Site icon Vistara News

Ram Mandir : ರಾಮನ ಹಣೆಗೆ ಸೂರ್ಯ ಕಿರಣ ತಿಲಕವಿಡುವ ವಿಶೇಷ ಯಂತ್ರ ತಯಾರಾಗಿದ್ದು ಬೆಂಗಳೂರಿನಲ್ಲಿ

Surya Tilak

ಬೆಂಗಳೂರು: ಅಯೋಧ್ಯೆಯ ರಾಮ ಮಂದಿರದಲ್ಲಿ (Ram Mandir) ಪ್ರತಿ ರಾಮನವವಿ ಸಂದರ್ಭದಲ್ಲಿ ರಾಮನ ವಿಗ್ರಹದ ಹಣೆಯ ಮೇಳೆ ಸೂರ್ಯ ತಿಲಕವನ್ನು ಇಡಲಾಗುತ್ತದೆ. ಅಂದರೆ ಸೂರ್ಯನ ಕಿರಣವನ್ನು ಪ್ರತಿಫಲನ ತಂತ್ರದ ಮೂಲಕ ಹಾಯಿಸಲಾಗುತ್ತದೆ. ಅದಕ್ಕಾಗಿ 85 ಲಕ್ಷ ರೂಪಾಯಿ ವೆಚ್ಚದ ವಿಶೇಷ ಯಂತ್ರವೊಂದನ್ನು ಸಿದ್ಧಪಡಿಸಲಾಗಿದೆ. ವಿಶೇಷ ಏನೆಂದರೆ ಈ ಯಂತ್ರವನ್ನು ದಾನ ಮಾಡಿರುವುದು ಬೆಂಗಳೂರಿನ ಜೈನ ಕುಟುಂಬದ ಮಾಲೀಕತ್ವದ ಕಂಪನಿಯೊಂದು. ಪ್ರತಿ ವರ್ಷ ರಾಮ ನವಮಿ ಸಂದರ್ಭದಲ್ಲಿ ಈ ಆಪ್ಟಿಕಲ್​ ತಂತ್ರವಿರುವ ಯಂತ್ರವನ್ನು ಬಳಸಲಾಗುತ್ತದೆ.

ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ನ ಮನವಿಯ ಮೇರೆಗೆ ಈ ಯಂತ್ರವನ್ನು ಸಿದ್ಧಪಡಿಸಲಾಗಿದೆ. ಎರಡು ಸಾರ್ವಜನಿಕ ಸ್ವಾಮ್ಯದ ಸಂಸ್ಥೆಗಳು ಹಾಗೂ ಜೈನ ಕುಟುಂಬದ ಮಾಲೀಕತ್ವದಲ್ಲಿರುವ ಬೆಂಗಳೂರು ಮೂಲದ ಕಂಪನಿ ಇದನ್ನು ದಾನ ಮಾಡಿದೆ. ಈ ಯಂತ್ರದ ನೆರವಿನಿಂದ ಗರ್ಭಗುಡಿಯ ಒಗಿರುವ ಶ್ರೀರಾಮ ವಿಗ್ರಹದ ಹಣೆಯ ಮೇಲೆ ಸೂರ್ಯ ತಿಲಕ ಇಡಲು ಸಾಧ್ಯವಾಗುತ್ತದೆ. ಶ್ರೀರಾಮನ ಜನ್ಮದಿನವೆಂದು ಶ್ರೀರಾಮ ನವಮಿ ಆಚರಣೆ ಮಾಡಲಾಗುತ್ತದೆ. ಅದೇ ದಿನ ಅಂದಾಜು 3-4 ನಿಮಿಷಗಳ ಕಾಲ ಈ ಯಂತ್ರದ ಸಹಾಯದಿಂದ ಸೂರ್ಯ ರಶ್ಮಿಯನ್ನು ವಿಗ್ರಹದ ಹಣೆಗೆ ಇಡಲು ಸಾಧ್ಯವಾಗಲಿದೆ. ಬೆಂಗಳೂರಿನ ಜಿಗಣಿ ಲಿಂಕ್‌ ರೋಡ್‌ನಲ್ಲಿರುವ ಆಪ್ಟಿಕ್ಸ್‌ & ಅಲೈಡ್‌ ಇಂಜಿನಿಯರಿಂಗ್‌ ಪ್ರೈವೇಟ್‌ ಲಿಮಿಟೆಡ್‌ (ಆಪ್ಟಿಕಾ) ತಯಾರಿಸಿದೆ. ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಆಸ್ಟ್ರೋಫಿಸಿಕ್ಸ್‌ ಮತ್ತು ಸೆಂಟ್ರಲ್‌ ಬಿಲ್ಡಿಂಗ್‌ ರಿಸರ್ಚ್‌ ಇನ್ಸ್‌ಟಿಟ್ಯೂಟ್‌ (ಸಿಬಿಆರ್‌ಐ) ನಿಂದ ಯಂತ್ರ ನಿರ್ಮಾಣಕ್ಕಾಗಿ ಸಹಾಯ ಪಡೆದುಕೊಂಡಿದೆ.

ಆಪ್ಟಿಕಾ ಮ್ಯಾನೇಜಿಂಗ್ ಡೈರೆಕ್ಟರ್ ರಾಜೇಂದ್ರ ಕೊಟಾರಿಯಾ ಈ ಬಗ್ಗೆ ಸಂಭ್ರಮ ವ್ಯಕ್ತಪಡಿಸಿದ್ದಾರೆ. ಅತ್ಯಂತ ನಿಖರ ಆಪ್ಟಿಕಲ್ ಯಂತ್ರವನ್ನು ತಯಾರಿಸಲಾಗಿದೆ. ಅಂದಾಜು 500 ವರ್ಷದ ಬಳಿಕ ರಾಮ ಲಲ್ಲಾ ಸ್ಥಾಪನೆಯಾಗುತ್ತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಗುರಿ ಹಾಗೂ ದೇವಸ್ಥಾನದ ಟ್ರಸ್ಟ್‌ ನ ಶ್ರಮದಿಂದ ಅದು ಸಾಧ್ಯವಾಗಿದೆ. ಕಳೆದ ನಾಲ್ಕು ತಿಂಗಳಿನಿಂದ ಆಪ್ಟಿಕ್​ ಯಂತ್ರದ ಕೆಲಸ ನಡೆಯುತ್ತಿತ್ತು. ದೇವಸ್ಥಾನದಲ್ಲಿ ರಾಮನ ಪ್ರಾಣ ಪ್ರತಿಷ್ಠಾಪನೆಯ ದಿನವೇ ಈ ಯಂತ್ರವೂ ಅನಾವರಣಗೊಳ್ಳಲಿದೆ. ಪೆರಿಸ್ಕೋಪ್‌ ರೀತಿಯಲ್ಲಿ ಈ ಯಂತ್ರ ಕೆಲಸ ಮಾಡಲಿದ್ದು, ಟಿಟಾನಿಯಂ, ಹಿತ್ತಾಳೆ ಮತ್ತು ಕಂಚು ಬಳಸಿ ನಿರ್ಮಾಣ ಮಾಡಲಾಗಿದೆ. ರಾಮಮಂದಿರ ನಿರ್ಮಾಣದಲ್ಲಿ ಕಬ್ಬಿಣ ಬಳಕೆ ಮಾಡಿಲ್ಲ. ಅಂತೆಯೇ ಈ ಯಂತ್ರಕ್ಕೂ ಕಬ್ಬಿಣ ಬಳಸಿಲ್ಲ ಎಂದರು.

ಇದನ್ನೂ ಓದಿ : Ram Mandir : ರಾಮ ಮಂದಿರ ಉದ್ಘಾಟನೆ ವೇಳೆ ನಡೆಯಲಿದೆ 1 ಲಕ್ಷ ಕೋಟಿ ರೂ. ಆರ್ಥಿಕ ಚಟುವಟಿಕೆ

ರಾಮ ನವಮಿಯ ದಿನದಂದು ಸೂರ್ಯನು ಒಂದು ನಿರ್ದಿಷ್ಟ ಕೋನದಲ್ಲಿದ್ದಾಗ ಪೆರಿಸ್ಕೋಪಿಕ್ ವ್ಯವಸ್ಥೆಯಲ್ಲಿ ಸೂರ್ಯನ ಬೆಳಕನ್ನು ಸೆರೆ ಹಿಡಿಯಲಾಗುತ್ತದೆ. ಈ ಯಂತ್ರವು ಸೂರ್ಯನ ಬೆಳಕನ್ನು ಸೆರೆಹಿಡಿದು ಸ್ವಯಂಚಾಲಿತವಾಗಿ ಹೊಂದಿಕೊಂಡು, ಪ್ರತಿ ರಾಮನವಮಿಯ ದಿನ ರಾಮನ ವಿಗ್ರಹದ ಹಣೆಯ ಮೇಲೆ ನಿಖರವಾಗಿ ಸೂರ್ಯ ತಿಲಕ ಇಡಲಿದೆ ಎಂದು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (IIA) ಮೂಲಗಳು ತಿಳಿಸಿವೆ.

ವಿನ್ಯಾಸದ ನೆರವು

ಸೂರ್ಯ ತಿಲಕ ಯಂತ್ರ ನಿರ್ಮಿಸಲು ರಾಮಜನ್ಮಭೂಮಿ ದೇವಸ್ಥಾನ ಟ್ರಸ್ಟ್ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ಅನ್ನು ಸಂಪರ್ಕಿಸಿತ್ತು. ದೇವಾಲಯದ ಮತ್ತು ಧಾರ್ಮಿಕ ಸಿದ್ಧಾಂತವು ವೈಜ್ಞಾನಿಕ ಮನೋಧರ್ಮದ ಸಂಸ್ಥೆಯ ತತ್ವಗಳಿಗೆ ವಿರುದ್ಧವಾಗಿರುವ ಕಾರಣ, ಆಪ್ಟಿಕಲ್‌ ಯಂತ್ರದ ವಿನ್ಯಾಸದಲ್ಲಿ ಮಾತ್ರವೇ ತಮ್ಮ ಸೇವೆಗಳನ್ನು ನೀಡಬಹುದು ಎಂದು ಐಐಎ ತಿಳಿಸಿತ್ತು. , ಖಾಸಗಿಯವರಿಂದ ಯಂತ್ರವನ್ನು ವಿನ್ಯಾಸಗೊಳಿಸುವ ನಿಟ್ಟಿನಲ್ಲಿ ಉತ್ತರಾಖಂಡದ ರೂರ್ಕಿಯಲ್ಲಿರುವ ಸಿಬಿಆರ್‌ಐನಿಂದ ಸಲಹೆಯನ್ನು ಕೇಳಲಾಗಿತ್ತು. ಈ ಸಂಸ್ಥೆ ಬೆಂಗಳೂರಿನ ಆಪ್ಟಿಕಾವನ್ನು ನೇಮಿಸಿತ್ತು.

ಜೈನ ಧರ್ಮಕ್ಕೂ ಹಿಂದುತ್ವಕ್ಕೂ ಸಂಬಂಧ ಏನು ಎಂಬುದನ್ನೂ ಆಪ್ಟಿಕಾದ ಕೊಟಾರಿಯಾ ಹೇಳುತ್ತಾರೆ. ರಾಮ ಪ್ರತಿಯೊಬ್ಬರಿಗೂ ಸೇರಿದವನು. ರಾಮನ ತತ್ವಗಳು ದಾನವನ್ನು ಆಧರಿಸಿವೆ. ಜೈನ ಧರ್ಮವೂ ದಾನದಿಂದ ಪ್ರೇರಿತವಾಗಿದೆ. ಆದ್ದರಿಂದ ಎರಡೂ ಧರ್ಮದ ಮೂಲ ಒಂದೇ ಆಗಿದೆ ಎಂದು ಹೇಳಿದ್ದಾರೆ.

Exit mobile version