ಮಾನವನ ಕೆಲವು ಮಹತ್ವದ (Deepavali 2023) ಆವಿಷ್ಕಾರಗಳಲ್ಲಿ ಬೆಂಕಿಯೂ ಒಂದು. ಆಕಸ್ಮಿಕವಾಗಿ ಆವಿಷ್ಕಾರವಾದ ಬೆಂಕಿಯಿಂದಲೇ ನಾಗರಿಕತೆ ಹೊಸ ಹುಟ್ಟು ಪಡೆಯಿತು. ಒಮ್ಮೆ ಮಾನವನ ಕೈವಶವಾದ ಅಗ್ನಿಯು ಕೇವಲ ಬೆಂಕಿ, ಕಿಚ್ಚು ಎಂದು ವ್ಯಾಪಿಸದೆ, ಕ್ರಮೇಣ ದೀಪ, ಜ್ಯೋತಿಯಾಗಿ ಪಸರಿಸತೊಡಗಿತು. ಪ್ರಕೃತಿಯೊಂದಿಗೆ ಹೊಂದಿಕೊಂಡ ಸಕಲ ವಿಷಯಗಳೂ ದೈವತ್ವಕ್ಕೇರಿ, ಮಾನವನ ಬದುಕಿನಲ್ಲಿ ವಿಶೇಷ ಸ್ಥಾನ ಪಡೆದವು. ಅದರಲ್ಲಿ ಒಂದು ಅಗ್ನಿಯೂ ಹೌದು. ಮೊದಲಿಗೆ ಬದುಕಿಗೆ, ಬೆಳಕಿಗೆ ಮೂಲವೆನಿಸಿದ ಅಗ್ನಿ, ನಂತರ ಅರಿವು, ಜ್ಞಾನಕ್ಕೂ ಮೂಲವಾಯಿತು. ಭಾರತೀಯ ಪರಂಪರೆಯಲ್ಲಿ ಅಗ್ನಿ ಅಥವಾ ಬೆಳಕಿಗೆ ಮಹತ್ವದ ಸ್ಥಾನವಿದೆ. ಯಾವುದೇ ಹಬ್ಬ-ಹರಿದಿನಗಳಿರಲಿ, ಸಂಭ್ರಮ ಆಚರಣೆಗಳಿರಲಿ, ದೀಪ ಮುಖ್ಯವಾಗುತ್ತದೆ. ಅದರಲ್ಲೂ ದೀಪವಿಲ್ಲದೆ ದೀಪಾವಳಿಯೇ ಇಲ್ಲ. ಅಂದು ದೀಪಗಳನ್ನು ಏಕೆ ಹಚ್ಚಬೇಕು ಎನ್ನುವುದನ್ನು ತಿಳಿಯುವ ಮುನ್ನ, ದೀಪಗಳ ಸಾಂಸ್ಕೃತಿಕ ಪ್ರಸ್ತುತತೆಯ ಬಗ್ಗೆ ಕೆಲವು ಮಾತುಗಳು.
ಮಹಾಕಾವ್ಯಗಳಲ್ಲೂ ಉಲ್ಲೇಖ
ಬೆಳಕನ್ನು ಬೀರುವ ಪುಟ್ಟ ಸೊಡರುಗಳು ಭಾರತೀಯ ಸಂಸ್ಕೃತಿಯಲ್ಲಿ ಪುರಾಣ ಕಾಲದಿಂದಲೂ ಹಾಸುಹೊಕ್ಕಾಗಿವೆ. ರಾಮಾಯಣ ಮತ್ತು ಮಹಾಭಾರತದಂಥ ಮಹಾಕಾವ್ಯಗಳಲ್ಲೂ ಝಗಮಗಿಸುವ ದೀಪಗಳ ಉಲ್ಲೇಖವಿದೆ. ಕಾಳಿದಾಸನ ಮೇಘದೂತದಲ್ಲಿ ಕುಬೇರನ ಅಲಕಾನಗರಿಯಲ್ಲಿ ರತ್ನದ ದೀಪಗಳನ್ನು ಉಪಯೋಗಿಸುತ್ತಿದ್ದ ವರ್ಣನೆಯಿದೆ. ನಮ್ಮ ಜಾನಪದ ಕಾವ್ಯಗಳಲ್ಲೂ, ರಾತ್ರಿಯ ಹೊತ್ತು ಮನೆಮನೆಗಳಲ್ಲಿ ಆರಿದ ದೀಪಗಳು, ಆ ಮನೆಯಿಂದ ಹೊರಬಿದ್ದು ಸಂಚಾರ ಹೊರಡುತ್ತಿದ್ದವೆಂಬ ವಿವರಗಳು, ಅದರ ಸುತ್ತಲಿನ ದೀಪರಾಜ ದೀಪರಾಣಿಯರ ಕಥೆಗಳ ಬಗ್ಗೆ ಕುತೂಹಲ ಹುಟ್ಟಿಸುತ್ತವೆ. ಭಾರತೀಯ ಶಿಲ್ಪಗಳಲ್ಲೂ ದೀಪಗಳ ಚಿತ್ರಣ ಢಾಳಾಗಿ ಕಂಡುಬರುತ್ತದೆ.
ಹಿಂದೆಲ್ಲಾ ದೀಪ ಉರಿಸುವುದಕ್ಕೆ ಕಲ್ಲು ಅಥವಾ ಚಿಪ್ಪುಗಳನ್ನು ಬಳಸುತ್ತಿದ್ದಿರಬೇಕು. ಆನಂತರ ಮಣ್ಣು, ಲೋಹದ ದೀಪಗಳು ಬಳಕೆಗೆ ಬಂದವು. ಬಟ್ಟಲಿನಾಕಾರದ ದೀಪದ ಒಂದು ಬದಿಗೆ ಬತ್ತಿ ಇರಿಸಲು ಕೊಕ್ಕಿನಂಥ ಆಕಾರ ಇರುತ್ತಿತ್ತು. ಮೊಹೆಂಜೋದಾರೊದಂಥ ಪ್ರಾಚೀನ ನಾಗರಿಕತೆಗಳಲ್ಲೂ ದೀಪವನ್ನು ಬಳಸುತ್ತಿದ್ದ ಸಾಕ್ಷಿಗಳು ಉತ್ಖನನಗಳಲ್ಲಿ ದೊರೆತಿದೆ. ನಂತರ ರಾಜಮಹಾರಾಜರ ಕಾಲದಲ್ಲಿ ಅದ್ಧೂರಿಯಾದ ದೀಪದ ಕಂಬಗಳು ಬಳಕೆಗೆ ಬಂದವು. ಆದರೆ ಪ್ರಜೆಗಳ ಮನೆಯ ಮಣ್ಣಿನ ಹಣತೆಯೂ ಜ್ಞಾನವನ್ನು ಹರಡುವಲ್ಲಿ, ಬದುಕನ್ನು ಬೆಳಗುವಲ್ಲಿ ಎಂದೂ ಬಡವಾಗಿ, ಮಂಕಾಗಿರಲಿಲ್ಲ.
ದೀಪಗಳನ್ನೇಕೆ ಹಚ್ಚಬೇಕು?
ದೀಪಗಳನ್ನು ಹಚ್ಚುವುದಕ್ಕೆ ಧಾರ್ಮಿಕ ಕಾರಣಗಳು ಹಲವಾರಿವೆ. ಮಹಾಲಯದಲ್ಲಿ ಪರಲೋಕದಿಂದ ಭುವಿಗೆ ಬಂದ ಪಿತೃಗಳಿಗೆ ಪರಮಗತಿಯನ್ನು ಪಡೆಯುವ ದಾರಿಯನ್ನು ತೋರಿಸಲು ದೀಪ ಹಚ್ಚಬೇಕು ಎನ್ನುತ್ತವೆ ಶಾಸ್ತ್ರಗ್ರಂಥಗಳು. ಪೌರಾಣಿಕವಾಗಿ ಬಹಳಷ್ಟು ಕಥಾಕಥಿತ ಕಾರಣಗಳು ದೀಪ ಬೆಳಗಿ ಸಂಭ್ರಮಿಸುವುದರ ಹಿಂದಿವೆ. ಸಾಲು ದೀಪಗಳನ್ನು ಹಚ್ಚುವುದು, ಕೊಳ್ಳಿಯಂಥ ಪುಟ್ಟ ಸೊಡರುಗಳನ್ನು ಎಲ್ಲೆಡೆ ಇರಿಸುವುದು ಸುಖ, ಸಮೃದ್ಧಿ, ಜ್ಞಾನ ಸಂಪತ್ತನ್ನು ಪಡೆಯುವುದಕ್ಕೆ ಅಗತ್ಯ ಎಂದೂ ಹೇಳಲಾಗುತ್ತದೆ. ಅದರಲ್ಲೂ ತುಪ್ಪ, ಎಳ್ಳೆಣ್ಣೆಯ ದೀಪಗಳಿಗೆ ಹೆಚ್ಚಿನ ಆದ್ಯತೆ. ಆದರೆ ಕೊಬ್ಬರಿ ಎಣ್ಣೆ, ಹೊಂಗೆ ಎಣ್ಣೆ ಇತ್ಯಾದಿ ತೈಲಗಳೂ ದೀಪಕ್ಕಾಗಿ ಬಳಕೆಯಲ್ಲಿವೆ. ದೇವರ ಷೋಡಶೋಪಚಾರ ಪೂಜೆಗಳಲ್ಲಿ ದೀಪವೂ ಒಂದು ಉಪಚಾರ.
ದೀಪಗಳಲ್ಲಿ ನಾನಾ ಬಗೆಗಳಿವೆ
ಅರ್ಚನಾದೀಪ, ನಂದಾದೀಪ, ಕಾಲುದೀಪ, ತೂಗುದೀಪ, ಆರತಿದೀಪ ಮುಂತಾದ ಹಲವು ಬಗೆಯ ದೀಪಗಳಿವೆ. ಪೂಜೆಗೆ ಉಪಯೋಗಿಸುವುದು ಅರ್ಚನಾ ದೀಪವೆನಿಸಿದರೆ, ಪ್ರಾರ್ಥನೆ ಬಳಕೆಯಾಗುವುದು ಆರತಿ ದೀಪ. ದೇವನ ಮುಂದೆ ನಂದದೆ ಉರಿಯುವುದು ನಂದಾದೀಪ, ಮೇಲಿಂದ ತೂಗು ಹಾಕಿದ್ದರೆ ತೂಗುದೀಪ, ಪುಟ್ಟ ಕಂಬದ ಮೇಲಿದ್ದರೆ ಕಾಲುದೀಪ. ದೀಪಧಾರಿಣಿ, ದೀಪಲಕ್ಷ್ಮಿ ಅಥವಾ ದೀಪದಮಲ್ಲಿಯಂತಿರುವ ಕಲಾತ್ಮಕ ದೀಪಗಳೂ ಬಳಕೆಯಲ್ಲಿವೆ. ಬಳಸುವ ದೀಪ ಯಾವುದು, ಎಣ್ಣೆ ಯಾವುದು, ಬತ್ತಿ ಎಷ್ಟು ಎನ್ನುವುದಕ್ಕಿಂತ ದೀಪ ಹಚ್ಚುವವರ ಮನಸ್ಸಿನಲ್ಲಿ ಎಷ್ಟು ಬೆಳಕಾಗಿದೆ ಎನ್ನುವುದು ಮುಖ್ಯವಲ್ಲವೇ? ʻಜ್ಯೋತಿಷಾಂ ಜ್ಯೋತಿರುತ್ತಮಂʼ ಎನ್ನುವ ಅಮೋಘವಾದ ಸಂಸ್ಕೃತಿ ನಮ್ಮದು. ಅಂದರೆ ಎಲ್ಲ ಬೆಳಕುಗಳಿಗಿಂತ ಉತ್ಕೃಷ್ಟವಾದ ಬೆಳಕೆಂದರೆ ಪರಮಾತ್ಮ, ಪರಂಜ್ಯೋತಿ ಎಂದು ನಂಬಿದವರು ನಾವು.
ಬೆಳಕಿನ ಮೂಲ ಸೂರ್ಯ
ನಮ್ಮೆಲ್ಲರ ಬೆಳಕಿನ ಮೂಲ ಸೂರ್ಯ. ಜಗತ್ತಿನ ಸಕಲ ಜೀವರಾಶಿಗಳ ಕತ್ತಲೆಯನ್ನು ತೊಡೆದು ಚೈತನ್ಯವನ್ನು ನೀಡುವವನೂ ಅವನೇ. ಸೂರ್ಯನ ಚೈತನ್ಯ ಇರುವಲ್ಲಿ ಜಡತೆಗೆ ಜಾಗವೇ ಇಲ್ಲ. ಹಾಗೆಯೇ ಎಲ್ಲಿ ದೀಪದ ಬೆಳಕೋ ಅಲ್ಲಿಯೂ ಜಡತೆಗೆ, ಕತ್ತಲಿಗೆ ಸ್ಥಾನವಿಲ್ಲ. ಎಲ್ಲಿ ಬೆಳಕಿದೆಯೋ ಅಲ್ಲಿ ಅರಿವು, ಚೈತನ್ಯ. ಅದಕ್ಕಾಗಿಯೇ ಬೆಳಕು, ಚೈತನ್ಯ ಮತ್ತು ಅರಿವಿಗೆ ಬಿಡದಂಥ ನಂಟು. ದೀಪ ಉರಿಯುವುದು ಯಾವತ್ತಿಗೂ ಮೇಲ್ಮುಖವಾಗಿ. ಅರಿವಿಗೂ ಅದನ್ನೇ ಅನ್ವಯಿಸಬಹುದು. ಅಂದರೆ, ಅರಿವು, ತಿಳುವಳಿಕೆ ಎನ್ನುವುದು ನಾವಿರುವ ಸ್ತರದಿಂದ ಮೇಲ್ಮುಖವಾಗಿಯೇ ಕರೆದೊಯ್ಯುತ್ತದೆ ನಮ್ಮನ್ನು. ಪ್ರಖರ ಚಿಂತನೆಗಳನ್ನು ನಮ್ಮಲ್ಲಿ ಹುಟ್ಟಿಸಿ, ಸರಿ-ತಪ್ಪುಗಳ ವಿವೇಕವನ್ನು ಮೂಡಿಸುತ್ತದೆ. ಅಸಹನೆಯನ್ನು ದಾಟಿ ಸಹನೆಯನ್ನು, ಕ್ಷಮಿಸುವ ಔದಾರ್ಯವನ್ನು ಬೆಳಗಿಸುತ್ತದೆ. ಹಾಗಾಗಿ ದೀಪವೆಂದರೆ ಬೆಳಕಷ್ಟೇ ಅಲ್ಲ- ಭರವಸೆಯೂ ಹೌದು. ಹಣತೆಯೆಂದರೆ ಕಷ್ಟಗಳ ಕತ್ತಲೆಯನ್ನು ದಾಟಿಸುವ ಬೆಳಕಿನ ನೌಕೆ. ಹಾಗಾಗಿಯೇ ಪ್ರತಿವರ್ಷವೂ ಹಬ್ಬ ಅದೇ ಆದರೂ, ಹಚ್ಚುವ ಹಣತೆಗಳ ಮೂಲಕ ಹುಟ್ಟುವ ಬೆಳಕು, ಭರವಸೆಗಳು ಮಾತ್ರ ನಿತ್ಯನೂತನ. ಈ ಭರವಸೆಯೇ ನಮ್ಮೊಳಗಿನ ಬೆಳಕನ್ನು ಹುಡುಕುವ ಮಂತ್ರವಾಗಲಿ. ದೀಪಾವಳಿ ಎಲ್ಲರ ಬದುಕನ್ನೂ ಬೆಳಗಲಿ.
ಇದನ್ನೂ ಓದಿ: Deepavali 2023: ದೀಪಾವಳಿಯ ಹಿಂದೆ ಎಷ್ಟೊಂದು ಆಸಕ್ತಿದಾಯಕ ಕಥೆಗಳು! ತಪ್ಪದೇ ಓದಿ