ನವ ದೆಹಲಿ: ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿ ಭಾನುವಾರ ಸಂಜೆ ಬಸ್ಸೊಂದು ಕಮರಿಗೆ ಉರುಳಿ 25 ಮಂದಿ ಮೃತಪಟ್ಟಿದ್ದಾರೆ. ಇನ್ನೂ ಹಲವರು ಗಾಯಗೊಂಡಿದ್ದಾರೆ. ಮಧ್ಯಪ್ರದೇಶದ ಪನ್ನಾದಿಂದ ಚಾರ್‌ಧಾಮ್ ಯಾತ್ರೆ ಹೊರಟಿದ್ದ ಯಾತ್ರಿಕರು ಯಮುನೋತ್ರಿಗೆ ಹೋಗುವ ದಾರಿಯಲ್ಲಿ ಅವಘಡ ಸಂಭವಿಸಿ ಪ್ರಾಣ ಕಳೆದುಕೊಂಡಿದ್ದಾರೆ. ಬಸ್ಸಿನಲ್ಲಿ ಚಾಲಕ, ನಿರ್ವಾಹಕರನ್ನು ಹೊರತುಪಡಿಸಿ 28 ಪ್ರಯಾಣಿಕರಿದ್ದರು. ಈ ಘಟನೆ ಚಾರ್‌ಧಾಮ್ ಯಾತ್ರೆಯ ವೇಳೆ ಹೆಚ್ಚುತ್ತಿರುವ ಅಪಘಾತ ಸರಣಿಗೆ ಹೊಸ ಸೇರ್ಪಡೆಯಾಗಿದ್ದು, ಆತಂಕ ಮೂಡಿಸಿದೆ.
ಉತ್ತರ ಕಾಶಿ ಜಿಲ್ಲೆಯ ಡಾಮ್ಟಾ ಪ್ರದೇಶದಿಂದ ಎರಡು ಕಿಮೀ ದೂರದಲ್ಲಿರುವ ಹಿಮಾಲಯ ಶ್ರೇಣಿಯ ಪರ್ವತಗಳ ಅಂಕುಡೊಂಕಿನ ರಸ್ತೆಯಲ್ಲಿ ರಿಖಾವು ಖಾಡ್ ಎಂಬಲ್ಲಿ ದುರಂತ ಸಂಭವಿಸಿದೆ. ನಿಯಂತ್ರಣ ಕಳೆದುಕೊಂಡ ಬಸ್ ಪಕ್ಕದ ಕೊರಕಲಿಗೆ ಉರುಳಿದೆ. ಮಧ್ಯಪ್ರದೇಶದ ಪನ್ನಾದ ಈ ಯಾತ್ರಿಕರು ಯಮುನೋತ್ರಿ ಕಡೆಗೆ ತೆರಳುತ್ತಿದ್ದು, ಬಳಿಕ ಬದರೀನಾಥ್, ಕೇದಾರನಾಥ್ ಮತ್ತು ಗಂಗೋತ್ರಿಗೆ ಹೋಗುವವರಿದ್ದರು.
ಈ ಅಪಘಾತಕ್ಕೆ ಪ್ರಧಾನಿ ನರೇಂದ್ರ ಮೋದಿ, ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸಂತಾಪ ಸೂಚಿಸಿದ್ದಾರೆ. ಗೃಹ ಸಚಿವ ಅಮಿತ್ ಶಾ ಅವರು ಮುಖ್ಯಮಂತ್ರಿ ಧಾಮಿ ಅವರ ಜತೆ ಮಾತನಾಡಿದ್ದು, ಪರಿಹಾರ ಕಾರ್ಯಾಚರಣೆಗೆ ಸಕಲ ನೆರವು ಘೋಷಿಸಿದ್ದಾರೆ.
ಇದನ್ನೂ ಓದಿ| ಉತ್ತರ ಪ್ರದೇಶ ಅಪಘಾತದಲ್ಲಿ ಏಳು ಕನ್ನಡಿಗರ ಸಾವು: ಯೋಗಿ ಆದಿತ್ಯನಾಥ ಜತೆ CM ಬೊಮ್ಮಾಯಿ ಮಾತು