ಬೆಂಗಳೂರು: ಚಾಮರಾಜಪೇಟೆ ಆಟದ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ಹೇಗೆ ಎಂಬ ಬಗ್ಗೆ ಸರಕಾರ ತಲೆ ಕೆಡಿಸಿಕೊಳ್ಳುತ್ತಿರುವ ನಡುವೆಯೇ ಬೆಂಗಳೂರಿನ ಮಹಾನಗರ ಗಣೇಶೋತ್ಸವ ಸಮಿತಿ ದಿನ ಫಿಕ್ಸ್ ಮಾಡಿಯೇ ಬಿಟ್ಟಿದೆ.
ಬೆಂಗಳೂರು ಮಹಾನಗರ ಗಣೇಶೋತ್ಸವ ಸಮಿತಿ ಶನಿವಾರ ಉತ್ಸವದ ಪೋಸ್ಟರ್ ಬಿಡುಗಡೆ ಮಾಡಿದ್ದು, ಆಗಸ್ಟ್ 31ರಿಂದ ಸಪ್ಟೆಂಬರ್ 10ರವರೆಗೆ ಅದ್ಧೂರಿ ವಿನಾಯಕ ಮಹೋತ್ಸವ ನಡೆಯಲಿದೆ ಎಂದು ಪ್ರಕಟಿಸಿದೆ. ಆಗಸ್ಟ್ 31ರಂದು ಬೆಳಗ್ಗೆ 9 ಗಂಟೆಗೆ ಮೂರ್ತಿ ಪ್ರತಿಷ್ಠಾಪನೆ ನಡೆಯಲಿದೆ. ಸೆಪ್ಟೆಂಬರ್ 10ರಂದು ಅದ್ದೂರಿ ಮೆರವಣಿಗೆ ಮೂಲಕ ವಿಸರ್ಜನೆ ನಡೆಯಲಿದೆ ಎಂದು ಸಮಿತಿ ತಿಳಿಸಿದೆ. ಈ ಮಧ್ಯೆ ಪ್ರತಿ ದಿನವೂ ಸಾಂಸ್ಕೃತಿ ಕಾರ್ಯಕ್ರಮದ ಜೊತೆಗೆ ಗಣೇಶನಿಗೆ ಮಹಾಪೂಜೆ ನಡೆಯಲಿದೆ. ಸಾವಿರಾರು ಮಂದಿ ಭಾಗವಹಿಸಲಿದ್ದಾರೆ ಎಂದು ಸಮಿತಿ ಹೇಳಿಕೊಂಡಿದೆ.
ಮೈದಾನಕ್ಕೆ ಹೆಸರಿಟ್ಟ ಸಮಿತಿ
ಈ ಹಿಂದೆ ಈದ್ಗಾ ಮೈದಾನ ಎಂದು ಕರೆಯಲಾಗುತ್ತಿದ್ದ ಈ ಮೈದಾನವನ್ನು ಈಗ ಚಾಮರಾಜಪೇಟೆ ಮೈದಾನ ಎಂದು ಕರೆಯಲಾಗುತ್ತಿದ.ೆ ಅದಕ್ಕೆ ಚಾಮರಾಜೇಂದ್ರ ಒಡೆಯರ್ ಹೆಸರು ಇಡಬೇಕು ಎನ್ನುವ ಬೇಡಿಕೆ ಇದೆ. ಇದರ ನಡುವೆ ಸಮಿತಿ ತನ್ನ ಗಣೇಶೋತ್ಸವ ಪೋಸ್ಟರ್‌ನಲ್ಲಿ ಚಾಮರಾಜಪೇಟೆಯ ಜಯಚಾಮರಾಜೇಂದ್ರ ಒಡೆಯರ್ ಆಟದ ಮೈದಾನ ಎಂದು ಉಲ್ಲೇಖ ಮಾಡಿದೆ.
ನಾಲ್ಕನೇ ವರ್ಷದ ಕಾರ್ಯಕ್ರಮ!
ಈ ನಡುವೆ ಪೋಸ್ಟರ್‌ನಲ್ಲಿ ಇದು ನಾಲ್ಕನೇ ವರ್ಷದ ಕಾರ್ಯಕ್ರಮ ಎಂದು ಉಲ್ಲೇಖಿಸಲಾಗಿದೆ. ಇದು ಹೇಗೆ ಎಂದು ಕೇಳಿದಾಗ, ಕಳೆದ ನಾಲ್ಕು ವರ್ಷಗಳಿಂದ ಇಲ್ಲಿ ಉತ್ಸವ ನಡೆಸಲು ಪ್ರಯತ್ನಿಸಲಾಗುತ್ತಿದೆ ಎಂದು ಸಮಿತಿ ಹೇಳಿದೆ. ಬಹುಶಃ ಇದು ಹಾಲಿ ಗಣೇಶೋತ್ಸವ ಸಮಿತಿ ನಡೆಸುತ್ತಿರುವ ನಾಲ್ಕನೇ ವರ್ಷದ ಕಾರ್ಯಕ್ರಮ ಇರಬಹುದು ಎಂದು ಹೇಳಲಾಗಿದೆ.
ಅದ್ದೂರಿ ಮೆರವಣಿಗೆಗೂ ಅವಕಾಶ ಕೋರಿಕೆ
ಹತ್ತು ದಿನದ ಕಾರ್ಯಕ್ರಮ ಮಾಡುವುದಲ್ಲದೆ, ಕೊನೆಯಲ್ಲಿ ಅದ್ದೂರಿ ಮೆರವಣಿಗೆಗೂ ಅವಕಾಶ ಕೋರಿದೆ. ಪಾದರಾಯನಪುರದಿಂದ ಟೌನ್ ಹಾಲ್‌ವರೆಗೆ ಮೈಸೂರು ರೋಡ್‌ನಲ್ಲಿ ಹಲವು ಸಮಿತಿಗಳನ್ನು ಜತೆ ಸೇರಿಸಿ ಮೆರವಣಿಗೆ ಮಾಡಲಾಗುವುದು ಎಂದು ಸಮಿತಿ ಹೇಳಿಕೊಂಡಿದೆ.
ಇನ್ನೂ ಅನುಮತಿ ಸಿಕ್ಕಿಲ್ಲ
ಚಾಮರಾಜಪೇಟೆ ಮೈದಾನದಲ್ಲಿ ಸರಕಾರದ ವತಿಯಿಂದಲೇ ಸ್ವಾತಂತ್ರ್ಯೋತ್ಸವವನ್ನು ಯಶಸ್ವಿಯಾಗಿ ನಡೆಸಿರುವ ಸರಕಾರ ಅದೇ ಮಾದರಿಯಲ್ಲಿ ಗಣೇಶೋತ್ಸವವನ್ನೂ ಆಚರಿಸುವ ಬಗ್ಗೆ ಚಿಂತನೆಯಲ್ಲಿದೆ. ಆದರೆ, ಈಗ ಗಣೇಶೋತ್ಸವ ಸಮಿತಿ ದಿನಾಂಕ ಘೋಷಣೆ ಮಾಡಿದ್ದು, ಅನುಮತಿ ಕೊಡಲೇಬೇಕು ಎಂದು ಪಟ್ಟು ಹಿಡಿಡಿದೆ. ದಿನಗಳು ಹತ್ತಿರ ಬರುತ್ತಿರುವುದರಿಂದ ಕಂದಾಯ ಇಲಾಖೆ ಮೇಲೆ ಒತ್ತಡ ಹೆಚ್ಚುತ್ತಿದೆ. ಸರಕಾರ ಸದ್ಯಕ್ಕೆ ಯಾರಿಗೂ ಅನುಮತಿ ಕೊಟ್ಟಿಲ್ಲ.
ನಾಗರಿಕರ ಒಕ್ಕೂಟದಿಂದ ಗಡುವು
ಈ ನಡುವೆ, ಹೇಗಾದರೂ ಸರಿ ಗಣೇಶೋತ್ಸವ ನಡೆಯಲೇಬೇಕು ಎಂದು ಪಟ್ಟು ಹಿಡಿದಿರುವ ನಾಗರಿಕ ಒಕ್ಕೂಟ ಆಗಸ್ಟ್ ೨೫ರೊಳಗೆ ಸರಕಾರ ಅನುಮತಿ ನೀಡಬೇಕು ಎಂದು ಒತ್ತಾಯಿಸಿದೆ. ಒಕ್ಕೂಟವೇ ಗಣೇಶೋತ್ಸವಕ್ಕ ಬ್ಲೂ ಪ್ರಿಂಟ್ ಸಿದ್ಧಪಡಿಸಿದ್ದು ಮೂರು ದಿನಗಳ ಆಚರಣೆಗೆ ತೀರ್ಮಾನಿಸಿದೆ. ಒಂದೊಮ್ಮೆ ಸರಕಾರ ಅನುಮತಿ ನೀಡದೆ ಹೊದರೆ ಪ್ರತಿಭಟನೆಯ ಎಚ್ಚರಿಕೆ ನೀಡಿದೆ.
ಒಕ್ಕೂಟದ ತೀರ್ಮಾನ ಪ್ರಕಾರ, ಮೊದಲ ದಿನ ಅದ್ಧೂರಿ ಗಣೇಶ ಪ್ರತಿಷ್ಠಾಪನೆ ನಡೆಯಲಿದೆ. ಎರಡನೇ ದಿನ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಮೂರನೇ ದಿನ ವಿಸರ್ಜನೆ ನಡೆಯಲಿದೆ.
ಎಲ್ಲರೂ ಸೇರಿ ಮಾಡುತ್ತೇವೆ
ನಾಗರಿಕ ಒಕ್ಕೂಟದ ಪ್ರಕಾರ, ಸ್ವಾತಂತ್ರ್ಯೋತ್ಸವ ಮಾದರಿಯಲ್ಲೇ ಎಲ್ಲರೂ ಸೇರಿ ಗಣೇಶೋತ್ಸವವನ್ನೂ ಆಚರಿಸಲಾಗುತ್ತದೆ. ಇಲ್ಲಿ ಹಿಂದು, ಮುಸ್ಲಿಮರು ಸೋದರರ ಹಾಗೆ ಇದ್ದಾರೆ. ಯಾವುದೇ ಬೇಧ ಭಾವ ಇಲ್ಲ. ಎಲ್ಲರೂ ಸೇರಿ ಆಚರಿಸುತ್ತೇವೆ. ಅನುಮತಿ ಕೊಡಬೇಕು ಎಂದು ಸಮಿತಿ ಕೇಳಿಕೊಂಡಿದೆ.
ಇದನ್ನೂ ಓದಿ| ಚಾಮರಾಜಪೇಟೆ ಆಟದ ಮೈದಾನದಲ್ಲಿ ಕಂದಾಯ ಇಲಾಖೆಯಿಂದಲೇ ಗಣೇಶೋತ್ಸವ: ಸರಕಾರದ ಚಿಂತನೆ