Site icon Vistara News

Deepavali 2023: ದೀಪಾವಳಿಯಂದು ಯಾವಾಗ ದೀಪ ಬೆಳಗಬೇಕು? ಇಲ್ಲಿದೆ ಮಾಹಿತಿ

hanate

hanate

ಬೆಂಗಳೂರು: ಮನಸ್ಸಿಗೆ ಕವಿದಿರುವ ಅಂಧಕಾರವನ್ನು ತೊಲಗಿಸುವ ದೀಪಾವಳಿ (Deepavali 2023) ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಎಲ್ಲೆಡೆ ಇದಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ಮನೆಯನ್ನು ಸ್ವಚ್ಛಗೊಳಿಸುವುದರಿಂದ ಹಿಡಿದು ದೀಪಗಳನ್ನು ಜೋಡಿಸುವುದು, ಹೊಸ ಬಟ್ಟೆ ಖರೀದಿ ಮುಂತಾದ ಕೊನೆ ಕ್ಷಣದ ತಯಾರಿಯಲ್ಲಿ ಎಲ್ಲರೂ ನಿರತರಾಗಿದ್ದಾರೆ. ಸಮೃದ್ಧಿಯ ಸಂಕೇತವಾಗಿಯೂ ಈ ಹಬ್ಬವನ್ನು ಆಚರಿಸಲಾಗುತ್ತದೆ. ಹೆಸರೇ ಹೇಳುವಂತೆ ಇದು ಬೆಳಕಿನ ಹಬ್ಬ. ದೀಪಗಳನ್ನು ಬೆಳಗುವ ಮೂಲಕ ಕತ್ತಲೆಯನ್ನೂ ಹೊಡೆದೋಡಿಸಲಾಗುತ್ತದೆ. ಹಾಗಾದರೆ ದೀಪಗಳ ಮಹತ್ವವೇನು? ಯಾವ ಸಮಯದಲ್ಲಿ ದೀಪ ಹಚ್ಚಬೇಕು? ಮುಂತಾದ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

ಹಬ್ಬ ಯಾವಾಗ?

ಕೆಲವು ಕಡೆ ದೀಪಾವಳಿಯನ್ನು ಐದು ದಿನ ಆಚರಿಸಲಾಗುತ್ತದೆ. ಮೊದಲ ದಿನ ನೀರು ತುಂಬುವುದು, ಎರಡನೇ ದಿನ ನರಕ ಚತುರ್ದಶಿ, ಮೂರನೇ ದಿನ ದೀಪಾವಳಿ ಅಮಾವಾಸ್ಯೆ, ನಾಲ್ಕನೇ ದಿನ ಬಲಿಪಾಡ್ಯಮಿ ಹಾಗೂ ಐದನೇ ದಿನ ಯಮದ್ವಿತೀಯ ಎಂದು ಪರಿಗಣಿಸಲಾಗುತ್ತದೆ. ನಾವು ಸಾಮಾನ್ಯವಾಗಿ ಮೂರು ದಿನ ದೀಪಾವಳಿಯನ್ನು ಕೊಂಡಾಡುತ್ತೇವೆ. ಈ ಬಾರಿ ನವೆಂಬರ್‌ 12ರಂದು ಹಬ್ಬ ಪ್ರಾರಂಭ. ಅಂದು ನರಕ ಚತುರ್ದಶಿ ಮತ್ತು ಲಕ್ಷ್ಮೀ ಪೂಜೆ. 13ರಂದು ಅಮಾವಾಸ್ಯೆ ಹಾಗೂ 14ರಂದು ಬಲಿಪಾಡ್ಯಮಿ. ಇನ್ನು ಐದು ದಿನಗಳ ಹಬ್ಬ ಆಚರಿಸುವ ಕಡೆಗಳಲ್ಲಿ ನವೆಂಬರ್‌ 10ರಿಂದ ದೀಪಾವಳಿಗೆ ನಾಂದಿ ಹಾಡಲಾಗುತ್ತದೆ.

ಬೆಸ ಸಂಖ್ಯೆಯಲ್ಲಿ ಇರಲಿ

ಸಾಮಾನ್ಯವಾಗಿ ಪ್ರತಿ ದಿನ ಎಲ್ಲ ಮನೆಗಳಲ್ಲಿ ದೇವರ ಮುಂದೆ ದೀಪ ಬೆಳಗುವುದು ವಾಡಿಕೆ. ಇದರ ಜತೆಗೆ ದೀಪಾವಳಿಯಂದು ಮನೆಯ ಸುತ್ತ ಮುತ್ತ ಹಣತೆಗಳನ್ನು ಇರಿಸಲಾಗುತ್ತದೆ. ದೀಪಾವಳಿಯು ದೀಪಗಳ ಹಬ್ಬವಾಗಿರುವುದರಿಂದ ಎಷ್ಟು ದೀಪಗಳನ್ನು ಬೇಕಾದರೂ ಬೆಳಗಬಹುದು. ಆದರೆ ದೀಪಗಳು ಬೆಸ ಸಂಖ್ಯೆಯಲ್ಲಿ ಇರುವುದನ್ನು ಗಮನಿಸಬೇಕು ಎಂದು ಹಿರಿಯರು ಹೇಳುತ್ತಾರೆ.

ದೀಪ ಯಾವಾಗ ಬೆಳಗಬೇಕು?

ದೀಪಾವಳಿಯಂದು ಸಂಜೆ 6.3೦ರ ಬಳಿಕ ದೀಪ ಹಚ್ಚಲು ಆರಂಭಿಸಬಹುದು. ಲಕ್ಷ್ಮೀ ದೇವಿಯನ್ನು ಪೂಜಿಸಿದ ನಂತರ ರಾತ್ರಿಯಿಡೀ ದೇವಿ ಬಳಿ ದೀಪವನ್ನು ಬೆಳಗಿಸಬೇಕು. ಲಕ್ಷ್ಮೀ ದೇವಿ ರಾತ್ರಿಯಿಡೀ ಭೂಮಿಯಲ್ಲಿ ಸಂಚರಿಸುತ್ತಾಳೆ ಎನ್ನುವ ನಂಬಿಕೆ ಇದೆ. ಹೀಗಾಗಿ ಲಕ್ಷ್ಮೀ ಬರುವಾಗ ದೀಪವನ್ನು ಬೆಳಗಿಸಿ ಇಡುವುದರಿಂದ ಸಂಪತ್ತು, ಖ್ಯಾತಿ, ವೈಭವ, ಆರೋಗ್ಯ ವೃದ್ಧಿಯಾಗುತ್ತದೆ ಎಂದು ಹಿರಿಯರು ಹೇಳುತ್ತಾರೆ.

ದೀಪ ಹಚ್ಚುವ ಮಹತ್ವ

14 ವರ್ಷಗಳ ವನವಾಸವನ್ನು ಕಳೆದ ನಂತರ ದೀಪಾವಳಿಯ ದಿನದಂದು ರಾಮನು ಅಯೋಧ್ಯೆಗೆ ಪ್ರವೇಶಿಸಿದ್ದನು. ಶ್ರೀರಾಮನ ಆಗಮನದ ಹಿನ್ನಲೆಯಲ್ಲಿ ಮನೆ ಮನೆಗಳಲ್ಲಿ ದೀಪವನ್ನು ಬೆಳಗಿಸುವ ಮೂಲಕ ಸಂತೋಷವನ್ನು ಆಚರಿಸಲಾಯಿತು ಎಂದು ಪುರಾಣಗಳು ಹೇಳುತ್ತವೆ. ಅಲ್ಲದೆ ದೀಪ ಹಚ್ಚುವುದರಿಂದ ಅನೇಕ ಪ್ರಯೋಜನಗಳಿವೆ ಎನ್ನುವುದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ. ದೀಪಗಳ ಸಾಲು, ಬೆಳಕು, ಹೊಗೆ ಪರಿಸರದಲ್ಲಿರುವ ಹಾನಿಕಾರಕ ಸೂಕ್ಷ್ಮಾಣು ಜೀವಿಗಳನ್ನು ನಾಶಪಡಿಸುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ದೀಪಾವಳಿಯಂದು ಬರುವ ಅಮವಾಸ್ಯೆ ಅತ್ಯಂತ ಕರಾಳವಾಗಿರುತ್ತದೆ. ಈ ಕತ್ತಲೆಯನ್ನು ಹೋಗಲಾಡಿಸಲು ಹಣತೆಗಳು ನೆರವಾಗುತ್ತವೆ.

ಇದನ್ನೂ ಓದಿ: Deepavali 2023: ದೀಪಾವಳಿ ಹಬ್ಬದಲ್ಲಿ ದೀಪದ ಮಹತ್ವ ಏನು?

Exit mobile version