ಬೆಂಗಳೂರು: ರಾಜಧಾನಿಯ ಪಾರಂಪರಿಕ ಹಾಗೂ ಐತಿಹಾಸಿಕ ಹಿನ್ನೆಲೆ ಹೊಂದಿರುವ ಕರಗ ಉತ್ಸವ ಚೈತ್ರ ಮಾಸದ ಹುಣ್ಣಿಮೆಯಂದು, ಗುರುವಾರ ರಾತ್ರಿ ವೈಭವದಿಂದ ನೆರವೇರಿತು. ರಾಜಧಾನಿಯ ಹಾಗೂ ಸುತ್ತಮುತ್ತಲ ಜಿಲ್ಲೆಗಳಿಂದ ಆಗಮಿಸಿದ ಲಕ್ಷಾಂತರ ಜನ ಉತ್ಸವದಲ್ಲಿ ಭಾಗವಹಿಸಿದರು.
ಧರ್ಮಸ್ಥಳ ಕ್ಷೇತ್ರದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಆಗಮಿಸಿ ಕರಗ ಉತ್ಸವದಲ್ಲಿ ಪಾಲ್ಗೊಂಡರು. ನಗರ್ತಪೇಟೆ ಧರ್ಮರಾಯ ಸ್ವಾಮಿ ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದರು.
ಮಲ್ಲಿಗೆಯಿಂದ ಅಲಂಕೃತಗೊಂಡ ಕರಗ ನೋಡಲು ತಿಗಳರಪೇಟೆ ಸುತ್ತಮುತ್ತಲ ಭಾಗ, ಮಾಲೂರು, ಹೊಸಕೋಟೆ, ನೆಲಮಂಗಲ, ತುಮಕೂರು, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಕೋಲಾರ, ತಮಿಳುನಾಡಿನ ಹೊಸೂರು, ಕೃಷ್ಣಗಿರಿ, ಧರ್ಮಪುರಿ, ಸೇಲಂ, ಸುಳಗಿರಿ, ಚಪ್ಪಡಿ, ಡೆಂಕಣಿಕೋಟೆ, ಗುಮ್ಮಳಾಪುರ, ಈರೋಡ್, ಸೇಲಂ ಮುಂತಾದ ಕಡೆಗಳಿಂದ ಬಂದಿರುವ ಭಕ್ತರು ಆಗಮಿಸಿದ್ದರು.
ದೇವಸ್ಥಾನದ ಆವರಣದಲ್ಲಿ ಜನಸಾಗರ ಕಿಕ್ಕಿರಿದು ಸೇರಿದ ಪರಿಣಾಮ ನಿಯಂತ್ರಣ ಮಾಡಲು ಪೋಲೀಸರು ಹರಸಾಹಸಪಟ್ಟರು. ಪೂಜಾ ಕೈಂಕರ್ಯಗಳು ಹಾಗೂ ಕಣ ಪೂಜೆ ತಡವಾದ ಹಿನ್ನೆಲೆ 12.30ರ ಬದಲಾಗಿ ರಾತ್ರಿ 2 ಗಂಟೆ ನಂತರ ಕರಗ ಹೊರಟಿತು. ಧರ್ಮರಾಯ ಸ್ವಾಮಿ ದೇವಸ್ಥಾನದಿಂದ ರಥ ಎಳೆಯುವ ಕಾರ್ಯಕ್ರಮದಲ್ಲಿ ಭಕ್ತರು ಉತ್ಸಾಹದಿಂದ ಭಾಗವಹಿಸಿದರು.
ಮುತ್ಯಾಲಮ್ಮನಿಗೆ ಪೂಜೆ ಸಲ್ಲಿಸಿ ಬಲಿಜರು ರಥ ಎಳೆದರು. ವೀರಕುಮಾರರಿಂದ ಕತ್ತಿ ಹಿಡಿದು ಅಲಗು ಸೇವೆ ನಡೆಯಿತು. ದೇವಾಲಯುಕ್ಕೆ ಮೂರು ಸುತ್ತು ಪ್ರದಕ್ಷಿಣೆ ಹಾಕಿ ದೇಗುಲದಿಂದ ಕರಗ ಹೊರಬಂದಿತು. ಜ್ಞಾನೇಂದ್ರ ಕರಗ ಹೊತ್ತು ದೇಗುಲದ ಅಂಗಳ ತಲುಪಿದರು. ಹಸಿ ಕರಗವನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡರು. ಮಲ್ಲಿಗೆ ಹೂವಿನ ಸುಗಂಧಯುಕ್ತವಾದ ಕರಗದ ಮೆರವಣಿಗೆ ಗಣಪತಿ ದೇವಸ್ಥಾನದಲ್ಲಿ ಮೊದಲ ಪೂಜೆ, ಗ್ರಾಮ ದೇವತೆ ಮುತ್ಯಾಲಮ್ಮನಿಗೆ ಎರಡನೇ ನಮಸ್ಕಾರ ಸಲ್ಲಿಸಿ ಹಜರತ್ ತವಕ್ಕಲ್ ಮಸ್ತಾನ್ ಷಾ ದರ್ಗಾಗೆ ಆಗಮಿಸಿತು.
ಭಾವೈಕ್ಯತೆಯ ಸಂಕೇತವೆಂಬಂತೆ ಪ್ರತಿವರ್ಷ ಕಾಟನ್ ಪೇಟೆಯ ಹಜರತ್ ತವಕ್ಕಲ್ ಮಸ್ತಾನ್ ಷಾ ದರ್ಗಾದಲ್ಲಿ ವೀರಕುಮಾರರ ಅಲಗು ಸೇವೆ ನಡೆಯುತ್ತದೆ. ಕರಗದ ಶಕ್ತ್ಯೋತ್ಸವ ಮತ್ತು ರಂಜಾನ್ ಉಪವಾಸ ಒಟ್ಟಿಗೆ ನಡೆಯುತ್ತಿದ್ದು, ಧಾರ್ಮಿಕ ಭಾವೈಕ್ಯತೆಗೆ ಸಾಕ್ಷಿಯಾಗಿದೆ. ದರ್ಗಾದ ಧಾರ್ಮಿಕ ಸಂಪ್ರದಾಯದಂತೆ ಕರಗಕ್ಕೆ ಪೂಜೆ ಸಂದಿದ್ದು, ಇದನ್ನು ಫಾತಿಯಾ ಎಂದು ಕರೆಯಲಾಗುತ್ತದೆ. ನಂತರ ಗಾಂಧಿನಗರದ ಅಣ್ಣಮ್ಮ ದೇವಸ್ಥಾನಕ್ಕೆ ಕರಗ ಆಗಮಿಸಿ ದರ್ಶನ ನೀಡಿದೆ.
ಇದನ್ನೂ ಓದಿ: Bengaluru Karaga 2023: ಬೆಂಗಳೂರಿನಲ್ಲಿ ಐತಿಹಾಸಿಕ ಕರಗ ಶಕ್ತ್ಯೋತ್ಸವ ಆರಂಭ, ರಾತ್ರಿಯಾದರೂ ‘ಕರಗ’ದ ಜನೋತ್ಸಾಹ