Site icon Vistara News

Buddha Purnima: ಇಂದು ಬುದ್ಧ ಪೂರ್ಣಿಮೆ; ಬುದ್ಧನ ಬೋಧನೆಯನ್ನು ಸ್ಮರಿಸಿಕೊಳ್ಳುವ ದಿನ

Buddha Purnima

ಬುದ್ಧ ಜಯಂತಿ ಅಥವಾ ವೈಶಾಖಿ ಬುದ್ಧ ಪೂರ್ಣಿಮಾ (Buddha Purnima) ಅಥವಾ ವೆಸಾಕ್ (Vesak) ಎಂದೂ ಕರೆಯಲ್ಪಡುವ ಬುದ್ಧ ಪೂರ್ಣಿಮಾ ಹಬ್ಬವು ಗೌತಮ ಬುದ್ಧನ (Gautama Buddha) ಜನ್ಮ ದಿನವನ್ನು ಸೂಚಿಸುತ್ತದೆ.

ಭಾರತ, ಶ್ರೀಲಂಕಾ, ನೇಪಾಳ, ಭೂತಾನ್, ಟಿಬೆಟ್, ಥೈಲ್ಯಾಂಡ್, ಚೀನಾ, ಕೊರಿಯಾ, ಲಾವೋಸ್, ವಿಯೆಟ್ನಾಂ, ಮಂಗೋಲಿಯಾ, ಕಾಂಬೋಡಿಯಾ ಮತ್ತು ಇಂಡೋನೇಷ್ಯಾ ಸೇರಿದಂತೆ ಹಲವಾರು ಆಗ್ನೇಯ ಏಷ್ಯಾದ ದೇಶಗಳಲ್ಲಿ ಇದನ್ನು ಅತ್ಯಂತ ಅದ್ಧೂರಿಯಾಗಿ ಆಚರಿಸಲಾಗುತ್ತದೆ.

ಹಿಂದೂ ಕ್ಯಾಲೆಂಡರ್ ಪ್ರಕಾರ ವೈಶಾಖ ತಿಂಗಳ (ಏಪ್ರಿಲ್/ಮೇ) ಹುಣ್ಣಿಮೆಯ ದಿನದಂದು ಬುದ್ಧ ಪೂರ್ಣಿಮೆಯನ್ನು ಆಚರಿಸಲಾಗುತ್ತದೆ. ಈ ದಿನವು ಬೌದ್ಧ ಕ್ಯಾಲೆಂಡರ್ ನಲ್ಲಿ ಪ್ರಮುಖ ದಿನವಾಗಿದೆ. ಬುದ್ಧ ಜಯಂತಿಯು ಪ್ರಪಂಚದಾದ್ಯಂತ ಇರುವ ಬೌದ್ಧರಿಗೆ ವಿಶೇಷ ದಿನವಾಗಿದೆ. ಇದು ಬೌದ್ಧ ಧರ್ಮದ ಸ್ಥಾಪಕ ಸಿದ್ಧಾರ್ಥ ಗೌತಮನನ್ನು ಗೌರವಿಸುತ್ತದೆ.


ಈ ದಿನದ ಮೂರು ಮಹತ್ವ

ಬ್ರಿಟಿಷ್ ಲೈಬ್ರರಿ ಬ್ಲಾಗ್ ಪ್ರಕಾರ, ಪ್ರತಿ ಹುಣ್ಣಿಮೆಯ ದಿನವು ಬೌದ್ಧರಿಗೆ ಮಂಗಳಕರ ದಿನವಾಗಿದೆ. ಆದರೆ ಎಲ್ಲಕ್ಕಿಂತ ಮುಖ್ಯವಾದದ್ದು ಮೇ ತಿಂಗಳ ಹುಣ್ಣಿಮೆಯ ದಿನ. ಏಕೆಂದರೆ ಗೌತಮ ಬುದ್ಧನ ಜೀವನದಲ್ಲಿ ಮೂರು ಪ್ರಮುಖ ಘಟನೆಗಳು ಈ ದಿನ ನಡೆದವು. ಮೊದಲನೆಯದಾಗಿ, ಬುದ್ಧನಾಗಲಿರುವ ರಾಜಕುಮಾರ ಸಿದ್ಧಾರ್ಥ ಮೇ ತಿಂಗಳ ಹುಣ್ಣಿಮೆಯ ದಿನದಂದು ಜನಿಸಿದನು. ಎರಡನೆಯದಾಗಿ, ಆರು ವರ್ಷಗಳ ಕಠಿಣ ತಪಸ್ಸಿನ ಬಳಿಕ ಬೋಧಿ ವೃಕ್ಷದ ನೆರಳಿನಲ್ಲಿ ಜ್ಞಾನೋದಯವನ್ನು ಪಡೆದನು. ಮೇ ತಿಂಗಳ ಹುಣ್ಣಿಮೆಯ ದಿನದಂದು ಬೋಧಗಯಾದಲ್ಲಿ ಗೌತಮ ಬುದ್ಧರಾದರು. ಮೂರನೆಯದಾಗಿ ಬುದ್ಧರಾದ 45 ವರ್ಷಗಳ ಬಳಿಕ ಅವರು ಎಂಬತ್ತನೇ ವಯಸ್ಸಿನಲ್ಲಿ ಕುಸಿನಾರಾದಲ್ಲಿ ನಿಧನರಾದರು.

ಬುದ್ಧ ಜಯಂತಿ ಯಾವಾಗ?

ಈ ವರ್ಷ ಬುದ್ಧ ಜಯಂತಿಯು ಗುರುವಾರ ಮೇ 23ರಂದು ಆಚರಿಸಲಾಗುತ್ತಿದೆ. ಪೂರ್ಣಿಮಾ ತಿಥಿಯು ಮೇ 22ರಂದು ಸಂಜೆ 6.47ಕ್ಕೆ ಪ್ರಾರಂಭಗೊಂಡು ಮೇ 23ರಂದು ಸಂಜೆ 7.22ಕ್ಕೆ ಕೊನೆಗೊಳ್ಳುತ್ತದೆ.

ಬುದ್ಧ ಜಯಂತಿ ಆಚರಣೆ ಹೇಗೆ?

ಬೌದ್ಧರಿಗೆ ಬುದ್ಧ ಜಯಂತಿಯು ಬುದ್ಧನ ಬೋಧನೆಗಳನ್ನು ಪ್ರತಿಬಿಂಬಿಸುವ ಸಮಯವಾಗಿದೆ. ಇದು ಶಾಂತಿ, ಸಹಾನುಭೂತಿ ಮತ್ತು ಬುದ್ಧಿವಂತಿಕೆಯ ಪ್ರತೀಕವಾಗಿದೆ.

ಬುದ್ಧನ ಭಕ್ತರು ದೇವಾಲಯಗಳಿಗೆ ಭೇಟಿ ನೀಡುತ್ತಾರೆ, ಮೇಣದಬತ್ತಿ, ಧೂಪದ್ರವ್ಯಗಳನ್ನು ಬೆಳಗಿಸುತ್ತಾರೆ, ಪ್ರಾರ್ಥಿಸುತ್ತಾರೆ. ಭಗವಾನ್ ಬುದ್ಧನ ಪ್ರತಿಮೆಯ ಮುಂದೆ ಸಿಹಿತಿಂಡಿ ಮತ್ತು ಹಣ್ಣುಗಳನ್ನು ಅರ್ಪಿಸುತ್ತಾರೆ. ಬುದ್ಧನ ಜೀವನ ಮತ್ತು ಬೋಧನೆಗಳ ಕುರಿತು ಧರ್ಮೋಪದೇಶಗಳು ನಡೆಯುತ್ತವೆ. ಜನರು ಸಾಮಾನ್ಯವಾಗಿ ಬಿಳಿ ಬಟ್ಟೆಯನ್ನು ಧರಿಸುತ್ತಾರೆ, ಮಾಂಸಾಹಾರವನ್ನು ಸೇವಿಸುವುದಿಲ್ಲ. ಖೀರ್ ವಿತರಿಸುತ್ತಾರೆ, ಬೌದ್ಧ ಸಿದ್ಧಾಂತದ ಪ್ರಕಾರ ಈ ದಿನ ಸುಜಾತಾ ಎಂಬ ಮಹಿಳೆ ಬುದ್ಧನಿಗೆ ಹಾಲಿನ ಗಂಜಿಯನ್ನು ಅರ್ಪಿಸಿದಳು ಎನ್ನಲಾಗುತ್ತದೆ.

ಭಗವಾನ್ ಬುದ್ಧನ ಪ್ರಮುಖ ಬೋಧನೆಗಳಲ್ಲಿ ಎಲ್ಲಾ ಜೀವಿಗಳಿಗೆ ಸಹಾನುಭೂತಿ ತೋರಿಸಬೇಕು, ಸ್ವಾತಂತ್ರ್ಯ ನೀಡಬೇಕು ಎನ್ನುವುದು ಒಂದು. ಹಾಗಾಗಿ ಈ ದಿನದಂದು ಪಂಜರದಲ್ಲಿರುವ ಪಕ್ಷಿಗಳನ್ನು ಸಾಂಕೇತಿಕವಾಗಿ ಮುಕ್ತಗೊಳಿಸುತ್ತಾರೆ. ಭಾರತದಲ್ಲಿ ಉತ್ತರ ಪ್ರದೇಶದ ಸಾರನಾಥದಲ್ಲಿ ದೊಡ್ಡ ಜಾತ್ರೆಯೇ ನಡೆಯುತ್ತದೆ. ಇದು ಪ್ರಮುಖ ಬೌದ್ಧ ಯಾತ್ರಾ ಸ್ಥಳವಾಗಿದೆ. ಅಲ್ಲಿ ಬುದ್ಧನು ಜ್ಞಾನೋದಯವನ್ನು ಪಡೆದ ಅನಂತರ ತನ್ನ ಮೊದಲ ಧರ್ಮೋಪದೇಶವನ್ನು ನೀಡಿದನೆಂದು ಹೇಳಲಾಗುತ್ತದೆ.


ಬುದ್ಧ ಜಯಂತಿಯ ಇತಿಹಾಸ ಏನು?

ವೈಶಾಖ ಮಾಸದ ಬುದ್ಧ ಪೂರ್ಣಿಮೆಯು ಗೌತಮ ಬುದ್ಧನ ಜನ್ಮ ದಿನವೆಂದು ಆಚರಿಸಲಾಗುತ್ತದೆ. ಬುದ್ಧನ ಜನನ ಮತ್ತು ಮರಣದ ದಿನಾಂಕಗಳು ಖಚಿತವಾಗಿಲ್ಲ. ಆದರೆ ಇತಿಹಾಸಕಾರರು ಅವರು 563-483 B.Cಯಲ್ಲಿ ಜನಿಸಿದರು. ಅವರು ನೇಪಾಳದ ಲುಂಬಿನಿಯಲ್ಲಿ ಜನಿಸಿದರು ಮತ್ತು ಉತ್ತರ ಪ್ರದೇಶದ ಕುಶಿನಗರದಲ್ಲಿ 80ನೇ ವಯಸ್ಸಿನಲ್ಲಿ ನಿಧನರಾದರು ಎನ್ನುತ್ತಾರೆ.

ಬೋಧಗಯಾ ಬೌದ್ಧರಿಗೆ ಅತ್ಯಂತ ಪ್ರಮುಖ ಯಾತ್ರಾ ಸ್ಥಳವಾಗಿದೆ. ಅಲ್ಲಿ ಬುದ್ಧನು ಜ್ಞಾನೋದಯವನ್ನು ಪಡೆದನು. ಇತರ ಪ್ರಮುಖ ಸ್ಥಳಗಳೆಂದರೆ ಕುಶಿನಗರ, ಲುಂಬಿನಿ ಮತ್ತು ಸಾರನಾಥ, ಅಲ್ಲಿ ಅವರು ಮೊದಲು ಬೌದ್ಧ ಧರ್ಮವನ್ನು ಕಲಿಸಿದರು.

ವಿಷ್ಣುವಿನ 9ನೇ ಅವತಾರ

ಉತ್ತರ ಭಾರತದಲ್ಲಿ ಬುದ್ಧನನ್ನು ಭಗವಾನ್ ವಿಷ್ಣುವಿನ 9ನೇ ಅವತಾರವಾಗಿ ನೋಡಲಾಗುತ್ತದೆ, ಕೃಷ್ಣನನ್ನು 8ನೇ ಅವತಾರ ಎಂದು ಪರಿಗಣಿಸಲಾಗಿದೆ. ಆದರೆ ಬೌದ್ಧರು ಬುದ್ಧನನ್ನು ವಿಷ್ಣುವಿನ ಅವತಾರವೆಂದು ಪರಿಗಣಿಸುವುದಿಲ್ಲ.

Exit mobile version