ಶೀಲಾ ಸಿ. ಶೆಟ್ಟಿ, ಬೆಂಗಳೂರು
ದೀಪಾವಳಿ ಹಬ್ಬಕ್ಕೆ (Deepavali Festival) ಮುನ್ನವೇ ಬಗೆಬಗೆಯ ವಿನ್ಯಾಸದ ದೀಪಗಳು ಮಾರುಕಟ್ಟೆಗೆ ಎಂಟ್ರಿ ನೀಡಿದ್ದು, ಮಾರಾಟ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ಸಿಂಪಲ್ ಡಿಸೈನ್ ಇರುವಂತಹ ಸಿಂಗಲ್ ಮಣ್ಣಿನ ದೀಪದಿಂದಿಡಿದು ನಾನಾ ಬಗೆಯ ಮೆಟಲ್, ವ್ಯಾಕ್ಸ್, ಡಿಸೈನರ್ ದೀಪಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ. “ಬಣ್ಣದ ಬಣ್ಣದ ಟೆರ್ರಾಕೋಟಾದ ಹೊಸ ವಿನ್ಯಾಸದ ಜೋಡಿ ದೀಪ, ಆನೆ, ನವಿಲು ಸೇರಿದಂತೆ ನಾನಾ ಡಿಸೈನ್‌ನ ಸ್ಟೆಪ್ ಬೈ ಸ್ಟೆಪ್ ದೀಪಗಳು, ಒಂದೇ ದೀಪದಲ್ಲಿ ಹಲವಾರು ಬಣ್ಣಗಳ ಚಿತ್ತಾರವನ್ನೊಳಗೊಂಡಂತಹ ಡಿಸೈನ್ ಇರುವಂತಹ ಮೆಟಲ್ ದೀಪಗಳು ಬಂದಿವೆ. ಪಿಂಗಾಣಿಯ ಪುಟಾಣಿ ದೀಪಗಳು, ಎಣ್ಣೆರಹಿತ ಹಚ್ಚಬಹುದಾದ ವ್ಯಾಕ್ಸ್ ಕ್ಯಾಂಡಲ್ ದೀಪಗಳು, ಫ್ಲೋಟಿಂಗ್ ರೆಡಿಮೇಡ್ ದೀಪಗಳು ಹೊಸ ವಿನ್ಯಾಸದಲ್ಲಿ ಬಂದಿವೆ.
ಮಣ್ಣಿನ ಹಣತೆ ಎವರ್‌ಗ್ರೀನ್ ಚಾಯ್ಸ್
ಈಗೀಗ ಎಲ್ಲರೂ ಪರಿಸರ ಸ್ನೇಹಿ ಹಬ್ಬದ ಆಚರಣೆಯತ್ತ ವಾಲುತ್ತಿರುವುದು ಮಣ್ಣಿನ ಹಣತೆಗೆ ಡಿಮ್ಯಾಂಡ್ ಹೆಚ್ಚಾಗಿದೆ. ಅವುಗಳಲ್ಲಿ ಇದೀಗ ಲಕ್ಷ್ಮಿ, ಕೃಷ್ಣ, ತ್ರಿಶೂಲ ಸೇರಿದಂತೆ ಹಲವಾರು ದೇವರುಗಳ ಮುಖವನ್ನು ಒಳಗೊಂಡಂತಹ ದೀಪಗಳು ಬಂದಿವೆ. ಇನ್ನು ಸಿಂಪಲ್ ಸಿಂಗಲ್, ಜೋಡಿ ದೀಪಗಳು, ಸ್ಟ್ಯಾಂಡ್ ದೀಪ, ಮೂರ್ನಾಲ್ಕು ಸಾಲಿನ ದೀಪಗಳ ಸೆಟ್ ರೀತಿಯವು ಹೊಸ ರೂಪದಲ್ಲಿ ಬಂದಿದ್ದು, ಮಾರಾಟ ಹೆಚ್ಚಾಗಿದೆ. ಮಣ್ಣಿನ ದೀಪದಿಂದ ಮನೆ ಬೆಳಗಿದರೆ ಮನೆಗೆ ಶ್ರೇಯಸ್ಸು ಎಂಬ ಮಾತಿರುವುದರಿಂದ ಮಾರುಕಟ್ಟೆಯಲ್ಲಿ ಈ ದೀಪಗಳಿಗೆ ಇಂದಿಗೂ ಬೇಡಿಕೆ ಕುಂದಿಲ್ಲ!
ಪಿಂಗಾಣಿ ದೀಪ
ಪಿಂಗಾಣಿ ದೀಪಗಳು ಮೊದಲಿನಿಂದಲೂ ಚಾಲ್ತಿಯಲ್ಲಿವೆ. ಇವು ಮರುಬಳಕೆ ಮಾಡಬಹುದು. ಆದರೆ, ಜಾಗ್ರತೆಯಿಂದ ಬಳಸಬೇಕಷ್ಟೇ!
ರೆಡಿಮೇಡ್ ಮೇಣದ ದೀಪಗಳು
ಎಣ್ಣೆಯ ದೀಪವನ್ನು ಹಚ್ಚಿ ಅಲಂಕಾರ ಮಾಡುವುದಕ್ಕೆ ಕಷ್ಟ ಎನ್ನುವವರಿಗೆ ರೆಡಿಮೇಡ್ ಮೇಣದ ದೀಪಗಳು ನಾನಾ ವಿನ್ಯಾಸದಲ್ಲಿ ಬಂದಿವೆ. ಪ್ಯಾಕೆಟ್‌ನಲ್ಲಿ ದೊರೆಯುವ ಈ ಸೆಟ್ ದೀಪಗಳು ಇತ್ತೀಚೆಗೆ ಹೆಚ್ಚಾಗಿ ಮಾರಾಟವಾಗುತ್ತಿವೆ. ಅಪಾರ್ಟ್ಮೆಂಟ್‌ಗಳಲ್ಲಿ ಇವುಗಳನ್ನು ಬಳಸುವವರು ಹೆಚ್ಚಾಗಿದ್ದಾರೆ.
ಮೆಟಲ್ ಆಂಟಿಕ್ ದೀಪ
ಮೆಟಲ್ ದೀಪಗಳು ಆಲ್ ಟೈಮ್ ಬಳಸಬಹುದಾದ ದೀಪಗಳು. ಇವು ಹಳೆಯ ಕಾನ್ಸೆಪ್ಟ್‌ನಲ್ಲೆ ಪ್ರತಿ ದೀಪಾವಳಿಯ ಸಮಯದಲ್ಲಿ ಬಿಡುಗಡೆಗೊಳ್ಳುತ್ತವೆ. ಹಬ್ಬದ ನಂತರ ಇವನ್ನು ಅಲಂಕಾರಿಕ ವಸ್ತುವಾಗಿಯೂ ಬಳಸಬಹುದು.
ಕಲರ್‌ಫುಲ್ ಕ್ಯಾಂಡಲ್ ದೀಪ
ಇದೀಗ ಕ್ಯಾಂಡಲ್‌ಗಳು ದೀಪದ ರೂಪದಲ್ಲೆ ಬಿಡುಗಡೆಗೊಂಡಿವೆ. ಒಳಾಂಗಣದಲ್ಲಿ ಕ್ಯಾಂಡಲ್ ದೀಪಗಳಿಂದ ಮನೆಯನ್ನು ಸುಲಭವಾಗಿ ಅಲಂಕರಿಸಬಹುದು.
ಫ್ಲೋಟಿಂಗ್ ದೀಪ
ಅಲಂಕಾರಕ್ಕಾಗಿ ಬಳಸುವ ಬೌಲ್ ಅಥವಾ ಟೆರ್ರಾಕೋಟಾ ಬೌಲ್‌ನಲ್ಲಿ ನೀರಿನಲ್ಲಿ ಬಿಡಬಹುದಾದ ಫ್ಲೋಟಿಂಗ್ ದೀಪಗಳು ನಾನಾ ವಿನ್ಯಾಸದಲ್ಲಿ ಆಗಮಿಸಿವೆ.
ಬ್ಯಾಟರಿ ದೀಪ
ಬ್ಯಾಟರಿ ಚಾಲಿತ ದೀಪಗಳಿವು. ಯಾವುದೇ ಜಂಜಾಟವಿಲ್ಲದೇ ಇವುಗಳನ್ನು ಸ್ವಿಚ್ ಮೂಲಕ ಆನ್ ಮಾಡಿ ಬೇಕಾದಾಗ ಆಫ್ ಮಾಡಿ ಇಡುವಂತಹ ದೀಪಗಳಿವು. ಅತಿ ಹೆಚ್ಚಾಗಿ ಮಾರಾಟವಾಗುತ್ತಿವೆ.
(ಲೇಖಕಿ : ಫ್ಯಾಷನ್ ಪತ್ರಕರ್ತೆ)
ಇದನ್ನೂ ಓದಿ: Deepavali Shopping: ಎಲ್ಲೆಡೆ ದೀಪಾವಳಿ ಶಾಪಿಂಗ್ ಭರಾಟೆ
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ