ಮಂಗಳೂರು: ಅಯೋಧ್ಯೆಯಲ್ಲಿ ಅಪೂರ್ಣ ಸ್ಥಿತಿಯಲ್ಲಿರುವ ರಾಮ ಮಂದಿರವನ್ನು (Rama Mandir) ಉದ್ಘಾಟನೆ ಮಾಡುವುದು ಹಿಂದೂ ಸಂಪ್ರದಾಯಕ್ಕೆ ವಿರುದ್ಧ (Against the tradition). ಹೀಗೆ ಮಾಡಿದರೆ ಬಿಜೆಪಿಗೆ ಶ್ರೀರಾಮನ ಶಾಪ ತಟ್ಟಲಿದೆ (BJP will face curse of Rama) ಎಂದು ಹಿಂದೂ ಮಹಾಸಭಾ (Hindu Mahasabha) ಆರೋಪಿಸಿದೆ.
ಮಂಗಳೂರಿನಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಹಿಂದೂ ಮಹಾಸಭಾ ಕರ್ನಾಟಕದ ಸಂಸ್ಥಾಪಕ ರಾಜೇಶ್ ಪವಿತ್ರನ್ ಅವರು, ಮುಂಬರುವ ಲೋಕಸಭಾ ಚುನಾವಣೆಯನ್ನು ಮುಂದಿಟ್ಟುಕೊಂಡು, ದೇವಸ್ಥಾನ ಕಾಮಗಾರಿ ಸಂಪೂರ್ಣಗೊಳ್ಳುವ ಮೊದಲೇ ಅಯೋಧ್ಯೆಯಲ್ಲಿ ಪ್ರಾಣಪ್ರತಿಷ್ಠಾಪನೆ ಮಾಡುವುದು ಹಿಂದೂ ಸಂಪ್ರದಾಯಕ್ಕೆ ವಿರುದ್ಧವಾಗಿದೆ ಎಂದು ಹೇಳಿದರು.
ಶಾಸ್ತ್ರಗಳನ್ನು ಬದಿಗಿಟ್ಟು, ವೈಯಕ್ತಿಕ ಹಿತಾಸಕ್ತಿ ಮುಂದಿಟ್ಟು ಕೇವಲ ಬೂಟಾಟಿಕೆಯ ಶಾಸ್ತ್ರ ಮಾಡಿದರೆ ಬಿಜೆಪಿಗೆ ಶ್ರೀರಾಮನ ಶಾಪ ತಟ್ಟಲಿದೆ. ಅವರಿಗೆ ಇಂದಿನ ಕರ್ನಾಟಕದ ಪರಿಸ್ಥಿತಿ ನಾಳೆ ಕೇಂದ್ರದಲ್ಲೂ ಬರಬಹುದು ಎಂದು ಪವಿತ್ರನ್ ಆಕ್ರೋಶ ವ್ಯಕ್ತಪಡಿಸಿದರು.
ಅಯೋಧ್ಯೆಯಲ್ಲಿ ಜನವರಿ 22ರಂದು ರಾಮ ಮಂದಿರದ ಲೋಕಾರ್ಪಣೆಯಾಗಲಿದೆ. ಆದರೆ, ಇನ್ನೂ ದೇವಸ್ಥಾನವೇ ನಿರ್ಮಾಣವಾಗಿಲ್ಲ. ಕೇವಲ ಗರ್ಭಗುಡಿಯ ಭಾಗ ಮಾತ್ರ ಪೂರ್ಣವಾಗಿದ್ದು, ಉಳಿದ ಕ್ಷೇತ್ರಪಾಲ ದೇವರುಗಳು, ಗೋಪುರಗಳ ನಿರ್ಮಾಣ ಆಗಿಲ್ಲ. ಹೀಗೆ ಅರೆಬರೆ ಮಂದಿರದಲ್ಲಿ ದೇವರ ಮೂರ್ತಿಯನ್ನು ಇಟ್ಟು ಪ್ರಾಣ ಪ್ರತಿಷ್ಠೆ ಮಾಡುವುದು ಸರಿಯಲ್ಲ ಎಂಬ ಬಗ್ಗೆ ಹಲವರು ತಮ್ಮ ವಾದ ಮಂಡಿಸುತ್ತಿದ್ದಾರೆ. ಶಂಕರಾಚಾರ್ಯ ಪೀಠಗಳ ಮುಖ್ಯಸ್ಥರು ಕೂಡಾ ಇದೇ ಅಭಿಪ್ರಾಯ ಹೊಂದಿದ್ದಾರೆ. ಹಿಂದೂ ಮಹಸಭಾ ಇದೇ ಅಭಿಪ್ರಾಯ ವ್ಯಕ್ತಪಡಿಸಿದೆ.
ಪೂರ್ಣಪ್ರಮಾಣದ ದೇವಸ್ಥಾನ ನಿರ್ಮಾಣದ ಮೊದಲೇ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ರಾಮಮಂದಿರದ ಉದ್ಘಾಟನೆ ಮಾಡುವುದು ಧರ್ಮಶಾಸ್ತ್ರಕ್ಕೆ ವಿರುದ್ಧ. ಶಾಸ್ತ್ರಕ್ಕೆ ಅಪಚಾರ. ಹೀಗಾಗಿ ಹಿಂದೂ ಮಹಾಸಭಾ ಇದನ್ನು ಆಕ್ಷೇಪಿಸುತ್ತದೆ ಎಂದು ಪವಿತ್ರನ್ ಹೇಳಿದರು.
ಹೋರಾಟ ಮಾಡಿದವರೆಲ್ಲ ಮೂಲೆಗೆ, ಹಿಂದು ಮಹಾಸಭಾಕ್ಕೂ ಆಹ್ವಾನವಿಲ್ಲ!
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆಗಲೇಬೇಕು ಎಂದು ಹೋರಾಟ ನಡೆಸಿದವರೆಲ್ಲ ಮೂಲೆಗುಂಪಾಗಿದ್ದಾರೆ. ರಾಮಮಂದಿರ ನಿರ್ಮಾಣಕ್ಕೆ ಮುಂಚೂಣಿ ಹೋರಾಟದಲ್ಲಿದ್ದ ಹಿಂದೂ ಮಹಾಸಭಾ, ನಿರ್ಮೋಹಿ ಅಖಾಡ, ಸಾಧುಸಂತರ ವ್ಯವಸ್ಥೆಯನ್ನು ದೂರವಿಟ್ಟು ಕೇಂದ್ರ ಸರಕಾರ ರಾಮಮಂದಿರವನ್ನು ಉದ್ಘಾಟಿಸಲು ಹೊರಟಿದೆ ಎಂದು ರಾಜೇಶ್ ಪವಿತ್ರನ್ ಆಕ್ಷೇಪಿಸಿದರು.
ಇದನ್ನೂ ಓದಿ: Ayodhya Ram Mandir: ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆ? ಅಯೋಧ್ಯೆ ರಾಮ ಮಂದಿರಕ್ಕೆ ಹೀಗೆ ತೆರಳಿ
ಅಯೋಧ್ಯೆ ವಿವಾದದ ಮೂಲ ವಕಾಲತ್ತುದಾರ ಹಿಂದೂ ಮಹಾಸಭಾಕ್ಕೆ ರಾಮಮಂದಿರ ಉದ್ಘಾಟನೆಗೆ ಆಹ್ವಾನವೇ ಇಲ್ಲ. ಹಿಂದುತ್ವದ ವಿಚಾರದಲ್ಲಿ ರಾಜಕೀಯ ಮಾಡಿ ಅಧಿಕಾರಕ್ಕೆ ಏರಿರುವ ಬಿಜೆಪಿ ಈಗ ಪ್ರಭು ಶ್ರೀರಾಮನ ವಿಚಾರದಲ್ಲಿ ರಾಜಕೀಯ ಮಾಡಿದರೆ ಅದನ್ನು ಹಿಂದೂ ಮಹಾಸಭಾ ಒಪ್ಪುವುದಿಲ್ಲ ಎಂದು ಎಚ್ಚರಿಕೆ ನೀಡಿದರು ರಾಜೇಶ್ ಪವಿತ್ರನ್.