೆಂಗಳೂರು: ಜನವರಿ 22ರಂದು ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ (Rama Janmabhumi) ನಡೆಯಲಿರುವ ರಾಮ ಮಂದಿರದ (Ayodhya Rama Mandir) ಲೋಕಾರ್ಪಣೆ ಇಡೀ ದೇಶದಲ್ಲಿ ಸಂಚಲನ ಸೃಷ್ಟಿಸಿದೆ. ಜನವರಿ 22ರ ವಿದ್ಯಮಾನಕ್ಕಾಗಿ ಇಡೀ ದೇಶ ಕಾಯುತ್ತಿದ್ದು, ಅದರಲ್ಲಿ ತಾವೂ ಬೇರೆ ಬೇರೆ ರೂಪದಲ್ಲಿ ಪಾಲ್ಗೊಳ್ಳಲು ಜನರು ಸಜ್ಜಾಗುತ್ತಿದ್ದಾರೆ. ದೇಶಾದ್ಯಂತ ಅಂದು ಭಜನೆ, ಧಾರ್ಮಿಕ ಕಾರ್ಯಕ್ರಮಗಳಿಗೆ ವ್ಯವಸ್ಥೆ ಮಾಡಲಾಗುತ್ತಿದೆ.

ಇದರ ನಡುವೆ ಜನರು ರಾಮೋತ್ಸವಕ್ಕಾಗಿ ಬೇರೆ ಬೇರೆ ರೀತಿಯಲ್ಲಿ ಸಜ್ಜಾಗುತ್ತಿದ್ದಾರೆ. ಮಂದಿರ ಉದ್ಘಾಟನೆಯ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಕೇಸರಿ ಧ್ವಜಗಳು (Demand for Saffron Flag), ರಾಮಾಯಣ ಪುಸ್ತಕಗಳು (Ramayans Books), ರಾಮ ಮಂದಿರದ ಮಾದರಿಗಳು (Rama Mandir Models) ದೊಡ್ಡ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ. ಮಂದಿರ ಲೋಕಾರ್ಪಣೆಯ ಹಿನ್ನೆಲೆಯಲ್ಲಿ ಹಿರಿಯರು ಮಕ್ಕಳಿಗೆ ರಾಮಾಯಣದ ಬಗ್ಗೆ ಕಥೆಗಳನ್ನು ಹೇಳುತ್ತಿದ್ದಾರೆ, ಮಕ್ಕಳೂ ಅವುಗಳನ್ನು ಓದುವ ಉತ್ಸಾಹ ಹೊಂದಿದ್ದಾರೆ. ಹೀಗಾಗಿ ಪುಸ್ತಕಗಳಿಗೆ ದೊಡ್ಡ ಮಟ್ಟದ ಬೇಡಿಕೆ ಬಂದಿದೆ.

ಧ್ವಜ, ಶಾಲು, ಮೂರ್ತಿಗಳಿಗೆ ಬೇಡಿಕೆ

ಮಂದಿರ ಉದ್ಘಾಟನೆಯ ಹಿನ್ನೆಲೆಯಲ್ಲಿ ಕೇಸರಿ ಧ್ವಜಗಳಿಗೆ ವಿಪರೀತ ಬೇಡಿಕೆ ಇದೆ. ಅದರಲ್ಲೂ ಜೈ ಶ್ರೀರಾಮ್‌ ಹಾಗೂ ಜೈ ಹನುಮಾನ್‌ ಎಂದು ಬರೆದ ಕೇಸರಿ ಧ್ವಜಗಳನ್ನೇ ಹೆಚ್ಚು ಹೆಚ್ಚು ಕೇಳುತ್ತಿದ್ದಾರೆ. ಇನ್ನು ಕೇಸರಿ ಶಾಲು, ಅದರಲ್ಲೂ ಜೈಶ್ರೀರಾಮ್‌ ಎಂದು ಪ್ರಿಂಟ್‌ ಮಾಡಿದ ಶಾಲುಗಳಿಗೆ ಬೇಡಿಕೆ ಹೆಚ್ಚಾಗಿದೆ ಎಂದು ಬೆಂಗಳೂರಿನ ಗಾಂಧಿ ಬಜಾರ್‌ನಲ್ಲಿರುವ ಸತೀಶ್‌ ಸ್ಟೋರ್‌ನ ಮ್ಯಾನೇಜರ್‌ ಹೇಳುತ್ತಾರೆ.

ರಾಮ, ಲಕ್ಷ್ಮಣ ಮತ್ತು ಸೀತಾ ಮಾತೆಯ ಭಾವಚಿತ್ರ ಮತ್ತು ಮೂರ್ತಿಗಳಿಗೆ ದೊಡ್ಡ ಮಟ್ಟದ ಬೇಡಿಕೆ ಬರುತ್ತಿದೆ. ತುಂಬಾ ಜನರು ಬಂದು ಕೇಳುತ್ತಿದ್ದಾರೆ ಎಂದು ಶಾಂತಿ ನಗರದ ಭಕ್ತಿ ಶ್ರೀನಗರ್‌ ಸ್ಟೋರ್‌ನ ಸಿಬ್ಬಂದಿ ಹೇಳುತ್ತಾರೆ.

ರಾಮಾಯಣ, ರಾಮನಿಗೆ ಸಂಬಂಧಿಸಿದ ಇತರ ಕೃತಿಗಳು ಹೆಚ್ಚು ಬೇಡಿಕೆ ಹೊಂದಿವೆ. ಅದಕ್ಕಿಂತಲೂ ಮುಖ್ಯವಾಗಿ ರಾಮ ರಕ್ಷಾ ಸ್ತೋತ್ರವನ್ನು ಹೆಚ್ಚು ಹೆಚ್ಚು ಜನರು ಕೊಳ್ಳುತ್ತಿದ್ದಾರೆ.

ಇದನ್ನೂ ಓದಿ : Rama Mandir : ರಾಮ ಮಂದಿರ ಆಯಿತು, ಇನ್ನು ಹಿಂದೂ ರಾಷ್ಟ್ರ; RSS ಸಹಕಾರ್ಯವಾಹ ನಾ ತಿಪ್ಪೇಸ್ವಾಮಿ

ʻಮಂದಿರವಲ್ಲೇ ಕಟ್ಟಿದೆವು!ʼ ಕೃತಿಗೆ ಭಾರಿ ಡಿಮ್ಯಾಂಡ್‌

ಪತ್ರಕರ್ತ ರಮೇಶ್‌ ಕುಮಾರ್‌ ನಾಯಕ್‌ ಅವರು ಬರೆದಿರುವ 496 ವರ್ಷಗಳ ರಾಮ ಮಂದಿರ ಆಂದೋಲನದ ಕಥನವನ್ನು ಹೊತ್ತಿರುವ ʻಮಂದಿರವಲ್ಲೇ ಕಟ್ಟಿದೆವು!ʼ (Mandiravalle Kattidevu!) ಕೃತಿಗೆ ಭಾರಿ ಬೇಡಿಕೆ ಇದೆ ಎಂದು ಪ್ರಕಾಶಕರಾದ ಸ್ನೇಹ ಬುಕ್‌ ಹೌಸ್‌ನ ಮಾಲೀಕ ಕೆ.ಬಿ. ಪರಶಿವಪ್ಪ ಹೇಳುತ್ತಾರೆ.

ಮಂದಿರವಲ್ಲೇ ಕಟ್ಟಿದೆವು! ಕೃತಿಯನ್ನು ನಾವು ಇನ್ನೂ ಅಧಿಕೃತವಾಗಿ ಕಾರ್ಯಕ್ರಮ ಮಾಡಿ ಬಿಡುಗಡೆ ಮಾಡಿಲ್ಲ. ಪ್ರಿಆರ್ಡರ್‌ನಲ್ಲೇ ಸಿಕ್ಕಾಪಟ್ಟೆ ಬೇಡಿಕೆ ಬಂದು ಎರಡು ಮುದ್ರಣಗಳನ್ನು ಮಾಡಬೇಕಾಯಿತು. ಇದೀಗ ನಾಡಿನ ಹಲವಾರು ಕಡೆಗಳಲ್ಲಿ ಸಂಘ ಸಂಸ್ಥೆಗಳೇ ಪುಸ್ತಕವನ್ನು ತರಿಸಿಕೊಂಡು ಬಿಡುಗಡೆ ಮಾಡಿಕೊಳ್ಳುತ್ತಿದ್ದಾರೆ. ಕೆಲವೇ ದಿನದಲ್ಲಿ ಈಗ ನಾಲ್ಕನೇ‌ ಮುದ್ರಣಕ್ಕೆ ಪುಸ್ತಕ ಅಣಿಯಾಗಿದೆ ಎಂದು ಕೆ.ಬಿ ಪರಶಿವಪ್ಪ ಅವರು ಖುಷಿ ಹಂಚಿಕೊಂಡರು. ಈ ಪುಸ್ತಕಕ್ಕೆ ರಾಜ್ಯ ಮಾತ್ರವಲ್ಲ ದೇಶಾದ್ಯಂತ ಬೇಡಿಕೆ ಇದೆ. ಅಮೆರಿಕಕ್ಕೂ ಕಳುಹಿಸಿಕೊಟ್ಟಿದ್ದೇವೆ ಎಂದು ಅವರು ಹೇಳಿದರು.

ಮಂದಿರಗಳಲ್ಲಿ ಮಾತ್ರವಲ್ಲ ಮಾಲ್‌ಗಳಲ್ಲೂ ಸಿದ್ಧತೆ

ರಾಜ್ಯದ ಎಲ್ಲ ದೇವಸ್ಥಾನಗಳಲ್ಲಿ ಅಂದು ಭಜನೆ, ಪೂಜೆ, ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅದರ ಜತೆಗೇ ಶಾಪಿಂಗ್‌ ಮಾಲ್‌ಗಳಲ್ಲೂ ರಾಮೋತ್ಸವದ ಸಂಭ್ರಮ ಮನೆ ಮಾಡಿದೆ. ಬೆಂಗಳೂರಿನ ಒಂದು ಮಾಲ್‌ನಲ್ಲಿ ದೊಡ್ಡ ರಾಮ ಮಂದಿರವನ್ನು ರಂಗೋಲಿಯಲ್ಲಿ ಚಿತ್ರಿಸಲಾಗಿದೆ. ಅದನ್ನು ಮೇಲಿನ ಮಹಡಿಗಳಿಂದ ನೋಡಿದಾಗ ರೋಮಾಂಚನ ಹುಟ್ಟಿಸುವಂತಿದೆ. ಮಾಲ್‌ ಗಳು ಕೂಡಾ ಕೇಸರಿ ಬಣ್ಣದ ಧ್ವಜಗಳಿಂದ ಅಲಂಕಾರಗೊಳ್ಳುವ ಸಾಧ್ಯತೆ ಇದೆ.

Exit mobile version