ದೀಪಾವಳಿ ಹಬ್ಬ ಬಂದೇ ಬಿಟ್ಟಿತು. ಹಬ್ಬದ ತಯಾರಿಯ ಮುಖ್ಯ ಭಾಗವೆಂದರೆ ಪೂಜೆ, ಅದರಲ್ಲೂ ಹೊಟ್ಟೆ ಪೂಜೆ! ದೇವರಿಗೆ ಬಗೆಬಗೆಯ ನೈವೇದ್ಯ (Deepavali Sweet) ಮಾಡಿದ ಮೇಲೆ- ಪ್ರಸಾದ ನಮಗೂ ಬೇಕಲ್ಲ. ಇದಕ್ಕೆ ತಯಾರಿಗೆ ನೆರವು ಬೇಕಿದ್ದರೆ, ಇಲ್ಲಿವೆ ಕೆಲವು ಸಾಂಪ್ರದಾಯಿಕ ಹಬ್ಬದ ತಿನಿಸುಗಳು. ಮಾಡಿ, ಸವಿದು, ತಣಿಯಿರಿ.
ಬೇಸನ್ ಲಾಡು
ಬೇಸನ್ ಲಾಡು ಮಾಡುವುದಕ್ಕೆ ಹೆಚ್ಚು ಕಷ್ಟವಲ್ಲದ, ಸರಳ ಆದರೆ ರುಚಿಕರ ಲಡ್ಡು.
ಬೇಕಾಗುವ ವಸ್ತುಗಳು: ಕಡಲೆಹಿಟ್ಟು- 2 ಕಪ್, ತುಪ್ಪ- 1/2 ಕಪ್, ಸಕ್ಕರೆ- 1 ಕಪ್, ಏಲಕ್ಕಿ- ಘಮಕ್ಕೆ ತಕ್ಕಷ್ಟು, ದ್ರಾಕ್ಷಿ, ಗೋಡಂಬಿ ಇತ್ಯಾದಿ
ಮಾಡುವ ವಿಧಾನ: ಕಡಲೆ ಹಿಟ್ಟನ್ನು ತುಪ್ಪದಲ್ಲಿ ಸಣ್ಣ ಉರಿ ಮಾಡಿ ಘಮ್ಮೆನ್ನುವಂತೆ ಹುರಿದುಕೊಳ್ಳಿ. ಇದಕ್ಕೆ ಏಲಕ್ಕಿ ಪುಡಿ ಮತ್ತು ಬೀಜಗಳನ್ನು ಹುರಿದು ಸೇರಿಸಿ, ಈ ಮಿಶ್ರಣ ಕೆಂಪಾಗುವವರೆಗೆ ಹುರಿಯುವುದನ್ನು ಮುಂದುವರಿಸಿ. ಇದನ್ನು ಸ್ವಲ್ಪ ಆರಲು ಬಿಡಿ. ಇತ್ತ, ಸಕ್ಕರೆಯನ್ನು ನುಣ್ಣಗೆ ಪುಡಿ ಮಾಡಿಕೊಳ್ಳಿ. ಕಡಲೆಹಿಟ್ಟಿನ ಮಿಶ್ರಣ ಉಗುರುಬಿಸಿ ಇರುವಾಗ ಸಕ್ಕರೆ ಪುಡಿಯನ್ನು ಸೇರಿಸಿ ಚೆನ್ನಾಗಿ ಕೈಯಾಡಿ, ಹಾಗೆಯೇ ಉಂಡೆ ಮಾಡಿ.
ಗೋಧಿ ನುಚ್ಚಿನ ಪಾಯಸ
ಪಾಯಸಗಳಿಲ್ಲದೆ ಹಬ್ಬವಿಲ್ಲ. ನೈವೇದ್ಯಕ್ಕೂ, ಎಡೆ ಶೃಂಗಾರಕ್ಕೂ, ಜಿಹ್ವಾಚಾಪಲ್ಯಕ್ಕೂ ಸಲ್ಲುವಂಥ ತಿನಿಸಿದು. ಸುಲಭದಲ್ಲಿ ಮಾಡಬಹುದಾದ ಪಾಯಸವಿದು.
ಬೇಕಾಗುವ ವಸ್ತುಗಳು: ಗೋಧಿ ನುಚ್ಚು- 1 ಕಪ್, ತೆಂಗಿನ ತುರಿ- 2 ಕಪ್, ಬೆಲ್ಲ- ಒಂದೂವರೆ ಕಪ್, ನೀರು- 2 ಕಪ್, ತುಪ್ಪ- 3 ಚಮಚ, ಏಲಕ್ಕಿ, ದ್ರಾಕ್ಷಿ, ಗೋಡಂಬಿ.
ವಿಧಾನ: ಗೋದಿ ನುಚ್ಚಿಗೆ ನೀರು ಹಾಕಿ ಮೃದುವಾಗಿ ಬೇಯಿಸಿಕೊಳ್ಳಿ. ಇದಕ್ಕೆ ಚಿಟಿಕೆ ಉಪ್ಪನ್ನೂ ಸೇರಿಸಬಹುದು. ಪಾತ್ರೆಯಲ್ಲಿ ತುಪ್ಪ ಬಿಸಿ ಮಾಡಿ, ಅದಕ್ಕೆ ಈ ಗೋದಿ ನುಚ್ಚು ಮತ್ತು ಬೆಲ್ಲ ಹಾಕಿ ಕಾಯಿಸಿ. ತೆಂಗಿನ ಕಾಯಿ ರುಬ್ಬಿ, ಚೆನ್ನಾಗಿ ಕಿವುಚಿ ಹಾಲು ತೆಗೆದಿರಿಸಿಕೊಳ್ಳಿ. ಪಾಯಸ ಪಾಕಕ್ಕೆ ಬಂದ ಮೇಲೆ ತೆಂಗಿನ ಹಾಲು ಸೇರಿಸಿ, ಒಂದೇ ಬಾರಿ ಕುದಿಸಿ. ಇದಕ್ಕೆ ಏಲಕ್ಕಿ, ದ್ರಾಕ್ಷಿ, ಗೋಡಂಬಿ ಸೇರಿಸಿ. ರುಚಿಯೂ, ಪೌಷ್ಟಿಕವೂ ಆದ ಪಾಯಸವಿದು.
ಅವಲಕ್ಕಿ ಪಾಯಸ
ಅತಿಯಾದ ಸಿಹಿ ಮತ್ತು ಕೊಬ್ಬು ಸೇರಿಸದೆ ಮಾಡಬಹುದಾದ ಪೌಷ್ಟಿಕ ಸಿಹಿಯಿದು. ತೂಕ ಹೆಚ್ಚುವ ಭೀತಿಯಿಲ್ಲದೆ ಹೊಟ್ಟೆಗಿಳಿಸಬಹುದು.
ಬೇಕಾಗುವ ವಸ್ತುಗಳು: ದಪ್ಪ ಅವಲಕ್ಕಿ-1/2 ಕಪ್, ತುಪ್ಪ- 3 ಚಮಚ, ಹಾಲು- 3 ಕಪ್, ಬೆಲ್ಲ- 1/4 ಕಪ್, ನೀರು- 1/4 ಕಪ್, ರುಚಿ ಮತ್ತು ಘಮಕ್ಕೆ ಏಲಕ್ಕಿ ಮತ್ತು ದ್ರಾಕ್ಷಿ-ಗೋಡಂಬಿ
ವಿಧಾನ: ಕಡಾಯಿಯಲ್ಲಿ ತುಪ್ಪ ಬಿಸಿ ಮಾಡಿ. ಅದಕ್ಕೆ ದಪ್ಪ ಅವಲಕ್ಕಿಯನ್ನು ಹಾಕಿ ಕೆಂಪಾಗುವಂತೆ ಸಣ್ಣ ಉರಿಯಲ್ಲಿ ಹುರಿಯಿರಿ. ಇದಕ್ಕೆ ಹಾಲು ಸೇರಿಸಿ, ಅವಲಕ್ಕಿ ಮೃದುವಾಗುವವರೆಗೆ ಕುದಿಸಿ. ಪುಡಿ ಬೆಲ್ಲ ಬಳಸುತ್ತಿದ್ದರೆ, ಈ ಹಾಲಿಗೆ ನೇರವಾಗಿ ಸೇರಿಸಿ. ಅಚ್ಚು ಬೆಲ್ಲವಾಗಿದ್ದರೆ ನೀರು ಹಾಕಿ ಕರಗಿಸಿ ಶೋಧಿಸಿ, ಅದನ್ನು ಹಾಲಿನ ಮಿಶ್ರಣಕ್ಕೆ ಸೇರಿಸಿ. ಬೆಲ್ಲ ಹಾಕಿದ ಮೇಲೆ ಪಾಯಸವನ್ನು ಹೆಚ್ಚು ಕುದಿಸಬೇಡಿ. ಏಲಕ್ಕಿ, ದ್ರಾಕ್ಷಿ-ಗೋಡಂಬಿ ಸೇರಿಸಿದರೆ, ಸವಿಯಲು ಸಿದ್ಧ.
ಖರ್ಜೂರದ ಹೋಳಿಗೆ
ಹೊರಗೆ ತೋರಣ ಕಟ್ಟುತ್ತಿದ್ದಂತೆಯೇ, ಒಳಗೆ ಹೂರಣ ಸಿದ್ಧವಾಗಬೇಕು! ಇದು ಹಬ್ಬದ ಕ್ರಮ. ಹಾಗಾಗಿ ಹಬ್ಬದ ಭೂರಿಭೋಜನಕ್ಕೆ ಬೇಕಾಗಿ ಇರಲಿ ಈ ಪಾಕ.
ಬೇಕಾಗುವ ವಸ್ತುಗಳು: ಖರ್ಜೂರ- 2 ಕಪ್, ಬೆಲ್ಲ- 1/2 ಕಪ್, ಗೋದಿಹಿಟ್ಟು- 1 ಕಪ್, ಚಿರೋಟಿ ರವೆ- 1/2 ಕಪ್, ತುಪ್ಪ- ಸ್ವಲ್ಪ, ಏಲಕ್ಕಿ ಪುಡಿ
ವಿಧಾನ: ಖರ್ಜೂರವನ್ನು ಬೀಜ ತೆಗೆದು ಸ್ವಲ್ಪವೇ ನೀರು ಹಾಕಿ ನುಣ್ಣಗೆ ರುಬ್ಬಿ. ಇದನ್ನು ಬಾಣಲೆಗೆ ಹಾಕಿ ಬೆಲ್ಲ ಮತ್ತು ತುಪ್ಪದ ಜೊತೆ ಚೆನ್ನಾಗಿ ಕಾಯಿಸಿ. ಹೂರಣದಷ್ಟು ಗಟ್ಟಿ ಆಗಬೇಕು ಈ ಮಿಶ್ರಣ. ಬೇಕಾದ ಗಾತ್ರಕ್ಕೆ ಉಂಡೆ ಮಾಡಿಕೊಳ್ಳಿ. ಹಿಟ್ಟು ಮತ್ತು ರವೆ ಸೇರಿಸಿ, ಕಣಕಕ್ಕೆ ಕಲೆಸಿಕೊಳ್ಳಿ. ಇದಕ್ಕೆ ತುಪ್ಪ ಹಾಕಿ ಚೆನ್ನಾಗಿ ನಾದಿ. ಕಣಕದ ಹಿಟ್ಟು ಮೃದುವಾಗಿರಲಿ. ಇದನ್ನು ಉಂಡೆ ಮಾಡಿ, ಅಂಗೈಯಲ್ಲಿಟ್ಟು ಅಗಲ ಮಾಡಿಕೊಂಡು, ಹೂರಣದ ಉಂಡೆ ತುಂಬಿ, ಗೋದಿ ಹಿಟ್ಟಿನಲ್ಲಿ ಹೊರಳಿಸಿ, ಲಟಿಸಿ. ಕಾದ ತವೆಯ ಮೇಲೆ ಎರಡೂ ಕಡೆ ಹದವಾಗಿ ಬೇಯಿಸಿದರೆ, ಖರ್ಜೂರದ ಹೋಳಿಗೆ ನೈವೇದ್ಯಕ್ಕೆ ಸಿದ್ಧ.
ನಿಪ್ಪಟ್ಟು
ಹಬ್ಬವೆಂದರೆ ಎಲ್ಲವೂ ಸಿಹಿಯೇ ಆಗಬೇಕೆಂದಿಲ್ಲ. ಖಾರ ಪ್ರಿಯರ ಬಾಯಿಗೂ ಬೇಕಲ್ಲ ಕೆಲಸ. ಹಾಗಾಗಿ ವಿಶೇಷವಾದ ರುಚಿಕರ ನಿಪ್ಪಟ್ಟು ಮಾಡುವ ವಿಧಾನವಿದು.
ಬೇಕಾಗುವ ವಸ್ತುಗಳು: ಕಡಲೆಬೇಳೆ- 1 ಕಪ್, ಉದ್ದಿನ ಬೇಳೆ- 1 ಕಪ್, ಅಕ್ಕಿ ಹಿಟ್ಟು- 1/2 ಕಪ್, ಹಸಿಮೆಣಸು- ಖಾರಕ್ಕೆ ತಕ್ಕಷ್ಟು, ಕರಿಬೇವು- 4 ಎಸಳು, ಉಪ್ಪು- ರುಚಿಗೆ, ಕರಿಯಲು ಎಣ್ಣೆ
ವಿಧಾನ: ಬೇಳೆಗಳನ್ನು ನಾಲ್ಕು ಗಂಟೆಗಳ ಕಾಲ ನೆನೆಸಿ, ತೊಳೆದು, ಚೆನ್ನಾಗಿ ಬಸಿದು ನುಣ್ಣಗೆ ರುಬ್ಬಿಕೊಳ್ಳಿ. ಈ ಮಿಶ್ರಣಕ್ಕೆ ಅಕ್ಕಿ ಹಿಟ್ಟು, ಉಪ್ಪು, ಹೆಚ್ಚಿದ ಹಸಿಮೆಣಸು ಮತ್ತು ಕರಿಬೇವಿನ ಎಲೆಗಳನ್ನು ಹಾಕಿ ಗಟ್ಟಿಯಾಗಿ ಕಲೆಸಿಕೊಳ್ಳಿ. ಇದನ್ನು ಸಣ್ಣ ಉಂಡೆ ಮಾಡಿ ಲಟಿಸಿ, ಕರಿಯಿರಿ. ಕರಂಕುರುಂ ನಿಪ್ಪಟ್ಟು ಸಿದ್ಧ.
ಇದನ್ನೂ ಓದಿ: Deepavali 2023: ದೀಪಾವಳಿ ಹಬ್ಬದ ದಿನಗಳು, ಮುಹೂರ್ತ ಮತ್ತು ವಿಶೇಷತೆಗಳು ಹೀಗಿವೆ…
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ