Site icon Vistara News

Deepavali 2023: ಗಿನ್ನೆಸ್‌ ವಿಶ್ವದಾಖಲೆಗೆ ಮುಂದಾದ ಅಯೋಧ್ಯೆ; ದೀಪಾವಳಿಗೆ ಬೆಳಗಲಿವೆ 24 ಲಕ್ಷ ಹಣತೆ

ayodhya

ಅಯೋಧ್ಯೆ: ಶ್ರೀ ರಾಮಮಂದಿರ ನಗರಿ ಅಯೋಧ್ಯೆ (ayodhya ram mandir) ದೀಪಾವಳಿ (deepavali 2023) ನಿಮಿತ್ತ ಲಕ್ಷ ಲಕ್ಷ ಹಣತೆಗಳ ಪ್ರಭಾವಳಿಯಿಂದ ಹಗಲಿಗಿಂತಲೂ ಜಾಜ್ವಲ್ಯಮಾನವಾಗಿ ಕಂಗೊಳಿಸಲಿದೆ. ಇದು ಗಿನ್ನೆಸ್‌ ದಾಖಲೆಯನ್ನೂ (Guinness World Record) ಸೇರಲಿದೆ.

ದೀಪಾವಳಿಯ ಮುನ್ನಾದಿನದಂದು, ಉತ್ತರ ಪ್ರದೇಶದ ದೇವಾಲಯ ಪಟ್ಟಣವಾದ ಅಯೋಧ್ಯೆಯು ಹೊಸ ಗಿನ್ನೆಸ್ ವಿಶ್ವ ದಾಖಲೆಯನ್ನು ಸ್ಥಾಪಿಸುವ ಗುರಿಯನ್ನು ಹೊಂದಿದ್ದು, ದೀಪೋತ್ಸವ ಕಾರ್ಯಕ್ರಮದಲ್ಲಿ 51 ಘಾಟ್‌ಗಳಲ್ಲಿ 24 ಲಕ್ಷ ದೀಪಗಳನ್ನು (ಮಣ್ಣಿನ ದೀಪಗಳು) ಬೆಳಗಿಸಲಾಗುತ್ತದೆ.

ಮಧ್ಯಾಹ್ನ 3 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉದ್ಘಾಟಿಸಲಿದ್ದಾರೆ. 25,000 ಸ್ವಯಂಸೇವಕರು 24 ಲಕ್ಷ ದೀಪಗಳನ್ನು ಬೆಳಗಿಸಲಿದ್ದಾರೆ. ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ತಂಡವು ದೀಪೋತ್ಸವ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಡ್ರೋನ್ ಕ್ಯಾಮೆರಾದೊಂದಿಗೆ ದಿಯಾಗಳನ್ನು ಎಣಿಕೆ ಮಾಡುತ್ತದೆ.

ಕಳೆದ ವರ್ಷ, ಅಯೋಧ್ಯೆಯ ಸರಯೂ ನದಿಯ ದಡದಲ್ಲಿ 20,000ಕ್ಕೂ ಹೆಚ್ಚು ಸ್ವಯಂಸೇವಕರು 15 ಲಕ್ಷಕ್ಕೂ ಹೆಚ್ಚು ದೀಪಗಳನ್ನು ಬೆಳಗಿಸಿ ಗಿನ್ನೆಸ್ ವಿಶ್ವ ದಾಖಲೆಯನ್ನು ಸ್ಥಾಪಿಸಿದ್ದರು. ಈ ವರ್ಷ ಆ ದಾಖಲೆ ಮುರಿಯುವ ನಿರೀಕ್ಷೆ ಇದೆ. ಅಯೋಧ್ಯೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶ ಸರ್ಕಾರದ ಬಹುತೇಕ ಎಲ್ಲಾ ಕ್ಯಾಬಿನೆಟ್ ಸಚಿವರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ದೀಪೋತ್ಸವದ ನಂತರ ಆಕರ್ಷಕ ಲೇಸರ್ ಶೋ ನಡೆಯಲಿದೆ.

ದೀಪೋತ್ಸವದ ಭದ್ರತಾ ಸಿದ್ಧತೆಗಳ ಕುರಿತು, ಅಯೋಧ್ಯೆ ರೇಂಜ್ ಇನ್ಸ್‌ಪೆಕ್ಟರ್ ಜನರಲ್ (ಐಜಿ) ಪ್ರವೀಣ್ ಕುಮಾರ್, “ಈ ಪ್ರದೇಶವನ್ನು 14 ಪೊಲೀಸ್ ವಲಯಗಳಾಗಿ ವಿಂಗಡಿಸಲಾಗಿದೆ. ನಾವು ಕೃತಕ ಬುದ್ಧಿಮತ್ತೆಯ ಸಹಾಯವನ್ನು ಸಹ ತೆಗೆದುಕೊಂಡಿದ್ದೇವೆ. ಜನಸಂದಣಿ ಮತ್ತು ದಟ್ಟಣೆಯನ್ನು ನಿಯಂತ್ರಿಸಲಾಗುವುದು” ಎಂದು ಹೇಳಿದ್ದಾರೆ.

ಭಯೋತ್ಪಾದಕ ದಾಳಿ ಬೆದರಿಕೆ

ಈ ನಡುವೆ ಅಯೋಧ್ಯೆಯಲ್ಲಿ ಕೋಟ್ಯಂತರ ಭಾರತೀಯರ ಕನಸು ನನಸಾಗುತ್ತಿದ್ದು, ಶ್ರೀರಾಮಮಂದಿರ (Ayodhya Ram Mandir) ಲೋಕಾರ್ಪಣೆಗೆ ಅಣಿಯಾಗುತ್ತಿದೆ. ಮಂದಿರ (ayodhya temple) ಉದ್ಘಾಟನೆಗೆ ಈಗಾಗಲೇ ತಯಾರಿಗಳು ನಡೆಯುತ್ತಿದೆ. ಅಕ್ಷತ ಪೂಜೆ ನೇರವೇರಿಸಲಾಗಿದೆ. ಅಂತಿಮಹಂತದ ಕಾಮಗಾರಿಗಳು ನಡೆಯುತ್ತಿವೆ. ಜನವರಿ ಆರಂಭದಿಂದಲೇ ಪೂಜಾ ಕೈಂಕರ್ಯಗಳು ಆರಂಭಗೊಳ್ಳಲಿದೆ. ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿ ಶ್ರೀ ರಾಮಮಂದಿರ ಉದ್ಘಾಟನೆ ಮಾಡಲಿದ್ದಾರೆ.

ಇದರ ನಡುವೆಯೇ ಮಂದಿರದ ಮೇಲೆ ದಾಳಿಗೆ ಪಾಕ್‌ ಮೂಲದ ಉಗ್ರರು ಸಜ್ಜಾಗಿದ್ದಾರೆ (terrorist attack) ಎಂಬ ಮಾಹಿತಿ ಗುಪ್ತಚರ ಪಡೆಗಳಿಗೆ (intelligence) ಲಭ್ಯವಾಗಿದೆ. ಹೀಗಾಗಿ ಅಯೋಧ್ಯೆಯಲ್ಲಿ ಬಿಗಿ ಭದ್ರತೆ ಹಾಕಲಾಗುತ್ತಿದೆ. ಇಸ್ರೇಲ್‌ನಲ್ಲಿ ಹಮಾಸ್‌ ಉಗ್ರರಿಂದ ನಡೆಸಲಾದ ದಾಳಿ ಮಾದರಿಯಲ್ಲಿ ಅಯೋಧ್ಯೆ ರಾಮಮಂದಿರದ ಮೇಲೆ ದಾಳಿ ನಡೆಸುವ ಸಂಚನ್ನು ಉಗ್ರರು ರೂಪಿಸಿದ್ದಾರೆ. ಆ ಮೂಲಕ ಕಾಶ್ಮೀರ ರೀತಿ ಅಯೋಧ್ಯೆಯನ್ನು ವಿವಾದಿತ ಭೂಮಿಯನ್ನಾಗಿ ಪರಿವರ್ತಿಸುವುದು, ಹಿಂದೂಗಳ ಶ್ರದ್ಧಾ ಕೇಂದ್ರವನ್ನು ರಕ್ತಸಿಕ್ತಗೊಳಿಸಿ ಭಕ್ತರು ಭೇಟಿ ನೀಡಲು ಅಂಜುವಂತೆ ಮಾಡುವುದು ಇವರ ಸಂಚಾಗಿದೆ. ಪಾಕಿಸ್ತಾನದ ಅಲ್ ಖೈದಾ ಹಾಗೂ ಲಷ್ಕರ್ ಭಯೋತ್ಪಾದಕ ಸಂಘಟನೆಗಳು ಈಗಾಗಲೇ ಮಹತ್ವದ ಚರ್ಚೆ ನಡೆಸಿ ದಾಳಿಗೆ ಸಜ್ಜಾಗಿರುವ ಮಾಹಿತಿಯನ್ನು ಗುಪ್ತಚರ ಇಲಾಖೆ ಬಹಿರಂಗಪಡಿಸಿದೆ.

ಇದನ್ನೂ ಓದಿ: Ayodhya Mosque: ಅಯೋಧ್ಯೆ ಮಸೀದಿಯ ವಿನ್ಯಾಸವೇ ದಿಢೀರ್‌ ಬದಲು; ಏನಿದಕ್ಕೆ ಕಾರಣ?

Exit mobile version