Site icon Vistara News

ಚಾಮರಾಜಪೇಟೆ ಮೈದಾನಕ್ಕಾಗಿ ಹೋರಾಡಿದ ನಾಗರಿಕ ಒಕ್ಕೂಟದಲ್ಲಿ ಬಿರುಕು, ಗಣೇಶೋತ್ಸವಕ್ಕೆ ಪೈಪೋಟಿ

Ganeshotsav date fix

ಬೆಂಗಳೂರು: ಚಾಮರಾಜಪೇಟೆಯ ಈದ್ಗಾ ಮೈದಾನವನ್ನು ಚಾಮರಾಜಪೇಟೆ ಆಟದ ಮೈದಾನವಾಗಿಸುವ ನಿಟ್ಟಿನಲ್ಲಿ ಹೋರಾಟ ಮಾಡಿ ಗೆಲುವು ಸಾಧಿಸಿದ ಚಾಮರಾಜಪೇಟೆ ನಾಗರಿಕರ ಒಕ್ಕೂಟದಲ್ಲಿ ಭಿನ್ನಾಭಿಪ್ರಾಯ ಶುರುವಾಗಿದೆ. ಬಹುಕಾಲದಿಂದ ಒಗ್ಗಟ್ಟಿನಿಂದ ಹೋರಾಟ ಮಾಡುತ್ತಾ ಅದನ್ನು ಕಂದಾಯ ಭೂಮಿ ಎಂದು ಗುರುತಿಸುವಷ್ಟರ ಮಟ್ಟಿಗೆ ಗೆಲುವು ಸಾಧಿಸಿದ ಒಕ್ಕೂಟ, ಈ ಬಾರಿ ಸ್ವಾತಂತ್ರ್ಯೋತ್ಸವ ಆಚರಿಸಿ ನಿಟ್ಟುಸಿರು ಬಿಟ್ಟಿತ್ತು.

ಆದರೆ, ಇದೇ ಮೈದಾನದಲ್ಲಿ ಆಚರಿಸಲೇಬೇಕು ಎಂಬ ಹುಮ್ಮಸ್ಸಿನಲ್ಲಿರುವ ಗಣೇಶೋತ್ಸವ ಒಕ್ಕೂಟದಲ್ಲಿ ಬಿರುಕು ಮೂಡಿಸಿದೆ. ನಿಜವೆಂದರೆ, ಈಗ ಚಾಮರಾಜ ಪೇಟೆ ಮೈದಾನ ವಿಚಾರದಲ್ಲಿ ಮುಸ್ಲಿಮರು ಕೂಡಾ ತುಂಬಾ ತಗಾದೆ ಎತ್ತುತ್ತಿಲ್ಲ. ಹಲವು ಸಂಘಟನೆಗಳು ಗಣೇಶೋತ್ಸವ ಆಚರಿಸಲಿ ಬಿಡಿ ಎನ್ನುತ್ತಿವೆ. ಅದೆಷ್ಟೋ ಮುಸ್ಲಿಂ ಮುಖಂಡರೇ ನಾವೂ ಗಣೇಶೋತ್ಸವ ಪ್ರಸಾದ ತಿಂದು ಖುಷಿಪಟ್ಟವರೇ. ಈಗಲೂ ಆ ಸಂಭ್ರಮ ಸಿಗಲಿ ಎನ್ನುತ್ತಿದ್ದಾರೆ. ಈ ಸಹಕಾರ ಬಾಯಿ ಮಾತಿನಲ್ಲಿ ಎಲ್ಲಿವರೆಗೆ ಇದೆ ಎಂದರೆ ಯಾರು ಬೇಕಾದರೂ ಮಾಡಲಿ.. ಸರಕಾರವಾದರೂ ಮಾಡಲಿ, ಸಮಿತಿಗಳಾದರೂ ಮಾಡಲಿ.. ನೋ ಪ್ರಾಬ್ಲೆಂ ಎನ್ನುತ್ತಿವೆ. ಆದರೆ, ಈಗ ಬಿರುಕು ಹುಟ್ಟಿರುವುದು ನಾಗರಿಕ ಒಕ್ಕೂಟದಲ್ಲೇ!

ಏನಾಗಿದೆ ಒಕ್ಕೂಟದಲ್ಲಿ?
ಚಾಮರಾಜಪೇಟೆ ನಾಗರೀಕರ ಹಿತರಕ್ಷಣಾ ವೇದಿಕೆ‌ ಒಡೆದು ಇಬ್ಬಾಗವಾಗಿದ್ದು, ಪ್ರಧಾನ ಕಾರ್ಯದರ್ಶಿ ರುಕ್ಮಾಂಗದ ವೇದಿಕೆ ತೊರೆದು ಚಾಮರಾಜಪೇಟೆ ಗಣೇಶೋತ್ಸವ ಸಮಿತಿ ಸೇರಿದ್ದಾರೆ. ಯಾಕೆ ಹೀಗೆ ಮಾಡಿದಿರಿ ಎಂದು ಕೇಳಿದರೆ, ಒಕ್ಕೂಟದ ಅಧ್ಯಕ್ಷ ರಾಮೇಗೌಡ ಅವರು ಚಾಮರಾಜ ಪೇಟೆ ಶಾಸಕ ಜಮೀರ್ ಅಹಮದ್‌ ಖಾನ್‌ ಅವರ ಜೊತೆ ಸೇರಿಕೊಂಡಿದ್ದಾರೆ ಎಂದು ಆರೋಪಿಸುತ್ತಾರೆ. ತೀರ್ಮಾನ ತೆಗೆದುಕೊಳ್ಳುವಾಗ ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲ, ಮೊದಲೇ ಜಮೀರ್ ಜೊತೆ ಇದ್ದು ಬಂದವರು ಅಂತ ಅಸಮಧಾನ ‌ಹೊರಹಾಕಿದ್ದಾರೆ ರುಕ್ಮಾಂಗದ.

ಆದರೆ, ಈ ವಿಚಾರದಲ್ಲಿ ರಾಮೇಗೌಡವನ್ನು ಪ್ರಶ್ನಿಸಿದರೆ ಅವರು ಹೇಳುವುದೇ ಬೇರೆ. ʻʻರುಕ್ಮಾಂಗದ ಯಾಕೆ ಹೀಗೆ ಹೇಳಿಕೆ‌ ನೀಡಿದರು ಅನ್ನುವುದು ಗೊತ್ತಿಲ್ಲ.‌ ನನ್ನ ಕರೆಗೂ ಉತ್ತರಿಸುತ್ತಿಲ್ಲ. ಬಹುಶಃ ಇದು ಜಮೀರ್ ಅವರ ಹುನ್ನಾರ ಇರಬಹುದು. ಇಲ್ಲ ಬಿಜೆಪಿಯವರು ಮಾಡಿಸಿರಬಹುದುʼʼ ಎನ್ನುವುದು ಅವರ ತಕರಾರು.

ಈ ಒಡಕು ಕೇವಲ ಮಾತಿಗೆ ಸೀಮಿತವಾಗಿ ಉಳಿದಿಲ್ಲ. ಎರಡು ತಂಡಗಳು ಗಣೇಶೋತ್ಸವ ಆಚರಣೆಗೆ ಪ್ರತ್ಯೇಕ ಪ್ಲ್ಯಾನ್‌ ಮಾಡಿಕೊಂಡಂತೆ ಕಾಣುತ್ತಿದೆ. ಒಂದು ತಂಡ ಈಗಾಗಲೇ ಆಗಸ್ಟ್‌ ೩೧ರಿಂದ ಸೆಪ್ಟೆಂಬರ್‌ ೧೦ರವರೆಗೆ ೧೧ ದಿನ ಕಾರ್ಯಕ್ರಮ ನಡೆಸಲು ಪೋಸ್ಟರ್‌ ಬಿಡುಗಡೆ ಮಾಡಿದೆ. ಇನ್ನೊಂದು ಬಣ ಮೂರು ದಿನ ಮಾಡೋಣ ಅನ್ನುತ್ತಿದೆ. ಸರಕಾರ ಈಗ ಯಾರಿಗೆ ಅನುಮತಿ ನೀಡುತ್ತಿದೆ ಎಂದು ಕಾದು ನೋಡಬೇಕು. ಅಥವಾ ಈ ಬಣಗಳ ಜಗಳ ಬೇಡ ಎಂದು ತಾನೇ ಸ್ವತಃ ಮುಂದೆ ನಿಂತು ಆಚರಿಸುತ್ತದಾ ಎನ್ನುವುದು ಕಾದು ನೋಡಬೇಕಾದ ಅಂಶ.

ಇದನ್ನೂ ಓದಿ| ಚಾಮರಾಜಪೇಟೆ ಮೈದಾನದಲ್ಲಿ 11 ದಿನದ ಗಣೇಶೋತ್ಸವಕ್ಕೆ ದಿನ ಫಿಕ್ಸ್‌ ಮಾಡಿದ ಸಮಿತಿ, ಸಿಗುತ್ತಾ ಅನುಮತಿ?

Exit mobile version