Site icon Vistara News

Banavasi News: ಶತಾಯುಷಿ ಶ್ರೀ ಸಿದ್ಧವೀರ ಶಿವಯೋಗಿಗಳ ನೂತನ ಗದ್ದುಗೆ ಮಠ ಉದ್ಘಾಟನೆ

Gadduge Mutt Sri Siddaveera Shivayogi Banavasi

#image_title

ಬನವಾಸಿ: ಇಲ್ಲಿಯ ಹೊಳೆ ಮಠದ ಸಮೀಪದಲ್ಲಿ ಶತಾಯುಷಿ ಶ್ರೀ ಸಿದ್ಧವೀರ ಶಿವಯೋಗಿಗಳ ನೂತನ ಗದ್ದುಗೆ ಮಠ (Gadduge Mutt) ಉದ್ಘಾಟನೆ ಹಾಗೂ ನಿರಂಜನ ಶರಣ ಕರ್ನಾಟಕ ಗಾಂಧಿ ಹರ್ಡೇಕರ ಮಂಜಪ್ಪ ಅವರ 77ನೇ ಸಂಸ್ಮರಣೆ ಕಾರ್ಯಕ್ರಮವು ಅದ್ಧೂರಿಯಾಗಿ ನಡೆಯಿತು.

ಮುಂಜಾನೆ ಶ್ರೀ ಶಿವಯೋಗಿಗಳ ಕ್ರಿಯಾ ಸಮಾಧಿಗೆ ಮಹಾರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಮಹಾ ಮಂಗಳಾರತಿಯನ್ನು ನೆರವೇರಿಸಲಾಯಿತು. ಇದೇ ವೇಳೆ ಹೊಸಪೇಟೆ ಕಂಪ್ಲಿ ಸಂಸ್ಥಾನ ಮಠದ ಪ್ರಭು ಚನ್ನಬಸವ ಮಹಾಸ್ವಾಮೀಜಿಗಳಿಂದ ಷಟಸ್ಥಲ ಧ್ವಜಾರೋಹಣ ನೆರವೇರಿತು.

ಶಿರಸಿ ಹಾಗೂ ತೊಟ್ಟಲಕೇರಿ ಬಣ್ಣದ ಮಠದ ಶಿವಲಿಂಗ ಮಹಾಸ್ವಾಮೀಜಿ ಅವರು ಶ್ರೀ ಶಿವಯೋಗಿ ಸ್ವಾಮೀಜಿಯವರ ನೂತನ ಗದ್ದುಗೆ ಮಠದ ಉದ್ಘಾಟನೆ ಹಾಗೂ ಶರಣ ಹರ್ಡೇಕರ ಮಂಜಪ್ಪನವರ ಸಂಸ್ಮರಣೆ ಕಾರ್ಯಕ್ರಮವನ್ನು ನೆರವೇರಿಸಿ ಆಶೀರ್ವಚನ ನೀಡುತ್ತಾ, “ನಿಮ್ಮನ್ನು ನೀವು ಗೌರವಿಸಿ. ಆಗ ಮಾತ್ರ ಜೀವನ ಆದರ್ಶವಾಗುತ್ತದೆ. ಉಳವಿಯ ಚನ್ನಬಸವೇಶ್ವರ ಈ ಭಾಗಕ್ಕೆ ಬರದೇ ಇದ್ದಿದ್ದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಶರಣ ಪರಂಪರೆಯನ್ನು ಕಾಣುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಶತಾಯುಷಿ ಸಿದ್ಧವೀರ ಶಿವಯೋಗಿಗಳು ಮಹಾನ್ ಶಿವ ಶರಣರಾಗಿದ್ದರು. ಈ ದಿನ ಬನವಾಸಿಯಲ್ಲಿ ಶತಾಯುಷಿ ಸಿದ್ಧವೀರ ಶಿವಯೋಗಿಗಳ ಜ್ಯೋತಿರ್ಲಿಂಗ ಉದಯವಾಗಿದೆ. ಇದರಿಂದಾಗಿ ಸಮಾಜ ಸುಭಿಕ್ಷವಾಗಲಿದೆ” ಎಂದರು.

ಧಾರವಾಡ ಮುರುಘಾ ಮಠದ ಡಾ. ಮಲ್ಲಿಕಾರ್ಜುನ ಮಹಾಸ್ವಾಮೀಜಿ ಆಶೀರ್ವಚನ ನೀಡಿ, “ಗುರುವಾದವನು ಸಮಾಜಕ್ಕಾಗಿ ಬದುಕಿರುತ್ತಾನೆ. ಭಕ್ತರಿಗೆ ಜಾಗೃತಿ ಮನೋಭಾವ ಮೂಡುವತನಕ ಸಮಾಜ ಉದ್ಧಾರವಾಗುವುದಿಲ್ಲ. ಕರ್ನಾಟಕ ಗಾಂಧಿ ಹರ್ಡೇಕರ ಮಂಜಪ್ಪನವರು ಧರ್ಮ ಸೇವೆ, ದೇಶ ಸೇವೆಯನ್ನು ಮಾಡಿದ ಮಹಾನ್ ಚೇತನವಾಗಿದ್ದಾರೆ. ಸಿದ್ಧವೀರ ಶಿವಯೋಗಿಯವರು ನಾಡನ್ನು ಜಾಗೃತಗೊಳಿಸಿದ ಶರಣರಾಗಿದ್ದಾರೆ. ಇಬ್ಬರು ಮಹಾ ಶರಣರನ್ನು ನೆನಪಿಸಿಕೊಂಡರೆ ನಮ್ಮ ಜೀವನ ಪಾವನವಾಗುತ್ತದೆ” ಎಂದು ಹೇಳಿದರು.

ಇದನ್ನೂ ಓದಿ: Road Show : ಮಾ. 25ರಂದು ಬೆಂಗಳೂರಿನಲ್ಲಿ ಮೋದಿ ರೋಡ್‌ ಶೋ ಫಿಕ್ಸ್‌, 26ಕ್ಕೆ ನಿಗದಿಯಾದ ದೇವೇಗೌಡ್ರ ರೋಡ್‌ ಶೋ ರದ್ದು

ಟಿ. ನರಸೀಪುರ ಚಿದ್ರಳ್ಳಿ ಗವಿಮಠದ ಮಲ್ಲಿಕಾರ್ಜುನ ಮಹಾಸ್ವಾಮೀಜಿ ಅಧ್ಯಕ್ಷತೆ ವಹಿಸಿ, “ವೀರಶೈವ ಧರ್ಮದ ಪರಿಪಾಲಕರು ಯಜ್ಞ ಯಾಗಾದಿಗಳನ್ನು ಮಾಡುವ ಪದ್ಧತಿಯನ್ನು ರೂಢಿಸಿಕೊಳ್ಳಬಾರದು” ಎಂದರು.

ಜಡೆ ಸಂಸ್ಥಾನ ಮಠದ ಡಾ. ಮಹಾಂತ ಮಹಾಸ್ವಾಮೀಜಿ, ಮೂಡಿ ವಿರಕ್ತ ಮಠದ ಸದಾಶಿವ ಸ್ವಾಮೀಜಿ, ಹಾವೇರಿ ಹೊಸ ಮಠದ ಶಾಂತಲಿಂಗ ಸ್ವಾಮೀಜಿ, ಹೊಳೆ ಮಠದ ಶ್ರೀ ನಾಗಭೂಷಣ ಮಹಾಸ್ವಾಮೀಜಿ, ಹಾರೂಗೇರಿಯ ಶರಣ ವಿಚಾರ ವಾಹಿನಿ ಅಧ್ಯಕ್ಷ ಐ.ಆರ್.ಮಠಪತಿ, ಆಲಮಟ್ಟಿಯ ವಿ.ಎಮ್.ಪಟ್ಟಣಶೆಟ್ಟಿ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಶ್ರೀ ಬಸವೇಶ್ವರ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಹಾಲಪ್ಪ ಕೆರೂಡಿ, ಅಕ್ಕನ ಬಳಗದ ಅಧ್ಯಕ್ಷೆ ಶೋಭಾ ಉಳ್ಳಾಗಡ್ಡಿ, ವೀರಶೈವ ಸಮಾಜ ಶಿರಸಿ ತಾಲೂಕು ಅಧ್ಯಕ್ಷ ಬಸವರಾಜ ಚಕ್ರಸಾಲಿ ವೇದಿಕೆಯಲ್ಲಿ ಇದ್ದರು.

ಇದನ್ನೂ ಓದಿ: WTC Final : ಕಿಶಾನ್​, ಭರತ್​ಗಿಂತ ವಿಕೆಟ್​ಕೀಪಿಂಗ್​ಗೆ ರಾಹುಲ್​ ಬೆಸ್ಟ್​ ಎಂದ ಮಾಜಿ ಕೋಚ್​​

ಈ ಸಂದರ್ಭದಲ್ಲಿ ದಾನಿಗಳಾದ ಗಿರಿಜಮ್ಮ ಹಾಲ್ಮಠ ಹಾಗೂ ನೂತನ ಗದ್ದುಗೆ ಕಟ್ಟಡ ಸಮಿತಿಯ ಅಧ್ಯಕ್ಷ ವಾಗೀಶ ಕೆರೂಡಿ ಅವರನ್ನು ಸನ್ಮಾನಿಸಲಾಯಿತು. ಶ್ರೀ ಬಸವೇಶ್ವರ ಸೇವಾ ಪ್ರತಿಷ್ಠಾನದ ಸದಸ್ಯರು, ಅಕ್ಕನ ಬಳಗದ ಸದಸ್ಯರು, ಬನವಾಸಿ ಹಾಗೂ ಸುತ್ತಮುತ್ತಲಿನ ಸಾವಿರಾರು ಸಮಾಜ ಬಾಂಧವರು ಉಪಸ್ಥಿತರಿದ್ದರು. ಉಮೇಶ ಕೆರೂಡಿ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಬಸವೇಶ್ವರ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಹಾಲಪ್ಪ ಕೆರೂಡಿ ಸ್ವಾಗತಿಸಿದರು.

“ಬನವಾಸಿಯ ಕಂಪನ್ನು ನಾಡಿಗೆ ಪಸರಿಸಿದ ಆದಿಕವಿ ಪಂಪ ಹಾಗೂ ಕರ್ನಾಟಕದ ಗಾಂಧಿ ಹರ್ಡೇಕರ ಮಂಜಪ್ಪ ಅವರ ನೆನಪು ಉಳಿಯುವ ಯಾವ ಕಾರ್ಯವನ್ನು ಸರ್ಕಾರ ಇಲ್ಲಿ ಮಾಡಿಲ್ಲ. ಇಬ್ಬರು ಮಹಾನುಭಾವರ ಸ್ಮಾರಕ ನಿರ್ಮಾಣವಾಗಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಮುಂದಿನ ದಿನಗಳಲ್ಲಿ ಈ ಕಾರ್ಯಕ್ಕಾಗಿ ಎಲ್ಲರೂ ಒಂದಾಗಬೇಕಾಗಿದೆ” ಎಂದು ಬಸವನಬಾಗೇವಾಡಿ ಸಾಹಿತಿ ಮಹಾತೇಂಶ ಸಂಗಮ್ ಹೇಳಿದರು.

Exit mobile version