Site icon Vistara News

Bakrid 2022 | ತ್ಯಾಗ ಬಲಿದಾನದ ಪ್ರತೀಕ ಈ ಹಬ್ಬ

bakrid 2022

ಮುಸಲ್ಮಾನರು ಆಚರಿಸುವ ಎರಡು ದೊಡ್ಡ ಹಬ್ಬಗಳಲ್ಲಿ ಬಕ್ರೀದ್‌ (Bakrid 2022) ಕೂಡ ಒಂದು. ಇಸ್ಲಾಮೀ ಕ್ಯಾಲೆಂಡರಿನ 12 ತಿಂಗಳ ಪೈಕಿ, ದುಲ್‌ಹಜ್‌ 10ನೇ ತಾರೀಕಿನಂದು ಬ್ರಕ್ರೀದ್‌ ಹಬ್ಬ ಆಚರಿಸಲಾಗುತ್ತದೆ. ಇದು ತ್ಯಾಗ ಮತ್ತು ಬಲಿದಾನವನ್ನು ನೆನಪಿಸುವ ಹಬ್ಬ.

ಸುಮಾರು ಐದು ಸಾವಿರ ವರ್ಷಗಳ ಹಿಂದಿನ ಘಟನೆಯ ಸ್ಮರಣೆಯೇ ಬಕ್ರೀದ್‌ ಹಬ್ಬದ ಆಚರಣೆ. ಪ್ರವಾದಿ ಇಬ್ರಾಹಿಂ ಅವರು ಇಸ್ಲಾಮಿನ ಏಕದೇವ ವಿಶ್ವಾಸ ಸ್ಥಾಪನೆಗಾಗಿ ತನ್ನ ಹೆತ್ತವರು, ಸ್ವಂತ ಕುಟುಂಬ, ಮನೆ, ಆಸ್ತಿ, ಊರು ತ್ಯಾಗ ಮಾಡಿ ದೇಶಾಂತರ ಹೊರಟು ದೇವಾದೇಶದಂತೆ ವೃದ್ಧಾಪ್ಯದಲ್ಲಿ ಸ್ವಂತ ಮಗುವನ್ನೂ ಬಲಿ ಕೊಡಲು ಹೊರಟ ಅಮರ ಇತಿಹಾಸವನ್ನು ಈ ಹಬ್ಬ ನೆನಪಿಸುತ್ತದೆ.

ಪ್ರವಾದಿ ಇಬ್ರಾಹಿಂರ ತ್ಯಾಗಗಳೇನು?

ಸುಮಾರು ಐದು ಸಾವಿರ ವರ್ಷದ ಹಿಂದೆ ಇಬ್ರಾಹಿಮ್(ಅಬ್ರಹಾಂ) ಎಂಬ ಮಹಾನ್‌ ಪ್ರವಾದಿ ಇದ್ದರು. ಈಗ ಇರಾಕ್ ಎಂದು ಕರೆಯುವ ಪ್ರದೇಶದ ಉರ್ ನಗರದ ಪುರೋಹಿತ ಅಝರ್ ಅವರ ಪುತ್ರ ಇವರು. ಆಗ ಆ ಪ್ರದೇಶವನ್ನು ದುಷ್ಟರಾಜ ನಮ್ರೂದ್ ಆಳುತ್ತಿದ್ದು, ಪ್ರಜೆಗಳು ತನ್ನ ದಾಸರೆಂದು ಬಗೆದು ಹಿಂಸಿಸುತ್ತಿದ್ದ. ಅಂಥ ಪರಿಸ್ಥಿತಿಯಲ್ಲಿ ಸಮಾಜ ಸುಧಾರಣೆಗಾಗಿ ಇಬ್ರಾಹಿಮ್ ಅವರನ್ನು ತನ್ನ ಪ್ರವಾದಿಯನ್ನಾಗಿ ಜಗದೊಡೆಯ ಅಲ್ಲಾಹನು ನೇಮಿಸುತ್ತಾನೆ.

ಜನರನ್ನು ಅಕ್ರಮ, ಅನಾಚಾರಗಳಿಂದ ತಡೆದು, ಅರ್ಥಹೀನ ಕಂದಾಚಾರ, ದುರಾಚಾರಗಳಿಂದಲೂ ತಪ್ಪಿಸಿ ಮುಕ್ತರನ್ನಾಗಿಸಬೇಕೆಂದು ಹಝ್ರತ್ ಇಬ್ರಾಹಿಮ್ ಅವರಿಗೆ ದೇವಾದೇಶವಾಗುತ್ತದೆ. ಮರುಕ್ಷಣದಿಂದಲೇ ಅವರು ಸಮಾಜ ಸುಧಾರಣೆ ಕಾರ್ಯವನ್ನು ತನ್ನ ಮನೆಯಿಂದಲೇ ಆರಂಭಿಸುತ್ತಾರೆ.

ಇಬ್ರಾಹಿಮ್ ಅವರ ಉಪದೇಶವನ್ನು ತಂದೆ ಅಝರ್ ಕೇಳುವ ಸ್ಥಿತಿಯಲ್ಲಿರಲಿಲ್ಲ. ದೇವನೊಬ್ಬ, ಆತನ ಮಾತು ಕೇಳಿ, ಅನ್ಯಾಯ ಮಾಡದಿರಿ ಎಂದು ಉಪದೇಶಿಸಿದ ಸ್ವಂತ ಮಗನನ್ನು ತಂದೆಯು ಮನೆಯಿಂದ ಹೊರ ಹಾಕುತ್ತಾನೆ. ದೇವನ ಸಂಪ್ರೀತಿಗಾಗಿ ಇಬ್ರಾಹಿಂ ಆಸ್ತಿಪಾಸ್ತಿ ತ್ಯಾಗ ಮಾಡುತ್ತಾರೆ. ಗೆಳೆಯರು ಗೆಳೆತನ ಬಿಡುತ್ತಾರೆ, ನೆಂಟರಿಷ್ಟರು ಶತ್ರುಗಳಾಗುತ್ತಾರೆ. ದೊರೆ ನಮ್ರೂದನ ಆಜ್ಞೆಯಂತೆ ಇಬ್ರಾಹಿಮರನ್ನು ಸುಡುವ ಅಗ್ನಿಗೆ ಎಸೆಯಲಾಗುತ್ತದೆ. ಆದರೆ, ದೇವ ಚಮತ್ಕಾರ ಎಂಬಂತೆ ಇಬ್ರಾಹಿಮ್ ಪಾಲಿಗೆ ಅದು ಉದ್ಯಾನವಾಗಿ ಮಾರ್ಪಟ್ಟು ಪಾರಾಗಿ ಬರುತ್ತಾರೆ.

ಮುಂದೆ ಧರ್ಮ ಪ್ರಚಾರಕ್ಕಾಗಿ ಸಿರಿಯಾ, ಈಜಿಪ್ಟ್, ಅರೇಬಿಯಾ ಮೊದಲಾದ ದೇಶಗಳಲ್ಲಿ ಸಂಚರಿಸುತ್ತಾರೆ. ಈಜಿಪ್ಟ್‌ಗೆ ಹೋದಾಗ ವಿದೇಶೀಯರ ಆಗಮನದ ಸುದ್ದಿ ತಿಳಿದ ಅಲ್ಲಿಯ ದೊರೆ ಸಾರಾ ಅವರನ್ನು ಬಂಧಿಯನ್ನಾಗಿಸಿ ತನ್ನ ಆಸ್ಥಾನಕ್ಕೆ ಕರೆಸಿಕೊಳ್ಳುತ್ತಾನೆ. ಅಲ್ಲಿ ನಡೆದ ಕೆಲವು ಪವಾಡಸದೃಶ ಘಟನೆಗಳಿಂದ ಭಯಭೀತನಾದ ರಾಜ ಸಾರಾ ಅವರನ್ನು ಗೌರವದಿಂದ ಕಾಣತೊಡಗುತ್ತಾನೆ. ಸರ್ವಾಂಗ ಸುಂದರಿಯೂ ಸರ್ವಗುಣ ಸಂಪನ್ನೆಯೂ ಆಗಿದ್ದ ಹಾಜಿರಾ ಎಂಬ ತನ್ನ ಸೋದರಿಯನ್ನು ಸಾರಾ ಅವರ ಸೇವೆಗಾಗಿ ಕಳುಹಿಸಿ ಕೊಟ್ಟು ರಾಜಮರ್ಯಾದೆಯಿಂದ ಬೀಳ್ಕೊಡುತ್ತಾನೆ.

ದೈವಾಜ್ಞೆ ಪಾಲಿಸುವ ಪ್ರವಾದಿ ಇಬ್ರಾಹಿಂ

ಹಾಜಿರಾ ಅವರನ್ನು ಇಬ್ರಾಹಿಂ ಮದುವೆಯಾಗುತ್ತಾರೆ. ತಮ್ಮ ಧರ್ಮ ಸಂಸ್ಥಾಪನೆ ಕಾರ್ಯ ಮುನ್ನಡೆಸಲು ಪುತ್ರ ಪ್ರಾಪ್ತಿಗಾಗಿ ದೇವರಲ್ಲಿ ಪ್ರಾರ್ಥಿಸುತ್ತಾರೆ. ಅಲ್ಲಾಹನು ಅವರ ಬೇಡಿಕೆ ಪೂರೈಸುತ್ತಾನೆ. ಪತ್ನಿ ಹಾಜಿರಾಗೆ ಗಂಡು ಮಗು ಜನಿಸುತ್ತದೆ. ಮಗುವಿನ ಹೆಸರನ್ನು ಇಸ್ಮಾಈಲ್ ಎಂದಿಡುತ್ತಾರೆ. ಅದು ಶಿಶುವಾಗಿದ್ದಾಗಲೇ ಇನ್ನೊಂದು ಸತ್ವಪರೀಕ್ಷೆ ಎದುರಾಗುತ್ತದೆ. ತಾಯಿ- ಮಗುವನ್ನು ಅರೇಬಿಯಾದ ನೂರಾರು ಮೈಲು ದೂರದ ಮರುಭೂಮಿಯ ನಿರ್ಜಲ, ನಿರ್ಜನ ಪ್ರದೇಶದಲ್ಲಿ ಬಿಟ್ಟು ಬರಬೇಕೆಂಬ ದೈವಾಜ್ಞೆಯಾಗುತ್ತದೆ.

ಸರ್ವತ್ಯಾಗಿಯಾದ ಇಬ್ರಾಹಿಮ್ ಅದನ್ನೂ ಮಾಡುತ್ತಾರೆ. ಉರಿಯುವ ಬಿಸಿಲಿನಲ್ಲಿ ಮಗು ಅಳುತ್ತಿರುತ್ತದೆ. ತಾಯಿಯ ಎದೆಹಾಲು ಬತ್ತಿ ಹೋಗುತ್ತದೆ. ಮರಳುಗಾಡಿನಲ್ಲಿರುವ ಏಕೈಕ ಮಹಿಳೆ ಕಂದಮ್ಮನ ಹಸಿವೆ ನೀಗಿಸಲು ನೀರು ಸಿಗಬಹುದು ಎಂಬ ನಿರೀಕ್ಷೆಯಿಂದ ಸಾ ಮತ್ತು ಮರ್ವಾ ಎಂಬ ಬೆಟ್ಟಗಳ ಮಧ್ಯೆ ಏಳು ಬಾರಿ ಓಡಾಡುತ್ತಾರೆ. ಮಗುವಿಗೆ ಆಹಾರ ನೀಡಬೇಕೆಂದು ಅವರು ಎಷ್ಟು ಪ್ರಯತ್ನ ಪಟ್ಟರೂ ಸಾಧ್ಯವಾಗುವುದಿಲ್ಲ.

ಇತ್ತ ಬಾಯಾರಿದ ಶಿಶು ಇಸ್ಮಾಈಲ್, ತನ್ನ ಕಾಲನ್ನು ನೆಲಕ್ಕೆ ಬಡಿದಾಗ ನೀರಿನ ಚಿಲುಮೆ ಚಿಮ್ಮ ತೊಡಗುತ್ತದೆ. ಸಾ- ಮರ್ವಾ ಬೆಟ್ಟದಲ್ಲಿ ಏನೂ ಸಿಗದೆ ನಿರಾಸೆಯಿಂದ ಬರಿಗೈಲಿ ಮರಳಿದ ತಾಯಿ, ಮಗುವಿನ ಸಮೀಪದ ಚಿಮ್ಮುತ್ತಿದ್ದ ನೀರಿನ ಬುಗ್ಗೆ ಕಂಡು ಆನಂದ ತುಂದಿಲರಾಗಿ ಝಮ್ ಝಮ್(ನಿಲ್ಲು ನಿಲ್ಲು) ಎನ್ನುತ್ತಾರೆ. ಮುಂದೆ ಒಂದೊಂದೇ ಕುಟುಂಬ ಇಲ್ಲಿಗೆ ಬಂದು ನೆಲೆಸತೊಡಗುತ್ತದೆ. ಮುಂದೆ ಪಟ್ಟಣವಾಗಿ ಇಂದಿನ ಮಕ್ಕಾ ನಗರವಾಗಿ ಬೆಳೆಯುತ್ತದೆ. ಸೌದಿ ಅರೇಬಿಯಾದ ಮರುಭೂಮಿಯಲ್ಲೂ ಝಮ್ ಝಮ್ ನೀರು ಇಂದಿಗೂ ಹರಿಯುತ್ತಿದೆ, ಪ್ರತಿದಿನ ಲಕ್ಷಾಂತರ ಜನರಿಗೆ ನೀರುಣಿಸುತ್ತಿದೆ.

ಹಜ್ ಯಾತ್ರೆ ಕೈಗೊಳ್ಳುವ ಪ್ರತಿಯೊಬ್ಬ ಮುಸ್ಲಿಮರು ಈಗಲೂ ಸಾ ಮತ್ತು ಮರ್ವಾ ಎಂಬ ಬೆಟ್ಟಗಳ ಮಧ್ಯೆ ಏಳು ಬಾರಿ ಓಡಾಡುತ್ತಾರೆ. ಹೀಗೆ ಸಾಂಕೇತಿಕವಾಗಿ ಓಡಾಟ ನಡೆಸಿ ತಾಯಿ ಹಾಜಿರಾ ಅವರನ್ನುನೆನಪಿಸಿಕೊಳ್ಳುತ್ತಾರೆ. ಝಮ್ ಝಮ್ ಇರುವ ಪ್ರದೇಶದಲ್ಲಿ ಇಸ್ಮಾಈಲ್ ಸದ್ಗುಣ ಸಂಪನ್ನರಾಗಿ ಬೆಳೆಯುತ್ತಾರೆ.

ಮುಂದೆ ಈ ಮಗನ ಮೇಲೆ ತಂದೆಗೆ ಅತಿಯಾದ ಪ್ರೀತಿ ಬೆಳೆಯುತ್ತದೆ. ಇದೇ ಪ್ರೇಮವನ್ನು ಅಲ್ಲಾಹನು ಪರೀಕ್ಷೆಗೆ ಒಳಪಡಿಸುತ್ತಾನೆ. ‘ನಿನ್ನ ಪ್ರೀತಿಯ ಪುತ್ರನನ್ನು ನನ್ನ ಮಾರ್ಗದಲ್ಲಿ ಬಲಿ ಅರ್ಪಿಸು’ ಎಂಬ ಸ್ವಪ್ನಾಜ್ಞೆ ಇಬ್ರಾಹಿಮರಿಗೆ ಸಿಕ್ಕಿತು. ಇಬ್ರಾಹಿಮ್ ಚೆನ್ನಾಗಿ ಯೋಚಿಸುತ್ತಾರೆ. ಎಲ್ಲವನ್ನೂ ತ್ಯಾಗ ಮಾಡಿದ್ದ ಅವರು, ಪ್ರೀತಿಯ ಪುತ್ರನ ತ್ಯಾಗಕ್ಕೂ ಎದ್ದು ನಿಲ್ಲುತ್ತಾರೆ. ಸ್ವಪ್ನಾಜ್ಞೆಯನ್ನು ಪತ್ನಿಗೆ ತಿಳಿಸಿದಾಗ, ಅದೇ ಗರಡಿಯಲ್ಲಿ ಪಳಗಿರುವ ಹಾಜಿರಾ ಕೂಡಾ ತ್ಯಾಗಕ್ಕೆ ಸಿದ್ಧರಾಗುತ್ತಾರೆ. ಸ್ವತಃ ಮಗನೂ ಸಂತೋಷದಿಂದ ದೇವಾಜ್ಞೆ ಪಾಲಿಸಲು ಸಿದ್ಧನಾಗುತ್ತಾನೆ.

ಅಲ್ಲಾಹನ ಆಜ್ಞೆಯಂತೆ ಪ್ರವಾದಿ ಇಬ್ರಾಹಿಮ್ ತಮ್ಮ ಪ್ರೀತಿಯ ಪುತ್ರ ಇಸ್ಮಾಈಲ್‌ರನ್ನು ಬಲಿಗೊಡಲು ಹೊರಟಾಗ ಮಧ್ಯೆ ಶೈತಾನ ತಡೆಯುವ ಪ್ರಯತ್ನ ಮಾಡುತ್ತಾನೆ. ಕಲ್ಲೆಸೆಯುವ ಮೂಲಕ ಅದನ್ನು ಮೆಟ್ಟಿ ನಿಲ್ಲುತ್ತಾರೆ. ಅದನ್ನೂ ಹಜ್ ಕರ್ಮ ವೇಳೆ ಸಾಂಕೇತಿಕವಾಗಿ ಈಗಲೂ ಮಾಡಲಾಗುತ್ತದೆ. ಮಗುವನ್ನು ನೆಲದಲ್ಲಿ ಮಲಗಿಸಿ, ಇನ್ನೇನು ಕೊರಳು ಕೊಯ್ಯಬೇಕು ಎನ್ನುವಷ್ಟರಲ್ಲಿ ‘ಓ ಇಬ್ರಾಹೀಮ್ ನೀನು ಈ ಸತ್ವಪರೀಕ್ಷೆಯಲ್ಲೂ ಉತ್ತೀರ್ಣನಾದೆ, ನೀನು ನಮ್ಮ ಆಜ್ಞೆಯನ್ನು ಚೆನ್ನಾಗಿ ಪಾಲಿಸಿರುವೆ. ನಿನ್ನ ಮಗನ ಬದಲಿಗೆ ಈ ಟಗರನ್ನು ಬಲಿಯರ್ಪಿಸು. ನೀನು ಮುಸ್ಲಿಮ(ದೇವಾಜ್ಞೆಗೆ ಶರಣಾಗುವವ)ನಾಗಿರುವೆ. ಇನ್ನು ನೀವಿಬ್ಬರೂ ಕೂಡಿ ನನ್ನ ದಾಸ್ಯಾರಾಧನೆಗಾಗಿ ಒಂದು ಮಂದಿರವನ್ನು ನಿರ್ಮಿಸಿರಿ’ ಎಂಬ ದೇವಾಜ್ಞೆಯಾಗುತ್ತದೆ. ಅದರಂತೆ ತಂದೆ- ಮಗ ಸೇರಿ ಝಮ್ ಝಮ್ಸ್ರೋ ತದ ಬಳಿಯಲ್ಲೇ ಒಂದು ಆರಾಧನಾಲಯ ನಿರ್ಮಿಸುತ್ತಾರೆ.

ಹಬ್ಬದ ಆಚರಣೆ ಹೇಗೆ?
ಹಬ್ಬದ ದಿನ ಬೆಳಗ್ಗೆ ಸ್ನಾನದ ಬಳಿಕ ಎಲ್ಲರೂ ಹೊಸ ಬಟ್ಟೆಗಳನ್ನು ಧರಿಸಿ, ಸಿಹಿ ತಿಂಡಿ ಸೇವಿಸಿ ಈದ್ಗಾ ಅಥವಾ ಮಸೀದಿಗಳಿಗೆ ತೆರಳಿ, ವಿಶೇಷ ಪ್ರಾರ್ಥನೆ ಸಲ್ಲಿಸುತ್ತಾರೆ. ಪ್ರಾರ್ಥನೆ ಮತ್ತು ಪ್ರವಚನದ ಬಳಿಕ ಪರಿಸ್ತಪರ ಹಸ್ತಲಾಘವ, ಆಲಿಂಗನ ಮೂಲಕ ಹಬ್ಬದ ಶುಭಾಶಯ ಹಂಚಿಕೊಳ್ಳುತ್ತಾರೆ. ಬಕ್ರೀದ್‌ ಹಬ್ಬದ ದಿನದಂದು ಯಾವ ಪ್ರಾಣಿಯನ್ನು ತ್ಯಾಗ ಮಾಡಿದರೂ, ಅದರ ಮಾಂಸವನ್ನು ಮೂರು ಭಾಗಗಳನ್ನಾಗಿ ಮಾಡಲಾಗುತ್ತದೆ. ಒಂದು ಭಾಗವನ್ನು ಬಡವರಿಗೆ ವಿತರಿಸಬೇಕೆಂಬ ನಿಯಮವಿದೆ. ಎರಡನೇ ಭಾಗವನ್ನು ಸಂಬಂಧಿಕರಿಗೆ ವಿತರಿಸಬೇಕು ಮತ್ತು ಮೂರನೇ ಭಾಗವನ್ನು ಮನೆಯವರು ಬಳಸಬೇಕು ಎನ್ನುವ ಸಂಪ್ರದಾಯವಿದೆ. ಒಟ್ಟಾರೆಯಾಗಿ ದೇವರೊಡ್ಡಿದ ಸವಾಲುಗಳನ್ನು ಎದುರಿಸಿದ ಪ್ರವಾದಿಯ ತ್ಯಾಗ ಬಲಿದಾನವನ್ನು ಈ ಹಬ್ಬದ ಸಂದರ್ಭದಲ್ಲಿ ನೆನೆಯಲಾಗುತ್ತದೆ.

ಅಂದು ಟಗರನ್ನು ಬಲಿ ಕೊಟ್ಟಿದ್ದರಿಂದ ಅಂದಿನಿಂದಲೂ ಆಡುಗಳನ್ನು, ಕುರಿಗಳನ್ನು ಬಲಿ ನೀಡುವ ಸಂಪ್ರದಾಯ ಪ್ರಾರಂಭವಾಯಿತು. ಈ ಬಲಿ ನೀಡುವ ಕಾರಣಕ್ಕಾಗಿ ಈ ಹಬ್ಬವನ್ನು ಬಕ್ರಾ ಈದ್ ಅಥವಾ ಬಕ್ರೀದ್‌ ಎಂದೂ ಕರೆಯುತ್ತಾರೆ.

ಇದನ್ನೂ ಓದಿ | Bakrid 2022 | ಜುಲೈ 10ರ ಬಕ್ರೀದ್ ಹಬ್ಬಕ್ಕೆ ಟರ್ಮ್ಸ್‌ & ಕಂಡೀಶನ್‌ ಅಪ್ಲೈ

Exit mobile version