Site icon Vistara News

Chaturmas 2023 : ಚಾತುರ್ಮಾಸ್ಯ ವ್ರತವನ್ನು ಗೃಹಸ್ಥರೂ ಮಾಡಬಹುದು!

chaturmas 2023

ಚಾತುರ್ಮಾಸ್ಯ (Chaturmas 2023) ಎಂದರೆ ನಾಲ್ಕುತಿಂಗಳು ಎನ್ನುವುದು ಸಾಮಾನ್ಯ ಅರ್ಥ. ಈ ನಾಲ್ಕು ತಿಂಗಳುಗಳಲ್ಲಿ ಮಾಡುವ ಆಚರಣೆಯನ್ನು ಚಾತುರ್ಮಾಸ್ಯ ವ್ರತ ಎನ್ನುತ್ತಾರೆ. ಆಷಾಢ ಶುಕ್ಲ ಏಕಾದಶಿಯಿಂದ (ಇಂದಿನಿಂದ) ಕಾರ್ತಿಕ ಶುಕ್ಲ ಏಕಾದಶಿಯವರೆಗೆ ಅಥವಾ ಆಷಾಢ ಹುಣ್ಣಿಮೆಯಿಂದ (ಜೂನ್‌ 3 ರಿಂದ) ಕಾರ್ತಿಕ ಹುಣ್ಣಿಮೆಯವರೆಗಿನ ನಾಲ್ಕು ತಿಂಗಳುಗಳ ಕಾಲಾವಧಿಗೆ ʻಚಾತುರ್ಮಾಸ’ ಎಂದು ಕರೆಯಲಾಗುತ್ತದೆ.

ಬಾತುರ್ಮಾಸ್ಯ ಕಾಲದಲ್ಲಿ ತೀವ್ರವಾದ ಮಳೆಯಿರುತ್ತದೆ. ಎಲ್ಲಾ ಕಡೆ ಕ್ರಿಮಿಕೀಟಗಳು ತುಂಬಿರುತ್ತವೆ. ಅವುಗಳಿಗೆ ಹಿಂಸೆಯಾಗದಿರಲೆಂದು ಸನ್ಯಾಸಿಗಳ ಸಂಚಾರವನ್ನು ಶಾಸ್ತ್ರದಲ್ಲಿ ನಿಷೇಧಿಸಲಾಗಿದೆ. ಯತಿಗಳು, ಸನ್ಯಾಸಿಗಳು ಚಾತುರ್ಮಾಸ್ಯ ಕಾಲದ ಮೊದಲ ಎರಡು ತಿಂಗಳಿನಲ್ಲಿ ಸಂಚಾರವನ್ನು ಮಾಡುವುದಿಲ್ಲ. ಚಾತುರ್ಮಾಸ್ಯ ವ್ರತದ ದೀಕ್ಷೆಯನ್ನು ಕೈಗೊಂಡು ಒಂದೇ ಕಡೆ ವ್ರತವನ್ನು ಆಚರಿಸುತ್ತಾ, ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು, ಪ್ರವಚನ, ಉಪನ್ಯಾಸಗಳನ್ನು ನಡೆಸುತ್ತಾರೆ.

ಈ ವ್ರತಾಚರಣೆ ನೀಡುವ ಆಧ್ಯಾತ್ಮಿಕ ಕಾರಣವೆಂದರೆ ಮಹಾವಿಷ್ಣು ಆಷಾಢ ಶುದ್ಧ ಏಕಾದಶಿಯಿಂದ ಕಾರ್ತಿಕ ಶುದ್ಧ ಉತ್ಪಾನ ದ್ವಾದಶಿಯವರೆಗೆ ಅಂತರ್ಮುಖಿಯಾಗಿ ದಿವ್ಯ ನಿದ್ರೆಯಲ್ಲಿ ಮಗ್ನನಾಗಿರುತ್ತಾನೆ. ಈ ಸಮಯದಲ್ಲಿ ಯತಿಗಳು ಅಂತರ್ಮುಖಿಯಾಗಿ ತಮ್ಮ ಸಾಧನೆಯಲ್ಲಿ ಹೆಚ್ಚು ಸಮಯ ಕಳೆಯಬೇಕು. ಇದರಿಂದ ಸಾತ್ವಿಕ ಶಕ್ತಿಯ ಸಂಚಾರ ಎಲ್ಲೆಡೆ ಆಗಲ ಸಾಧ್ಯ. ಅಂತಃಕರಣ ಶುದ್ಧಿಗಾಗಿ ಸುಖ, ಭೋಗಗಳನ್ನು ತ್ಯಜಿಸಿ ವೈರಾಗ್ಯದ ಮೂಲಕ ಭಗವದ್ಭಕ್ತಿ ಹೊಂದಿ ಜ್ಞಾನ ಗಳಿಸುವುದು ಹಾಗೂ ಸತ್ಕರ್ಮವನ್ನು ಮಾಡುವುದೇ ಚಾತುರ್ಮಾಸ್ಯ ಪ್ರತದ ಗುರಿಯಾಗಿದೆ.

ಗೃಹಸ್ಥರೂ ಮಾಡಬಹುದು!

ಚಾತುರ್ಮಸ್ಯ ವ್ರತವು ಕೇವಲ ಸನ್ಯಾಸಿಗಳಿಗೆ ಮಾತ್ರವಲ್ಲ ಯಾರು ಬೇಕಾದರೂ ಆಚರಿಸಬಹುದು. ಗೃಹಸ್ಥರೂ ಈ ವ್ರತವನ್ನು ಯಥಾಶಕ್ತಿಯಾಗಿ ಆಚಕೆಸಬೇಕೆಂದು ಶಾಸ್ತ್ರಗಳು ಹೇಳುತ್ತವೆ. ಚಾತುರ್ಮಾಸ್ಯ ರಹಸ್ಯವು ʻವರಾಹ ಪುರಾಣʼದಲ್ಲಿ ಉಲ್ಲೇಖವಾಗಿದೆ. ಮಹಾವಿಷ್ಣುನಿಗೆ ಒಮ್ಮೆ ಭೂದೇವಿ ಪ್ರಶ್ನಿಸುತ್ತಾಳೆ. ಕಲಿಯುಗದಲ್ಲಿ ಜನರಿಗೆ ಕಷ್ಟ ಹೆಚ್ಚಿರುವುದರಿಂದ ಅದನ್ನು ಎದುರಿಸುವ ಬಗೆ ಹೇಗೆ ಹಾಗೂ ಪುಣ್ಯ ಸಂಪಾದನೆಗೆ ಕರ್ಮಗಳನ್ನು ಕಳೆದುಕೊಳ್ಳುವುದು ಹೇಗೆ ಎಂದು ಕೇಳುತ್ತಾಳೆ. ಆಗ ಮಹಾವಿಷ್ಣು ಚಾತುರ್ಮಾಸ್ಯ ಸಮಯದಲ್ಲಿ ದಾನ, ಜಪ, ಧ್ಯಾನ ಹಾಗೂ ನಾನಾ ವಿಧದ ಹೋಮ ಮಾಡುವುದರಿಂದ ಅಧಿಕ ಪ್ರಯೋಜನ ಹೊಂದಬಹುದು ಎಂದು ಹೇಳಿದ್ದಾನೆ.

ಚಾತುರ್ಮಾಸ್ಯದಲ್ಲಿ ನಾಲ್ಕು ವ್ರತಾಚರಣೆ

ನಾಲ್ಕು ತಿಂಗಳುಗಳಲ್ಲಿ ಕ್ರಮವಾಗಿ ಶಾಕ (ಶಾಕವ್ರತ), ಮೊಸರು ಮತ್ತು ಅದರಿಂದ ಮಾಡಿದ ಪದಾರ್ಥಗಳು (ದಧಿವ್ರತ), ಹಾಲು ಮತ್ತು ಅದರಿಂದ ಮಾಡಿದ ಪದಾರ್ಥಗಳು (ಕ್ಷೀರವ್ರತ), ಮತ್ತು ದ್ವಿದಲ ಮತ್ತು ಬಹುಬೀಜಗಳಿಂದ ಕೂಡಿದ ಸಸ್ಯ ಹಾಗೂ ಧಾನ್ಯಗಳು (ದ್ವಿದಲವ್ರತ) ಇವುಗಳನ್ನು ತ್ಯಜಿಸಲೇ ಬೇಕು. ಈ ವಿಧಿಯು ಯತಿಗಳಿಗೆ ಮಾತ್ರವಲ್ಲದೆ ಗೃಹಸ್ಥರು ಸೇರಿದಂತೆ ಎಲ್ಲರಿಗೂ ಅನ್ವಯವಾಗುತ್ತದೆ.

ಚಾತುರ್ಮಾಸ್ಯದ ಮೊದಲನೇ ತಿಂಗಳಿನಲ್ಲಿ ಆಷಾಢ ಮಾಸ ಶುಕ್ಲಪಕ್ಷದ ದ್ವಾದಶಿಯಿಂದ ಶ್ರಾವಣ ಮಾಸ ಶುಕ್ಲಪಕ್ಷದ ಏಕಾದಶಿಯವರೆಗೆ ಶಾಕವ್ರತ. ಶಾಕವೆಂದರೆ ಎಲ್ಲಾ ವಿಧವಾದ ತರಕಾರಿ, ಕಾಯಿಪಲ್ಲೆ ಸೊಪ್ಪು (ಆದರೆ ಅಗನೇ
ಸೊಪ್ಪು ಹೊನ್ನಂಗಣಿ ಸೊಪ್ಪು ಬ್ರಾಹ್ಮೀ ಅಥವಾ ಒಂದೆಲಗ ಸೊಪ್ಪು ತುಳಸಿ ಸ್ಟೀಕರಿಸಬಹುದು), ಹಣ್ಣುಗಳನ್ನು (ಆದರೆ ಮಾವಿನ ಹಣ್ಣುನಿಷಿದ್ದವಲ್ಲ) ಬೇಳೆ ಕಾಳುಗಳು (ಆದರೆ ಉದ್ದು, ಹೆಸರು ಕಾಳು, ಹೆಸರು ಬೇಳೆ ನಿಷಿದ್ದವಲ್ಲ), ಚಕ್ಕೆ, ಬೇರು, ಗೆಡ್ಡೆಗೆಣಸು ಮುಂತಾದ ಪದಾರ್ಥಗಳನ್ನು ಹಾಗೂ ಅವುಗಳಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ದೇವರಿಗೆ ನೈವೇದ್ಯದಲ್ಲಿ ಬಳಸುವಂತಿಲ್ಲ ಹಾಗೂ ಸೇವಿಸಬಾರದು.

ಚಾತುರ್ಮಾಸ್ಯದ ಎರಡನೇ ತಿಂಗಳಿನಲ್ಲಿ ಶ್ರಾವಣ ಮಾಸ ಶುಕ್ಲಪಕ್ಷದ ದ್ವಾದಶಿಯಿಂದ ಭಾದ್ರಪದ ಮಾಸ ಶುಕ್ಲಪಕ್ಷದ ಏಕಾದಶಿಯವರೆಗೆ ದಧಿ (ಮೊಸರಿನ) ವ್ರತ. ದಧಿವ್ರತದಲ್ಲಿ ಮೊಸರು ಹಾಗೂ ಮೊಸರಿನಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ದೇವರಿಗೆ ನೈವೇದ್ಯದಲ್ಲಿಬಳಸುವಂತಿಲ್ಲ ಹಾಗೂ ಸೇವಿಸಬಾರದು.

ಚಾತುರ್ಮಾಸ್ಯದ ಮೂರನೇ ತಿಂಗಳಿನಲ್ಲಿ ಭಾದ್ರಪದ ಮಾಸ ಶುಕ್ಲಪಕ್ಷದ ದ್ವಾದಶಿಯಿಂದ ಅಶ್ಚಯುಜ ಮಾಸ ಶುಕ್ಲಪಕ್ಷದ ಏಕಾದಶಿಯವರೆಗೆ ಕ್ಷೀರ (ಹಾಲಿನ) ವ್ರತ. ಕ್ಷೀರ ವ್ರತದಲ್ಲಿಹಾಲು ಹಾಗೂ ಹಾಲಿನಿಂದ ತಯಾರಿಸಿದ
ಆಹಾರ ಪದಾರ್ಥಗಳನ್ನು ದೇವರಿಗೆ ನೈವೇದ್ಯದಲ್ಲಿ ಬಳಸುವಂತಿಲ್ಲಹಾಗೂ ಸೇವಿಸಬಾರದು

ಚಾತುರ್ಮಾಸ್ಯದ ನಾಲ್ಕನೇ ತಿಂಗಳಿನಲ್ಲಿ ಅಶ್ವಯುಜ ಮಾಸ ಶುಕ್ಲ ಪಕ್ಷದ ದ್ವಾದಶಿಯಿಂದ ಕಾರ್ತಿಕ ಮಾಸ ಶುಕ್ಲಪಕ್ಷದ ಏಕಾದಶಿಯವರೆಗೆ ದ್ವಿದಳ ವ್ರತ. ದ್ವಿದಳ ವ್ರತದಲ್ಲಿ ದ್ವಿದಳ ಧಾನ್ಯಗಳು, ಬಹುಬೀಜಗಳು, ಬಹುಬೀಜವುಳ್ಳ ತರಕಾರಿ, ಹಣ್ಣುಗಳನ್ನು ಹಾಗೂ ಅವುಗಳಿಂದ ತಯಾರಿಸಿದ ಆಹಾರ ಪದಾರ್ಥಗಳನ್ನು ದೇವರಿಗೆ ನೈವೇದ್ಯದಲ್ಲಿ ಬಳಸುವಂತಿಲ್ಲಹಾಗೂ ಸೇವಿಸಬಾರದು.

ಶಾಕವ್ರತದಿಂದ ಭಗವಂತನಿಗೆ ಶಲ್ಯತಾಡನ ಮಾಡಿದ ಪಾಪಕ್ಕೆ ಪರಿಹಾರ ದೊರೆಯಲಿದೆ. ದಧಿವ್ರತದಿಂದ ಗೋಮಾಂಸ ಭಕ್ಷಣದ ಪಾಪಕ್ಕೆ ಪರಿಹಾರ ದೊರೆಯಲಿದೆ. ಕ್ಷೀರವ್ರತದ ಲೋಪವು ಸುರಾಪಾನದ ಅಂದರೆ ಕುಡಿತದ ಪಾಪಕ್ಕೆ, ದ್ವಿದಲ(ಬಹುಬೀಜ)ಭಕ್ಷಣವು ಕೃಮಿಭೋಜನ ಪಾತಕಕ್ಕೂ ಸಮವಾಗಿವೆ. ಚಾತುರ್ಮಾಸ್ಯ ವ್ರತವನ್ನು ಆಚರಿಸದಿದ್ದಲ್ಲಿ ಭಯಂಕರವಾದ ದುರ್ಗತಿಯು ತಪ್ಪಿದ್ದಲ್ಲ ಎಂದು ಶಾಸ್ತ್ರಗಳು ಸಾರಿವೆ.

ಚಾತುರ್ಮಾಸ್ಯದಲ್ಲಿ ಆಚರಿಸಬಹುದಾದ ಇತರ ವ್ರತಗಳಿವು!

ಪರಾಕ : ಹನ್ನೆರಡುದಿನ ಉಪವಾಸವಿದ್ದು ಮಾಡುವ, ಸರ್ವಪಾಪಗಳಿಗೂ ಪ್ರಾಯಶ್ಚಿತ್ತ ರೂಪವಾದ ಪ್ರತ.
ಷಷ್ಠಕಾಲ: ಆರು ದಿನಗಳಿಗೊಮ್ಮೆ ಭೋಜನ ಅಥವಾ ಆರು ಹೊತ್ತಿಗೆ ಅಂದರೆ ಮೂರು ದಿನಕ್ಕೊಮ್ಮೆ ಭೋಜನ ಮಾಡುವ ವ್ರತ.
ಧಾರಣಪಾರಣ: ಒಂದುದಿನ ಉಪವಾಸ ಮರು ದಿನ ಭೋಜನ ಹೀಗೆ ಒಂದು ತಿಂಗಳ ಕಾಲ ಕ್ರಮವಾಗಿ ನಡೆಯುವ ವ್ರತ.
ಲಕ್ಷವರ್ತೀ ವ್ರತ: ಒಂದು ಲಕ್ಷ ಬತ್ತಿಗಳನ್ನು ಮಾಡಿ ದೇವರಿಗೆ ದೀಪ ಹಚ್ಚುವ ವ್ರತ.
ಭೀಷ್ಮಪಂಚಕ ಉಪವಾಸ : ಕಾರ್ತಿಕ ಶುದ್ಧ ಏಕಾದಶಿಯಿಂದ ಆರಂಭಿಸಿ ಐದು ದಿನಗಳ ಕಾಲ ಉಪವಾಸಮಾಡುವುದು.
ಲಕ್ಷ ನಮಸ್ಕಾರ ವ್ರತ : ಒಂದು ಲಕ್ಷ ನಮಸ್ಕಾರ ಮಾಡುವ ವ್ರತ.
ಲಕ್ಷ ಪ್ರದಕ್ಷಿಣ ಪ್ರತ : ಒಂದು ಲಕ್ಷ ಪ್ರದಕ್ಷಿಣೆ ಹಾಕುವ ವ್ರತ.

ಇದನ್ನೂ ಓದಿ: Mars Transit 2023 : ಜು.1ಕ್ಕೆ ಸಿಂಹ ರಾಶಿಗೆ ಮಂಗಳನ ಸಂಚಾರ; ಈ ಐದು ರಾಶಿಯವರಿಗೆ ಅದೃಷ್ಟವೋ ಅದೃಷ್ಟ!

ಇವೆಲ್ಲ ಕಾಮ್ಯವ್ರತಗಳು ಅಂದರೆ ಫಲಾಸೆಯಿಂದ ಮಾಡುವ ವ್ರತಗಳು. ಆದರೆ ಇವುಗಳನ್ನು ಭಗವಂತನ ಪ್ರೀತ್ಯರ್ಥವಾಗಿ ಮಾಡಿದರೆ ಅವನ ಅನುಗ್ರಹ ಉಂಟಾಗುತ್ತದೆ ಎಂದು ಶಾಸ್ತ್ರಗಳಲ್ಲಿ ಒತ್ತಿ ಹೇಳಲಾಗಿದೆ.

ರಾಜ್ಯದ ಯತಿಗಳು ಆಷಾಢ ಹುಣ್ಣಿಮೆಯಿಂದ ಚಾತುರ್ಮಾಸ್ಯ ವ್ರತ ಕೈಗೊಳ್ಳಲಿದ್ದು, ಈ ಕುರಿತ ಮಾಹಿತಿಯನ್ನು ʻವಿಸ್ತಾರ ನ್ಯೂಸ್‌ʼ ನ ವೆಬ್‌ಸೈಟ್‌ನಲ್ಲಿ ಮುಂದೆ ನೀಡಲಾಗುತ್ತದೆ.

Exit mobile version