Site icon Vistara News

Huttari Habba : ಈ ವರ್ಷದ ಹುತ್ತರಿ ಹಬ್ಬಕ್ಕೆ ದಿನಾಂಕ ನಿಗದಿ; ಕೊಡಗಿನಲ್ಲಿ ಭಾರಿ ಸಂಭ್ರಮ

Huttari Habba on November 27, 2023

ಮಡಿಕೇರಿ: ಕೊಡಗಿನ ಪ್ರಮುಖ ಹಬ್ಬಗಳಲ್ಲಿ ಒಂದಾದ ಹುತ್ತರಿ ಹಬ್ಬಕ್ಕೆ (Huttari Habba) ಈ ವರ್ಷದ ದಿನಾಂಕ‌ ನಿಗದಿಯಾಗಿದೆ. ಕೊಡಗಿನಾದ್ಯಂತ (Kodagu News) ಇದೆ ತಿಂಗಳ 27 ಸಂಭ್ರಮದ ಹುತ್ತರಿ ಹಬ್ಬದ ಆಚರಣೆ ನಡೆಯಲಿದೆ ಎಂದು ಪ್ರಕಟಿಸಲಾಗಿದೆ.

ಕೊಡಗು ಜಿಲ್ಲೆ ನಾಪೋಕ್ಲು ಸಮೀಪದ ಪಾಡಿ ಇಗ್ಗುತಪ್ಪ ದೇವಾಲಯದಲ್ಲಿ (Padi Iggutappa temple) ನಡೆದ ಮಹತ್ವದ ಸಭೆಯಲ್ಲಿ ಹುತ್ತರಿ ಹಬ್ಬದ ದಿನಾಂಕ ನಿಗದಿಯಾಗಿದೆ. ನವೆಂಬರ್‌ 27ರಂದು ಇಗ್ಗುತಪ್ಪ ದೇವಾಲಯದಲ್ಲಿ ರಾತ್ರಿ 7.20ಕ್ಕೆ ನೆರೆ ಕಟ್ಟುವುದು, 8.20ಕ್ಕೆ ಕದಿರು ಕೊಯ್ಯುವುದು ಹಾಗೂ 9.20ಕ್ಕೆ ಊಟೋಪಚಾರ ನಡೆಯಲಿದೆ. ಕೊಡಗಿನಾದ್ಯಂತ ಅದೇ ದಿನ‌ 7.45 ಕ್ಕೆ ನೆರೆಕಟ್ಟುವುದು 8.45ಕ್ಕೆ ನೆರೆಕಟ್ಟುವುದು ಹಾಗೂ 9.45 ಊಟೋಪಚಾರದ ಮುಹೂರ್ತ ನಿಗದಿಯಾಗಿದೆ‌. ಕೊಡಗಿನ ಪ್ರಮುಖ ಹಬ್ಬಗಳಲ್ಲಿ ಒಂದಾದ ಈ ಹಬ್ಬವನ್ನ ಕೊಡಗಿನಾದ್ಯಂತ ಬಹಳ ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ಕೊಡಗಿನ ಹುತ್ತರಿ ಹಬ್ಬವನ್ನು ಸುಗ್ಗಿ ಹಬ್ಬ ಎಂದೂ ಕರೆಯುತ್ತಾರೆ.

ಏನಿದು ಹುತ್ತರಿ ಹಬ್ಬ?

ಕೊಡವ ಭಾಷೆಯಲ್ಲಿ ‘ಪುದಿಯ ಅರಿ’ ಎಂದರೆ ಹೊಸ ಅಕ್ಕಿ ಅಂತ. ಪುದಿಯ ಅರಿ ಎನ್ನುವುದನ್ನು ಕನ್ನಡದಲ್ಲಿ ಹುತ್ತರಿ ಎನ್ನುತ್ತಾರೆ. ಹೊಸ ಅಕ್ಕಿಯನ್ನು, ವಾಸ್ತವವಾಗಿ ಭತ್ತದ ಕದಿರನ್ನು, ಮನೆಗೆ ತರುವ ಸುಗ್ಗಿ ಹಬ್ಬವೇ ಹುತ್ತರಿ ಹಬ್ಬ.

ಕೊಡಗಿನಲ್ಲಿ ಹುತ್ತರಿ ಹಬ್ಬ ಎರಡು ದಿನಗಳಲ್ಲಿ ನಡೆಯುತ್ತದೆ. ಒಂದು ‘ಪಾಡಿ ಪೊಳ್ದ್’; ಇನ್ನೊಂದು ‘ನಾಡ್ ಪೊಳ್ದ್’. ಮೊದಲನೆಯದು ಪಾಡಿಯ ಇಗ್ಗುತ್ತಪ್ಪ ದೇವಸ್ಥಾನದ ಗದ್ದೆಯಿಂದ ಕದಿರು ತರುವ ಹಬ್ಬ. ಇನ್ನೊಂದು ಇದರ ಮರುದಿನ ಕೊಡಗಿನಲ್ಲೆಲ್ಲಾ ಕೊಡವರು ಕದಿರನ್ನು ಮನೆಗೆ ತರುವ ನಾಡ ಹಬ್ಬ.

ರೋಹಿಣಿ ನಕ್ಷತ್ರವಿರುವ ಹುಣ್ಣಿಮೆಯ ರಾತ್ರಿ ‘ಕದಿರು ತೆಗೆಯಲು’ ಅಂದರೆ ಈ ಹೊಸ ಬೆಳೆಯನ್ನು ಪ್ರಥಮವಾಗಿ ಮನೆಗೆ ತರಲು ಪ್ರಶಸ್ತವಾದ ಸಮಯವೆಂದು ನಂಬಿಕೆ. ಈ ಮುಹೂರ್ತ ಸಾಮಾನ್ಯವಾಗಿ ನವೆಂಬರ್ ಅಂತ್ಯದಿಂದ ಡಿಸೆಂಬರಿನೊಳಗೆ ಬರುತ್ತದೆ. ಹುಣ್ಣಿಮೆಯಂದು ರೋಹಿಣಿ ನಕ್ಷತ್ರ ಬಾರದಿದ್ದರೆ ಕೃತಿಕೆಯಾದರೂ ಒಳ್ಳೆಯದೆಂದು ಪರಿಗಣಿಸಲಾಗುತ್ತದೆ. ಈ ಬಾರಿ ಇದು ನವೆಂಬರ್‌ 27ರಂದು ಬಂದಿದೆ.

ಇದನ್ನೂ ಓದಿ: Deepavali 2023: ಹಬ್ಬದ ಸಂಭ್ರಮ; ಸಿಹಿತಿಂಡಿ ತಿನ್ನುವ, ಖರೀದಿಸುವ ಮುನ್ನ ಇವಿಷ್ಟು ನಿಮಗೆ ತಿಳಿದಿರಲಿ!

ಹುತ್ತರಿ ಹಬ್ಬದ ಅಂಗವಾಗಿ ಕೊಡಗಿನಲ್ಲೆಲ್ಲಾ ಕೋಲಾಟವೇ ಮೊದಲಾದ ಹಲವು ಜಾನಪದ ನೃತ್ಯಗಳ ಪ್ರದರ್ಶನಗಳು ನಡೆಯುತ್ತವೆ. ಕುಟುಂಬದ ಪ್ರತಿ ಸದಸ್ಯನೂ ಹುತ್ತರಿ ಹಬ್ಬದಲ್ಲಿ ಪಾಲ್ಗೊಳ್ಳಲು ಮನೆಗೆ ಬಂದೇ ಬರಬೇಕು. ಅಷ್ಟೇ ಅಲ್ಲದೆ ಮನೆತನಕ್ಕೆ ಸೇರಿದ ಆಳುಕಾಳುಗಳು, ದೂರ ಮೇಯಲು ಬಿಟ್ಟ ದನಕರುಗಳು ಕೂಡಾ ಹುತ್ತರಿಗೆ ಮನೆಯಲ್ಲಿ ಬಂದು ಸೇರಬೇಕೆಂಬ ಕಟ್ಟಳೆಯಿದೆ. ಇಡೀ ನಾಡು ಈ ಹಬ್ಬವನ್ನು ಅತ್ಯಂತ ಭಕ್ತಿ ಮತ್ತು ಶ್ರದ್ಧೆಯಿಂದ ಆಚರಿಸುತ್ತದೆ. ಕೊಡಗಿನಲ್ಲಿ ಮನೆ ಇರುವ ಮೂಲ ನಿವಾಸಿಗಳು, ಬೆಂಗಳೂರು ಸೇರಿದಂತೆ ನಾಡಿನೆಲ್ಲೆಡೆ ಉದ್ಯೋಗದಲ್ಲಿರುವವರು ಕೂಡಾ ಈ ಹಬ್ಬಕ್ಕೆ ಊರಿಗೆ ಬರುತ್ತಾರೆ.

Exit mobile version