ನವ ದೆಹಲಿ: ತಿರುಮಲ ತಿರುಪತಿ ದೇವಸ್ಥಾನಕ್ಕೆ ಚೆನ್ನೈ ಮೂಲದ ಮುಸ್ಲಿಂ ದಂಪತಿ 1.02 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ. ಅಬ್ದುಲ್ ಘನಿ ಮತ್ತು ಸುಬೀನಾ ಬಾನು ದಂಪತಿ ತಮ್ಮ ಮಕ್ಕಳೊಂದಿಗೆ ದೇವಸ್ಥಾನಕ್ಕೆ ಭೇಟಿ ಕೊಟ್ಟು ಹಣ ನೀಡಿದ್ದಾರೆ. ತಿರುಮಲ ತಿರುಪತಿ ದೇವಸ್ಥಾನದಲ್ಲಿ ಹೊಸದಾಗಿ ನಿರ್ಮಿಸಲಾದ ಅತಿಥಿ ಗೃಹ ‘ಪದ್ಮಾವತಿ ವಿಶ್ರಾಂತಿ ಗೃಹ’ಕ್ಕೆ ಪೀಠೋಪಕರಣಗಳು ಮತ್ತು ಪಾತ್ರೆಗಳಿಗಾಗಿ 87 ಲಕ್ಷ ರೂಪಾಯಿ ನೀಡಿರುವ ಮುಸ್ಲಿಂ ದಂಪತಿ, 15 ಲಕ್ಷ ರೂ.ನ್ನು ದೇಗುಲದ ಅನ್ನಪ್ರಸಾದಂ ಟ್ರಸ್ಟ್ಗೆ ಡಿಡಿ (ಡಿಮ್ಯಾಂಡ್ ಡ್ರಾಫ್ಟ್) ರೂಪದಲ್ಲಿ ಕೊಟ್ಟಿದ್ದಾರೆ. ಹೀಗೆ ಒಟ್ಟಾರೆ 1.02 ಕೋಟಿ ರೂ. ಚೆಕ್ನ್ನು ಟಿಟಿಡಿ (ತಿರುಮಲ ತಿರುಪತಿ ದೇವಸ್ಥಾನಂ)ಗೆ ಹಸ್ತಾಂತರ ಮಾಡಿದ್ದಾರೆ.
ಮುಸ್ಲಿಂ ದಂಪತಿ ನೀಡಿದ ಚೆಕ್ನ್ನು ಟಿಟಿಡಿಯ ಕಾರ್ಯನಿರ್ವಾಹಕ ಅಧಿಕಾರಿ ಎ.ವಿ.ಧರ್ಮಾ ರೆಡ್ಡಿ ಸ್ವೀಕರಿಸಿ, ಕೃತಜ್ಞತೆ ಸಲ್ಲಿಸಿದ್ದಾರೆ. ನಂತರ ಅಲ್ಲಿನ ಪುರೋಹಿತರು ವೇದಾಶೀರ್ವಚನ ಮಾಡಿ, ಈ ದಂಪತಿ ಮತ್ತು ಅವರ ಮಕ್ಕಳಿಗೆ ಪ್ರಸಾದ ನೀಡಿದ್ದಾರೆ ಎಂದು ಹೇಳಲಾಗಿದೆ. ದೇಣಿಗೆ ನೀಡಲು ಬಂದ ಮುಸ್ಲಿಂ ದಂಪತಿ ಸಾಂಪ್ರದಾಯಿಕವಾಗಿ ಉಡುಗೆ ತೊಟ್ಟಿದ್ದರು. ಅಬ್ದುಲ್ ಘನಿ ಒಂದು ಶಾಲನ್ನೂ ಹೊದ್ದಿದ್ದರು.
ಅಬ್ದುಲ್ ಘನಿ ಒಬ್ಬರು ಉದ್ಯಮಿಯಾಗಿದ್ದು, ತಿರುಪತಿ ತಿಮ್ಮಪ್ಪನ ಪರಮ ಭಕ್ತರು. 2020ರಲ್ಲಿ ಕೊವಿಡ್ 19 ಸಾಂಕ್ರಾಮಿಕದ ಸಂದರ್ಭದಲ್ಲಿ ದೇವಾಲಯದ ಆವರಣದಲ್ಲಿ ಸೋಂಕು ನಿವಾರಕಗಳನ್ನು ಸಿಂಪಡಿಸಲು ಒಂದು ಟ್ರ್ಯಾಕ್ಟರ್ನ್ನು ದೇಣಿಗೆಯಾಗಿ ಕೊಟ್ಟಿದ್ದರು. ಅಷ್ಟೇ ಅಲ್ಲ, ದೇವಸ್ಥಾನದಲ್ಲಿ ಪ್ರತಿದಿನ ಪ್ರಸಾದ ವಿನಿಯೋಗ ಇರುವುದರಿಂದ ತರಕಾರಿಗಳು ಹೆಚ್ಚಾಗಿ ಬೇಕಾಗುತ್ತವೆ. ಹೀಗೆ ತರಕಾರಿಗಳನ್ನು ದೇವಸ್ಥಾನಕ್ಕೆ ತೆಗೆದುಕೊಂಡು ಹೋಗಲು ಅನುಕೂಲವಾಗುವಂಥ, 35 ಲಕ್ಷ ರೂ.ಬೆಲೆಬಾಳುವ ಹವಾನಿಯಂತ್ರಿತ ವಾಹನವನ್ನೂ ಕೊಟ್ಟಿದ್ದಾರೆ.
ಇದನ್ನೂ ಓದಿ: ತಿರುಪತಿ ತಿರುಮಲದಲ್ಲಿ ರಾಜ್ಯದ ಯಾತ್ರಾರ್ಥಿಗಳಿಗೆ 346 ಕೊಠಡಿ ಲಭ್ಯ; ವಿಶ್ವನಾಥ್