Site icon Vistara News

ಅರ್ಧಮಂಡಲೋತ್ಸವ; ಮೈಸೂರಿನ ಭಾರತೀ ಯೋಗಧಾಮಕ್ಕೆ 24  ವರ್ಷ ತುಂಬಿದ ಸಂಭ್ರಮ

Bharati Yogadhama

| ಡಾ.ಗಣಪತಿ
ಎಲ್ಲ ವಿದ್ಯೆಗಳ ಉಗಮಸ್ಥಾನವಾಗಿ, ಕಲೆಯ ನೆಲೆವೀಡಾಗಿ, ನೆಮ್ಮದಿಯ ತಾಣವಾಗಿ, ಲೋಕಗುರುವಾಗಿ ವಿರಾಜಿಸಿದ ದೇಶ ಭಾರತ. ಇಂತಹ ಅನುಪಮವಾದ ಭಾರತದ ವಿದ್ಯೆ, ಕಲೆ, ಸಂಸ್ಕೃತಿ, ಪರಂಪರೆಗಳನ್ನು ಉಳಿಸಿ-ಬೆಳೆಸುವ ಉದ್ದೇಶದಿಂದ ಕಾರ್ಯಪ್ರವೃತ್ತವಾಗಿರುವ ಭಾರತೀ ಯೋಗಧಾಮ (Bharati Yogadhama) ಸಂಸ್ಥೆ 24 ವರ್ಷ ತುಂಬಿದ ಸಂಭ್ರಮದಲ್ಲಿದೆ. ಈ ಹಿನ್ನೆಲೆಯಲ್ಲಿ ಅರ್ಧಮಂಡಲೋತ್ಸವ ಎಂಬ ನಾಮಾಂಕಿತದಲ್ಲಿ ವರ್ಷಪೂರ್ಣ ಅನೇಕ ವಿದ್ಯಾಮುಖವಾದ ಕಾರ್ಯಗಳನ್ನು ಹಮ್ಮಿಕೊಂಡು ಸಂಸ್ಥೆಯು ಸಾಗುತ್ತಿದೆ.

ಸಂಸ್ಥೆಯ ಹಿನ್ನೆಲೆ

ಭಾರತದ ಭವ್ಯ ಸಂಸ್ಕೃತಿಯನ್ನು ಶುದ್ಧವಾಗಿ ಉಳಿಸಿ ಬೆಳೆಸಲು ಪಣತೊಟ್ಟವರು ಅನೇಕರು. ಅದರ ಅಂತಃಸತ್ತ್ವವನ್ನು ಅರಿತು ಅಂತೆಯೇ ಜನಮಾನಸದಲ್ಲಿ ರೂಢಿಗೊಳಿಸಲು ಜೀವನ ಮುಡುಪಾಗಿಟ್ಟವರಲ್ಲಿ ಒಬ್ಬರು ಡಾ. ಕೆ. ಎಲ್. ಶಂಕರನಾರಾಯಣ ಜೋಯ್ಸ್‌ರವರು. ಅವರ ಅಪಾರ ಪರಿಶ್ರಮದ ಫಲವಾಗಿ ಮೈಸೂರಿನ ಪ್ರಶಾಂತ ಪರಿಸರದಲ್ಲಿ 1999ರಲ್ಲಿ ಉದಯಿಸಿದ ಸಂಸ್ಥೆ ಭಾರತೀ ಯೋಗಧಾಮ.

ಭಾರತೀ ಯೋಗಧಾಮದ ಸಂಸ್ಥಾಪಕ ಡಾ. ಕೆ. ಎಲ್. ಶಂಕರನಾರಾಯಣ ಜೋಯ್ಸ್‌

ಈ ಮಹಾಕಾರ್ಯಕ್ಕೆ ಬೆನ್ನೆಲುಬಾಗಿ ನಿಂತವರು ಮಹಾಮಹೋಪಾಧ್ಯಾಯ ಎನ್.ಎಸ್. ರಾಮಭದ್ರಾಚಾರ್ಯರು.
ಇದಕ್ಕೆ ಮೂಲಸ್ಫೂರ್ತಿ. ಕಳೆದ ಶತಮಾನದ ಯೋಗಿವರೇಣ್ಯರಾದ ಶ್ರೀರಂಗಮಹಾಗುರುಗಳ ಅಪೂರ್ವ ವ್ಯಕ್ತಿತ್ವ ಮತ್ತು ವಿಚಾರಸರಣಿ.

ವಿದ್ವಾನ್ ಶ್ರೀ ಎನ್. ಎಸ್. ರಾಮಭದ್ರಾಚಾರ್ಯ ದಂಪತಿ

ಸಂಸ್ಥೆಯ ವಿವಿಧ ಯೋಜನೆಗಳು

ಯೋಗ-ಆಯುರ್ವೇದ-ಜ್ಯೋತಿಷ ಮೊದಲಾದ ಭಾರತೀಯ ವಿದ್ಯೆಗಳು ನೆಮ್ಮದಿಯ ಬುನಾದಿಗಳು. ಅವುಗಳಲ್ಲಡಗಿದ ವಿಜ್ಞಾನದ ಕುರಿತ ಅಧ್ಯಯನ, ಅಧ್ಯಾಪನ ಹಾಗು ಸಂಶೋಧನೆಯು ಸಂಸ್ಥೆಯ ಪ್ರಧಾನ ಕಾರ್ಯ. ಆರ್ಷ ಸಂಸ್ಕೃತಿಯ ಸಂರಕ್ಷಣೆಯು ಪರಮ ಧ್ಯೇಯ. ಈ ಮಹಾಧ್ಯೇಯವು ಸಾಕಾರಗೊಳ್ಳುತ್ತಿರುವುದು ಸಂಸ್ಥೆಯು ಹಮ್ಮಿಕೊಂಡ ವಿಶಿಷ್ಟವಾದ ಯೋಜನೆಗಳ ಮೂಲಕ. ಅಂತಹ ಯೋಜನೆಗಳಲ್ಲಿ ಒಂದು ಜಂತರ್ ಮಂತರ್.
ಗ್ರಹನಕ್ಷತ್ರವೇ ಮೊದಲಾದ ಆಕಾಶಕಾಯಗಳ ಪರಿವೀಕ್ಷಣೆಯೊಂದಿಗೆ ಕಾಲದ ಬಗ್ಗೆ ಸಮಗ್ರ ಜ್ಞಾನವನ್ನು ಸಾಧಿಸಲು ಮೂಲ ಸಾಧನ – ಭಾರತೀಯರ ವೇದಶಾಲೆ (ಜಂತರ್ ಮಂತರ್). ದಕ್ಷಿಣ ಭಾರತದಲ್ಲೇ ಮೊದಲನೆಯದಾಗಿ ಈ ರಚನೆಗಳು ನಮ್ಮ ಸಂಸ್ಥೆಯಲ್ಲಿ ನಿರ್ಮಾಣವಾಗುತ್ತಿದೆ.

ಭಾರತೀಯವಾದ ಗೋತಳಿಗಳು ಪ್ರತಿಯೊಬ್ಬ ಭಾರತೀಯನಿಗೂ ಅತ್ಯಂತ ಪೂಜ್ಯವೂ, ಪ್ರಯೋಜಕವೂ ಆದದ್ದಾಗಿದೆ. ಅಂತಹ ಭಾರತೀಯ ಗೋತಳಿಗಳ ರಕ್ಷಣೆಯೂ ಈ ಸಂಸ್ಥೆಯ ಇನ್ನೊಂದು ಯೋಜನೆ. ಅಂತೆಯೇ ಸಸ್ಯಗಳ ಲಾಭಗಳಂತೂ ಹೇಳಿಮುಗಿಸಲಾರದಷ್ಟು ! ಚಿಕಿತ್ಸೆ, ಸಂಶೋಧನೆ ಮತ್ತು ಹಸಿರನ್ನು ಉಳಿಸುವ ಉದ್ದೇಶಗಳೊಂದಿಗೆ ಅಪೂರ್ವವಾದ ಸಾವಿರಾರು ವೃಕ್ಷ-ವನಸ್ಪತಿ ಮತ್ತು ಹಲವು ವಿಶಿಷ್ಟ ವನಗಳನ್ನು ಬೆಳೆಸುವ ಯೋಜನೆಯನ್ನು ಸಂಸ್ಥೆ ಹೊಂದಿದ್ದಾಗಿ ಸಸ್ಯಸಂರಕ್ಷಣೆಯ ಕಾರ್ಯವೆಸಗುತ್ತಿದೆ.

ಭಾರತೀಯವಾದ ಸಂಸ್ಕೃತಿ, ಸತ್ಸಂಪ್ರದಾಯಗಳ ರಕ್ಷಣೆಗೆ, ಶಾಸ್ತ್ರ, ವಿದ್ಯೆ, ಕಲೆಗಳ ಬಗ್ಗೆ ಸಮಾಜದ ಎಲ್ಲ ವರ್ಗದ ಜನರಿಗೆ ಪಾಠಪ್ರವಚನಗಳನ್ನು ಮಾಡುವುದರ ಮೂಲಕ ನೆಮ್ಮದಿಯ ಜೀವನಕ್ಕೆ ದಿಗ್ದರ್ಶನ ನೀಡಲು ಅನೇಕಾನೇಕ ಶಿಕ್ಷಣ ಪ್ರಧಾನವಾದ ಯೋಜನೆಗಳನ್ನೂ ಸಂಸ್ಥೆಯು ಹೊಂದಿದ್ದಾಗಿ ಸಂಸ್ಕೃತಿಸೇವೆಯಲ್ಲಿ ತೊಡಗಿದೆ.

ವಿದ್ಯಾನಂದಿನೀ ಗುರುಕುಲಮ್

ಎಳವೆಯಲ್ಲಿಯೇ ಸರಿಯಾದ ಶಿಕ್ಷಣವೊಂದು ಲಭಿಸಿದಲ್ಲಿ ಜೀವನ ಹಸನಾಗುವುದೆಂಬುದರಲ್ಲಿ ಅಭಿಪ್ರಾಯ ಭೇದಗಳಿಲ್ಲ. ಇಂದಿನ ಸಮಾಜದಲ್ಲಿನ ಬದುಕಿಗೆ ಅತ್ಯಗತ್ಯವೆನಿಸಿದ ಆಧುನಿಕ ವಿದ್ಯಾಭ್ಯಾಸವನ್ನೂ ಉತ್ತಮ ಗುಣಮಟ್ಟದಲ್ಲಿ ನೀಡುತ್ತಾ, ಅತ್ಯುತ್ತಮವಾದ ನೈತಿಕಮೌಲ್ಯಗಳಿಂದ ತುಂಬಿ ಸಮೃದ್ಧವಾಗಿರುವ ಪ್ರಾಚೀನ ಶಿಕ್ಷಣವನ್ನೂ ನೀಡುವ ವ್ಯವಸ್ಥೆ ಇಂದಿನ ಕಾಲಘಟ್ಟದ ಮೂಲಭೂತ ಅಗತ್ಯ. ಅಂತಹ ವಿಶಿಷ್ಟವಾದ ಆಧುನಿಕ ಹಾಗೂ ಪ್ರಾಚೀನ ಶಿಕ್ಷಣಗಳು ಬೆಸೆದ ಒಂದು ವ್ಯವಸ್ಥೆಯೇ – ವಿದ್ಯಾನಂದಿನೀ ಗುರುಕುಲ.

ಕೇಂದ್ರಸರ್ಕಾರದ NIOS(National Institute of Open Schooling) ನ ಮಾನ್ಯತೆ ಪಡೆದು ಕಳೆದೆರಡು ವರ್ಷಗಳಿಂದ ಸಕ್ರಿಯವಾಗಿರುವ, ಗುರುಕುಲ ಮಾದರಿಯ ನಮ್ಮ ಈ ಶಾಲೆಯು ಆಧುನಿಕ ವಿದ್ಯಾಭ್ಯಾಸವನ್ನು ಆಂಗ್ಲಮಾಧ್ಯಮದಲ್ಲಿ ನೀಡುವುದರ ಜೊತೆಗೆ, ಸಂಸ್ಕೃತ, ಯೋಗ, ಭಗವದ್ಗೀತೆ, ಸ್ತೋತ್ರ, ರಾಮಾಯಣ, ಮಹಾಭಾರತ ಮೊದಲಾದ ಪ್ರಾಚೀನ ಶಿಕ್ಷಣವನ್ನು ಸಂಸ್ಕೃತ ಹಾಗು ನಾಡ ಭಾಷೆಯಾದ ಕನ್ನಡದಲ್ಲಿ ನಿರ್ವಹಿಸುತ್ತಲಿದೆ.

ಈಗಾಗಲೇ ಈ ಗುರುಕುಲದ ಪ್ರವೇಶವು ಆರಂಭವಾಗಿದ್ದು, ಶಾಲಾವಾಹನ ವ್ಯವಸ್ಥೆ, ಉತ್ತಮ ಕ್ರೀಡಾಂಗಣ, ಪ್ರಾಕೃತಿಕವಾದ ಸುಂದರ ವಾತಾವರಣ, ಭಾರತೀಯ ಗೋವುಗಳ ಒಡನಾಟ, ಉತ್ತಮ ಶಿಕ್ಷಕರು – ಇವೇ ಮೊದಲಾದ ಸೌಲಭ್ಯಗಳೊಂದಿಗೆ ಮಕ್ಕಳಿಗೆ ಉತ್ತಮ ಭವಿಷ್ಯವನ್ನೊದಗಿಸಲು ಸಿದ್ಧವಾಗಿ ನಿಂತಿದೆ. LKG, UKG, ಪ್ರಾಥಮಿಕ ಶಾಲೆ ಹಾಗು ಪ್ರೌಢಶಾಲಾ ಶಿಕ್ಷಣ ಪಡೆಯಲು ಬೇಕಾದ ವ್ಯವಸ್ಥೆಗಳಿರುವ ಈ ಗುರುಕುಲವು ಇದೀಗ, ಮೈಸೂರಿನ ಉತ್ತನಹಳ್ಳಿ ವಿಜಯಗಿರಿಯ ಭಾರತೀ ಯೋಗಧಾಮದಲ್ಲಿ ಜನವರಿ 6 ರಂದು ತನ್ನ ವೆಬ್ ಸೈಟ್ ಅನ್ನು ಲೋಕಾರ್ಪಣೆ ಮಾಡುತ್ತಿರುವುದು ಯಶಸ್ಸಿನ ದಾರಿಯಲ್ಲಿ ಒಂದು ಮೈಲಿಗಲ್ಲು.

ತ್ರಯೀ ಯೋಗ

ಅತಿಶಯವಾದ ನೆಮ್ಮದಿಯು ಮಾನವ ಜೀವನದ ಪರಮಲಕ್ಷ್ಯವಷ್ಟೆ. ಅತ್ತ ಕರೆದೊಯ್ಯುವ ಸಾಧನಗಳೇ ಋಷಿಮೂಲವಾದ ವಿದ್ಯೆಗಳು! ಅಂತಹ ಅಪೂರ್ವ ವಿದ್ಯೆಗಳಲ್ಲಿ ನೇರವಾಗಿ ಪೂರ್ಣವಾದ (ದೈಹಿಕ-ಮಾನಸಿಕ) ಆರೋಗ್ಯದ ಸೂತ್ರವನ್ನು ಸ್ಥಾಪಿಸಲು ಬಂದ ವಿದ್ಯೆ ಆಯುರ್ವೇದ. ಅತಿಶಯವಾದ ನೆಮ್ಮದಿಯ ತಾಣಕ್ಕೆ ದಿಗ್ದರ್ಶಕವಾದದ್ದು ಯೋಗ. ಸಮಗ್ರಜೀವನದರ್ಶನಕ್ಕೆ ಕಣ್ಣಿನ ಸ್ಥಾನದ ವಿದ್ಯೆ ಜ್ಯೋತಿಷ. ಈ ಮೂರೂ ವಿದ್ಯೆಗಳ ಸಮುಚಿತವಾದ ಬಳಕೆಯೊಂದಿಗೆ ಸಮಾಜದ ಹಿತವನ್ನು ಸಾಧಿಸಲು ಮಾದರಿಯಾಗಿರುವ ಶಿಕ್ಷಣ ವ್ಯವಸ್ಥೆ – ತ್ರಯೀಯೋಗ!

ಒಂದು ವರ್ಷಗಳಲ್ಲಿ 96 ತರಗತಿಗಳ ಮೂಲಕ ಯೋಗ, ಆಯುರ್ವೇದ, ಜ್ಯೋತಿಷ – ಈ ಮೂರು ವಿದ್ಯೆಗಳ ಮೂಲಭೂತ ಪರಿಚಯವನ್ನೂ ನೀಡಿ, ಆರೋಗ್ಯಕ್ಕೆ ಬೇಕಾದ ಆಸನ ಪ್ರಾಣಾಯಾಮಗಳನ್ನು ಕಲಿಸುವ ಶಿಕ್ಷಣ ಯೋಜನೆ ಇದಾಗಿದೆ. ಪೂರ್ಣವಾಗಿ ಭಾಗವಹಿಸಿದವರಿಗೆ ವರ್ಷಾಂತ್ಯದಲ್ಲಿ ಪ್ರಮಾಣಪತ್ರವನ್ನೂ ನೀಡಲಾಗುವುದು.
ಅಂತೆಯೇ ರೋಗದಿಂದ ಬಳಲುತ್ತಿರುವವರಿಗೆ ಸಂಸ್ಥೆಯ ನುರಿತ ತಜ್ಞರುಗಳಿಂದ ಜ್ಯೋತಿಷ ಮಾರ್ಗದರ್ಶನವನ್ನೂ ಕೊಟ್ಟು, ಆಯುರ್ವೇದ ಸೂಚಿಸುವ ಪಥ್ಯ, ದಿನಚರ್ಯಗಳ ಬಗ್ಗೆಯೂ ಸಲಹೆ ಸೂಚನೆಗಳನ್ನು ನೀಡಿ ಯೋಗಾಸನ, ಪ್ರಾಣಾಯಾಮಗಳ ಮೂಲಕ ಉತ್ತಮವಾದ ಆರೋಗ್ಯ ಸಿದ್ಧಿಗೆ ಮಾರ್ಗದರ್ಶನವನ್ನು ನೀಡಲಾಗುವುದು.

ಅರ್ಧಮಂಡಲೋತ್ಸವ

ಇದೀಗ ನಮ್ಮ ಸಂಸ್ಥೆಯು 24 ಸಂವತ್ಸರಗಳು ತುಂಬಿದ ಸಂಭ್ರಮದಲ್ಲಿದೆ. ಅರ್ಧಮಂಡಲೋತ್ಸವ ಎಂಬ ನಾಮಾಂಕಿತದಲ್ಲಿ ವರ್ಷಪೂರ್ಣ ಅನೇಕ ವಿದ್ಯಾಮುಖವಾದ ಕಾರ್ಯಗಳನ್ನು ಹಮ್ಮಿಕೊಂಡು ಸಾಗುತ್ತಲಿದೆ. ಈ ವಿಶೇಷ ಯಾತ್ರೆಯ ಮತ್ತೊಂದು ಹೆಜ್ಜೆಯಾಗಿ, ರಾಮಜನ್ಮಭೂಮಿಯಲ್ಲಿ ಲೋಕಾರ್ಪಣೆಯಾಗುತ್ತಿರುವ ಶ್ರೀರಾಮ ಮಂದಿರದ ಸಂಭ್ರಮದ ಅಂಗವಾಗಿ, ನಾಡಿನ ಪ್ರಸಿದ್ಧ ವಾಗ್ಮಿಗಳೂ, ಶ್ರೇಷ್ಠ ಸಂಸ್ಕೃತಿ ಚಿಂತಕರೂ ಆದ ಶ್ರೀಯುತ ಚಕ್ರವರ್ತಿ ಸೂಲಿಬೆಲೆಯವರ ಉಪನ್ಯಾಸ ಕಾರ್ಯಕ್ರಮವನ್ನು (ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಔಚಿತ್ಯ) ಭಾರತೀ ಯೋಗಧಾಮದಲ್ಲಿ ಜ.6ರಂದು ಹಮ್ಮಿಕೊಂಡಿದೆ.

ಶ್ರೀರಾಮನೊಬ್ಬ ರಾಜಕೀಯ ಪುರುಷನಷ್ಟೇ ಅಲ್ಲದೆ, ಭುವಿಗವತರಿಸಿದ ಭಗವಂತ. ಆದರ್ಶಪುರುಷನಾಗಿ ಲೋಕಕ್ಕೆ ದಾರಿದೀಪನಾದ ಪರಮಪುರುಷ. ಅವನನ್ನಾರಾಧಿಸಿ ಜೀವನದ ಸಾರ್ಥಕ್ಯವನ್ನು ಅನುಭವಿಸಿದವರ ಸಂಖ್ಯೆ ಗಣಿಸಲಾಗದಷ್ಟು! ಅಂತಹ ಭಾರತೀಯರ ಹೃದಯ ಸಾರ್ವಭೌಮನಾದ ಶ್ರೀರಾಮನ ಭವ್ಯಮಂದಿರವೊಂದು ಮತ್ತೆ ಅಯೋಧ್ಯೆಯಲ್ಲಿ ತಲೆಯೆತ್ತಿ ನಿಲ್ಲುತ್ತಿದೆ.

ಇದನ್ನೂ ಓದಿ | Ram Mandir: ಜನವರಿ 22ರಂದೇ ಯಾಕೆ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ? ಇಲ್ಲಿದೆ ಮಾಹಿತಿ…

ಭಾರತಭೂಮಿಯ ಹೃದಯಸ್ಥಾನದಲ್ಲೊಂದು ಪುಣ್ಯಕ್ಷೇತ್ರ ಅಯೋಧ್ಯೆ. ಅದರಂತೆ ಈ ನಮ್ಮ ಶರೀರದಲ್ಲಿನ ಹೃದಯ ಸ್ಥಾನವೂ ಅಯೋಧ್ಯೆಯಾಗಿದೆ ಎಂಬುದು ಶ್ರೀರಾಮನನ್ನು ಹೃದಯದಲ್ಲಿ ಕಂಡ ಯೋಗಿಜನರ ಉದ್ಗಾರ. ಆ ಪುಣ್ಯ ಪಟ್ಟಣದಲ್ಲಿ ಬೇಳಗುವ ರಾಜರಾಜ ಶ್ರೀರಾಮ. ಅವನ ಪುಣ್ಯಸ್ಮಾರಕವೇ ಅಯೋಧ್ಯೆಯ ಶ್ರೀ ರಾಮನ ಭವ್ಯ ಮಂದಿರ. ಅಂತಹ ಆ ಶ್ರೀ ರಾಮ ಮಂದಿರದ ಪುನರ್ನಿರ್ಮಾಣವು ಭಾವಿಸುವ ಭಕ್ತರಿಗೆಲ್ಲ ಒಂದು ದಿವ್ಯವಾದ ಚೈತನ್ಯಸ್ಥಾನ. ಇಂತು ಅತಿಮಹತ್ತ್ವಪೂರ್ಣವೆನಿಸಿದ ಈ ಮಂದಿರ ನಿರ್ಮಾಣದ ಸಂಭ್ರಮದಲ್ಲಿ ಎಲ್ಲರೂ ಒಂದಾಗಿ ಅದರ ಮಹತ್ತ್ವವನ್ನು ಅರಿಯೋಣ ಬನ್ನಿ….

ಎಲ್ಲರಿಗೂ ಹಾರ್ದಿಕ ಸ್ವಾಗತ

Exit mobile version