Site icon Vistara News

Chellagurki Yerrithatha | ಇಷ್ಟಾರ್ಥ ಪೂರೈಸುವ ಅವಧೂತ ಚೇಳ್ಳಗುರ್ಕಿ ಎರ‍್ರಿತಾತ; ಪುಣ್ಯಕ್ಷೇತ್ರದ ಪವಾಡಗಳೇನು?

Chellagurki Yerrithatha

ಬಳ್ಳಾರಿ: 12ನೇ ಶತಮಾನದಲ್ಲಿ ವಚನ ಸಾಹಿತ್ಯದ ಮೂಲಕ ಸಮಾಜ ಸುಧಾರಣೆಗೆ ಬಸವಣ್ಣ ಸೇರಿದಂತೆ ಹಲವು ಶರಣರು ಸಮಾಜ ಸುಧಾಕರರಾಗಿ ಕಂಡರೆ, 20ನೇ ಶತಮಾನದಲ್ಲಿ ಧಾರ್ಮಿಕ ಭಾವನೆ ಮೂಲಕ ಸಮಾಜ ಸುಧಾರಣೆಗೆ ಉತ್ತರ ಕರ್ನಾಟಕದಲ್ಲಿ ಅವಧೂತ ಪರಂಪರೆಯ ಕಾಲವೆಂದು ಹೇಳಬಹುದು. ಅಂತಹ ಅವಧೂತರಲ್ಲಿ ಚೇಳ್ಳಗುರ್ಕಿ ಎರ‍್ರಿತಾತ ಒಬ್ಬರು. ನಡೆದಾಡುವ ದೇವರಾಗಿ ಹಲವು ಪವಾಡಗಳನ್ನು ಮಾಡುವ ಮೂಲಕ ಈ ಭಾಗದ ಆರಾಧ್ಯ ದೈವನಾಗಿ ಜೀವ ಸಮಾಧಿಯಿಂದ ಅದಮ್ಯ ಶಕ್ತಿಕೇಂದ್ರವಾಗಿ ಕೋಟ್ಯಂತರ ಭಕ್ತರ ಇಷ್ಟಾರ್ಥ ಈಡೇರಿಸುವ ಪುಣ್ಯಕ್ಷೇತ್ರವಾಗಿ ಚೇಳ್ಳಗುರ್ಕಿ ಪ್ರಸಿದ್ಧಿ ಪಡೆದಿದೆ.

ಈ ಭಾಗದ ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿ ಬಳ್ಳಾರಿಯಿಂದ 25 ಕಿ.ಮೀ ದೂರದಲ್ಲಿರುವ ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವ ಚೇಳ್ಳಗುರ್ಕಿಯು ಒಂದಾಗಿದೆ. ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಭಕ್ತರು ಎರ‍್ರಿತಾತ ಪುಣ್ಯಕ್ಷೇತ್ರಕ್ಕೆ ಭೇಟಿ ಕೊಡುತ್ತಾರೆ. ಚೇಳ್ಳಗುರ್ಕಿ ಎರ‍್ರಿತಾತ ಪವಾಡಗಳ ಮೂಲಕ ಈ ಭಾಗದ ಜನರಲ್ಲಿ ದೈವತ್ವದ ಭಾವನೆಯಿಂದ, ಕಷ್ಟಗಳು ಬಂದಾಗ ತಾತನ ಮೊರೆ ಹೋಗಿ, ನೆಮ್ಮದಿ ಕಂಡು ಕೊಂಡಿರುವ ಹಲವು ನಿದರ್ಶನಗಳಿವೆ.

ನಂಜುಂಡ ಎರ‍್ರಿತಾತನಾದ ಕಥೆ
ಎರ‍್ರಿತಾತ ಎಲ್ಲಿಂದ ಬಂದರು ಎಂಬ ಬಗ್ಗೆ ನಿಖರವಾದ ಮಾಹಿತಿಯೇ ಇಲ್ಲ, ಕೆಲವರು ಆಂಧ್ರದ ಮೂಲದವರೆಂದರೆ, ಇನ್ನು ಕೆಲವರು ಚಿಕ್ಕಬಳ್ಳಾಪುರದವರೆಂದು ಹೇಳುತ್ತಿದ್ದಾರೆ. ತಹಸೀಲ್ದಾರರಾಗಿ ಸೇವೆ ಸಲ್ಲಿಸುತ್ತಿದ್ದರೆಂದು ನಂತರದಲ್ಲಿ ವೈರಾಗಿಯಾದರು ಎಂದು ಹೇಳಲಾಗುತ್ತಿದೆ. ಇವರ ಮೂಲ ಹೆಸರು ನಂಜುಂಡ ಎಂದರೂ ಅದಕ್ಕೆ ಯಾವುದೇ ಆಧಾರವಿಲ್ಲ. ಆದ್ದರಿಂದ ಇಲ್ಲಿನ ಜನರು ಎರ‍್ರಿ ಎಂದು ಕರೆದರೂ. ಈವರೆಗೂ ತಾತನ ಪೂರ್ವದ ಬಗ್ಗೆ ನಿಖರ ಮಾಹಿತಿಯೇ ಲಭ್ಯವಾಗಿಲ್ಲ.

ಇದನ್ನೂ ಓದಿ | Tirupati Temple | ವಿಪ್ರೊಗಿಂತಲೂ ತಿರುಪತಿ ದೇವಸ್ಥಾನದ ಆಸ್ತಿ ಮೌಲ್ಯವೇ ಹೆಚ್ಚು; ಎಷ್ಟಿದೆ ಗೊತ್ತಾ ತಿಮ್ಮಪ್ಪನ ಸಂಪತ್ತು?

ಜೀವಸಮಾಧಿಯಾದ ಎರ‍್ರಿತಾತ
19ನೇ ಶತಮಾನದ ಅಂತ್ಯದಲ್ಲಿ ಚೇಳ್ಳಗುರ್ಕಿಯಿಂದ ನಾಲ್ಕೈದು ಕಿ.ಮೀ ದೂರದ ಈಗಿನ ಆಂಧ್ರಪ್ರದೇಶದ ಮಲ್ಲಪ್ಪನ ಮಟ್ಟಿಯಲ್ಲಿ ಎರ‍್ರಿತಾತ ಧ್ಯಾನಾಸಕ್ತನಾಗಿ ಕುಳಿತಿರುವುದನ್ನು ದನ ಕಾಯುವವ ಹುಡುಗರು ನೋಡಿದ್ದಾರೆ. ಮಳೆ ಜೋರಾಗಿ ಬಂದಾಗಲೂ ತಾತನ ಧ್ಯಾನದ ಸ್ಥಳದಲ್ಲಿ ಮಳೆ ಬಾರದಿರುವುದು ನೋಡಿ, ಆಶ್ಚರ್ಯಚಕಿತರಾಗಿ ಗ್ರಾಮಸ್ಥರಿಗೆ ಹೇಳಿದ್ದಾರೆ. ಗ್ರಾಮಸ್ಥರು ತಾತ ದೈವಿ ಪುರುಷ ಇರಬೇಕೆಂದು ಮೆರವಣಿಗೆ ಮೂಲಕ ಕರೆತಂದಿದ್ದಾರೆ. ಸುಮಾರು 25 ವರ್ಷಗಳ ಚೇಳ್ಳಗುರ್ಕಿಯಲ್ಲಿಯೇ ನೆಲೆಸಿರುವ ತಾತ 1922ರಲ್ಲಿ ಜೀವ ಸಮಾಧಿಯಾಗಿದ್ದಾರೆ.

Chellagurki Yerrithatha

ಪವಾಡ ಪುರುಷನಾದ ಎರ‍್ರಿತಾತ
ಎರ‍್ರಿತಾತನವರು ಜೀವಿತ ಕಾಲದಲ್ಲಿ ಹಲವು ಪವಾಡಗಳನ್ನು ಮಾಡಿದ್ದಾರೆಂಬ ಪ್ರತೀತಿ ಇದೆ. ಈಗಿನ ಆಂಧ್ರಪ್ರದೇಶದ ಮುಷ್ಟೂರು ಗ್ರಾಮದಲ್ಲಿನ ಕಲ್ಲು ಬಸವನನ್ನು, ಬಾ ಬಸವ ಎಂದಾಗ ಕಲ್ಲು ಬಸವ ನಡೆದುಕೊಂಡು ಬಂದಿಂತಂತೆ. ಇನ್ನೊಮ್ಮೆ ಚೇಳ್ಳಗುರ್ಕಿಯ ಗೌಡರ ಮಗಳಮನೆಗೆ ತಾತ ಮೊಸರು ಕೇಳಲು ಹೋದಾಗ, ಮನೆಯ ಒಡತಿ ಎಮ್ಮೆ ಕರು ಸತ್ತಿದೆ, ಎಲ್ಲಿಂದ ಮೊಸರು ಕೊಡಲಿ ಎಂದಳಂತೆ. ಆಗ ತಾತನು ಕಾಲಿನಿಂದ ಸತ್ತ ಕರುವನ್ನು ಎದ್ದೇಳೆಂದು ತಾಕಿದಾಗ ಕರುವು ಎದ್ದು ತಾಯಿಯ ಮೊಲೆ ಹಾಲು ಕುಡಿದಿದೆ ಎಂಬುದನ್ನು ಗ್ರಾಮಸ್ಥರೇ ನೋಡಿದ್ದಾರಂತೆ.

ಬಂಗಾರದ ಗಟ್ಟಿಯಾದ ಹಾವು
ತಾತನು ಧ್ಯಾನಮಗ್ನನಾಗಿದ್ದಾಗ ಅಲ್ಲಿಗೆ ಕುರಿಗಾಹಿಯೊಬ್ಬರು ಬರುತ್ತಾರೆ. ಈ ವೇಳೆ ತಾತನು ಹುತ್ತದಲ್ಲಿರುವ ಹಾವನ್ನು ಕುರಿಗಾಹಿಯ ಕಂಬಳಿಯಲ್ಲಿ ಹಾಕಿ, ಮನೆಗೆ ಹೋಗಿ ಪೂಜೆ ಮಾಡಿ, ತೆಗೆದುನೋಡು ಎಂದಾಗ ಹಾವು ಬಂಗಾರದ ಗಟ್ಟಿಯಾಗಿತಂತೆ. ಸತ್ತು ಬಿದ್ದ ಹದ್ದನ್ನು ಕಾಲಲ್ಲಿ ಒದ್ದು ಹಾರಿ ಹೋಗು ಎಂದಾಗ ಹದ್ದು ಹಾರಿಹೋಗಿದ್ದು ಇದೆಯಂತೆ. ಒಂದು ಬಾವಿಯಲ್ಲಿ ಮುಳುಗಿ ಮತ್ತೊಂದು ಬಾವಿಯಲ್ಲಿ ತೇಲಿ ಬರುತ್ತಿದ್ದರಂತೆ. ಒಂದು ದಿನ ಧ್ಯಾನಮಗ್ನನಾಗಿದ್ದ ತಾತನಿಗೆ ಕಳ್ಳರು ತೆಂಗಿನಕಾಯಿಯಿಂದ ಹೊಡೆದಾಗ ಗಾಯವಾಗದೆ, ಕಳ್ಳರಿಗೇ ಗಾಯವಾಗಿರುವುದು ಸೇರಿದಂತೆ ಹಲವು ಪವಾಡಗಳು ಗ್ರಾಮಸ್ಥರಲ್ಲಿ ತಾತನ ಬಗ್ಗೆ ಗಾಢವಾದ ದೈವ ಭಾವನೆ ಬೆಳೆಯಲು ಕಾರಣವಾಗಿದೆಯಂತೆ. ಜೀವ ಸಮಾಧಿಯಾಗಿ ಅಮೂರ್ತ ಸ್ವರೂಪದಲ್ಲಿರುವ ತಾತನು ಭಕ್ತರ ಇಷ್ಟಾರ್ಥ ಈಡೇರಿಸುತ್ತಿದ್ದಾರೆ.

ಜೀವ ಸಮಾಧಿ ನೆನಪಿಗೆ ಮಹಾರಥೋತ್ಸವ
ಎರ‍್ರಿತಾತ 1922ರಲ್ಲಿ ಜ್ಯೇಷ್ಠ ಶುದ್ಧ ಷಷ್ಠಿಯಂದು ಜೀವ ಸಮಾಧಿಯಾಗಿರುವುದರ ನೆನಪಿಗಾಗಿ ಪ್ರತಿವರ್ಷ ಜೇಷ್ಠ ಶುದ್ಧ ಷಷ್ಠಿಯಂದು ಮಹಾರಥೋತ್ಸವ ಕಾರ್ಯಕ್ರಮ ನಡೆಯಲಿದೆ. ಮಹಾರಥೋತ್ಸವದ ಅಂಗವಾಗಿ ಏಳು ದಿನ ಪೂರ್ವದಲ್ಲಿಯೇ ಸಪ್ತಭಜನೆ ಕಾರ್ಯಕ್ರಮ ನಿತ್ಯ ನಡೆಯುತ್ತದೆ. ಆಂಧ್ರ, ಕರ್ನಾಟಕದ ಸುಮಾರು 25ಕ್ಕೂ ಹೆಚ್ಚು ಗ್ರಾಮಗಳ ಸಾವಿರಾರು ಭಕ್ತರು ಭಜನೆಯಲ್ಲಿ ಪಾಲ್ಗೊಳ್ಳುತ್ತಾರೆ. ಜ್ಯೇಷ್ಠ ಶುದ್ಧ ಪಂಚಮಿಯಂದು ಬಸವ ಉತ್ಸವ, ಜ್ಯೇಷ್ಠ ಶುದ್ಧ ಸಪ್ತಮಿಯಂದು ಹೂವಿನ ರಥೋತ್ಸವ ನಡೆಯಲಿದೆ.

ಕಾರ್ತಿಕ ಮಾಸದ ಅಮಾವಾಸ್ಯೆಯಂದು ಮುತ್ತಿನ ರಥೋತ್ಸವ ನಡೆಯಲಿದೆ. ಪ್ರತಿ ಅಮಾವಾಸ್ಯೆಯ ಸಂಜೆ ತಾತನ ಬೆಳ್ಳಿ ರಥೋತ್ಸವ ನಡೆಯಲಿದೆ. ಬಸವನ ಉತ್ಸವ ದಿನದಂದು ಶಿವದೀಕ್ಷೆ ಕಾರ್ಯಕ್ರಮ, ಮಹಾರಥೋತ್ಸವ ದಿನದಂದು ಸಂಜೆ ಕರ್ಪೂರದಾರತಿ ನಡೆಯಲಿದೆ. ಮಣ್ಣಿನ ಪಾತ್ರೆಯಲ್ಲಿ ಕರ್ಪೂರ ಆರತಿಯಿಂದ ಗರ್ಭಗುಡಿಯ ಪ್ರದಕ್ಷಿಣೆ ಮಾಡಿದರೆ ಇಷ್ಟಾರ್ಥ ಈಡೇರುತ್ತದೆ ಎಂಬ ನಂಬಿಕೆಯಿಂದ ಸಾವಿರಾರು ಭಕ್ತರು ಈ ಹರಕೆ ಹೊತ್ತುಕೊಳ್ಳುತ್ತಾರೆ.

ತಾತನಿಗೆ ವಿಶೇಷ ದಿನಗಳಲ್ಲಿ ವಿಶೇಷ ಪೂಜೆ
ಕಾರ್ತಿಕ ಮಾಸದ ಕೊನೆಯ ಮೂರು ದಿನ ಶ್ರೀಗಳಿಗೆ ಮಹಾ ನ್ಯಾಸ ಪೂರ್ವಕ ಅಷ್ಟೋತ್ತರ ಶಂಖಾಭಿಷೇಕ ಪೂಜೆ ನಡೆಯಲಿದೆ. 68 ಕಳಸಗಳ ಪೂಜೆ ನಡೆಯಲಿದೆ. ಪ್ರತಿವರ್ಷ ಡಿ.15ರಿಂದ ಮಕರ ಸಂಕ್ರಮಣದವರೆಗೂ ಬೆಳಗ್ಗೆ ದೇವಸ್ಥಾನದಲ್ಲಿ ಧನುರ್ಮಾಸ ಪೂಜೆ ನಡೆಯಲಿದೆ. ಮಹಾಶಿವರಾತ್ರಿಯಂದು ಶ್ರೀಗಳಿಗೆ ಲಕ್ಷ ಬಿಲ್ವಾರ್ಚನೆ, ಮಹಾರುದ್ರಾಭಿಷೇಕ ನಡೆಯುತ್ತದೆ.

ನಿತ್ಯವೂ ತಾತನಿಗೆ ರುದ್ರಾಭಿಷೇಕ
ಪ್ರತಿ ನಿತ್ಯ ಬೆಳಗ್ಗೆ 6.30ರಿಂದ 8.30ರವರೆಗೆ, ಪ್ರತಿದಿನ ಸಂಜೆ 6.30ರಿಂದ 8.30ರವರೆಗೆ ತಾತನಿಗೆ ರುದ್ರಾಭಿಷೇಕ, ಅಷ್ಟೋತ್ತರ ತೊಟ್ಟಿಲು ಸೇವೆ ಮತ್ತು ಮಹಾಮಂಗಳರಾತಿ ನಂತರ ತೀರ್ಥ ಪ್ರಸಾದ ವಿತರಿಸಲಾಗುತ್ತದೆ. ತಾತನ 108 ರಗಳೆ ಪಾರಾಯಣ ನಡೆಯುತ್ತದೆ. ವಿಶೇಷ ದಿನಗಳಲ್ಲಿ ಬೆಂಗಳೂರಿನಿಂದಲೇ ಹೂಗಳನ್ನು ತರಿಸಿ ಅಲಂಕಾರ ಮಾಡಲಾಗುತ್ತದೆ.

ಭಕ್ತಾದಿಗಳಿಗೆ ವಸತಿ ಮತ್ತು ದಾಸೋಹ ವ್ಯವಸ್ಥೆ
ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ವಸತಿ ವ್ಯವಸ್ಥೆಗಾಗಿ ನೂರಕ್ಕೂ ಹೆಚ್ಚು ವಸತಿ ಗೃಹ ಹಾಗೂ ಐಷಾರಾಮಿ ವಸತಿ ಗೃಹಗಳಿವೆ. ವಿವಾಹಕ್ಕೆ ನಾಲ್ಕೈದು ಸುಸಜ್ಜಿತ ಕಲ್ಯಾಣ ಮಂಟಪಗಳಿವೆ. ಕ್ಷೇತ್ರದಲ್ಲಿ ಭಕ್ತರಿಗೆ ದಿನ ಎರಡು ಬಾರಿ ದಾಸೋಹ ವ್ಯವಸ್ಥೆಯು ಇದೆ. ಬೆಳಗ್ಗೆ 12.30 ರಿಂದ 2.00, ರಾತ್ರಿ 8.00 ಗಂಟೆಗೆ 9.00 ಗಂಟೆಗೆ ದಾಸೋಹ ವ್ಯವಸ್ಥೆ ಇರಲಿದೆ.

ಎರಡು ಕಮಿಟಿಗಳ ಮೂಲಕ ಮಠದ ಅಭಿವೃದ್ಧಿ
ದೇವಸ್ಥಾನದ ಅಭಿವೃದ್ಧಿಗೆ ಎರಡು ಕಮಿಟಿಗಳು ಹಲವು ದಶಕಗಳಿಂದ ಕಾರ್ಯ ನಿರ್ವಹಿಸುತ್ತಿವೆ. ಎರ‍್ರಿಸ್ವಾಮಿ ಟ್ರಸ್ಟ್‌ ಕಮಿಟಿಯು ಮಠದ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಚಿಕ್ಕದಾದ ಮಠವನ್ನು ಕೇವಲ 3-4 ದಶಕಗಳಲ್ಲಿ ಸಾಕಷ್ಟು ಅಭಿವೃದ್ಧಿ ಪಡಿಸಿದ್ದಾರೆ. ಇನ್ನು ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ದಾಸೋಹ ಮತ್ತು ಭಕ್ತರಿಂದ ದೇವಸ್ಥಾನಕ್ಕೆ ತಂದಿರುವ ಧಾನ್ಯಗಳ ಸಂಗ್ರಹಕ್ಕೆ ಮತ್ತು ಕೆಲವೊಂದು ಕಲ್ಯಾಣ ಮಂಟಪಗಳ ನಿರ್ವಹಣೆಯ ಜವಾಬ್ದಾರಿಗಳನ್ನು ಶ್ರೀ ಎರ‍್ರಿಸ್ವಾಮಿ ದಾಸೋಹ ಸೇವಾಸಂಘ ನಿರ್ವಹಿಸುತ್ತಿದೆ. ಎರಡು ಕಮಿಟಿಗಳು ಕಾಯ ವಾಚ ಮನಸ್ಸಿನಿಂದ ದೇವಸ್ಥಾನದ ಅಭಿವೃದ್ಧಿಗೆ ಶ್ರಮಿಸುತ್ತಿವೆ.

ಇದನ್ನೂ ಓದಿ | Ayodhya Deepotsav | 20,000 ಕೋಟಿ ರೂ. ವೆಚ್ಚದಲ್ಲಿ ಜಾಗತಿಕ ಪ್ರವಾಸಿ, ಧಾರ್ಮಿಕ ನಗರವಾಗಲಿದೆ ಅಯೋಧ್ಯೆ!

Exit mobile version