12ನೇ ಶತಮಾನದಲ್ಲಿ ಅರಸ ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದ ಸಮಾಜ ಸುಧಾರಕರೂ ಆಗಿದ್ದ ಬಸವಣ್ಣ (Basavanna jayanti) ಸಾವಿರಾರು ವಚನಗಳ (vachana) ಸೃಷ್ಟಿಕಾರರು. ಶಿವ ಕೇಂದ್ರೀಕೃತ ಭಕ್ತಿ ಚಳವಳಿ ನಡೆಸಿದ ಇವರು ತಮ್ಮ ವಚನಗಳ ಮೂಲಕ ಸಾಮಾಜಿಕ ಅರಿವನ್ನು ಮೂಡಿಸಿದರು.
1130ರಲ್ಲಿ ಕರ್ನಾಟಕದ ಈಗಿನ ಬಿಜಾಪುರ (bijapur) ಜಿಲ್ಲೆಯ ಬಸವನ ಬಾಗೇವಾಡಿ (basavana bagewadi) ಗ್ರಾಮದಲ್ಲಿ ಮಾದರಸ ಮತ್ತು ಮಾದಲಾಂಬಿಕೆ ದಂಪತಿಯ ಮಗನಾಗಿ ಜನಿಸಿದ ಬಸವಣ್ಣ ಶಿವನ ಭಕ್ತಿ ಮತ್ತು ಸಾಮಾಜಿಕ ಸಮಾನತೆಗೆ ಒತ್ತು ನೀಡಿರುವ ವಿಶಿಷ್ಟ ತತ್ತ್ವವನ್ನು ಸಾರಿದರು. ಇವರ ಹತ್ತು ಪ್ರಮುಖ ವಚನಗಳ ಸಾಲು ಮತ್ತು ಅದರ ಸಾರ ಇಲ್ಲಿದೆ.
ವಚನ 1: ತನಗೆ ಮುನಿವರಿಗೆ ತಾ ಮುನಿಯಲೇಕಯ್ಯಾ
ತನಗಾದ ಆಗೇನು ಅವರಿಗಾದ ಚೇಗೆಯೇನು
ತನುವಿನ ಕೋಪ ತನ್ನ ಹಿರಿತನದ ಕೇಡು
ಮನದ ಕೋಪ ತನ್ನ ಅರಿವಿನ ಕೇಡು,
ಮನೆಯೊಳಗಿನ ಕಿಚ್ಚು ಮನೆಯ ಸುಟ್ಟಲ್ಲದೆ
ನೆರೆಮನೆಯ ಸುಡದು ಕೂಡಲ ಸಂಗಮ ದೇವಾ.
ಸಾರ: ನಮ್ಮೊಂದಿಗೆ ಯಾರಾದರೂ ಮುನಿಸಿಕೊಂಡರೆ ನಾವೇಕೆ ಅವರೊಂದಿಗೆ ಮುನಿಸಿಕೊಳ್ಳಬೇಕು? ಇದರಿಂದ ಅವರಿಗೂ, ನಮಗೂ ಯಾವುದೇ ಲಾಭವಿಲ್ಲ. ಮನದ ಕೋಪ ನಮ್ಮ ವಿವೇಕವನ್ನು ಹಾಳು ಮಾಡುವುದು ಎಂಬುದು ಇದರ ಸಾರ.
ವಚನ 2. ಹಬ್ಬಕ್ಕೆ ತಂದ ಹರಕೆಯ ಕುರಿ
ತೋರಣಕ್ಕೆ ತಂದ ತಳಿರ ಮೇಯಿತ್ತು
ಕುಂಡ ಹರೆಂಬುದ ನರಿಯದ ಬೆಂದ ಒಡಲ
ಹೊರೆವುತ್ತಲದೆ ಅದಂದೆ ಹುಟ್ಟಿತ್ತು ಅದಂದೆ ಹೊಂದಿತ್ತು
ಕೊಂದವರುಳಿವರೇ ಕೊಡಲಸಂಗಮ ದೇವಾ.
ಸಾರ: ತಾನು ಶಾಶ್ವತ ಎಂಬ ಭ್ರಮೆಯಲ್ಲಿ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಅಮಾಯಕ ಜೀವವನ್ನು ಬಲಿ ಕೊಡುತ್ತಾನೆ. ಅದನ್ನು ಖಂಡಿಸಿರುವ ಅವರು ಹಿಂಸೆಯನ್ನು ವಿರೋಧಿಸಿ ಎಲ್ಲರೂ ಸಜ್ಜನರಾಗಬೇಕು.
ವಚನ 3: ಸಾರ ಸಜ್ಜನರ ಸಂಗ ಲೇಸು ಕಣಯ್ಯಾ
ದೂರ ದುರ್ಜನರ ಸಂಗವದು ಭಂಗವಯ್ಯಾ
ಸಂಘವೆರಡುಂಟು ಒಂದು ಹಿಡಿ ಒಂದು ಬಿಡು
ಮಂಗಳಮೂರ್ತಿ ನಮ್ಮ ಕೂಡಲ ಸಂಗನ ಶರಣರ
ಸಾರ: ಒಳ್ಳೆಯವರ ಸಹವಾಸ ಮಾಡಿದರೆ ಒಳ್ಳೆಯದು, ಕೆಟ್ಟವರ ಸಹವಾಸದಿಂದ ಅವಮಾನ ಸಿಗುತ್ತದೆ. ಈ ಎರಡರಲ್ಲಿ ನಮಗೇನು ಬೇಕು ಎಂಬುದನ್ನು ನಾವೇ ಆಯ್ಕೆ ಮಾಡಿಕೊಳ್ಳಬೇಕು.
ವಚನ 4. ಆಚಾರವರಿಯಿರಿ, ವಿಚಾರವರಿಯಿರಿ
ಜಂಗಮ ಸ್ಥಳ, ಲಿಂಗ ಕಾಣಿರಯ್ಯಾ,
ಜಾತಿ, ಭೇದವಿಲ್ಲ, ಸೂತಕವಿಲ್ಲ, ಅಜಾತಂಗೆ ಕುಲವಿಲ್ಲ,
ನುಡಿದಂತೆ ನಡೆಯದಿದ್ದರೆ ಕೂಡಲ ಸಂಗಮ ಮೆಚ್ಚ ಕಾಣಿರಯ್ಯಾ
ಸಾರ: ಒಳ್ಳೆಯ ಸಂಪ್ರದಾಯವನ್ನು ಅರಿತು ವಿವೇಕವನ್ನು ತಿಳಿಯಬೇಕು. ದೇವರಿಗೆ ಜಾತಿ ಭೇದ ಮೈಲಿಗೆಯ ಭೇದವಿಲ್ಲ. ಜನನ ಮರಣವಿಲ್ಲದ ದೇವರಿಗೆ ಕುಲವಿಲ್ಲ. ಮಾತನಾಡಿದಂತೆ ನಡೆಯದಿದ್ದರೆ ಅವನು ಮೆಚ್ಚುವುದಿಲ್ಲ ಎನ್ನುತ್ತಾರೆ ಬಸವಣ್ಣ .
ವಚನ 5: ಆಯುಷ್ಯ ತೀರಿದಲ್ಲದೆ ಮರಣವಿಲ್ಲ
ಭಾಷೆ ತಪ್ಪಿದಲ್ಲದೆ ದಾರಿದ್ರ್ಯವಿಲ್ಲ
ಅಂಜಲದೇಕೋ ಲೋಕ ವಿಗರ್ಭಣೆಗೆ
ಅಂಜಲದೇಕೋ ಕೊಡಲ ಸಂಗಮ ನಿಮ್ಮಾಳಾಗಿ
ಸಾರ: ಆಯುಷ್ಯ ಮುಗಿಯದೆ ಮರಣ ಬರುವುದಿಲ್ಲ, ಮಾತು ತಪ್ಪಿದರೆ ಮಾತ್ರ ದಾರಿದ್ರ್ಯ ಉಂಟಾಗುತ್ತದೆ. ದೇವರ ಸೇವಕನಾಗಿ ಲೋಕದ ಭಯೋತ್ಪಾದಕತೆಗೆ ನಾನೇಕೆ ಇಳಿಯಲಿ ಎಂಬ ಅರ್ಥವಿದೆ.
ವಚನ 6: ನೆಲಗೊಂದೆ ಹೊಲಗೇರಿ ಶಿವಾಲಯಕ್ಕೆ,
ಜಲವೊಂದೆ ಶೌಚಾಚಮನಕ್ಕೆ
ಕುಲವೊಂದೆ ತನ್ನತಾನರಿದವಂಗೆ
ಫಲವೊಂದೆ ಷಡುದರುಶನ ಮುಕ್ತಿಗೆ
ನಿಲವೊಂದೆ ನಿಮ್ಮನರಿದವಂಗೆ ಕೂಡಲಸಂಗಮ ದೇವಾ
ಸಾರ: ದೇವಸ್ಥಾನ ಮತ್ತು ಹೊಲಗೇರಿಯವರಿಗೆ ಭೂಮಿ ಒಂದೇ ಆಗಿದೆ. ಸ್ನಾನ ಮತ್ತು ತಪಸ್ಸು ಮಾಡಲು ನೀರು ಕೂಡ ಒಂದೇ ಆಗಿದೆ. ವಿಮೋಚನೆಯು ಎಲ್ಲಾ ಆಲೋಚನೆಗಳ ಅಂತಿಮ ಗುರಿಯಾಗಿದೆ. ಪ್ರಭುವನ್ನು ತಿಳಿದವನಿಗೆ ವಾಸಸ್ಥಾನ ಎಲ್ಲಿದ್ದರೂ ಒಂದೇ ಆಗಿರುತ್ತದೆ.
ವಚನ 7: ನುಡಿದರೆ ಮುತ್ತಿನ ಹಾರದಂತಿರಬೇಕು
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು
ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು
ನುಡಿದರೆ ಲಿಂಗ ಮೆಚ್ಚಿ ಹೌದೌದು ಎನಬೇಕು
ನುಡಿಯೊಳಗಾಗಿ ನಡೆಯದಿದ್ದರೆ ಕೂಡಲ ಸಂಗಮ ಮನೆಂತೊಲಿವನಯ್ಯಾ ?
ಸಾರ: ನಾವಾಡುವ ಮಾತು ಸರಳ ಮತ್ತು ಸುಲಲಿತವಾಗಿರಬೇಕು. ಆಡಿದ ಮಾತಿನಂತೆ ನಡೆಯದಿದ್ದರೆ ದೇವರು ಮೆಚ್ಚುವುದಿಲ್ಲ ಎನ್ನುತ್ತಾರೆ ಬಸವಣ್ಣ.
ವಚನ 8: ಮಾರಿ ಮಸಣಿ ಎಂಬವು ಬೇರಿಲ್ಲ ಕಾಣಿರೋ
ಮಾರಿ ಎಂಬುದೇನು ಕಂಗಳು ತಪ್ಪಿ ನೋಡಿದರೆ
ಮಾರಿ ನಾಲಿಗೆ ತಪ್ಪಿ ನುಡಿದರೆ
ಮಾರಿ ನಮ್ಮ ಕೂಡಲ ಸಂಗಮ ದೇವರ ನೆನಹ
ಮರೆದಡೆ ಮಾರಿ ಕಾಣಿರೋ
ಸಾರ: ಮೃತ್ಯು, ರುದ್ರ ದೇವರೆಂಬುವವರು ಬೇರೆ ಯಾರೂ ಇಲ್ಲ. ಕೆಟ್ಟ ದೃಶ್ಯ, ಮಾತು, ದುರಾಚಾರ ಮಾಡಿದರೆ ಇದ್ದರೂ ಸತ್ತಂತೆಯೇ ಸರಿ.
ವಚನ 9: ಬೇವಿನ ಬೀಜವ ಬಿತ್ತಿ ಬೆಲ್ಲದ ಕಟ್ಟಿಯ ಕಟ್ಟಿ
ಆಕಳ ಹಾಲನೆರೆದು ಜೇನು ತುಪ್ಪವ ತೋಯ್ದೆಡೆ
ಸಿಹಿಯಾಗಬಲ್ಲುದೆ ಕಹಿಯಹುದಲ್ಲದೆ
ಶಿವಭಕ್ತರಲ್ಲದವರ ಕೊಡೆ ನುಡಿಯಲಾಗದು
ಕೂಡಲ ಸಂಗಮ ದೇವಾ
ಸಾರ: ಬೇವಿನ ಬೀಜವನ್ನು ಹಾಕಿ ಅದರಲ್ಲಿ ಸಿಹಿಯಾದ ಹಣ್ಣು ಸಿಗಬೇಕು ಎಂದು ಬಯಸಲು ಸಾಧ್ಯವಿದೆಯೇ ಎಂಬುದನ್ನು ಬಸವಣ್ಣನವರು ಇಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: Vijayanagara News: ಅಕ್ಷತ್ತದಿಗಿ ಅಮವಾಸ್ಯೆ; ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿ ದರ್ಶನ ಪಡೆದ ಭಕ್ತರು
ವಚನ 10: ವೇದವ ಓದಿದರೇನು ಶಾಸ್ತ್ರವ ಕೇಳಿದಡೇನಯ್ಯಾ
ಜಪವ ಮಾಡಿದಡೇನು ತಪವ ಮಾಡಿದಡೇನಯ್ಯಾ
ಏನು ಮಾಡಿದಡೇನು ನಮ್ಮ ಕೂಡಲ ಸಂಗಯ್ಯನ ಮನ ಮುಟ್ಟದನ್ನಕ್ಕ
ಸಾರ: ವೇದ ಓದಿ, ಶಾಸ್ತ್ರಗಳನ್ನು ಮಾಡಿ ದೇವರನ್ನೇ ಅದು ಮುಟ್ಟದಿದ್ದರೆ ಎಲ್ಲವೂ ವ್ಯರ್ಥ ಎಂಬುದನ್ನು ಹೇಳಿರುವ ಬಸವಣ್ಣ ನಮ್ಮ ಭಕ್ತಿ ಹೇಗಿರಬೇಕು ಎನ್ನುವುದನ್ನು ಹೇಳುತ್ತಾರೆ.