| ಲೋಹಿತ್ ಎಂ.ಆರ್, ಕೊಡಗು
ಕರುನಾಡ ಜೀವನದಿ ಕಾವೇರಿಯ ಉಗಮಸ್ಥಾನ ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಸೋಮವಾರ ಹಬ್ಬದ ವಾತಾವರಣ ಮನೆಮಾಡಿತ್ತು. ವರ್ಷಕ್ಕೊಮ್ಮೆ ತೀರ್ಥ ಸ್ವರೂಪಿಣಿಯಾಗಿ ಭಕ್ತರಿಗೆ ದರ್ಶನ ನೀಡುವ ಕಾವೇರಿಯನ್ನು ಕಣ್ತುಂಬಿಕೊಳ್ಳಲು ಸಹಸ್ರ ಸಂಖ್ಯೆಯ ಭಕ್ತರ ದಂಡು ನೆರೆದಿತ್ತು. ಪುರೋಹಿತರ ಮಂತ್ರ ಪಠಣ, ಭಕ್ತರ ಭಾವೋದ್ವೇಗದ ನಡುವೆ ಬ್ರಹ್ಮ ಕುಂಡಿಕೆಯಿಂದ ಗಂಗೆರೂಪದಲ್ಲಿ ಉಕ್ಕಿಬಂದ ಕಾವೇರಿ ಮಾತೆಯ ದರ್ಶನ ಪಡೆದು ಭಕ್ತರು ಧನ್ಯರಾದರು.
ಹೌದು, ಲೋಕ ಕಲ್ಯಾಣಾರ್ಥವಾಗಿ ನದಿಯಾಗಿ ಹರಿದ ಕಾವೇರಿ ಭಕ್ತರ ಕೋರಿಕೆಯಂತೆ ವರ್ಷಕ್ಕೊಮ್ಮೆ ತೀರ್ಥಸ್ವರೂಪಿಣಿಯಾಗಿ ಉಕ್ಕಿಬರುವ ಪುಣ್ಯಕಾಲ ತುಲಾ ಸಂಕ್ರಮಣದ ತೀರ್ಥೋದ್ಭವವನ್ನು ಕಣ್ತುಂಬಿಕೊಳ್ಳಲು ಸಹಸ್ರ ಸಂಖ್ಯೆಯ ಭಕ್ತರು ಜಮಾಯಿಸಿದ್ದರು. ಈ ಬಾರಿ ತುಲಾ ಮಾಸದ ಮೇಷ ಲಗ್ನದಲ್ಲಿ ಸೋಮವಾರ ರಾತ್ರಿ 7.22 ನಿಮಿಷಕ್ಕೆ ಒಂದು ನಿಮಿಷ ತಡವಾಗಿ ಬ್ರಹ್ಮಕುಂಡಿಕೆಯಿಂದ ತೀರ್ಥಸ್ವರೂಪಿಣಿಯಾಗಿ ಉಕ್ಕಿಬಂದ ಕಾವೇರಿಯನ್ನು ಕಣ್ತುಂಬಿಕೊಂಡ ಭಕ್ತಗಣ ಜೈ ಜೈ ಮಾತಾ ಕಾವೇರಿ ಮಾತಾ ಎಂದು ಹರ್ಷೋದ್ಘಾರದ ಮೂಲಕ ಭಾವಪರವಶರಾಗಿ ಕಲ್ಯಾಣಿಯಲ್ಲಿ ಮಿಂದೆದ್ದರು.
ಇದನ್ನೂ ಓದಿ | ಸಮಯಪ್ರಜ್ಞೆಯಿಂದ ಕೆಲಸ ಮಾಡಿ: ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಫುಲ್ ಕ್ಲಾಸ್
ಕೊಡಗಿನ ಜನರ ಪಾಲಿಗೆ ಕಾವೇರಿ ಕೇವಲ ನದಿಯಲ್ಲ, ಆಕೆ ಕೊಡಗಿನ ಜನರ ಕುಲದೇವತೆ, ಪಾಪನಾಶಿನಿ, ಬೇಡಿದ ವರವ ನೀಡುವ ಕರುಣಾಮಯಿ. ಹಾಗಾಗಿಯೇ ಕಾವೇರಿ ತಾಯಿಯ ದರ್ಶನಕ್ಕೆ ಭಾರಿ ಸಂಖ್ಯೆಯಲ್ಲಿ ಭಕ್ತರು ನೆರೆದಿದ್ದರು. ಬ್ರಹ್ಮಕುಂಡಿಕೆಯಲ್ಲಿ ತೀರ್ಥಸ್ವರೂಪಿಣಿಯಾಗಿ ಬರುವ ಪವಿತ್ರ ಕಾವೇರಿ ಮಾತೆಯ ಜಲವನ್ನು ಸಂಗ್ರಹಿಸಲು ಜನರು ಮುಂಜಾನೆಯಿಂದ ಕಾದು ಕುಳಿತಿದ್ದರು. ತುಲಾ ಸಂಕ್ರಮಣದ ಈ ಕಾಲದಲ್ಲಿ ತಾಯಿ ಕಾವೇರಿ ತೀರ್ಥಸ್ವರೂಪಿಣಿಯಾಗಿ ಉಕ್ಕಿಬಂದಳು. ಈ ಸಮಯದಲ್ಲಿ ತಲಕಾವೇರಿಯಲ್ಲಿ ಪುಣ್ಯಸ್ನಾನ ಮಾಡಿ ತೀರ್ಥ ಸಂಗ್ರಹ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತೆಂಬ ನಂಬಿಕೆಯಿಂದ ಭಕ್ತರು ಭಾರಿ ಸಂಖ್ಯೆಯಲ್ಲಿ ಆಗಮಿಸಿದ್ದರು. ಬ್ರಹ್ಮಕುಂಡಿಕೆಯ ಮಂಭಾಗದಲ್ಲಿರುವ ಪವಿತ್ರ ಕೊಳದಲ್ಲಿ ಭಕ್ತರು ಪುಣ್ಯ ಸ್ನಾನ ಮಾಡಿ ಪವಿತ್ರ ತೀರ್ಥ ಪಡೆದುಕೊಂಡರು.
ತೀರ್ಥೋದ್ಭವಕ್ಕೂ ಮುನ್ನ ಕಾವೇರಿ ಮಾತೆಗೆ ಪಂಚಾಮೃತ ಅಭಿಷೇಕ, ಅರ್ಚನೆ, ಕುಂಕುಮಾರ್ಚನೆ, ಆರತಿ ಸಂಕಲ್ಪ ಸೇರಿ ವಿವಿಧ ಪೂಜೆ ನೆರವೇರಿಸಲಾಯಿತು. ಬಳಿಕ ಬುಗ್ಗೆ ಬುಗ್ಗೆಯಾಗಿ ಉಕ್ಕಿ ಬಂದ ಕಾವೇರಿ ಎಲ್ಲರಿಗೆ ದರ್ಶನ ನೀಡಿದಳು. ಬ್ರಹ್ಮ ಕುಂಡಿಕೆಯಿಂದ ಕಾವೇರಿ ಮಾತೆ ಉಕ್ಕಿ ಹರಿಯುತ್ತಿದ್ದಂತೆ ಅರ್ಚಕರು ಎಲ್ಲರೆಡೆಗೆ ತೀರ್ಥ ಪ್ರೋಕ್ಷಣೆ ಮಾಡಿ ಕಾವೇರಿ ಆಗಮನ ದೃಢಪಡಿಸಿದರು. ಭಕ್ತರು ತೀರ್ಥ ಸಂಗ್ರಹ ಮಾಡಿ ಕಾವೇರಿ ಮಾತೆಯನ್ನು ದರ್ಶನ ಮಾಡಿದ ಧನ್ಯತಾಭಾವದಿಂದ ಮನೆಗೆ ಮರಳಿದರು. ಕಾವೇರಿ ತುಲಾ ಸಂಕ್ರಮಣ ಇನ್ನೂ ಒಂದು ತಿಂಗಳು ನಡೆಯಲಿದೆ. ಒಂದು ತಿಂಗಳ ಅವಧಿಯಲ್ಲಿ ಇಲ್ಲಿಗೆ ಬಂದು ಪವಿತ್ರ ಸ್ನಾನ ಮಾಡಿ ತೀರ್ಥ ಸ್ವೀಕರಿಸಿದರೆ ಪುಣ್ಯ ಪ್ರಾಪ್ತಿಯಾಗುವುದೆಂಬ ನಂಬಿಕೆ ಈ ಭಾಗದ ಜನತೆಯಲ್ಲಿದೆ.
ಇದನ್ನೂ ಓದಿ | Weather Report | ಚಾಮರಾಜನಗರ, ಚಿಕ್ಕಮಗಳೂರು ಸೇರಿ ಹಲವೆಡೆ ನಾಳೆ ಭಾರಿ ಮಳೆ ಮುನ್ಸೂಚನೆ