Site icon Vistara News

Deepavali 2023: ದೀಪಾವಳಿ ಹಬ್ಬದ ದಿನಗಳು, ಮುಹೂರ್ತ ಮತ್ತು ವಿಶೇಷತೆಗಳು ಹೀಗಿವೆ…

Deepavali 2023

ಬೆಳಕಿನ ಹಬ್ಬ (Deepavali 2023) ಇನ್ನೇನು ಬಂತು. ಕೆಡುಕಿನ ಮೇಲೆ ಒಳಿತಿನ ವಿಜಯ, ಕತ್ತಲೆಯ ಮೇಲೆ ಬೆಳಕಿನ ವಿಜಯ ಎಂದೆಲ್ಲಾ ಹೇಳುವ ಈ ಹಬ್ಬದ ಆಚರಣೆಯ ಹಿಂದೆ, ಬದುಕಿನ ತಮವನ್ನು ಕಳೆದು ಜ್ಯೋತಿ ಹರಡಲಿ ಎಂಬ ಆಶಯ ಇದ್ದೇಇದೆ. ಬೆಳಕನು ಚೆಲ್ಲುತ್ತಾ ಬರುವ ಈ ಹಬ್ಬದ ದಿನಗಳು ಈ ಬಾರಿ ಎಂದಿನಿಂದ ಪ್ರಾರಂಭ, ಆಯಾ ದಿನಗಳ ವಿಶೇಷತೆ ಏನು ಎಂಬಿತ್ಯಾದಿ ಮಾಹಿತಿಗಳು ಇಲ್ಲಿವೆ.

ಈ ಬಾರಿ ನವೆಂಬರ್‌ 12ರಿಂದ ದೀವಳಿಗೆ ಹಬ್ಬ ಪ್ರಾರಂಭವಾಗುತ್ತದೆ. ಮೂರು ದಿನಗಳ ಹಬ್ಬದ ಆಚರಣೆಯ ಪದ್ಧತಿಯ ಪ್ರಕಾರ ಹೇಳುವುದಾದರೆ, ನವೆಂಬರ್ 12ನೇ ದಿನ, ಭಾನುವಾರ ನರಕ ಚತುರ್ದಶಿ ಮತ್ತು ಲಕ್ಷ್ಮೀ ಪೂಜೆ. ಪೂಜೆಯ ಮುಹೂರ್ತವು ಸಂಜೆ 5.39ರಿಂದ 7.35ರವರೆಗಿದೆ. ಪ್ರದೋಷ ಕಾಲವು ಸಂಜೆ 5.29ರಿಂದ 8.08ರವರೆಗೆ ಇರುತ್ತದೆ. 13ರಂದು ಅಮಾವಾಸ್ಯೆ. 14ರಂದು ಬಲಿಪಾಡ್ಯಮಿ.

ನರಕ ಚತುರ್ದಶಿ

ದ್ವಾಪರಾಯುಗದಲ್ಲಿ ಶ್ರೀಕೃಷ್ಣ ನರಕಾಸುರನಿಗೆ ಮೋಕ್ಷ ನೀಡಿದ ದಿನವನ್ನು ನರಕ ಚತುರ್ದಶಿ ಎಂದು ಆಚರಿಸಲಾಗುತ್ತದೆ. ಇನ್ನು, ಸಮುದ್ರ ಮಥನದ ಕಾಲದಲ್ಲಿ ಲಕ್ಷ್ಮಿ ಜನಿಸಿದ್ದ ನೆನಪಿನಲ್ಲಿ ಲಕ್ಷ್ಮೀ ಪೂಜೆ ಮಾಡುವ ಕ್ರಮವಿದೆ. ಸಂಪತ್ತು, ಸಮೃದ್ಧಿ ಮನೆ-ಮನಗಳಲ್ಲಿ ನೆಲೆಸಲಿ ಎಂಬುದು ಇದರ ಹಿಂದಿನ ಆಶಯ. ಮೂರು ಲೋಕಗಳಲ್ಲಿ ಬಲಿಷ್ಠ ಎನಿಸಿಕೊಂಡಿದ್ದ ಬಲಿ ಚಕ್ರವರ್ತಿಯನ್ನು ಮಹಾವಿಷ್ಣವು ವಾಮನ ರೂಪದಲ್ಲಿ ಬಂದು ಪಾತಾಳಕ್ಕೆ ತುಳಿದ ಕಥೆಯ ಹಿನ್ನೆಲೆ ಬಲಿಪಾಡ್ಯಮಿಯ ಆಚರಣೆಗಿದೆ. ಹಾಗೆಯೇ, 14 ವರ್ಷಗಳ ವನವಾಸವನ್ನು ಮುಗಿಸಿದ ಶ್ರೀರಾಮ, ರಾವಣಾದಿ ಅಸುರರನ್ನು ವಧಿಸಿ, ಮರಳಿ ಅಯೋಧ್ಯೆಗೆ ಬಂದ ದಿನವೇ ದೀಪಾವಳಿ. ರಾಜ್ಯದ ಪ್ರಜೆಗಳಿಗೆಲ್ಲ ರಾಮನ ಸ್ವಾಗತಕ್ಕೆ ಸಾಲು ದೀವಿಗೆಗಳನ್ನು ಹೊತ್ತಿಸಿ, ಸಂಭ್ರಮಿಸಿದ ದಿನವಿದು ಎಂಬ ಪ್ರತೀತಿಯೂ ಈ ಹಬ್ಬದ ಆಚರಣೆಗಿದೆ.

ಕೆಲವೆಡೆ ನ.10ರಿಂದಲೇ ಸಂಭ್ರಮ…

ಐದು ದಿನಗಳ ದೀಪಾವಳಿ ಆಚರಿಸುವ ಪ್ರಾಂತ್ಯಗಳಲ್ಲಿ, ನವೆಂಬರ್‌ 10 ರಿಂದಲೇ ದೀಪಗಳ ಸಂಭ್ರಮ ಆರಂಭವಾಗುತ್ತದೆ. ಮೊದಲನೇ ದಿನ ಧನ್‌ ತೆರಾಸ್‌ ಆಚರಿಸುವವರು, ಹೊಸದಾಗಿ ವಸ್ತುಗಳು, ಆಭರಣ, ಆಸ್ತಿಯನ್ನು ಖರೀದಿಸುವ ಸಂಪ್ರದಾಯವಿದೆ. ಅಂದು ಕೊಂಡಿದ್ದು 13 ಪಟ್ಟು ಹೆಚ್ಚುತ್ತದೆ ಎನ್ನುವುದು ಪ್ರತೀತಿ. ಸಂಜೆ 5.27ರಿಂದ 7.27ರವರೆಗಿನ ಸಮಯ ಈ ದಿನದ ಪೂಜೆಗೆ ಪ್ರಶಸ್ತ. ಮಾರನೇ ದಿನ, ಅಂದರೆ 11ನೇ ತಾರೀಕು ಛೋಟಿ ದಿವಾಲಿ, 12ರಂದು ಸಂಜೆ ಅಮಾವಾಸ್ಯೆಯ ಪ್ರದೋಷಕ್ಕೆ ಲಕ್ಷ್ಮೀ ಪೂಜೆ, 14ನೇ ತಾರೀಕು ಗೋವರ್ಧನ ಪೂಜೆಯ ಮುಹೂರ್ತ ಸಂಜೆ 5.54ರಿಂದ 8.09ರವರೆಗಿದೆ. ಐದನೇ ದಿನ, 15ಕ್ಕೆ ಅಣ್ಣ-ತಂಗಿಯರ ಹಬ್ಬವಾಗಿ ಭಾಯ್‌ ದೂಜ್‌ ಆಚರಿಸುತ್ತಾರೆ. ಅಂದು ಮಧ್ಯಾಹ್ನ 12.38ರಿಂದ 2.53ರವರೆಗಿನ ಸಮಯ ಪೂಜೆಗೆ ಸೂಕ್ತ ಎನ್ನಲಾಗಿದೆ.

Diwali sweets Gujiya peda barfi Motichoor Laddu Indian Sweet dessert mithai festival dish Dussehra Holi ganesh chaturthi

ಸಿಹಿ ಹಂಚಿಕೆ

ಬಂಧು ಮಿತ್ರರಿಗೆ ಸಿಹಿ ಹಂಚುವುದು, ಉಡುಗೊರೆಗಳನ್ನು ನೀಡುವುದು ಸಾಮಾನ್ಯವಾಗಿ ಎಲ್ಲೆಡೆ ಕಂಡು ಬರುತ್ತದೆ. ಕತ್ತಲೆಯ ರಾತ್ರಿಗಳನ್ನು ಬೆಳಗಿಸುವಂಥ ಹಣತೆಗಳು, ಆಕಾಶಬುಟ್ಟಿಗಳು ಲೋಕವನ್ನೆಲ್ಲ ಬೆಳಗುವಂತೆ ಭಾಸವಾಗುತ್ತದೆ. ಇವೆಲ್ಲವುಗಳ ನಡುವೆ ಉಮೇದುವಾರರ ಪಟಾಕಿಗಳು ಶಬ್ದ ಮಾಡುತ್ತಿರುತ್ತವೆ. ಹಲವು ತಿಂಗಳುಗಳಿಂದ ನಡೆದು ಬರುತ್ತಿದ್ದ ಹಬ್ಬಗಳ ಸಾಲಿಗೊಂದು ಬೆಳಕಿನ ಸಮಾರೋಪದಂತೆ ದೀಪಾವಳಿ ಕಂಗೊಳಿಸುತ್ತದೆ.

ಇದನ್ನೂ ಓದಿ: Deepavali 2023: ದೀಪಾವಳಿ ಸಂದರ್ಭದಲ್ಲಿ ರಾತ್ರಿ 8ರಿಂದ 11 ಗಂಟೆವರೆಗೆ ಮಾತ್ರ ಪಟಾಕಿ ಸಿಡಿಸಲು ಅವಕಾಶ

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version